ಅಡಿಕೆ ಮರಗಳಿಗೆ ಎಲೆಚುಕ್ಕೆ ರೋಗ
ಶಿರಸಿ: ತಾಲ್ಲೂಕಿನ ಮೇಲಿನ ಶಿರಸಿಮಕ್ಕಿಯ ಸುಮಾರು 10 ಎಕರೆ ಅಡಿಕೆ ತೋಟ ಎಲೆಚುಕ್ಕಿ ರೋಗಕ್ಕೆ ತುತ್ತಾಗಿದ್ದು, ರೈತರು ಚಿಂತಿತರಾಗಿದ್ದಾರೆ. ಮಳೆಗಾಲದಲ್ಲಿ ಈ ರೋಗ ಶೀಘ್ರ ವ್ಯಾಪಿಸುವುದರಿಂದ ಇನ್ನಷ್ಟು ತೋಟಗಳಿಗೆ ರೋಗ ಹರಡಬಹುದೆಂಬ ಭೀತಿಯಲ್ಲಿದ್ದಾರೆ.
ಉಮಾಪತಿ ಹೆಗಡೆ, ನಾಗಪತಿ ಹೆಗಡೆ, ಸುಬ್ರಾಯ ಹೆಗಡೆ, ಆರ್.ವಿ.ಭಾಗವತ ಸೇರಿದಂತೆ ಆರೆಂಟು ರೈತರ ತೋಟದಲ್ಲಿ ಈ ರೋಗ ಕಾಣಿಸಿಕೊಂಡಿದ್ದು, ರೋಗ ಬಂದಿರುವ ತೋಟದ ಅಡಿಕೆ ಮರದ ಗರಿಗಳು ಹಳದಿ ಬಣ್ಣಕ್ಕೆ ತಿರುಗಿವೆ. ಗರಿಗಳ ಮೇಲೆ ಮೇಲೆ ಕಂದು ಬಣ್ಣದ ಸಣ್ಣ ಹಾಗೂ ದೊಡ್ಡ ಚುಕ್ಕಿಗಳು ಕಾಣುತ್ತವೆ. ಆರಂಭದಲ್ಲಿ ಸಣ್ಣ ಚುಕ್ಕಿಯಂತೆ ಕಾಣುವ ಫಂಗಸ್ಗಳು ಕ್ರಮೇಣ ದೊಡ್ಡದಾಗುತ್ತ ಇಡೀ ಗರಿಯನ್ನು ವ್ಯಾಪಿಸುತ್ತವೆ. ಇದರಿಂದ ಗರಿ ಒಣಗಿ ಮರಗಳು ಸಾಯುತ್ತವೆ.
ಚಿಕ್ಕ ಗಿಡಗಳ ಮೇಲೆ ಇದು ಬೇಗ ಪರಿಣಾಮ ಬೀರುತ್ತದೆ. ಉರಿವ ಬೆಂಕಿಗೆ ತುಪ್ಪ ಸುರಿದಂತೆ ಎಲೆಚುಕ್ಕಿ ರೋಗದ ಜೊತೆಗೆ ಬೇರುಹುಳು ಭಾದೆ ಈ ತೋಟಗಳಲ್ಲಿ ಹರಡಿದೆ. ಎರಡು ವರ್ಷಗಳಿಂದ ಇವೆರಡು ರೋಗಗಳು ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದರೂ ಈ ವರ್ಷ ಉಲ್ಬಣಿಸಿದೆ ಎಂಬುದು ರೈತರ ಅಭಿಪ್ರಾಯ.
`ಗದ್ದೆ ತೆಗೆದು ತೋಟ ಮಾಡಿದ ಪ್ರದೇಶಗಳಲ್ಲಿ ಬೇರುಹುಳು ಭಾದೆ ಹೆಚ್ಚಿದೆ ಆದರೆ ಪಾರಂಪರಿಕ ತೋಟಗಳಲ್ಲಿ ಕಡಿಮೆ ಪ್ರಮಾಣದಲ್ಲಿದೆ. ಎಲೆಚುಕ್ಕಿ ರೋಗ ಪಾರಂಪರಿಕ ತೋಟಗಳಲ್ಲೂ ಕಾಣಿಸಿಕೊಂಡಿದೆ' ಎನ್ನುತ್ತಾರೆ ಕೃಷಿಕ ಆರ್.ವಿ.ಭಾಗವತ.
ತೋಟಗಾರಿಕಾ ಇಲಾಖೆ ಜಿಲ್ಲಾ ಉಪನಿರ್ದೇಶಕ ಎಚ್.ಆರ್.ನಾಯ್ಕ, ಅಧಿಕಾರಿ ಗಣೇಶ ಹೆಗಡೆ ಭಾನುವಾರ ರೋಗ ತಗುಲಿರುವ ತೋಟಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
`ಎಲೆಚುಕ್ಕಿ ರೋಗ ಮಳೆಗಾಲದಲ್ಲಿ ಬಹಳ ಬೇಗ ಹರಡುತ್ತದೆ. ಗಾಳಿ ಮೂಲಕ, ಒಂದು ಎಲೆಗೆ ಇನ್ನೊಂದು ಎಲೆ ತಾಗುವ ಮೂಲಕ ರೋಗ ವ್ಯಾಪಿಸುತ್ತದೆ. ಹಿಂದಿನ ವರ್ಷ ಕಾಗೇರಿ ಭಾಗದ ತೋಟದಲ್ಲಿ ಈ ರೋಗ ಕಾಣಿಸಿಕೊಂಡಿತ್ತು.
ಇಲಾಖೆಯಲ್ಲಿ ಶೇ 50ರ ಸಹಾಯಧನದಲ್ಲಿ ಲಭ್ಯವಿರುವ ಮ್ಯಾಂಕೋಜಬ್ ಕೀಟನಾಶಕವನ್ನು ಒಂದು ಲೀಟರ್ ನೀರಿಗೆ 2ರಿಂದ 2.5 ಗ್ರಾಂ ಮಿಶ್ರಣಗೊಳಿಸಿ ಸಿಂಪರಣೆ ಮಾಡುವುದರಿಂದ ರೋಗ ನಿಯಂತ್ರಿಸಬಹುದು.
ಕ್ಲೋರೋಫೈರಿಪಾಸ್ನ್ನು ನೀರಿನೊಂದಿಗೆ ಮಿಶ್ರಣ ಮಾಡಿ ಮರದ ಬುಡಕ್ಕೆ ಹಾಕುವುದರಿಂದ ಬೇರುಹುಳು ಕಾಟ ತಡೆಗಟ್ಟಬಹುದು' ಎಂದು ಎಚ್.ಆರ್.ನಾಯ್ಕ ಹೇಳಿದರು.
ನಿಯಂತ್ರಣ ಪ್ರಯೋಗ: ಬೇರುಹುಳು ನಿಯಂತ್ರಣಕ್ಕೆ ಸರ್ಕಾರ ಹೊಸ ಕಾರ್ಯಕ್ರಮ ರೂಪಿಸಿದ್ದು, ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಳಿಸ ಲಾಗುತ್ತದೆ. ರೋಗ ಬಂದಿರುವ 10 ಎಕರೆ ತೋಟದಲ್ಲಿ ಪ್ರಯೋಗ ನಡೆಸಿ, ಫಲಿತಾಂಶ ದೊರೆತ ನಂತರ ಪ್ರಯೋಗ ನಡೆಸಿದ ತೋಟಕ್ಕೆ ಬಳಸಿದ ಕ್ರಿಮಿನಾಶಕವನ್ನು ಶೇ 50ರ ಸಹಾಯಧನದಲ್ಲಿ ರೈತರಿಗೆ ವಿತರಿಸಲಾಗುತ್ತದೆ ಎಂದರು.
ತಾಲ್ಲೂಕಿನ ದೇವಿಮನೆ ಸಮೀಪ ಕೊಳೆರೋಗ ಬಂದಿರುವ ದೂರು ಹೊರತುಪಡಿಸಿದರೆ ಈ ವರೆಗೆ ಅಡಿಕೆಗೆ ಇನ್ನಾವುದೇ ರೋಗ ಬಂದಿರುವ ಬಗ್ಗೆ ರೈತರಿಂದ ಮಾಹಿತಿ ಬಂದಿಲ್ಲ. ಮಳೆ ಜೋರಾದರೆ ಉದುರುವ ರೋಗ ಅಲ್ಲಲ್ಲಿ ಕಾಣಿಸಿಕೊಳ್ಳಬಹುದು ಎಂದು ಎಚ್.ಆರ್.ನಾಯ್ಕ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.