ಶುಕ್ರವಾರ, ಏಪ್ರಿಲ್ 16, 2021
31 °C

ಅಕ್ರಮ ಪತ್ತೆಗೆ ಜಾಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಕಲಿ ಪಡಿತರ ಚೀಟಿಗಳನ್ನು ಪತ್ತೆಹಚ್ಚಲು ಇಲಾಖೆ ಹಲವಾರು ಉಪಾಯಗಳನ್ನು ಪರಿಶೀಲಿಸಿ ಕೊನೆಗೆ ವಿದ್ಯುತ್ ಮೀಟರ್‌ನ ಆರ್.ಆರ್. ಸಂಖ್ಯೆಯ ಮೂಲಕ ಅಕ್ರಮ ಪಡಿತರ ಚೀಟಿಗಳನ್ನು ಪತ್ತೆಹಚ್ಚಲು ಹೊರಟಿದೆ.  ಆರ್.ಆರ್. ಸಂಖ್ಯೆಯೊಂದಿಗೆ ಅಡುಗೆ ಅನಿಲ ಸಂಪರ್ಕ ಸಂಖ್ಯೆ, ಪಡಿತರ ಚೀಟಿ ಸಂಖ್ಯೆಯೊಂದಿಗೆ ಹೊಂದಾಣಿಕೆ ಮಾಡಲಾಗುತ್ತಿದೆ. ಒಂದು ಮೀಟರ್‌ಗೆ ಒಂದೇ ಪಡಿತರ ಚೀಟಿ, ಅನಿಲ ಸಂಪರ್ಕ ಸಂಖ್ಯೆಯನ್ನು ಹೊಂದಾಣಿಕೆ ಮಾಡುವ ಮೂಲಕ, ಒಂದೇ ಕುಟುಂಬದಲ್ಲಿರುವ 3-4 ಪಡಿತರ ಚೀಟಿಗಳನ್ನು ಪತ್ತೆಹಚ್ಚಿ ರದ್ದುಪಡಿಸಲು ಸಾಧ್ಯ ಎನ್ನುವ ವಿಶ್ವಾಸ ಇಲಾಖೆಯದ್ದು.ಇದಕ್ಕಾಗಿ ರಾಜ್ಯದ ಐದು ಎಸ್ಕಾಂಗಳಿಂದ ಸಿ.ಡಿ.ಯಲ್ಲಿ ಗ್ರಾಹಕರ ವಿದ್ಯುತ್ ಮೀಟರ್‌ನ ಆರ್.ಆರ್.ಸಂಖ್ಯೆಗಳನ್ನು ಪಡೆದುಕೊಂಡು, ಗ್ರಾಹಕರು ಈಗ ನೀಡಿರುವ ಮಾಹಿತಿಯೊಂದಿಗೆ ಎನ್‌ಐಸಿಯ ಎಂಜಿನಿಯರ್‌ಗಳು ಹೋಲಿಕೆ ಮಾಡುತ್ತಿದ್ದಾರೆ. ಸುಳ್ಳು ಮಾಹಿತಿ ನೀಡಿದ್ದರೆ, ಗೃಹ ಬಳಕೆ ಬದಲು ವಾಣಿಜ್ಯ, ಅಂಗಡಿ ಅಥವಾ ಕೈಗಾರಿಕಾ ಸಂಪರ್ಕದ ವಿದ್ಯುತ್ ಮೀಟರ್ ಸಂಖ್ಯೆ ನೀಡಿದ್ದರೆ ಕಂಪ್ಯೂಟರ್‌ನಲ್ಲಿ ಬಯಲಾಗುತ್ತದೆ. ಒಂದೇ ಮೀಟರ್‌ನ ಆರ್.ಆರ್. ಸಂಖ್ಯೆಯನ್ನು ಒಂದಕ್ಕಿಂತ ಹೆಚ್ಚಿನ ಗ್ರಾಹಕರು ನೀಡಿದ್ದರೆ, ಅಂತಹ ಮನೆಗಳಿಗೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಒಂದಕ್ಕಿಂತ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿರುವುದು ನಿಜವೇ ಎಂದು ಪರಿಶೀಲಿಸುತ್ತಾರೆ. 2-3 ಕುಟುಂಬಗಳು ಒಂದೇ ಮೀಟರ್ ಬಳಸುತ್ತಿರುವುದು ನಿಜವಾದಲ್ಲಿ ಅಂತಹವರ ವಿರುದ್ಧ ಯಾವ ಕ್ರಮವೂ ಇಲ್ಲ. ಸುಳ್ಳು ಮಾಹಿತಿ ನೀಡಿರುವುದು ಕಂಡು ಬಂದರೆ ಅಡುಗೆ ಅನಿಲ ಸಂಪರ್ಕ ಕಳೆದುಕೊಳ್ಳುವುದು ಖಾತರಿ..ರಾಜ್ಯದಲ್ಲಿ ಅಡುಗೆ ಅನಿಲ ಸಿಲಿಂಡರ್ ಗ್ರಾಹಕರ ಸಂಖ್ಯೆ 70, 78,288 ಇದ್ದು, ಈಗಾಗಲೇ ಗ್ಯಾಸ್ ಏಜೆನ್ಸಿಯವರು 48,05, 356 ಗ್ರಾಹಕರ ಆರ್.ಆರ್.ಸಂಖ್ಯೆ ಸಂಗ್ರಹಿಸಿದ್ದಾರೆ. ಇದಲ್ಲದೆ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ 46,39,468 ಪಡಿತರ ಚೀಟಿಗಳಿದ್ದು, 33,84,309 ಗ್ರಾಹಕರು ಆರ್.ಆರ್.ಸಂಖ್ಯೆ ನೀಡಿದ್ದಾರೆ. ಪ್ರಾಮಾಣಿಕವಾಗಿ ಒಂದೇ ಸಂಪರ್ಕ ಪಡೆದುಕೊಂಡಿರುವವರು ಮಾಹಿತಿ ಕೊಟ್ಟಿದ್ದು, ಸುಳ್ಳು ದಾಖಲೆ ಕೊಟ್ಟು ಸಂಪರ್ಕ ಪಡೆದಿರುವವರು ಕೊಟ್ಟಿಲ್ಲ ಎಂದು ಇಲಾಖೆ ಅಂದಾಜಿಸಿದೆ.ಒಂದು ಕುಟುಂಬಕ್ಕೆ ಒಂದೇ ಅಡುಗೆ ಅನಿಲ ಸಂಪರ್ಕ ಹೊಂದಿರುವವರು ಆತಂಕಪಡುವ ಅಗತ್ಯವಿಲ್ಲ. ಅವರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎನ್ನುವುದು ಅಧಿಕಾರಿಗಳ ಅಭಯದ ನುಡಿ. ಈ ಕ್ರಮದಿಂದಾದರೂ ಅಕ್ರಮ ಪಡಿತರ ಚೀಟಿಗಳ ಹಾವಳಿ ಕಡಿಮೆಯಾಗಲಿದೆಯೇ ಎಂಬುದನ್ನು ಕಾದುನೋಡಬೇಕು.ಅಧಿಕಾರ ರಾಜ್ಯಕ್ಕೆ ಇದೆಯೇ?: ಕೇಂದ್ರ ಸರ್ಕಾರ ಅಡುಗೆ ಅನಿಲ ಸಂಪರ್ಕ ನೀಡಿದ್ದು, ಅದನ್ನು ರದ್ದುಪಡಿಸುವ ಅಧಿಕಾರ ರಾಜ್ಯಕ್ಕೆ ಇದೆಯೇ ಎಂಬ ಪ್ರಶ್ನೆ ಪ್ರಮುಖವಾಗಿ ಕೇಳಿ ಬರುತ್ತಿದೆ. ವಾಸ್ತವವಾಗಿ ನೋಡಿದಾಗ ಈ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ. 1955ರ ಅಗತ್ಯವಸ್ತುಗಳ ಕಾಯ್ದೆ ಸೆಕ್ಷನ್ 6ಎ ಪ್ರಕಾರ ಅಡುಗೆ ಅನಿಲ ಸಿಲಿಂಡರ್‌ಗಳ ಸರಬರಾಜು, ಹಂಚಿಕೆಯನ್ನು ನಿಯಂತ್ರಿಸುವ ಅಧಿಕಾರ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಇದೆ.ಅಕ್ರಮವಾಗಿ ಸಿಲಿಂಡರ್‌ಗಳನ್ನು ಸಂಗ್ರಹಿಸಿದ್ದರೆ ತಪಾಸಣೆ ಮಾಡುವ, ಅನಧಿಕೃತವಾಗಿ ಸರಬರಾಜು ಮಾಡುತ್ತಿರುವ ಬಗ್ಗೆ ದೂರುಗಳು ಬಂದರೆ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವ ಅಧಿಕಾರ ಇದೆ. ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ (ಪೂರೈಕೆ ಮತ್ತು ಹಂಚಿಕೆ ನಿಯಂತ್ರಣ) 2000 ಕಾಯ್ದೆ ಪ್ರಕಾರ ಇನ್ಸ್‌ಪೆಕ್ಟರ್ ದರ್ಜೆಗಿಂತ ಕಡಿಮೆ ಇಲ್ಲದ ಯಾವುದೇ ಅಧಿಕಾರಿ ತಪಾಸಣೆ ಮಾಡಿ ಗ್ಯಾಸ್ ಸಂಪರ್ಕ ರದ್ದುಪಡಿಸುವ, ವಾಹನಗಳನ್ನು ವಶಪಡಿಸಿಕೊಳ್ಳುವ ಅಧಿಕಾರವನ್ನು ಹೊಂದಿರುತ್ತಾರೆ.ಸಾಗಾಣಿಕೆ ಟೆಂಡರ್ ರದ್ದು: ಪಡಿತರ ವಿತರಣೆಯಲ್ಲಿನ ಅಕ್ರಮಗಳನ್ನು ತಡೆಯಲು ಸರ್ಕಾರ ಇನ್ನೂ ಹಲವು ಕ್ರಮಗಳನ್ನು ಕೈಗೊಂಡಿದೆ. ತಾಲ್ಲೂಕು ಕೇಂದ್ರಗಳಿಂದ ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಧಾನ್ಯಗಳನ್ನು ಸಾಗಿಸುವಾಗ ನಡೆಯುವ ಅಕ್ರಮಗಳನ್ನು ತಡೆಯುವ ದೃಷ್ಟಿಯಿಂದ ಸಾಗಾಣಿಕೆ ಟೆಂಡರ್ ರದ್ದು ಮಾಡಲಾಗಿದ್ದು, ಈಗ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಯವರು ತಾಲ್ಲೂಕಿನ ಗೋದಾಮಿನಿಂದ ನೇರವಾಗಿ ಪಡಿತರ ಪದಾರ್ಥಗಳನ್ನು ತೆಗೆದುಕೊಂಡು ಹೋಗಬೇಕು.ಅಲ್ಲದೆ, ಇಲಾಖೆಯನ್ನು ಸಂಪೂರ್ಣವಾಗಿ ಕಂಪ್ಯೂಟರೀಕರಣಗೊಳಿಸಲಾಗುತ್ತಿದ್ದು, ಯಾವ ಗೋದಾಮಿನಿಂದ ಎಷ್ಟು ಆಹಾರ ಧಾನ್ಯ ಹೋಗಿದೆ, ಯಾವ ನ್ಯಾಯ ಬೆಲೆ ಅಂಗಡಿಯಲ್ಲಿ ಎಷ್ಟು ಧಾನ್ಯ ಉಳಿದಿದೆ ಎಂಬ ಕ್ಷಣ ಕ್ಷಣದ ಮಾಹಿತಿ ಕಂಪ್ಯೂಟರ್‌ನಲ್ಲಿ ಲಭ್ಯವಾಗಲಿದೆ. ಸಚಿವರು, ಅಧಿಕಾರಿಗಳು ಆನ್‌ಲೈನ್ ಮೂಲಕ ಬೆಂಗಳೂರಿನಲ್ಲಿ ಕುಳಿತು ಗಡಿಭಾಗದ ಕಟ್ಟಕಡೆಯ ಗ್ರಾಮದ ನ್ಯಾಯ ಬೆಲೆ ಅಂಗಡಿಯಲ್ಲಿ ಏನಾಗುತ್ತಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.ಅನೇಕ ನ್ಯಾಯಬೆಲೆ ಅಂಗಡಿಗಳು ಅನ್ಯಾಯ ಬೆಲೆ ಅಂಗಡಿಗಳಾಗಿವೆ. ಅಲ್ಲಿಗೆ ತಲುಪಬೇಕಾದ ಆಹಾರ ಧಾನ್ಯಗಳು ರೈಸ್‌ಮಿಲ್‌ಗಳಿಗೆ ಸಾಗಾಣಿಕೆಯಾಗುತ್ತಿವೆ. ಅಲ್ಲಿ ಮತ್ತೊಮ್ಮೆ ಪಾಲಿಶ್ ಮಾಡಿದ ನಂತರ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ದಂಧೆ ವ್ಯಾಪಕವಾಗಿ ನಡೆಯುತ್ತಿದ್ದು, ಇದರ ಹಿಂದೆ ಪ್ರಭಾವಿಗಳ ಕೈವಾಡ ಇದೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬಂದಿದ್ದವು. ಅಲ್ಲದೆ, ಅನೇಕ ಕಡೆ ದಾಳಿ ನಡೆಸಿ ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿತ್ತು.ಇದೆಲ್ಲವನ್ನೂ ಗಮನಿಸಿದ ನಂತರ ಸಾಗಾಣಿಕೆ ಟೆಂಡರ್‌ಗಳನ್ನು ರದ್ದುಪಡಿಸಲಾಗಿದ್ದು, ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಯವರೇ ಅಗತ್ಯ ಪ್ರಮಾಣದ ಆಹಾರ ಧಾನ್ಯಗಳನ್ನು ತಾಲ್ಲೂಕು ಕೇಂದ್ರಗಳಿಂದ ತಂದು ಮಾರಾಟ ಮಾಡಬೇಕಾಗುತ್ತದೆ. ಇದಕ್ಕೆ ತಗಲುವ ವೆಚ್ಚವನ್ನು ಸರ್ಕಾರ ಭರಿಸಲಿದೆ. ಇದರಿಂದಾಗಿ ಇನ್ನು ಮುಂದೆ ಫಲಾನುಭವಿಗೆ ಆಹಾರ ಧಾನ್ಯಗಳು ತಲುಪಿರುವುದನ್ನು ಖಾತರಿಪಡಿಸಿಕೊಳ್ಳಬಹುದಾಗಿದೆ. ಅಲ್ಲದೆ ಮಧ್ಯವರ್ತಿಗಳ ಹಾವಳಿ, ಕಾಳಸಂತೆಯ ಮಾರಾಟಕ್ಕೂ ಕಡಿವಾಣ ಬೀಳಲಿದೆ ಎಂದು ನಿರೀಕ್ಷಿಸಲಾಗಿದೆ.ಆನ್‌ಲೈನ್: ಈಗ ನಡೆಯುತ್ತಿರುವ ನಕಲಿ ಪಡಿತರ ಚೀಟಿಗಳನ್ನು ಗುರುತಿಸುವ ಪ್ರಕ್ರಿಯೆ ಪೂರ್ಣಗೊಂಡ ನಂತರ ಅರ್ಹ ಫಲಾನುಭವಿಗಳಿಗೆ ಆನ್‌ಲೈನ್ ಮೂಲಕ ಪಡಿತರ ಚೀಟಿ ನೀಡುವ ವ್ಯವಸ್ಥೆ ಮಾಡಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉದ್ದೇಶಿಸಿದೆ.ಪಡಿತರ ಚೀಟಿ ಬಯಸುವವರು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು. ಅವರ ವಿವರಗಳನ್ನೆಲ್ಲ ಪರಿಶೀಲಿಸಿ ಆನ್‌ಲೈನ್ ಮೂಲಕವೇ ಪಡಿತರ ಚೀಟಿ ನೀಡುತ್ತೇವೆ ಎನ್ನುತ್ತಾರೆ ಇಲಾಖೆಯ ಕಾರ್ಯದರ್ಶಿ ಬಿ.ಎ.ಹರೀಶ್ ಗೌಡ. ಬಿಪಿಎಲ್ ಪಡಿತರ ಚೀಟಿ ಪಡೆಯಲು ವಾರ್ಷಿಕ ಆದಾಯದ ಮಿತಿಯನ್ನು ನಗರ ಪ್ರದೇಶಗಳಲ್ಲಿ 18 ಸಾವಿರ ರೂಪಾಯಿ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ 17 ಸಾವಿರ ರೂಪಾಯಿಗೆ ನಿಗದಿಪಡಿಸಲಾಗಿದೆ.ಇಲಾಖೆಯಲ್ಲಿ ಪಾರದರ್ಶಕತೆಯನ್ನು ತರುವ ದೃಷ್ಟಿಯಿಂದ ಆನ್‌ಲೈನ್ ವ್ಯವಸ್ಥೆಯ ಮೊರೆ ಹೋಗಲು ನಿರ್ಧರಿಸಲಾಗಿದ್ದು, ಇದರ ಸಿದ್ಧತೆಗಳು ಸಾಗಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.