ಬುಧವಾರ, ಮೇ 25, 2022
22 °C
ಹಳೆಯ ಮಸೂದೆಗೆ ಕೊನೆಗೂ ರಾಜ್ಯಪಾಲರ ಒಪ್ಪಿಗೆ

ಅಕ್ರಮ ಸಕ್ರಮಕ್ಕೆ ಮುಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಗ್ರಾಮೀಣ ಪ್ರದೇಶದಲ್ಲಿನ ಕಂದಾಯ ಇಲಾಖೆ ಭೂಮಿಯಲ್ಲಿ ಬಡವರು ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಮನೆಗಳನ್ನು ಸಕ್ರಮಗೊಳಿಸುವ ಭೂ ಕಂದಾಯ ತಿದ್ದುಪಡಿ ಮಸೂದೆಗೆ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಕೊನೆಗೂ ಒಪ್ಪಿಗೆ ನೀಡಿದ್ದಾರೆ.ಬಿಜೆಪಿ ಸರ್ಕಾರವು ಕಳೆದ ವರ್ಷ ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸಿ ಸಮ್ಮತಿ ಪಡೆದುಕೊಂಡಿದ್ದ ಈ ಮಸೂದೆಗೆ ರಾಜ್ಯಪಾಲರು ಒಪ್ಪಿಗೆ ನೀಡದೆ ವಾಪಸ್ ಕಳುಹಿಸಿದ್ದರು. `ಇದರಲ್ಲಿ ಸಾರ್ವಜನಿಕ ಹಿತಾಸಕ್ತಿ ಅಡಗಿಲ್ಲ. ಇದಕ್ಕೆ ಒಪ್ಪಿಗೆ ನೀಡಿದರೆ ಭೂಕಬಳಿಕೆಗೆ ಉತ್ತೇಜನ ನೀಡಿದಂತಾಗುತ್ತದೆ. ಆದ್ದರಿಂದ ಈ ಬಗ್ಗೆ ಪುನರ್ ಪರಿಶೀಲನೆ ನಡೆಸಿ' ಎಂದು ಸೂಚಿಸಿದ್ದರು.`ಅಕ್ರಮ - ಸಕ್ರಮ' ಎಂದೇ ಪರಿಗಣಿಸಲಾಗಿರುವ ಇದಕ್ಕೆ ಒಪ್ಪಿಗೆ ನೀಡುವಂತೆ ಹಿಂದಿನ ಬಿಜೆಪಿ ಸರ್ಕಾರ ಒತ್ತಡ ಹೇರಿದ್ದರೂ ಪ್ರಯೋಜನವಾಗಿರಲಿಲ್ಲ. ಇದಾದ ನಂತರ ಕಳೆದ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಮತ್ತೊಮ್ಮೆ ಯಥಾವತ್ತಾಗಿ ಮಸೂದೆ ಅಂಗೀಕರಿಸಿ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು.

ಆದರೂ, ತಕ್ಷಣ ಒಪ್ಪಿಗೆ ನೀಡದೆ ಕಡತವನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದ ಅವರು, ಶನಿವಾರವಷ್ಟೇ ಮಸೂದೆಗೆ ಸಹಿ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. 1964ರ ಕರ್ನಾಟಕ ಭೂ ಕಂದಾಯ ಕಾಯ್ದೆ ಸೆಕ್ಷನ್ 94 `ಸಿ'ಗೆ ತಿದ್ದುಪಡಿ ತರುವ ಮೂಲಕ 2012ರ ಜನವರಿ 1ಕ್ಕೂ ಮುನ್ನ ಸರ್ಕಾರಿ ಭೂಮಿಯಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಮನೆಗಳನ್ನು ಸಕ್ರಮಗೊಳಿಸಲಾಗುತ್ತಿದೆ.ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು (ಬಿಪಿಎಲ್) ಸ್ವಂತ ಜಾಗದಲ್ಲಿ ಮನೆಯಿಲ್ಲದೆ ಸರ್ಕಾರಿ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡಿದ್ದರೆ ಅಂತಹವರಿಗೆ ಇದರ ಪ್ರಯೋಜನ ದೊರೆಯಲಿದೆ. ಅಕ್ರಮ - ಸಕ್ರಮ ಯೋಜನೆ ಜಾರಿಗೆ ನಿಯಮಾವಳಿ ರೂಪಿಸುವ ಪ್ರಕ್ರಿಯೆ ಶುರುವಾಗಿದೆ.ನಗರ ಪ್ರದೇಶ: ಗ್ರಾಮೀಣ ಪ್ರದೇಶದ ಹಾಗೆ ನಗರ ಪ್ರದೇಶದಲ್ಲಿನ ಸರ್ಕಾರಿ ಭೂಮಿಯಲ್ಲಿ ಬಡವರು ನಿರ್ಮಿಸಿಕೊಂಡಿರುವ ಮನೆಗಳನ್ನು ಸಕ್ರಮಗೊಳಿಸುವ ಬಗ್ಗೆ ಬಿಜೆಪಿ ಸರ್ಕಾರ ಮತ್ತೊಂದು ಮಸೂದೆಯನ್ನು ವಿಧಾನಮಂಡಲದಲ್ಲಿ ಅಂಗೀಕರಿಸಿ ರಾಜ್ಯಪಾಲರಿಗೆ ಕಳುಹಿಸಿತ್ತು. ಆದರೆ, ಇದಕ್ಕೆ ಒಪ್ಪಿಗೆ ನೀಡಲು ನಿರಾಕರಿಸಿದ್ದ ರಾಜ್ಯಪಾಲರು ಪುನರ್ ಪರಿಶೀಲಿಸುವಂತೆ ಕೋರಿ ಕಳೆದ ಮಾರ್ಚ್‌ನಲ್ಲಿ ಸರ್ಕಾರಕ್ಕೆ ಹಿಂತಿರುಗಿಸಿದ್ದಾರೆ.ಈ ಮಸೂದೆಯನ್ನು ಮತ್ತೊಮ್ಮೆ ಪರಿಶೀಲಿಸಿ ಅಂಗೀಕಾರಕ್ಕೆ ಕಳುಹಿಸಿದರೆ, ಒಪ್ಪಿಗೆ ನೀಡುವುದಾಗಿ ರಾಜ್ಯಪಾಲರು ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದಾರೆ. ಆ ಪ್ರಕಾರ ವಿಧಾನಮಂಡಲದ ಉಭಯ ಸದನಗಳಲ್ಲಿ ಈ ಮಸೂದೆಯನ್ನು ಮತ್ತೆ ಮಂಡಿಸಿ ಒಪ್ಪಿಗೆ ಪಡೆಯಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.ಅಕ್ರಮ -ಸಕ್ರಮ ಮಸೂದೆಗೆ ರಾಜ್ಯಪಾಲರು ಒಪ್ಪಿಗೆ ನೀಡಿದ ಬೆನ್ನಿಗೇ, ಅಗತ್ಯ ನಿಯಮಾವಳಿಗಳನ್ನು ರೂಪಿಸುವ ಸಂಬಂಧ ಸರ್ಕಾರ ಕಾನೂನು ತಜ್ಞರ ಸಲಹೆ ಪಡೆಯಲು ಮುಂದಾಗಿದೆ.ಸುಮಾರು ಒಂದೂವರೆ ವರ್ಷದಿಂದ ನನೆಗುದಿಗೆ ಬಿದ್ದಿರುವ ಈ ವಿಷಯವನ್ನು ಆದಷ್ಟು ಬೇಗ ಇತ್ಯರ್ಥಪಡಿಸಿ ಹೆಚ್ಚು ಜನರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಆಶಯವನ್ನು ಸರ್ಕಾರ ಹೊಂದಿದೆ. ನಿಯಮಾವಳಿಗಳನ್ನು ರೂಪಿಸುವ ಸಂಬಂಧ ತಜ್ಞರ ಸಮಿತಿ ವರದಿ ನೀಡಿದ ನಂತರ ಕಂದಾಯ ಮತ್ತು ಕಾನೂನು ಇಲಾಖೆ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲಿವೆ ಎಂದು ಗೊತ್ತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.