ಅಕ್ರಮಕ್ಕೆ ಅಧಿಕಾರಿಗಳದ್ದೇ ಕುಮ್ಮಕ್ಕು

ಭಾನುವಾರ, ಮೇ 26, 2019
33 °C

ಅಕ್ರಮಕ್ಕೆ ಅಧಿಕಾರಿಗಳದ್ದೇ ಕುಮ್ಮಕ್ಕು

Published:
Updated:

ಕವಿತಾಳ: ಅಕ್ರಮವಾಗಿ ನೀರು ಹರಿಸಲು ಕಾಲುವೆಯ ತಡೆಗೋಡೆಯನ್ನು ಅಧಿಕಾರಿಗಳೇ ಕಿತ್ತು ಹಾಕಿದ್ದಾರೆ ಎಂದು ಆರೋಪಿಸಿ ಕಾಲುವೆ ಬಳಿ ಜಮಾಯಿಸಿದ ನೂರಾರು ರೈತರು ಪ್ರತಿಭಟನೆ ನಡೆಸಿದ ಘಟನೆ ಡೊಣಮರಡಿ ಹತ್ತಿರ ಶುಕ್ರವಾರ ನಡೆದಿದೆ.



ಅಮರೇಶ್ವರ ಕ್ಯಾಂಪ್‌ನ ಕೆಲವು ರೈತರಿಗೆ ಅನುಕೂಲ ಕಲ್ಪಿಸಲು ಪ್ರಭಾವಿಗಳ ಒತ್ತಡಕ್ಕೆ ಮಣಿದ ಜಲ ಸಂಪನ್ಮೂಲ ಇಲಾಕೆ ಕೊಟ್ನೇಕಲ್ ಉಪ ವಿಭಾಗದ ಅಧಿಕಾರಿಗಳು ಬುಧವಾರ ತಡರಾತ್ರಿ ಜೆಸಿಬಿ ಯಂತ್ರ ಬಳಸಿ 76ವಿತರಣಾ ಕಾಲುವೆಯ ಕಿ.ಮೀ.5.99 ಹತ್ತಿರದ ಡ್ರಾಪ್ ಚೈನೇಜ್188ರ ತಡೆಗೋಡೆಗಳನ್ನು ಅಕ್ರಮವಾಗಿ ಕಿತ್ತು ಹಾಕಿದ್ದಾರೆ ಎಂದು ರೈತರು ಆರೋಪಿಸಿದರು.



ರಾಯಚೂರು ನಗರಕ್ಕೆ ಕುಡಿಯುವ ನೀರು ಹರಿಸುವ ನೆಪ ಹೇಳಿ ಬೆಳಿಗ್ಗೆ ನೀರಿನ ಹರಿವು ತಗ್ಗಿಸಿದ ಅಧಿಕಾರಿಗಳು ರಾತ್ರೋರಾತ್ರಿ ಯಂತ್ರ ಬಳಸಿ ತಡೆಗೋಡೆ ಕಿತ್ತಿದ್ದಾರೆ ಇದರಿಂದ 76ರ 2ನೇ ಬ್ರ್ಯಾಂಚ್‌ಗೆ ಒಂದು ಅಡಿ ನೀರು ಕಡಿಮೆಯಾಗಿದೆ ಎಂದು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಮಾಹಿತಿ ನೀಡಲು ಸಾಧ್ಯವಾಗುತ್ತಿಲ್ಲ ಎಇಇ ವೀರಸಿಂಗ್ ರಾಠೋಡ್, ಇಂಜಿನೀಯರ್‌ಗಳಾದ ಲೋಕೇಶ ಮತ್ತು ಅಶೋಕ ಅವರು ಅಕ್ರಮವಾಗಿ ತಡೆಗೋಡೆ ಕಿತ್ತಿದ್ದಾರೆ ಎಂದು ರೈತರಾದ ವೆಂಕಟರೆಡ್ಡಿ, ನಾಗೇಶ್ವರಾವ್ ಹೇಳಿದ್ದಾರೆ. ಕಾಲುವೆ ಬಳಿಯಲ್ಲಿಯೇ ಎರಡು ಟೆಂಟ್ ಹಾಕಿಕೊಂಡು ಅಡುಗೆ ತಯಾರಿಸಿ ಊಟ ಮಾಡಿದ ರೈತರು ತಡೆಗೋಡೆ ಪುನರ್ ನಿರ್ಮಾಣ ಮಾಡುವವರೆಗೆ ಕದಲುವುದಿಲ್ಲ ಎಂದು ತಿಳಿಸಿದ್ದಾರೆ.



ಮಲ್ಲದಗುಡ್ಡ, ಡೊಣಮರಡಿ, ತಡಕಲ್ ಮತ್ತು ಮೂರು ಕ್ಯಾಂಪ್‌ಗಳ ರೈತರಾದ ಸೋಮರಾಜ ಹೊಸಗಿರಿ, ವೆಂಕಟರಾವ್, ಹನುಮಂತ, ಮಲ್ಲಪ್ಪ ಪುಜಾರಿ, ಕರಿಯಪ್ಪ, ಸಾಬಣ್ಣ ತಡಕಲ್, ಮಲ್ಲಪ್ಪ, ಬಸನಗೌಡ, ಗುಂಡಪ್ಪ, ಸುರೇಶ, ಗೋಪಾಲಕೃಷ್ಣ ಮತ್ತು ಮಲ್ಲಯ್ಯ ಗೋರ್ಕಲ್ ಸೇರಿದಂತೆ ನೂರಾರು ರೈತರು ಜಮಾಯಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry