ಅಚ್ಛಾ ತೊ ಹಮ್ ಚಲ್ತೇ ಹೈ...
ಮುಂಬೈ (ಪಿಟಿಐ/ಐಎಎನ್ಎಸ್): ಬಾಲಿವುಡ್ನ ಮೊದಲ ಸೂಪರ್ಸ್ಟಾರ್ ರಾಜೇಶ್ ಖನ್ನಾ (69) ಅವರು ಇಲ್ಲಿನ ಬಾಂದ್ರಾ ಪ್ರದೇಶದ ಕಾರ್ಟರ್ ರಸ್ತೆಯಲ್ಲಿರುವ ತಮ್ಮ ನಿವಾಸ `ಆಶೀರ್ವಾದ್~ನಲ್ಲಿ ಬುಧವಾರ ನಿಧನರಾದರು.
ಕೆಲವು ಕಾಲದಿಂದ ಅನಾರೋಗ್ಯ ಪೀಡಿತರಾಗಿದ್ದ ಅವರು ಕಳೆದ ಏಪ್ರಿಲ್ನಿಂದ ಪದೇ ಪದೇ ಆಸ್ಪತ್ರೆಗೆ ದಾಖಲಾಗುತ್ತಿದ್ದರು. ಎರಡು ದಿನಗಳ ಹಿಂದಷ್ಟೇ ಅವರು ಇಲ್ಲಿನ ಲೀಲಾವತಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದರು.
ರಾಜೇಶ್ ಖನ್ನಾ ಅವರು ಯಾವ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನುವುದನ್ನು ಲೀಲಾವತಿ ಆಸ್ಪತ್ರೆ ವೈದ್ಯರು ತಿಳಿಸಿಲ್ಲ. `ನಾವು ಅವರ (ಖನ್ನಾ) ಅನಾರೋಗ್ಯ ಕಾರಣವನ್ನು ಹೇಳಲಾಗುವುದಿಲ್ಲ. ಅವರ ಕುಟುಂಬದವರನ್ನು ಸಂಪರ್ಕಿಸಿ~ ಎಂದು ಆಸ್ಪತ್ರೆ ವಕ್ತಾರ ಡಾ. ತ್ರಿವೇದಿ ಹೇಳಿದ್ದಾರೆ.
ಖನ್ನಾ ಅವರಿಂದ ದೂರವಿದ್ದ ಪತ್ನಿ ಡಿಂಪಲ್ ಕಪಾಡಿಯಾ, ಪತಿ ಮರಣಶಯ್ಯೆಯಲ್ಲಿದ್ದ ಸಮಯದಲ್ಲಿ ಅವರೊಂದಿಗೆ ಇದ್ದರು. ಪುತ್ರಿಯರಾದ ಟ್ವಿಂಕಲ್, ರಿಂಕಿ ಕೂಡ ಜೊತೆಗಿದ್ದರು.
ಸಿನಿಮಾ ಚಿತ್ರೀಕರಣಕ್ಕೆಂದು ವಿದೇಶಕ್ಕೆ ತೆರಳಿದ್ದ ಅಳಿಯ (ಟ್ವಿಂಕಲ್ ಪತಿ) ಅಕ್ಷಯ್ ಕುಮಾರ್ ಸಾವಿನ ಸುದ್ದಿ ತಿಳಿದ ತಕ್ಷಣ ಭಾರತಕ್ಕೆ ವಾಪಸಾಗಿದ್ದಾರೆ.
`ಮಾವನವರು ಸುಂದರ ಸ್ವರ್ಗಕ್ಕೆ ತೆರಳಿದ್ದಾರೆ. ಅವರ ಆತ್ಮ ಸ್ವರ್ಗಕ್ಕೆ ಸೇರಲಿ ಎಂಬುದೇ ಎಲ್ಲರ ಪ್ರಾರ್ಥನೆ ಆಗಿದೆ~ ಎಂದು ಅಕ್ಷಯ್ ಕುಮಾರ್ `ಆಶೀರ್ವಾದ್~ ಮನೆಯ ಮುಂದೆ ಜಮಾಯಿಸಿದ್ದ ಸುದ್ದಿಗಾರರಿಗೆ ಹೇಳಿದ್ದಾರೆ.
ಖನ್ನಾ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ 11ಗಂಟೆಗೆ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಖನ್ನಾ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ಅಭಿಮಾನಿಗಳು ಬಾಂದ್ರಾದಲ್ಲಿರುವ ಮನೆಯ ಸುತ್ತ ಅಪಾರ ಸಂಖ್ಯೆಯಲ್ಲಿ ಸೇರತೊಡಗಿದರು.
ರಾಜೇಶ್ ಖನ್ನಾ ಅವರ ಮುಖ ಮತ್ತು ಕಣ್ಣುಗಳು ಗುಳಿಬಿದ್ದು ಕುಗ್ಗಿಹೋಗಿದ್ದು, ಸ್ಫುರದ್ರೂಪಿಯಾದ ತಮ್ಮ ನೆಚ್ಚಿನ ಹಿರೋವನ್ನು ತೆರೆಯ ಮೇಲೆ ಕಂಡಿದ್ದ ಖನ್ನಾ ಅಭಿಮಾನಿಗಳು ಅವರ ಗುಳಿಬಿದ್ದ ಮುಖವನ್ನು ಕಂಡು ಅವಕ್ಕಾದರು.
ಕಿಶೋರ ಗಾನ...
ನವದೆಹಲಿ (ಪಿಟಿಐ): ರಾಜೇಶ್ ಖನ್ನಾ ಚಿತ್ರರಂಗದಲ್ಲಿ ಖ್ಯಾತಿ ಗಳಿಸುವಲ್ಲಿ ಖ್ಯಾತ ಗಾಯಕ ಕಿಶೋರ್ ಕುಮಾರ್ ಹಾಗೂ ಖ್ಯಾತ ಸಂಗೀತ ನಿರ್ದೇಶಕ ಆರ್. ಡಿ. ಬರ್ಮನ್ ಅವರ ಪಾತ್ರ ಹಿರಿದು.
ಚಿತ್ರರಂಗದಲ್ಲಿ ಮರೆಯಲಾಗದ ತ್ರಿವಳಿಗಳಾಗಿ ಉಳಿದುಕೊಂಡಿರುವ ಈ ಮೂವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಈ ಮೂವರ ಪ್ರತಿಭಾ ಶಕ್ತಿಯ ಸಮ್ಮಿಲನದಿಂದ ಹೊರಹೊಮ್ಮಿದ `ಕುಚ್ ತೊ ಲೋಗ್ ಕಹೇಂಗೆ~, `ಏ ಶಾಮ್ ಮಸ್ತಾನಿ~ ಹಾಡುಗಳು ಹಿಂದಿ ಸಂಗೀತ ಲೋಕದಲ್ಲಿ ಹೊಸ ಸಂಚಲನವನ್ನು ಉಂಟುಮಾಡಿದ್ದವು.
ಆನಂದ ಬಕ್ಷಿ ಬರೆದ `ಆರಾಧನಾ~ ಚಿತ್ರದ `ರೂಪ್ ತೇರಾ ಮಸ್ತಾನ~ ಮತ್ತು `ಮೇರಿ ಸಪ್ನೋಂಕಿ ರಾಣಿ~ ಹಾಡಿನ ಸಾಲುಗಳು ರಾಜೇಶ್ ಮತ್ತು ಕಿಶೋರ್ ಅವರನ್ನು ಮೊದಲ ಬಾರಿ ಒಂದುಗೂಡಿಸಿದ್ದವು.
ಖನ್ನಾ ಚಿತ್ರದ ಜನಪ್ರಿಯ ಗೀತೆಗಳು...
ವೋ ಶಾಮ್ ಕುಛ್ ಅಜೀಬ್ ಥಿ (ಖಾಮೋಶಿ), ಯೇ ಜೋ ಮೊಹಬ್ಬತ್ ಹೈ (ಕಟಿ ಪತಂಗ್), ಓ ಮೇರೆ ದಿಲ್ ಕೆ ಚೇನ್ (ಮೇರೆ ಜೀವನ್ ಸಾಥಿ), ಜೈ ಜೈ ಶಿವಶಂಕರ್, ಕೋರಾ ಕಾಗಜ್ ಥಾ (ಆಪ್ ಕಿ ಕಸಮ್), ಕುಛ್ ತೋ ಲೋಗ್ ಕಹೇಂಗೆ, ಚಿಂಗಾರಿ ಕೊಯಿ ಬಡ್ಕೆ (ಅಮರ್ ಪ್ರೇಮ್), ಜಿಂದಗಿ ಏಕ್ ಸಫರ್ (ಅಂದಾಜ್)... ಕಿಶೋರ್ ಸಿರಿ ಕಂಠದಲ್ಲಿ ಮೂಡಿದ್ದ ಈ ಗೀತೆಗಳಿಂದ ರಾಜೇಶ್ ಖನ್ನಾ ಜನಪ್ರಿಯತೆ ಮುಗಿಲುಮುಟ್ಟಿತ್ತು.
ರಾಜೇಶ್ ಖನ್ನಾ ಸಾವು: ಮಮ್ತಾಜ್ಗೆ ಆಘಾತ
ಲಂಡನ್ (ಪಿಟಿಐ):ರಾಜೇಶ್ ಖನ್ನಾ ಅವರೊಂದಿಗೆ ಹತ್ತಕ್ಕೂ ಹೆಚ್ಚು ಹಿಟ್ ಚಿತ್ರಗಳಲ್ಲಿ ನಟಿಸಿದ್ದ ಬಾಲಿವುಡ್ನ ಹಿರಿಯ ನಟಿ ಮಮ್ತಾಜ್, `ಖನ್ನಾ ಬೇರೆಯವರೊಂದಿಗೆ ಅಂತರ್ಮುಖಿಯಾಗಿದ್ದರೂ, ನನಗೆ ಬಹಳ ಹತ್ತಿರದವರಾಗಿದ್ದರು~ ಎಂದು ನೆನಪು ಹಂಚಿಕೊಂಡಿದ್ದಾರೆ.
`ಖನ್ನಾ ಅವರು ಮೃತಪಟ್ಟ ಸುದ್ದಿ ಕೇಳಿದಾಗಿನಿಂದ ಅಳುತ್ತಲೇ ಇದ್ದೇನೆ. ಆದರೆ, ಇತ್ತೀಚೆಗೆ ಅವರ ಆರೋಗ್ಯ ಹದಗೆಟ್ಟಾಗ ಅವರನ್ನು ಭೇಟಿಯಾಗಿದ್ದೆ. ಆಗ, ನೆನಪುಗಳನ್ನು ಮೆಲುಕು ಹಾಕಿದ್ದೆವು. ಇಬ್ಬರೂ ಕ್ಯಾನ್ಸರ್ ನೊಂದಿಗೆ ಸೆಣೆಸುತ್ತಿರುವುದರ ಕುರಿತು ಚರ್ಚಿಸಿದ್ದೆವು~ ಎಂದಿದ್ದಾರೆ.
ರಾಜೇಶ್ ಖನ್ನಾ ಮತ್ತು ಮಮ್ತಾಜ್ ಬಾಲಿವುಡ್ನಲ್ಲಿ `ಮರೆಯಲಾಗದ ಜೋಡಿ~ ಎಂದೇ ಹೆಸರುವಾಸಿಯಾಗಿದ್ದರು. `ಆಪ್ ಕಿ ಕಸಮ್~, `ರೋಟಿ~, `ಅಪ್ನಾ ದೇಶ್~ ಮತ್ತು `ಸಚ್ಚಾ ಜೂಟಾ~ ಸೇರಿದಂತೆ ಅವರಿಬ್ಬರು ಜೊತೆಯಾಗಿ ಅಭಿನಯಿಸಿದ್ದ ಹತ್ತು ಚಿತ್ರಗಳು ಕೂಡ ಆ ಕಾಲದಲ್ಲಿ ಸೂಪರ್ ಹಿಟ್ ಆಗಿದ್ದವು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.