ಸೋಮವಾರ, ಜೂನ್ 14, 2021
22 °C

ಅಖಿಲ ಕರ್ನಾಟಕ ಪ್ರಥಮ ಹಿಂದಿ ಸಾಹಿತ್ಯ ಸಮ್ಮೇಳನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ದೇಶದ ಸಮಗ್ರತೆಯನ್ನು ಕಾಪಾಡಲು ಹಾಗೂ ಭಾರತೀಯರೆಲ್ಲರೂ ಒಂದುಗೂಡಲು ಹಿಂದಿ ಭಾಷೆ ಅತೀಮುಖ್ಯ. ಆದ್ದರಿಂದ, ಹಿಂದಿ  ಆಡಳಿತ ಭಾಷೆಯಾಗಬೇಕು ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅಭಿಪ್ರಾಯಪಟ್ಟರು.ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ  ಶಿಕ್ಷಕ ಮಿತ್ರ, ರಾಜಭಾಷಾ ಸಂಘರ್ಷ ಸಮಿತಿ ಹಾಗೂ ರಾಜ್ಯ ಪ್ರೌಢಶಾಲಾ ಹಿಂದಿ ಭಾಷಾ ಸಹಶಿಕ್ಷಕರ ಸಂಘ ಸಂಯುಕ್ತ ಆಶ್ರಯದಲ್ಲಿ ಸಚ್ಚಿದಾನಂದ ಹೀರಾನಂದ ವಾತ್ಸ್ಯಾಯನ `ಅಜ್ಞೇಯ~ ಅವರ ಜನ್ಮ ದಿನೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಅಖಿಲ ಕರ್ನಾಟಕ ಪ್ರಥಮ ಹಿಂದಿ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.ಭಾರತದ ಬಹು ಜನರು ಬಳಸುವ ಭಾಷೆ ಹಿಂದಿ ಆಗಿದ್ದು, ಇಂತಹ ಭಾಷೆಯನ್ನು ರಾಷ್ಟ್ರಭಾಷೆಯನ್ನಾಗಿಸಿದವರು  ಮಹಾತ್ಮ ಗಾಂಧಿ ಎಂದ ಅವರು, ಸ್ವಾತಂತ್ರಪೂರ್ವ ಬ್ರಿಟೀಷರು ನಮ್ಮನ್ನು ಒಡೆದು ಆಳುವ ನೀತಿ ಅನುಸರಣೆಯಲ್ಲಿ ಭಾಷಾ ನೀತಿಯೂ ಒಂದು ಎಂದರು.ಯಾವ ಭಾಷೆಯ ವಿರೋಧವೂ ಸರಿಯಲ್ಲ. ಆದರೆ, ಹಿಂದಿ ನಮ್ಮ ದೇಶದ ತಂತು. ಇಂಗ್ಲಿಷ್ ಎಂದಿಗೂ ಸಂಪರ್ಕ ಭಾಷೆಯಾಗಲು ಸಾಧ್ಯವಿಲ್ಲ. ಅದರೂ ಕೆಲವರು ರಾಜಕೀಯ ಹಿತಾಸಕ್ತಿಗಾಗಿ ಹಿಂದಿ ಕಲಿಕೆ, ಆಚರಣೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದರು.ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣೀಕ್ ಪುಸ್ತಕ ಮಳಿಗೆ ಉದ್ಘಾಟಿಸಿ ಮಾತನಾಡಿ, ಮುಂದಿನ ವರ್ಷದಲ್ಲಿ ನಡೆಸುವ ಸಾಹಿತ್ಯ ಸಮ್ಮೇಳನಕ್ಕೆ ಹಾಗೂ ನಮ್ಮ ರಾಜ್ಯದ ಎಂಟು ಜನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪುಸ್ತಕಗಳನ್ನು ಅನುವಾದ ಮಾಡುವವರಿಗೆ ಸರ್ಕಾರದಿಂದ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.ಸಾಂಸ್ಕೃತಿಕ ಪರಂಪರೆಯ ಭಾರತ ಒಂದುಗೂಡಲು ಭಾಷೆ ಅತ್ಯವಶ್ಯಕ. ಅಂತಹ ಒಂದುಗೂಡಿಸುವ ಭಾಷೆ ಹಿಂದಿ ಆಗಿರಬೇಕು ಎಂದ ಅವರು, ಇಂದಿನ ಶಿಕ್ಷಣ ಸಂಸ್ಥೆಗಳಾಗಲೀ, ಸರ್ಕಾರವಾಗಲೀ ಅಥವಾ ವಿದ್ಯಾರ್ಥಿಗಳಾಗಲೀ ಹಿಂದಿ ಕಲಿಕೆಗೆ ಆಸಕ್ತಿ ವಹಿಸದೇ ಇರುವುದು ವಿಷಾದನೀಯ ಎಂದರು.ಅನುವಾದಕರ ಕೊರತೆಯಿಂದಾಗಿ ಅನೇಕ ಮಹತ್ವದ ಗ್ರಂಥಗಳು ಇತರೆ ಭಾಗದ ಜನರಿಗೆ ತಲುಪುತ್ತಿಲ್ಲ. ಆದ್ದರಿಂದ ಸಾಧ್ಯವಾದಷ್ಟು ಪುಸ್ತಕಗಳು ಬೇರೆ ಬೇರೆ ಭಾಷೆಗಳಿಗೆ ಭಾಷಾಂತರಿಸಬೇಕು ಎಂದರು.

ಕೆಳದಿ ಸಂಸ್ಥಾನದ ಮಹೇಶ್ವರ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಸಮ್ಮೇಳನಾಧ್ಯಕ್ಷರಾಗಿ ನಿವೃತ್ತ ಮುಖ್ಯ ಶಿಕ್ಷಕ ಡಿ.ಎನ್. ಶ್ರೀನಾಥ್ ಉಪಸ್ಥಿತರಿದ್ದರು.ರಾಜಭಾಷಾ ಸಂಘರ್ಷ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್‌ಕುಮಾರ್ ಆರ್ಯ, ಪೂರ್ವಾಧ್ಯಕ್ಷ ಎಸ್.ಎಲ್. ರಾಜೋರಿಯಾ, ಎನ್‌ಇಎಸ್ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ, ನಿವೃತ್ತ ಮುಖ್ಯ ಶಿಕ್ಷಕ ಜಯದೇವಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಕಮಲಾಕರ್, ಡಾ.ಶ್ರೀರಂಗ, ರಾಜಗೋಪಾಲ, ಎಂಪಿಎಂ ಷಣ್ಮುಖಪ್ಪ, ಜಿ.ಎಸ್. ಸರೋಜಮ್ಮ, ಪ್ರಭಾಕರನ್, ಶಶಿಧರ್ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.