ಮಂಗಳವಾರ, ಮೇ 18, 2021
30 °C

ಅಗತ್ಯಬಿದ್ದರೆ ಮತ್ತೊಂದು ಗೋಶಾಲೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಗಳೂರು: ಬರಗಾಲ ತೀವ್ರವಾಗಿರುವ ತಾಲ್ಲೂಕಿನಲ್ಲಿ ಅಗತ್ಯ ಬಿದ್ದಲ್ಲಿ ಕೊಣಚಕಲ್ ರಂಗನಾಥಸ್ವಾಮಿ ಗುಡ್ಡದ ಸಮೀಪ ಮತ್ತೊಂದು ಗೋಶಾಲೆ ಪ್ರಾರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ್ ಹೇಳಿದರು.ತಾಲ್ಲೂಕಿನ ಗುರುಸಿದ್ದಾಪುರ ಗ್ರಾಮದ ಸಮೀಪ ಪ್ರಾರಂಭಿಸಿರುವ ಗೋಶಾಲೆಯಲ್ಲಿ ಮಂಗಳವಾರ ಜಾನುವಾರುಗಳಿಗೆ ಹುಲ್ಲು ವಿತರಿಸುವ ಮೂಲಕ ಗೋಶಾಲೆಗೆ ಅಧಿಕೃತ ಚಾಲನೆ ನೀಡಿದ ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ತಾಲ್ಲೂಕಿನ ಬರ ತೀವ್ರವಾಗಿದ್ದು ಜನ, ಜಾನುವಾರುಗಳಿಗೆ ಸಮಸ್ಯೆಯಾಗದಂತೆ ಕುಡಿಯುವ ನೀರು ಮತ್ತು ಗೋಶಾಲೆಗಳನ್ನು ತೆರೆಯುವ ಮೂಲಕ ಅಗತ್ಯ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ತಾಲ್ಲೂಕಿನ ಇತರೆ ಸ್ಥಳಗಳಲ್ಲಿ  ಗೋಶಾಲೆ ತೆರೆಯುವ ಬಗ್ಗೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ಗುರುಸಿದ್ದಾಪುರ ಗೋಶಾಲೆಯಲ್ಲಿ ಜಾನುವಾರು ಸಂಖ್ಯೆ 250 ಮೀರಿದ್ದು ಮತ್ತೊಂದು ಶೆಡ್ ನಿರ್ಮಿಸಲು ಸೂಚಿಸಲಾಗಿದೆ. ಅನುದಾನ ಕೊರತೆ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನೂರಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಸಮಸ್ಯಾತ್ಮಕ ಗ್ರಾಮಗಳಲ್ಲಿ ಕೊಳವೆಬಾವಿ ಕೊರೆಸುವುದು, ಪೈಪ್‌ಲೈನ್ ನಿರ್ಮಾಣ ಕಾಮಗಾರಿಗಳನ್ನು ಭರದಿಂದ ನಿರ್ವಹಿಸಲಾಗುತ್ತಿದೆ. ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ತಾಲ್ಲೂಕಿಗೆ ರೂ 1 ಕೋಟಿ ಮಂಜೂರು ಮಾಡಲು ಒಪ್ಪಿಗೆ ನೀಡಿದ್ದಾರೆ ಎಂದರು. ಅಂತರ್ಜಲ ಭಾರೀ ಪ್ರಮಾಣದಲ್ಲಿ ಕುಸಿತವಾಗಿದ್ದು, ಹೊಸದಾಗಿ ಕೊರೆಸಿದ ಕೊಳವೆಬಾವಿಗಳು ಕೆಲವೇ ದಿನಗಳಲ್ಲಿ ನೀರಿಲ್ಲದೆ ಬತ್ತಿ ಹೋಗುತ್ತಿವೆ. ತೀವ್ರ ಸಮಸ್ಯೆ ಇರುವ ಗ್ರಾಮಗಳಲ್ಲಿ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗು ವುದು ಎಂದು ಶಾಸಕರು ಹೇಳಿದರು. ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಕೂಲಿಕಾರ್ಮಿಕರು ಗುಳೆ ಹೋಗುತ್ತಿರುವ ಬಗ್ಗೆ   ಶಾಸಕರು, ಇಲ್ಲಿ ಪ್ರತಿ ವರ್ಷ ಮಲೆನಾಡು ಪ್ರದೇಶಕ್ಕೆ ಕೂಲಿಕಾರರು ಗುಳೆ ಹೋಗುವುದು ಸಾಮಾನ್ಯ. ಬರಗಾಲ ಇರಲಿ, ಇಲ್ಲದಿರಲಿ ತಪ್ಪದೆ ಗುಳೆ ಹೋಗುತ್ತಾರೆ. ಕಾಫಿ ಸೀಮೆಗೆ ತೆರಳುವ ಕಾರ್ಮಿಕರು ಮುಂಗಡವಾಗಿ ಮಾಲೀಕರಿಂದ ಹಣ ಪಡೆದಿರುತ್ತಾರೆ.

ಉದ್ಯೋಗ ಖಾತ್ರಿ ಯೋಜನೆ ಅಡಿ ಸಾಕಷ್ಟು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಸಷ್ಟಪಡಿಸಿದರು.

ಈ ಸಂದರ್ಭದಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಡಿ.ಎಂ. ಪ್ರಭುಸ್ವಾಮಿ, ಉದ್ಯೋಗ ಖಾತ್ರಿ ಯೋಜನೆಯಡಿ ಮಾಚ್ 31ರವರೆಗೆ ರೂ 21 ಕೋಟಿ ಮೊತ್ತದ ಕಾಮಗಾರಿಗೆ ಸಂಬಂಧಪಟ್ಟ `ಎಂಐಎಸ್~ ಆಗಿದೆ ಎಂದು ಮಾಹಿತಿ ನೀಡಿದರು.ಜಿ.ಪಂ. ಸದಸ್ಯ ಎಚ್. ನಾಗರಾಜ್, ತಾ.ಪಂ. ಅಧ್ಯಕ್ಷ ಶಾಂತವೀರಪ್ಪ, ಎಪಿಎಂಸಿ ಅಧ್ಯಕ್ಷ ರೇವಣಸಿದ್ದಪ್ಪ, ಸದಸ್ಯ ಶ್ರೀನಿವಾಸ್, ತಹಶೀಲ್ದಾರ್ ಎಚ್.ಪಿ. ನಾಗರಾಜ್, ಪಿಆರ್‌ಇಡಿ ಎಇಇ ಎನ್. ಲಿಂಗರಾಜ್ ಹಾಜರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.