ಭಾನುವಾರ, ಜೂನ್ 20, 2021
23 °C

ಅಣ್ಣಾ ತಂಡದ ಹೇಳಿಕೆಗೆ ಸಂಸದರ ತೀವ್ರ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಸಂಸತ್ ಸದಸ್ಯರನ್ನು ಕಳ್ಳರು, ಗೂಂಡಾಗಳು ಎಂದು ಬಹಿರಂಗವಾಗಿ ಟೀಕಿಸುತ್ತಿರುವ ಅಣ್ಣಾ ತಂಡದ ಸದಸ್ಯರ ಮೇಲೆ ಸೋಮವಾರ ಲೋಕಸಭೆಯಲ್ಲಿ ವಾಗ್ದಾಳಿ ನಡೆಸಲಾಯಿತು. ಹಿರಿಯ ನಾಯಕರು ಪಕ್ಷಭೇದ ಮರೆತು ಭ್ರಷ್ಟಾಚಾರ ವಿರೋಧಿ ಚಳವಳಿಗಾರರನ್ನು ಹಿಗ್ಗಾಮುಗ್ಗ ಜಾಡಿಸಿದರು. ತನ್ನ ಹೋರಾಟದ ಧ್ಯೇಯೋದ್ದೇಶ ಮರೆತು ಅಣ್ಣಾ ತಂಡ ರಾಜಕಾರಣಿಗಳ ಮೇಲೆ ಮುಗಿಬಿದ್ದಿದೆ ಎಂದು ದೂರಿದರು.ಸಂಸದರ ವಾಗ್ದಾಳಿಗೆ ಉತ್ತರ ನೀಡಿರುವ ಅಣ್ಣಾ ತಂಡದ ಸದಸ್ಯ ಅರವಿಂದ್ ಕೇಜ್ರಿವಾಲ್, ಸಂಸತ್ತು ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬೇಕು. ಜನ ಸಂಸತ್ತಿನ ಮೇಲಿರುವ ನಂಬಿಕೆ ಕಳೆದುಕೊಂಡರೆ ಗಂಭೀರ ಪರಿಸ್ಥಿತಿ ಸೃಷ್ಟಿಯಾಗಲಿದೆ. ಸಂಸತ್ತಿನ ವಿಶ್ವಾಸಾರ್ಹತೆ ಪ್ರಶ್ನೆಯೂ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಸಂಸದರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು   ಸಲಹೆ ಮಾಡಿದ್ದಾರೆ.ಹಿರಿಯ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ `ಜಂತರ್ ಮಂತರ್~ ಬಳಿ ಭಾನುವಾರ ಧರಣಿ ನಡೆಸಿದ ಸಮಯದಲ್ಲಿ ಅವರ ತಂಡದ ಕೆಲ ಸದಸ್ಯರು ಸಂಸದರ ವಿರುದ್ಧ ಕೆಟ್ಟ ಭಾಷೆ ಬಳಸಿದ್ದಾರೆ. ಇದು ಅಣ್ಣಾ ಚಳವಳಿ ದಿಕ್ಕು ತಪ್ಪುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಇದನ್ನು ಖಂಡಿಸಿ ಸದನದಲ್ಲಿ ನಿರ್ಣಯ ಅಂಗೀಕರಿಸಬೇಕು ಎಂದು ಲೋಕಸಭೆಯಲ್ಲಿ ವಿವಿಧ ಪಕ್ಷಗಳ ನಾಯಕರು ಆಗ್ರಹಿಸಿದರು.ಅಣ್ಣಾ ತಂಡದ ವಿರುದ್ಧದ ವಾಗ್ದಾಳಿಯ ನೇತೃತ್ವ ವಹಿಸಿದ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ಅಣ್ಣಾ ತಂಡದ ಸದಸ್ಯರನ್ನು ಅದರಲ್ಲೂ ಅರವಿಂದ ಕೇಜ್ರಿವಾಲ್ ಅವರನ್ನು ಖಂಡತುಂಡವಾಗಿ ಟೀಕಿಸಿದರು. ಒಂದು ಕಡೆ ಲೋಕಪಾಲ ಮಸೂದೆಯನ್ನು ಸಂಸತ್ ಒಪ್ಪಬೇಕು ಎಂದು ಅಣ್ಣಾ ತಂಡ ಬಯಸುತ್ತದೆ. ಮತ್ತೊಂದೆಡೆ ಸಂಸದರನ್ನು ಭ್ರಷ್ಟರು ಎಂದು ಆರೋಪ ಮಾಡುತ್ತಿದೆ. ಇದು ಸರ್ವಾಧಿಕಾರಿ ಧೋರಣೆ ಎಂದು ಟೀಕಿಸಿದರು.`ಸಂಸದರನ್ನು ಭ್ರಷ್ಟರು, ಲೂಟಿಕೋರರು ಹಾಗೂ ಅತ್ಯಾಚಾರಿಗಳು ಎಂದು ಟೀಕಿಸುವುದಾದರೆ ಸಂಸತ್ ಅಂಗೀಕರಿಸಿದ ನಿರ್ಣಯದಲ್ಲಿ ಮೂರು ಅಂಶಗಳನ್ನು ಸೇರಿಸುವಂತೆ ಕಳುಹಿಸಿದ್ದು ಏಕೆ?~ ಎಂದು ಖಾರವಾಗಿ ಪ್ರಶ್ನಿಸಿದರು.ಎನ್‌ಡಿಎ ಸಂಚಾಲಕ ಶರದ್ ಯಾದವ್, ಅಣ್ಣಾ ತಮ್ಮ ತಂಡದ ಸದಸ್ಯರು ಸಂಸದರ ವಿರುದ್ಧ ಇಂಥ ಕೀಳು ಭಾಷೆ ಬಳಸದಂತೆ ತಡೆಯಬೇಕು ಎಂದು ಆಗ್ರಹ ಮಾಡಿದರು. ಅಣ್ಣಾ ತಂಡದ ವಿರುದ್ಧ ನಿರ್ಣಯ ಅಂಗೀಕರಿಸಬೇಕೆಂದು ಒತ್ತಾಯ ಮಾಡಿದರು. ಕಾಂಗ್ರೆಸ್ ಸದಸ್ಯ ಸಂಜಯ್ ನಿರುಪಮ್, ಅಣ್ಣಾ ತಂಡದ ಚಳವಳಿಗೆ ನಾನೂ ಬೆಂಬಲಿಸಿದ್ದೆ. ಈಗ ಅವರು ರಾಜಕಾರಣಿಗಳ ವಿರುದ್ಧವೇ ತಿರುಗಿ ಬಿದ್ದಿದ್ದಾರೆ ಎಂದು ಟೀಕಿಸಿದರು.ಸಿಪಿಎಂ ಮುಖಂಡ ಬಸುದೇವ ಆಚಾರ್ಯ ಇಡೀ ಸಂಸತ್ತಿನ ಗೌರವಕ್ಕೆ ಕುಂದು ತಂದಿರುವ ಅಣ್ಣಾ ತಂಡದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಅಣ್ಣಾ ತಂಡದ ನಡವಳಿಕೆ ಅವರ ಉದ್ಧಟತನಕ್ಕೆ ಸಾಕ್ಷಿಯಾಗಿದೆ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನುಸಿಂಘ್ವಿ ಸದನದ ಹೊರಗೆ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.