ಭಾನುವಾರ, ಮೇ 22, 2022
21 °C

ಅಗತ್ಯ ವಸ್ತುಗಳ ಬೆಲೆ ಏರಿಕೆ :ಲೋಕಸಭೆಯಲ್ಲಿ ಎಡಪಕ್ಷಗಳ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಗ್ಗೆ ಎಡಪಕ್ಷಗಳು ಮಂಗಳವಾರ ಲೋಕಸಭೆಯಲ್ಲಿ ತೀವ್ರ ಆತಂಕ ವ್ಯಕ್ತಪಡಿಸಿದವು.ಸಿಪಿಎಂ ಸದಸ್ಯ ರಾಮಚಂದ್ರ ದೊಮೆ ಅವರು ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿ, ಆಹಾರ ಧಾನ್ಯಗಳ ಬೆಲೆ ಗಗನಕ್ಕೇರಿದ್ದು ಸಾಮಾನ್ಯ ಜನರ (ಆಮ್ ಆದ್ಮಿ) ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಪಕ್ಷ ಅವರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ ಎಂದು ಟೀಕಿಸಿದರು.ಆಹಾರ ಭದ್ರತೆ ಕಾಯ್ದೆಯನ್ನು ಜಾರಿಗೆ ತರದೆ ಇದ್ದುದು ಮತ್ತು ಸಾರ್ವಜನಿಕ ಪಡಿತರ ವಿತರಣೆಯಲ್ಲಿಯ ಲೋಪದಿಂದಾಗಿ ಸಾಮಾನ್ಯ ಜನರ ಜೀವನ ಕಷ್ಟವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಪದೇ ಪದೇ ಏರಿಸಿದ್ದು ಸಾಮಾನ್ಯ ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಹೇಳಿದರು.ಶಬರಿಮಲೆ ಸಮಗ್ರ ಯೋಜನೆ: ಪವಿತ್ರ ಯಾತ್ರಾ ಸ್ಥಳವಾದ ಶಬರಿಮಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ದುರಂತ ಮರುಕಳಿಸದಂತೆ ನೋಡಿಕೊಳ್ಳಲು ಸಮಗ್ರ ಅಭಿವೃದ್ಧಿ ಯೋಜನೆಯನ್ನು ಜಾರಿ ಮಾಡಬೇಕು ಎಂದು ಕಾಂಗ್ರೆಸ್ ಸಂಸದರು ಆಗ್ರಹಪಡಿಸಿದರು.ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಪಿ.ಟಿ.ಥಾಮಸ್ ಅವರು, ಜನಜಂಗುಳಿಯನ್ನು ನಿಯಂತ್ರಿಸಲು ಅರೆ ಸೇನಾಪಡೆಯನ್ನು ನಿಯೋಜಿಸಬೇಕು ಎಂದು ಸಲಹೆ ಮಾಡಿದರು.ಎಸ್‌ಪಿ, ಬಿಎಸ್‌ಪಿ ತಿಕ್ಕಾಟ: ಉತ್ತರ ಪ್ರದೇಶದ ಮಾಯಾವತಿ ನೇತೃತ್ವದ ಸರ್ಕಾರ ಪ್ರಜಾಪ್ರಭುತ್ವ ವಿರೋಧಿ ಎಂಬ ಟೀಕೆಯಿಂದ ಸದನದಲ್ಲಿ ಗದ್ದಲ ಉಂಟಾಗಿ ಕಲಾಪವನ್ನು ಒಂದು ಗಂಟೆ ಕಾಲ ಮುಂದೂಡಲಾಯಿತು.ಶೂನ್ಯ ವೇಳೆಯಲ್ಲಿ ಸಮಾಜವಾದಿ ಪಕ್ಷದ ಧರ್ಮೇಂದ್ರ ಯಾದವ್ ಅವರು ವಿಷಯ ಪ್ರಸ್ತಾಪಿಸಿ, ಮಾಯಾವತಿ ಸರ್ಕಾರವು ಪ್ರಜಾಸತಾತ್ಮಕ ಪ್ರಕ್ರಿಯೆಗಳನ್ನು ಬಲ ಪ್ರಯೋಗ ಮಾಡಿ ಹತ್ತಿಕ್ಕುತ್ತಿದೆ ಎಂದು ಆಪಾದಿಸಿದರು. ಕೂಡಲೇ ಅವರ ಪಕ್ಷದ ಮಹಿಳಾ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ನಿಂತು ಘೋಷಣೆ ಕೂಗತೊಡಗಿದರು.ಇದರಿಂದ ಕುಪಿತಗೊಂಡ ಬಿಎಸ್‌ಪಿ ಸದಸ್ಯರು ವಾಗ್ವಾದಕ್ಕಿಳಿದರು. ಆಗ ಸದನದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಬಳಿಕ ಸಭಾಧ್ಯಕ್ಷೆ ಮೀರಾ ಕುಮಾರ್ ಕಲಾಪವನ್ನು ಮುಂದೂಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.