ಭಾನುವಾರ, ಜೂಲೈ 12, 2020
29 °C

ಅಡ್ಡಾದಿಡ್ಡಿ ಸಂಚಾರ: ಪ್ರಾಣಕ್ಕೆ ಸಂಚಕಾರ

ಪ್ರಜಾವಾಣಿ ವಾರ್ತೆ/ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಕೋಲಾರ: ಜಿಲ್ಲಾ ಕೇಂದ್ರವಾಗಿರುವ ನಗರದಲ್ಲಿ ಸಂಚರಿಸುವುದೆಂದರೆ ಪಾದಚಾರಿಗಳು ಮತ್ತು ವಾಹನ ಸವಾರರ ಪ್ರಾಣಕ್ಕೆ ಸಂಚಕಾರದಂತೆಯೇ ಆಗಿದೆ. ಹೆಚ್ಚುತ್ತಿರುವ ವಾಹನ ಮತ್ತು ಜನಸಂಖ್ಯೆಗೆ ಇಕ್ಕಟ್ಟಾಗುತ್ತಿರುವ ಇಡೀ ನಗರದಲ್ಲಿ ಅದಕ್ಕೆ ತಕ್ಕಂತೆ ಕೆಲಸ ಮಾಡಲಾಗದ ಸಂಚಾರ ವ್ಯವಸ್ಥೆ ರೋಗ ಹಿಡಿದಂತೆ ದುರ್ಬಲವಾಗಿದೆ.ಮುಖ್ಯ ರಸ್ತೆಗಳಲ್ಲಿ ನೂರಾರು ಹಳ್ಳಗಳ ನಡುವೆಯೇ ದೊಡ್ಡ ವಾಹನಗಳನ್ನು ಎದುರಿಸುತ್ತಾ, ಜೀವವನ್ನು ಕೈಯಲ್ಲಿ ಹಿಡಿದುಕೊಂಡು ವಾಹನ ಸವಾರರು ಮತ್ತು ಪಾದಚಾರಿಗಳು ದಿನ ದೂಡುತ್ತಿದ್ದಾರೆ. ಹಳ್ಳಗಳು ದಿನೇ ದಿನೇ ಹೆಚ್ಚಾಗುತ್ತಿವೆ. ರಸ್ತೆಯ ಪಕ್ಕ ಉದ್ದಕ್ಕೂ ಸುರಿದ ಜಲ್ಲಿ ಕಲ್ಲುಗಳು ರಸ್ತೆ ಮಧ್ಯೆ ಜಿಗಿದಿವೆ. ಧೂಳಿನ ಕಾಟವೂ ಹೆಚ್ಚಾಗಿದೆ. ರಸ್ತೆಯಲ್ಲಿ ಜಗಳಗಳೂ ಸಹಜವೆಂಬಂತಾ ಗಿದೆ. ಕಣ್ ಮಿಟಿಕಿಸುವುದರಲ್ಲಿ ದಟ್ಟ ಕಪ್ಪು ಹೊಗೆಯುಗುಳಿ, ಕರ್ಕಶವಾದ ಹಾರ್ನ್ ಮಾಡುತ್ತ, ಕಾಣದ ದಿಕ್ಕಿನಿಂದ ಮುನ್ನುಗ್ಗಿ ಹಾದುಹೋಗಿ ಗಾಭರಿ ಬೀಳಿಸುವ ಆಟೋರಿಕ್ಷಾಗಳಿವೆ.ಮೂಲಸೌಕರ್ಯವಾದ ರಸ್ತೆ ಎಂಬುದು ನಗರದ ಜನರಿಗೆ ಗಗನ ಕುಸುಮವಾಗಿ ಪರಿಣಮಿಸಿದೆ. ನಗರಸಭೆ ಮತ್ತು ಲೋಕೋಪಯೋಗಿ ಇಲಾಖೆ ಮಾತ್ರ ‘ಯಾವ ರಸ್ತೆ ಯಾರಿಗೆ ಸೇರಿದ್ದು’ ಎಂಬ ಜಗಳದಲ್ಲಿ ನಿರತವಾಗಿದೆ. ನಗರದಲ್ಲಿ ರಸ್ತೆಗಳಷ್ಟೇ ಸಮಸ್ಯೆ ಅಲ್ಲ. ಅವುಗಳೊಡನೆ ಸಂಚಾರ ನಿಯಮವನ್ನು ಗಾಳಿಗೆ ತೂರಿರುವ ವಾಹನ ಸವಾರರೂ ಇದ್ದಾರೆ. ಕಣ್ಣೆದುರೇ ಸಂಚಾರ ನಿಯಮ ಪಾಲಿಸಿದರೂ ಸುಮ್ಮನಿರುವ ಸಂಚಾರಿ ಠಾಣೆ ಪೊಲೀಸರಿದ್ದಾರೆ. ಸಂಚಾರಿ ದೀಪಗಳಿಲ್ಲದ ವೃತ್ತಗಳು ಮಾತ್ರ ಮಾರಣಾಂತಿಕವಾಗಿ ಪರಿಣಮಿಸಿವೆ. ಜಿಲ್ಲಾ ಪೊಲೀಸ್ ಇಲಾಖೆ ಸನ್ನಿವೇಶದ ಗಾಂಭೀರ್ಯವನ್ನು ಅರಿತಂತಿಲ್ಲ.ಅನಧಿಕೃತ ಆಟೋರಿಕ್ಷಾಗಳ ಸಂಖ್ಯೆ ಹೆಚ್ಚುತ್ತಿದೆ. ಬೆರಕೆ ಇಂಧನ ಬಳಸಿ ಪರಿಸರ ಮಾಲಿನ್ಯ ಮಾಡುತ್ತಿರುವ ಆಟೋರಿಕ್ಷಾ ಚಲಾಯಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಪರಿಸರ ನಿಯಂತ್ರಣ ಇಲಾಖೆ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ನಿರ್ಲಿಪ್ತರಾಗಿದ್ದಾರೆ. ದ್ವಿಚಕ್ರ ವಾಹನಗಳಿಗಾಗಲಿ, ನಾಲ್ಕು ಚಕ್ರದ ವಾಹನಗಳಿಗಾಗಲಿ ಪಾರ್ಕಿಂಗ್ ವ್ಯವಸ್ಥೆ ನಗರದಲ್ಲಿ ಸಮರ್ಪಕವಾಗಿ ಇಲ್ಲ. ವಾಹನ ಮತ್ತು ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಕಡೆ ನಿಲ್ದಾಣಗಳೂ ಇಲ್ಲ.

ಆಗಬೇಕಾದ್ದು..* ಎಲ್ಲಕ್ಕಿಂತ ಮೊದಲು ರಸ್ತೆಗಳ ಅಭಿವೃದ್ಧಿಯಾಗಬೇಕು. ನಗರಸಭೆ, ಲೋಕೋಪಯೋಗಿ, ಜಿಲ್ಲಾ ಪಂಚಾಯಿತಿ ಸೇರಿದಂತೆ ಜಿಲ್ಲಾಡಳಿತವು ರಸ್ತೆಗಳನ್ನು ಸಂಚಾರಯೋಗ್ಯ ಗೊಳಿಸಬೇಕು. ಹಲವು ಪ್ರತಿಭಟನೆಗಳ ನಡುವೆಯೂ ಮೆಕ್ಕೆವೃತ್ತದ, ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗಳ ನಿವಾಸದ ಸಮೀಪದ ಮುಖ್ಯರಸ್ತೆ ಇನ್ನೂ ರಿಪೇರಿಯಾಗಿಲ್ಲ. ಅಂಥ ರಸ್ತೆಗಳ ರಿಪೇರಿ ಸಮರೋಪಾದಿಯಲ್ಲಿ ನಡೆಯಬೇಕು.* ನಗರದ ಕ್ಲಾಕ್ ಟವರ್ ವೃತ್ತ ಮತ್ತು ಮೆಕ್ಕೆ ವೃತ್ತಗಳು ಹೆಚ್ಚು ಪ್ರಯಾಣಿಕರು ಸಂಚರಿಸುವ ಸ್ಥಳಗಳು. ಆದರೆ ಅಲ್ಲಿನ ನಿಲ್ದಾಣಗಳಲ್ಲಿ ನೆರಳಿಲ್ಲ. ಕ್ಲಾಕ್ ಟವರ್ ವೃತ್ತದಲ್ಲಿ ಬೆಂಗಳೂರು ಕಡೆಗೆ ತೆರಳುವ ನೂರಾರು ಪ್ರಯಾಣಿಕರು ರಸ್ತೆಯುದ್ದಕ್ಕೂ ನಿಂತು ಬಸ್‌ಗಳಿಗಾಗಿ ಕಾಯುವುದು ನಿತ್ಯದ ದೃಶ್ಯ. ಅಲ್ಲಿ ತಂಗುದಾಣಗಳು ನಿರ್ಮಾಣವಾಗಬೇಕಿದೆ. * ವೃತ್ತಗಳಿಂದ ದೂರದಲ್ಲಿ ವಾಹನಗಳು ನಿಲ್ಲುವಂತೆ ಕ್ರಮ ಕೈಗೊಳ್ಳಬೇಕು. ಮೆಕ್ಕೆ ವೃತ್ತ, ಕ್ಲಾಕ್‌ಟವರ್, ಡೂಂಲೈಟ್ ವೃತ್ತದಲ್ಲೆ ಬಸ್‌ಗಳು ನಿಲ್ಲುತ್ತವೆ. ಪ್ರಯಾಣಿಕರೂ ಅಲ್ಲೆ ನಿಲ್ಲುತ್ತಾರೆ. ಹೀಗಾಗಿ ಈ ವೃತ್ತದಲ್ಲಿ ಸದಾ ವಾಹನ ದಟ್ಟಣೆ. ಪಾದಚಾರಿ, ಸೈಕಲ್ ಸವಾರರಿಗಂತೂ ರಸ್ತೆ ದಾಟುವುದು ಕಷ್ಟ. ಅದನ್ನು ತಪ್ಪಿಸಬೇಕು.* ಜನ ಮತ್ತು ವಾಹನ ದಟ್ಟಣೆ ಹೆಚ್ಚಿರುವ ಎಂ.ಜಿ.ರಸ್ತೆ, ಇಕ್ಕಟ್ಟಿನಿಂದ ಕೂಡಿರುವ ದೊಡ್ಡಪೇಟೆ ರಸ್ತೆ, ಬ್ರಾಹ್ಮಣರ ಬೀದಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಏಕಮುಖ ಸಂಚಾರವನ್ನು ಕಡ್ಡಾಯವಾಗಿ ಜಾರಿಗೆ ತರಬೇಕು. ದೊಡ್ಡಪೇಟೆ ರಸ್ತೆಯಲ್ಲಿ ಏಕಮುಖ ಸಂಚಾರ ಎಂಬ ಫಲಕದ ಮುಂದೆ ನಿಂತ ಸಂಚಾರಿ ಪೊಲೀಸರು, ತಮ್ಮ ಮುಂದೆಯೇ ವಾಹನ ಸವಾರರು ನಿಯಮ ಉಲ್ಲಂಘಿಸುವುದನ್ನು ಸುಮ್ಮನೇ ನೋಡುತ್ತಾ ನಿಲ್ಲುವ ಪರಿಪಾಠ ಕೊನೆಯಾಗಬೇಕು.* ಮೆಕ್ಕೆ ವೃತ್ತ, ಹೊಸ ಬಸ್ ನಿಲ್ದಾಣ ವೃತ್ತ, ಟೋಲ್‌ಗೇಟ್ ವೃತ್ತ, ಪ್ರಮುಖ ವೃತ್ತಗಳಲ್ಲಿ ಸಂಚಾರಿ ದೀಪಗಳನ್ನು ಅಳವಡಿಸಬೇಕು. ಪ್ರತಿ ವೃತ್ತದಲ್ಲೂ ಸಂಚಾರಿ ಪೊಲೀಸರು ಶಿಸ್ತಾಗಿ ನಿಂತು ಕೆಲಸ ಮಾಡುವಂತಾಗಬೇಕು. ಮೆಕ್ಕೆ ವೃತ್ತವನ್ನು ಹೊರತುಪಡಿಸಿದರೆ ಬೇರೆ ವೃತ್ತಗಳಲ್ಲಿನ ಸಂಚಾರಿ ಪೊಲೀಸರು ಗಂಭೀರವಾಗಿ ಕರ್ತವ್ಯನಿರ್ವಹಿಸುವುದಿಲ್ಲ ಎಂಬ ದೂರು ಸಾಮಾನ್ಯವಾಗಿದೆ.* ಅಪಾಯಕಾರಿ ವೃತ್ತಗಳ ಕಡೆಗೆ ವಿಶೇಷ ಗಮನ ಕೊಡಬೇಕು. ನಿದರ್ಶನಕ್ಕೆ, ಟೇಕಲ್ ಕ್ರಾಸ್ ಎಂದೇ ಹೆಸರಾಗಿರುವ, ವೇಣುಗೋಪಾಲ ಸ್ವಾಮಿ ಪುಷ್ಕರಿಣಿ ಇರುವ ವೃತ್ತ ಟೇಕಲ್ ರಸ್ತೆ, ಕ್ಲಾಕ್ ಟವರ್ ರಸ್ತೆ ಮತ್ತು ಡೂಂ ಲೈಟ್ ರಸ್ತೆಗೆ ಸಂಪರ್ಕ ಕೊಂಡಿ. ವಿವಿಧ ಊರುಗಳಿಂದ ಬರುವ ಸರ್ಕಾರಿ ಬಸ್‌ಗಳು ಹೊಸ್ ಬಸ್‌ನಿಲ್ದಾಣಕ್ಕೆ ತೆರಳಲು, ಕೋಲಾರದಿಂದ ಹೊರಹೋಗಲು ಖಾಸಗಿ ಬಸ್‌ಗಳು ಬಳಸುವ ಪ್ರಮುಖ ವೃತ್ತವಿದು. ಇಲ್ಲಿ ನಿತ್ಯವೂ ವಾಹನ ಸವಾರರ ನಡುವೆ ಜಗಳ, ಸಣ್ಣ-ಪುಟ್ಟ ಅಪಘಾತಗಳು ನಡೆಯುತ್ತಲೇ ಇವೆ. ಆದರೆ ಇದುವರೆಗೂ ಸಂಚಾರಿ ಪೊಲೀಸರು ಸುರಕ್ಷತೆಗೆ ಕ್ರಮ ಕೈಗೊಂಡಿಲ್ಲ. ಇಂಥ ಪ್ರಮುಖ ವೃತ್ತಗಳಲ್ಲಿ ಮೊದಲು ವಿಭಜಕಗಳನ್ನು ಅಳವಡಿಸಬೇಕಾಗಿದೆ.ಈ ಎಲ್ಲವೂ ಸಾಧ್ಯವಾಗಬೇಕಾದರೆ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಒಗ್ಗಟ್ಟಾಗಿ, ಜನಸ್ನೇಹಿಯಾಗಿ ಚಿಂತಿಸಿ ಕಾರ್ಯಪ್ರವೃತ್ತವಾಗುವುದು ಮುಖ್ಯ. ಜಿಲ್ಲಾಧಿಕಾರಿಗಳು ಇತ್ತೀಚೆಗಷ್ಟೆ ನಡೆಸಿದ ಸಭೆ ಈ ಲಕ್ಷಣವನ್ನು ಗೋಚರಿಸುವಂತೆ ಮಾಡಿದೆ. ಮುಂದೇನಾಗುವುದೋ ಕಾದುನೋಡಬೇಕಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.