ಬೆಂಗಳೂರು: ಅಕ್ರಮ ಗಣಿಗಾರಿಕೆ ನಡೆಸಿರುವವರ ಜೊತೆ ಕೈಜೋಡಿಸಿದ ಆರೋಪ ಎದುರಿಸುತ್ತಿರುವ ಅಧಿಕಾರಿಗಳನ್ನು ಮತ್ತೆ ಬಳ್ಳಾರಿ ಜಿಲ್ಲೆಗೆ ನಿಯೋಜಿಸುತ್ತಿರುವ ಸರ್ಕಾರದ ಕ್ರಮಕ್ಕೆ ಸಿಬಿಐ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕಳಂಕಿತರನ್ನು ಮತ್ತೆ ಅದೇ ಸ್ಥಾನಗಳಿಗೆ ನೇಮಿಸುತ್ತಿರುವುದರಿಂದ ಅಕ್ರಮ ಗಣಿಗಾರಿಕೆ ಕುರಿತ ತನಿಖೆಗೆ ಅಡ್ಡಿ ಉಂಟಾಗುತ್ತಿದೆ ಎಂದು ದೂರಿದೆ.

ಲೋಕಾಯುಕ್ತರ ವರದಿ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ ಸಂಡೂರು ವಲಯ ಅರಣ್ಯಾಧಿಕಾರಿ ಎಚ್.ರಾಮಮೂರ್ತಿ ಅವರನ್ನು ಪುನಃ ಅದೇ ಸ್ಥಾನಕ್ಕೆ ಮರುನೇಮಕ ಮಾಡಿರುವ ಸರ್ಕಾರದ ವಿರುದ್ಧ ಸಿಬಿಐ ಗರಂ ಆಗಿದೆ. ಇಲಾಖೆಯಲ್ಲಿ ನಡೆದ ಮೊದಲ ಮರುನೇಮಕ ಪ್ರಕ್ರಿಯೆಯೇ ಸಿಬಿಐ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಅಕ್ರಮ ಗಣಿಗಾರಿಕೆ ನಡೆಸುವವರ ಜೊತೆ ಕೈಜೋಡಿಸಿರುವುದು, ಅಕ್ರಮದಲ್ಲಿ ಭಾಗಿಯಾದವರಿಂದ ಲಂಚ ಪಡೆದಿರುವುದು ಮತ್ತಿತರ ಆರೋಪಗಳ ಮೇಲೆ 700ಕ್ಕೂ ಹೆಚ್ಚು ಅಧಿಕಾರಿಗಳನ್ನು ಲೋಕಾಯುಕ್ತರು ತಮ್ಮ ವರದಿಯಲ್ಲಿ ಹೆಸರಿಸಿದ್ದರು. ಈ ಪೈಕಿ ನೇರ ಆರೋಪ ಎದುರಿಸುತ್ತಿರುವವರನ್ನು ಅಮಾನತು ಮಾಡಿ ಸರ್ಕಾರ ಆದೇಶಿಸಿತ್ತು.

ಅರಣ್ಯ ಇಲಾಖೆ 29 ಅಧಿಕಾರಿಗಳನ್ನು ಸೆಪ್ಟೆಂಬರ್ನಲ್ಲಿ ಅಮಾನತು ಮಾಡಲಾಗಿತ್ತು. ಆರೋಪಿ ಅಧಿಕಾರಿಗಳ ವಿರುದ್ಧ ಆಂತರಿಕ ವಿಚಾರಣೆಯನ್ನೂ ಆಯಾ ಇಲಾಖೆಗಳು ಪ್ರಾರಂಭಿಸಿದ್ದವು. ಅರಣ್ಯ ಇಲಾಖೆಯಲ್ಲಿ ಕೆಲವು ಅಧಿಕಾರಿಗಳ ವಿಚಾರಣೆ ಪೂರ್ಣಗೊಂಡಿದೆ.

ಹಲವರ ವಿರುದ್ಧದ ವಿಚಾರಣೆ ಪ್ರಕ್ರಿಯೆ ಮುಕ್ತಾಯದ ಹಂತದಲ್ಲಿದೆ. ರಾಮಮೂರ್ತಿ ವಿರುದ್ಧದ ಆರೋಪಗಳ ಕುರಿತು ವಿಚಾರಣೆ ನಡೆಸಿದ್ದ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು, ಆರೋಪ ಮುಕ್ತಗೊಳಿಸಿ ವರದಿ ಸಲ್ಲಿಸಿದ್ದರು.

ಬಳಿಕ ರಾಮಮೂರ್ತಿ ಅವರ ಅಮಾನತು ಆದೇಶವನ್ನು ಹಿಂದಕ್ಕೆ ಪಡೆಯಲಾಯಿತು. ತರಾತುರಿಯಲ್ಲಿ ವರ್ಗಾವಣೆ ಆದೇಶ ಹೊರಡಿಸಿದ ಸರ್ಕಾರ, ಮತ್ತೆ ಸಂಡೂರು ವಲಯಕ್ಕೆ ನೇಮಕ ಮಾಡಿತು. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿರುವ ಅಧಿಕಾರಿಗಳನ್ನು ಮತ್ತೆ ಬಳ್ಳಾರಿ ಜಿಲ್ಲೆಗೆ ನೇಮಿಸಬಾರದು ಎಂದು ಸುಪ್ರೀಂಕೋರ್ಟ್ನ ಕೇಂದ್ರ ಉನ್ನತಾಧಿಕಾರ ಸವಿತಿ (ಸಿಇಸಿ) ಮಾಡಿದ್ದ ಶಿಫಾರಸನ್ನೂ ಈ ಸಂದರ್ಭದಲ್ಲಿ ಕಡೆಗಣಿಸಲಾಗಿತ್ತು.

ವನಪಾಲಕರ ಹುದ್ದೆಯಲ್ಲಿದ್ದ ರಾಮಮೂರ್ತಿ 2009ರ ಜೂನ್ವರೆಗೂ ಸಂಡೂರು ಅರಣ್ಯ ವಲಯದಲ್ಲಿದ್ದರು. ಜೂನ್ನಲ್ಲಿ ವಲಯ ಅರಣ್ಯಾಧಿಕಾರಿ ದರ್ಜೆಗೆ ಬಡ್ತಿ ನೀಡಿದ ಸರ್ಕಾರ ಅವರನ್ನು ಚಿತ್ರದುರ್ಗದ ಜಲಾನಯನ ಇಲಾಖೆಗೆ ವರ್ಗಾವಣೆ ಮಾಡಿತ್ತು. 2011ರ ಮಾರ್ಚ್ನಲ್ಲಿ ಮರಳಿ ಸಂಡೂರು ವಲಯಕ್ಕೆ ವರ್ಗಾಯಿಸಲಾಗಿತ್ತು. 2011ರ ಸೆಪ್ಟೆಂಬರ್ನಲ್ಲಿ ಅಮಾನತು ಮಾಡಲಾಗಿತ್ತು. ಮಾರ್ಚ್ 27ರಂದು ಅಮಾನತು ಆದೇಶ ಹಿಂದಕ್ಕೆ ಪಡೆದಿರುವ ಸರ್ಕಾರ, ಮತ್ತೆ ಸಂಡೂರು ವಲಯಕ್ಕೆ ನೇಮಿಸಿದೆ.

ಸಿಬಿಐ ಕೆಂಡಾಮಂಡಲ: ರಾಮಮೂರ್ತಿ ಅವರ ಮರುನೇಮಕಾತಿ ಆದೇಶ ಹೊರಬಿದ್ದ ಮರುದಿನವೇ (ಮಾ.28) ಸಿಬಿಐನ ಬೆಂಗಳೂರು ವಿಭಾಗದ ಮುಖ್ಯಸ್ಥ ಡಿಐಜಿ ಆರ್.ಹಿತೇಂದ್ರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರಿಗೆ ಪತ್ರ ಬರೆದಿದ್ದಾರೆ. ಸರ್ಕಾರ ಕೈಗೊಂಡಿರುವ ಕ್ರಮದಿಂದ ಅಕ್ರಮ ಗಣಿಗಾರಿಕೆ ಕುರಿತು ಸಿಬಿಐ ನಡೆಸುತ್ತಿರುವ ತನಿಖೆಗೆ ತೊಂದರೆ ಆಗಿದೆ ಎಂದು ನೇರವಾಗಿ ಅಸಮಾಧಾನ ಹೊರಹಾಕಿದ್ದಾರೆ.

`ಆರೋಪ ಎದುರಿಸುತ್ತಿರುವ ಅಧಿಕಾರಿಯನ್ನು ಮತ್ತೆ ತನಿಖಾ ವ್ಯಾಪ್ತಿಯಲ್ಲಿರುವ ಪ್ರದೇಶಕ್ಕೆ ವಲಯ ಅರಣ್ಯಾಧಿಕಾರಿಯಾಗಿ ನೇಮಿಸಿರುವುದು ಸರಿಯಲ್ಲ. ರಾಮಮೂರ್ತಿ ಅವರು ಸಂಡೂರು ವಲಯದಲ್ಲಿದ್ದರೆ ಸಾಕ್ಷ್ಯನಾಶ, ಸಾಕ್ಷಿಗಳಿಗೆ ಬೆದರಿಕೆ ಒಡ್ಡುವ ಸಾಧ್ಯತೆಯೂ ಇದೆ.

ಈ ಅಧಿಕಾರಿ ಸಂಡೂರಿನಲ್ಲಿಯೇ ಮುಂದುವರಿದರೆ ಅಸೋಸಿಯೇಟೆಡ್ ಮೈನಿಂಗ್ ಕಂಪೆನಿ ಮತ್ತು ಡೆಕ್ಕನ್ ಮೈನಿಂಗ್ ಸಿಂಡಿಕೇಟ್ಗಳಿಗೆ ಸಂಬಂಧಿಸಿದಂತೆ ಸಿಬಿಐ ನಡೆಸುತ್ತಿರುವ ತನಿಖೆಗೆ ಅಡ್ಡಿಯಾಗಲಿದೆ. ಅವರನ್ನು ತಕ್ಷಣವೇ ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಬೇಕು~ ಎಂಬುದಾಗಿ ಸಿಬಿಐ ಡಿಐಜಿ ಪತ್ರದಲ್ಲಿ ಒತ್ತಾಯಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

`ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಅಮಾನತಿನಲ್ಲಿರುವ ಅಥವಾ ಇತರೆ ಶಿಸ್ತುಕ್ರಮ ಎದುರಿಸುತ್ತಿರುವ ಅಧಿಕಾರಿಗಳನ್ನು ಮತ್ತೆ ಅದೇ ಸ್ಥಾನಗಳಿಗೆ ಮರುನೇಮಕ ಮಾಡಬಾರದು. ಸಿಬಿಐ ತನಿಖೆಗೆ ಪೂರಕವಾದ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಈ ಬಗ್ಗೆ ಸರ್ಕಾರ ಎಚ್ಚರಿಕೆ ವಹಿಸಬೇಕು~ ಎಂಬ ಕೋರಿಕೆಯನ್ನೂ ಹಿತೇಂದ್ರ ಅವರು ಮುಖ್ಯ ಕಾರ್ಯದರ್ಶಿಯವರಿಗೆ ಬರೆದ ಪತ್ರದಲ್ಲಿ ಮುಂದಿಟಿದ್ದಾರೆ ಎಂದು ಗೊತ್ತಾಗಿದೆ.

ಆದೇಶ ಹಿಂಪಡೆಯಲು ನಿರ್ದೇಶನ: ಸಿಬಿಐ ಡಿಐಜಿ ಪತ್ರ ತಲುಪುತ್ತಿದ್ದಂತೆಯೇ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳನ್ನು ಕರೆಸಿಕೊಂಡ ಮುಖ್ಯ ಕಾರ್ಯದರ್ಶಿಯವರು, ಪ್ರಕರಣದ ಬಗ್ಗೆ ಮಾಹಿತಿ ಪಡೆದಿದ್ದಾರೆ. ರಾಮಮೂರ್ತಿ ಅವರನ್ನು ಸಂಡೂರು ವಲಯಕ್ಕೆ ನೇಮಕ ಮಾಡಿರುವ ಆದೇಶವನ್ನು ಹಿಂದಕ್ಕೆ ಪಡೆಯುವಂತೆಯೂ ಟಿಪ್ಪಣಿ ಕಳುಹಿಸಿದ್ದಾರೆ. ಮುಂದೆ ಇಂತಹ ಪ್ರಕರಣ ಮರುಕಳಿಸದಂತೆ ಕಟ್ಟೆಚ್ಚರ ವಹಿಸುವಂತೆ ನಿರ್ದೇಶನ ನೀಡಿದ್ದಾರೆ.

ಒಂದೆರಡು ದಿನಗಳಲ್ಲಿ ರಾಮಮೂರ್ತಿ ಅವರ ಮರುನೇಮಕ ಆದೇಶ ಹಿಂದಕ್ಕೆ ಪಡೆಯುವ ಸಂಭವವಿದೆ. ಇನ್ನೂ ಹಲವು ಅಧಿಕಾರಿಗಳ ಮರುನೇಮಕಾತಿ ಪ್ರಸ್ತಾವವನ್ನೂ ತಡೆ ಹಿಡಿಯಲು ಸರ್ಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.