ಶನಿವಾರ, ಜೂನ್ 12, 2021
28 °C
ಕುತೂಹಲ ಕೆರಳಿಸಿದ ಹಾಸನ ಲೋಕಸಭಾ ಚುನಾವಣೆ

ಅಖಾಡದಲ್ಲಿ ಗೌಡರ ವಿರುದ್ಧ ಶಾಸಕ ಮಂಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಹದಿನಾರನೇ ಲೋಕಸಭಾ ಚುನಾವಣೆಗೆ ಅಖಾಡ ಸಿದ್ಧವಾಗಿದೆ. ಹಾಸನದ ಚಿತ್ರಣ ಪೂರ್ಣ ಪ್ರಮಾಣದಲ್ಲಿ ಸ್ಪಷ್ಟವಾಗದಿದ್ದರೂ ಮುಂಚೂಣಿಯ ಹೋರಾಟಗಾರರು ಯಾರು ಎಂಬುದು ನಿಚ್ಚಳವಾಗುತ್ತಿದೆ.ಮೂರು ಪ್ರಮುಖ ಪಕ್ಷಗಳಲ್ಲಿ ಜೆಡಿಎಸ್ ಮೊದಲೇ ತನ್ನ ಅಭ್ಯರ್ಥಿಯ ಘೋಷಣೆ ಮಾಡಿದೆ. ಕಾಂಗ್ರೆಸ್‌ ಹಾಲಿ ಶಾಸಕ ಎ. ಮಂಜು ಅವರಿಗೇ ಟಿಕೆಟ್‌ ನೀಡುವುದಾಗಿ ಘೋಷಿಸಿದೆ. ಬಿಜೆಪಿ ಇನ್ನೂ ಗೊಂದಲ ಬಗೆಹರಿಸಿಕೊಂಡಿಲ್ಲ.ಹಾಸನ ಕ್ಷೇತ್ರದ ಮಟ್ಟಿಗೆ ಬಿಜೆಪಿಯ ನಡೆ ಅಷ್ಟು ಮುಖ್ಯ ಅನ್ನಿಸಲಾರದು. ಆದರೆ,  ಕಾಂಗ್ರೆಸ್‌ನಿಂದ ಯಾರು ಅಭ್ಯರ್ಥಿಯಾಗುತ್ತಾರೆ ಎಂಬ ಕುತೂಹಲ ಇತ್ತು. ಕಳೆದ ನಾಲ್ಕಾರು ತಿಂಗಳಿಂದಲೂ ಮಾಜಿ ಸಚಿವ, ಕಾಂಗ್ರೆಸ್‌ನ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಶಿವರಾಮು, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಎಸ್‌.ಎಂ. ಆನಂದ್‌ ಹಾಗೂ ಅರಕಲಗೂಡು ಶಾಸಕ ಎ. ಮಂಜು ಅವರ ಹೆಸರುಗಳು ಓಡಾಡುತ್ತಿದ್ದವು.ಮುಗಿಯದ ಗುದ್ದಾಟ: ಚುನಾವಣೆ ಬಂದಾಗ ಕಾಂಗ್ರೆಸ್‌ ಮುಖಂಡರು ಮುಸುಕಿನ ಗುದ್ದಾಟ ನಡೆಸುವುದು ಹೊಸದೇನೂ ಅಲ್ಲ. ಜೆಡಿಎಸ್‌ನಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಪ್ರಶ್ನಾತೀತ ನಾಯಕರು. ಪಕ್ಷದೊಳಗ ಅವರಿಗೆ ಸ್ಪರ್ಧೆ ಒಡ್ಡುವ ನಾಯಕರು ಇಲ್ಲದಿರುವುದರಿಂದ ಸಾಕಷ್ಟು ಮುಂಚಿತವಾಗಿಯೇ ರಣಾಂಗಣಕ್ಕೆ ಇಳಿದಾಗಿದೆ. ಕಳೆದ ಕೆಲವು ತಿಂಗಳಿಂದ ದೇವೇಗೌಡರು ಜಿಲ್ಲೆಯಾದ್ಯಂತ ಓಡಾಡಿ ಅನೇಕ ಯೋಜನೆ ಉದ್ಘಾಟಿಸಿದ್ದಾರೆ, ಇನ್ನೂ ಹಲವಕ್ಕೆ ಶಂಕುಸ್ಥಾಪನೆ ಮಾಡಿದ್ದಾರೆ.ಆದರೆ ಕಾಂಗ್ರೆಸ್‌ ನಾಯಕರಿಗೆ ಕೆಲವು ಸಮಸ್ಯೆಗಳು ಮತ್ತು ಮಿತಿಗಳು ಇವೆ ಎಂದು ಪಕ್ಷದೊಳಗಿನವರೇ ಹೇಳುತ್ತಿದ್ದಾರೆ.

ಎಸ್‌.ಎಂ. ಆನಂದ್‌ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ಗಾಗಿ ಓಡಾಡಿದ್ದರು. ಕೊನೆಯ ಕ್ಷಣದಲ್ಲಿ ಅದು ಕೈತಪ್ಪಿತ್ತು. ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಟಿಕೆಟ್‌ ನೀಡುವ ಭರವಸೆಯನ್ನು ಹೈಕಮಾಂಡ್‌ ನೀಡಿದೆ ಎಂದು ಅಂದು ಅವರ ಬೆಂಬಲಿಗರು ಹೇಳಿಕೊಂಡಿದ್ದರು. ಅದು ನಿಜವಾಗಲಿಲ್ಲ.  ಶಿವರಾಮು ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದರೂ ಸತತವಾಗಿ ಎರಡು ವಿಧಾನಸಭಾ ಚುನಾವಣೆ ಹಾಗೂ ಒಂದು ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಎ. ಮಂಜು ಈವರೆಗೆ ಅರಕಲಗೂಡು ಕ್ಷೇತ್ರಕ್ಕೆ ತಮ್ಮ ರಾಜಕೀಯವನ್ನು ಸೀಮಿತ­ವಾಗಿಟ್ಟುಕೊಂಡವರು. ಈಗ ಅದನ್ನು ಇಡೀ ಜಿಲ್ಲೆಗೆ ವಿಸ್ತರಿಸಬೇಕಾಗಿದೆ. ಕಾಂಗ್ರೆಸ್‌ನ ಇತರ ಮುಖಂಡರು ಅವರಿಗೆ ಹೇಗೆ ನೆರವಾಗುತ್ತಾರೆ ಎಂಬುದನ್ನು ನೋಡಬೇಕಾಗಿದೆ.ನಾಯಕರಿಂದಲೇ ಮುಜುಗರ: ಈವರೆಗೂ ಕಾಂಗ್ರೆಸ್‌ ಒಳಜಗಳ ಜಿಲ್ಲೆಯಲ್ಲಿ ವಿರೋಧಿಗಳ ದಾರಿ ಸುಲಭಗೊಳಿಸಿದ್ದವು. ಈ ಬಾರಿ ಪಕ್ಷದ ಮುಖಂಡರೇ ಇಲ್ಲಿಯ ನಾಯಕರು, ಕಾರ್ಯಕರ್ತ­ರನ್ನು ಮುಜುಗರಕ್ಕೆ ಒಳಗಾಗಿಸಿ ಹೋಗಿದ್ದಾರೆ.ಒಂದೆಡೆ ಜಿಲ್ಲಾ ಉಸ್ತುವಾರಿ ಸಚಿವರು ದೇವೇಗೌಡ ಹಾಗೂ ರೇವಣ್ಣ ಅವರನ್ನು ಹೊಗಳಿ ಹೋಗಿದ್ದರೆ, ಹಾಸನದಲ್ಲಿ ನಡೆದ ಇನ್ನೊಂದು ಸಮಾರಂಭದಲ್ಲಿ ಶಾಸಕ ವೈ.ಎನ್‌. ರುದ್ರೇಶಗೌಡ ಅವರೂ ಅಂಥ ಮಾತನಾಡಿದ್ದರು. ಅತ್ತ ಪಕ್ಷದ ಹಿರಿಯ ಮುಖಂಡ ಜಾಫರ್‌ ಶರೀಫ್‌ ಅವರೂ ದೇವೇಗೌಡರ ವಿರುದ್ಧ ಕಾಂಗ್ರೆಸ್‌ ಅಭ್ಯರ್ಥಿಯನ್ನು ಹಾಕಬಾರದು ಎಂದು ಹೈಕಮಾಂಡ್‌ಗೆ ಪತ್ರ ಬರೆದಿದ್ದರು. ಈ ಬೆಳವಣಿಗೆಗಳು ಜಿಲ್ಲೆಯ ಕಾಂಗ್ರೆಸ್‌ ಮುಖಂಡರಿಗೆ ಮುಜುಗರ ತಂದಿವೆ ಎಂದು ಪಕ್ಷದವರೇ ಹೇಳಿದ್ದಾರೆ. ಉಸ್ತುವಾರಿ ಸಚಿವರ ವಿರುದ್ಧ ಶಾಸಕ ಎ. ಮಂಜು ಹೈಕಮಾಂಡ್‌ಗೆ ದೂರು ನೀಡಿದ್ದಾರೆ ಎಂದೂ ವರದಿಯಾಗಿತ್ತು.ಅಭ್ಯರ್ಥಿ ಕೊರತೆ: ಜಿಲ್ಲೆಯಲ್ಲಿ ನೆಲೆ ಕಳೆದು­ಕೊಂಡಿರುವ ಬಿಜೆಪಿ ಠೇವಣಿ ಉಳಿಸಬಲ್ಲ ಅಭ್ಯರ್ಥಿಗಾಗಿ ಹುಡುಕುವ ಸ್ಥಿತಿ ಇದೆ. ಮಾಜಿ ಕ್ರಿಕೆಟಿಗ ಜಾವಗಲ್‌ ಶ್ರೀನಾಥ್ ಅವರಿಂದ ಆರಂಭಿಸಿ ಹಳೇಬೀಡು ಬಳಿಯ ಶಿವಪುರದ ಗುರುಬಸವ ಮಹಾಮನೆಯ ಪೀಠಾಧ್ಯಕ್ಷ, ಅಂಧರಾದ  ಬಸವಾನಂದ ಸ್ವಾಮೀಜಿವರೆಗೆ ಅನೇಕ ಹೆಸರುಗಳನ್ನು ಪಕ್ಷ ಹರಿಬಿಟ್ಟಿದೆ.ಕೆಲವು ನಾಯಕರು ಹಿರಿಯ ಮುಖಂಡ ಬಿ.ಬಿ. ಶಿವಪ್ಪ ಪರ ಒಲವು ತೋರಿಸಿದ್ದಾರೆ ಎನ್ನಲಾಗಿದೆ. ಇವೆಲ್ಲದರ ನಡುವೆ ಬಸವಾನಂದ ಸ್ವಾಮೀಜಿ ನರೇಂದ್ರ ಮೋದಿವರೆಗೂ ಸಂಪರ್ಕ ಸಾಧಿಸಿದ್ದು, ಟಿಕೆಟ್‌ ಸಂಪಾದಿಸುವ ಪ್ರಯತ್ನ ಮಾಡಿದ್ದಾರೆ. ಅವರೇ ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಈ ಎಲ್ಲ ಹೆಸರುಗಳನ್ನು ಬಿಟ್ಟು ಬಿಜೆಪಿ ಚಿತ್ರನಟಿಯೊಬ್ಬರನ್ನು ಹಾಸನದಿಂದ ಕಣಕ್ಕಿಳಿಸಲಿದೆ ಎಂಬುದು ಇತ್ತೀಚಿನ ವದಂತಿ. ಇನ್ನೂ ಒಂದೆರಡು ದಿನಗಳಲ್ಲಿ ಬಿಜೆಪಿ ಅಭ್ಯರ್ಥಿಯ ಘೋಷಣೆಯೂ ಆಗಲಿದೆ. ಅಲ್ಲಿಂದ ನಂತರ 16ನೇ ಲೋಕಸಭಾ ಚುನಾವಣೆಯ ರಂಗು ಸಹ ಹಾಸನದಲ್ಲಿ ಗಾಢವಾಗಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.