ಶನಿವಾರ, ಮೇ 28, 2022
26 °C

ಅತಂತ್ರ ಶಾಂತಿದೂತ

ಪ್ರಜಾವಾಣಿ ವಾರ್ತೆ ಸುಚೇತನಾ ನಾಯ್ಕ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎತ್ತಿಗೆ ಜ್ವರ ಬಂದರೆ, ಎಮ್ಮೆಗೆ ಬರೆ...

ಹೈಕೋರ್ಟ್ ಆವರಣದಲ್ಲಿ ದಶಕಗಳ ಕಾಲ ಒಂದೇ ಜಾಗದಲ್ಲಿ ನೆಮ್ಮದಿಯ ಬದುಕು ಕಂಡುಕೊಂಡಿದ್ದ ಸಾವಿರಾರು ಪಾರಿವಾಳಗಳ ಸ್ಥಿತಿ ಇದು!ನ್ಯಾಯಾಲಯದಲ್ಲಿ ಇಲಿಗಳ ಕಾಟ ಹೆಚ್ಚಾಗಿರುವ ಕಾರಣ ನೀಡಿ, ಈ ಶಾಂತಿದೂತರನ್ನು ಓಡಿಸಲಾಗಿದೆ.

`ಪಕ್ಷಿ ಪ್ರಿಯರು ಪಾರಿವಾಳಗಳಿಗೆ ಹಾಕುವ ಕಾಳುಗಳಿಂದ ಇಲಿಗಳ ಸಂಖ್ಯೆ ಹೆಚ್ಚಾಗಿವೆ. ಈ ಇಲಿಗಳು ನ್ಯಾಯಾಲಯದಲ್ಲಿ ದಾಖಲೆಗಳು ಇಡುವ ಕೊಠಡಿಗಳಿಗೆ ಲಗ್ಗೆ ಇಟ್ಟು ದಾಖಲೆಗಳೆಲ್ಲ ನಾಶವಾಗುತ್ತಿವೆ~ ಎಂಬ ಫಲಕ ಇಲ್ಲಿ ನೇತು ಹಾಕಲಾಗಿದೆ. `ಬಾಲಭವನದ ಮುಂಭಾಗದ ಬಂಡೆ ಹತ್ತಿರದ ಪ್ರದೇಶ ಹಾಗೂ ಸಿದ್ಧಲಿಂಗಯ್ಯ ವೃತ್ತದ ಎಡಭಾಗದ ಪ್ರದೇಶಗಳಲ್ಲಿ ಮಾತ್ರ ಆಹಾರ ಹಾಕಿ~ ಎಂದು ಅದರಲ್ಲಿ ತಿಳಿಸಲಾಗಿದೆ.ಈ ಫಲಕ ಹಾಕಿ ನಾಲ್ಕು ತಿಂಗಳುಗಳೇ ಕಳೆದಿವೆ. ಅಂತೂ- ಇಂತೂ ಈ ಜಾಗದಿಂದ ಪಾರಿವಾಳಗಳನ್ನು ಓಡಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ ಕೂಡ. ಹೈಕೋರ್ಟ್, ಕಬ್ಬನ್ ಪಾರ್ಕ್, ವಿಧಾನಸೌಧ ಸೇರಿದಂತೆ ಸಮೀಪದ ಪ್ರದೇಶಗಳಿಗೆ ಭೇಟಿ ನೀಡುವವರ ಕಣ್ಮನ ತಣಿಸುತ್ತಿದ್ದ ಈ ಶಾಂತಿದೂತರು ಈಗ ಹೈಕೋರ್ಟ್ ಆವರಣದಲ್ಲಿ ಇತಿಹಾಸ ಮಾತ್ರ. `ಪಾರಿವಾಳಗಳು ಎಲ್ಲಿಗೆ ಹೋದವೋ ಗೊತ್ತಿಲ್ಲ. ಆದರೆ, ದುರದೃಷ್ಟಕರ ಎಂದರೆ ಇಲಿಗಳ ಕಾಟ ಮಾತ್ರ ತಪ್ಪಲಿಲ್ಲ~ ಎನ್ನುತ್ತಿದ್ದಾರೆ ಹೈಕೋರ್ಟ್ ಸಿಬ್ಬಂದಿ.ಬೆಟ್ಟದ ಮೇಲೊಂದು ಮನೆಯ ಮಾಡಿ: ಹೀಗೆಂದು ಹೇಳಿದವರು ಹೈಕೋರ್ಟ್‌ನಲ್ಲಿ ಸುಮಾರು 20 ವರ್ಷಗಳ ಕಾಲ ಕೆಲಸದಲ್ಲಿರುವ ಹಿರಿಯ ಸಿಬ್ಬಂದಿ. ಇಲಿಗಳ ಕಾಟದ ಬಗ್ಗೆ `ಪ್ರಜಾವಾಣಿ~ ಮಾತನಾಡಿಸಿದಾಗ ಅವರು ಹೇಳಿದ್ದು ಇದು. `ಹೈಕೋರ್ಟ್ ಇರುವುದು ಕಬ್ಬನ್ ಉದ್ಯಾನದ ಒಳಗಡೆ. ಪಕ್ಕದಲ್ಲಿ ಉದ್ಯಾನವಿದ್ದರೆ ಇಲಿಗಳು, ಹಾವು, ಚೇಳು ಎಲ್ಲವೂ ಮಾಮೂಲೇ ಅಲ್ಲವೆ, ಪಾಪದ ಪಕ್ಷಿಗಳು ಏನು ಮಾಡಿವೆ. ಇಲಿ ಮಾತ್ರವಲ್ಲದೇ ಹಾವುಗಳ ಕಾಟ ಕೂಡ ಇಲ್ಲಿ ಇದ್ದದ್ದೇ.ಕಡತಗಳ ಮಧ್ಯೆ ಸೇರಿ  ಸಾಕಷ್ಟು ಬಾರಿ ನಮ್ಮನ್ನೆಲ್ಲ ಹಾವುಗಳು ಬೆಚ್ಚಿ ಬೀಳಿಸಿವೆ. ತಳಮಹಡಿಯಲ್ಲಿ ಇರುವ ಕೆಲವು ಕೊಠಡಿಗಳ ಸಿಬ್ಬಂದಿಯಂತೂ ಭಯದ ವಾತಾವರಣದಲ್ಲಿಯೇ ಇರುವಂತಾಗಿದೆ. ಚಿಕ್ಕ ಶಬ್ದ ಬಂದರೂ ಹಾವು ಬಂತೆಂದು ಹೆದರುವ ಪರಿಸ್ಥಿತಿ ಇದೆ~ ಎನ್ನುತ್ತಾರೆ ಅವರು.ಅದಕ್ಕೆ ದನಿಗೂಡಿಸಿದ ಇನ್ನೊಬ್ಬ ಸಿಬ್ಬಂದಿ, `ಇಲ್ಲಿ 5-6 ದಶಕಗಳ ಕಡತಗಳು ಇವೆ. ಎಲ್ಲವೂ ಕಂಪ್ಯೂಟರೀಕರಣಗೊಂಡಿಲ್ಲ. ಇದರಿಂದಾಗಿ ದೂಳಿನ ಅಲರ್ಜಿಯಿಂದ ರೋಗ-ರುಜಿನಗಳಿಗೆ ನಾವೇ ತುತ್ತಾಗುವ ಸಾಧ್ಯತೆ ಇದೆ. ಈ ಪರಿಯ ದೂಳು ಇದ್ದರೆ ಇಲಿಗಳು ಬರದೇ ಇರುತ್ತವೆಯೇ~ ಎಂದು ಪ್ರಶ್ನಿಸಿದರು.`ನ್ಯಾಯಾಲಯದ ದಾಖಲೆಗಳು ಇರುವ ಸುಮಾರು 500- 600 ಮೀಟರ್ ದೂರದಲ್ಲಿ ಈ ಪಾರಿವಾಳಗಳು ವಾಸವಾಗಿದ್ದವು. ಪಕ್ಷಿಗಳಿಗೆ ಹಾಕುವ ಕಾಳಿನಿಂದಲೇ ಇಲಿಗಳು ಬರತ್ತವೆ ಎನ್ನುವ ವಾದ ಸರಿಯಲ್ಲ~ ಎನ್ನುವುದು ಅವರ ಅನಿಸಿಕೆ.ಪಾರಿವಾಳಗಳನ್ನು ಓಡಿಸಲು ಬಳಸಲಾದ ಕ್ರಮದ ಬಗ್ಗೆಯೂ ಭದ್ರತಾ ಸಿಬ್ಬಂದಿಯೊಬ್ಬರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. `ಇವುಗಳನ್ನು ಓಡಿಸಲು ವ್ಯಕ್ತಿಯೊಬ್ಬರು ದಿನವೂ ಬರುತ್ತಿದ್ದರು.ಡಬ್ಬವೊಂದನ್ನು ಬಡಿದು, ಹಕ್ಕಿಗಳನ್ನು ಬೆದರಿಸಿ ಅಲ್ಲಿಂದ ಓಡಿಸುತ್ತಿದ್ದರು. ಹೈಕೋರ್ಟ್ ಎದುರು ನಡೆಯುತ್ತಿರುವ ಮೆಟ್ರೊ ಕಾಮಗಾರಿಯ ಶಬ್ದಕ್ಕೆ ಬೆದರಿದ್ದ ಈ ಪಕ್ಷಿಗಳು, ಆ ಶಬ್ದಕ್ಕೆ ಕಷ್ಟಪಟ್ಟು ಹೊಂದಿಕೊಂಡಿದ್ದವು. ಆದರೆ ಅದಕ್ಕಿಂತಲೂ ಕರ್ಕಶವಾಗಿದ್ದ ಈ ಶಬ್ದಕ್ಕೆ ಬೆದರಿ ಓಡಿ ಹೋದವು~ ಎಂದರು.`ಭದ್ರತೆ ದೃಷ್ಟಿಯಿಂದ ಹೈಕೋರ್ಟ್ ಒಳಗೆ ವಾಹನಗಳನ್ನು ಬಿಡುತ್ತಿಲ್ಲ. ಕಬ್ಬನ್ ಉದ್ಯಾನದ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲಿಯೂ ಪಾರಿವಾಳಗಳು ಸ್ವಚ್ಛಂದವಾಗಿ ಹಾರಾಡುವಂತಿಲ್ಲ. ಅಲ್ಲಿಂದಲೂ ಅವುಗಳನ್ನು ಓಡಿಸಿದರೆ, ಅವು ಎಲ್ಲಿಗೆ ಹೋಗಬೇಕು~ ಎನ್ನುವುದು ಪಕ್ಷಿ ಪ್ರಿಯ ಪೊಲೀಸ್ ಸಿಬ್ಬಂದಿಯೊಬ್ಬರ ಪ್ರಶ್ನೆ.ಪರಿಸರವಾದಿಗಳು ಹೇಳುವುದೇನು?: ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪರಿಸರವಾದಿ ಸುರೇಶ್ ಹೆಬ್ಳೀಕರ್, `ಯಾವುದೇ ಪಕ್ಷಿ ಕೆಲ ವರ್ಷಗಳಿಂದ ಒಂದೇ ಸ್ಥಳದಲ್ಲಿ ವಾಸವಾಗಿದ್ದರೆ, ಆ ಸ್ಥಳಕ್ಕೆ ಅವು ಹೊಂದಿಕೊಂಡು ಬಿಡುತ್ತವೆ. ಅವುಗಳ ಜಾಗವನ್ನು ಬದಲಿಸಿದರೆ ಹೊಸ ಜಾಗಕ್ಕೆ ಹೊಂದಿಕೊಳ್ಳುವುದು ಅವುಗಳಿಗೆ ಬಹಳ ಕಷ್ಟ. ಪಾರಿವಾಳಗಳನ್ನು ಓಡಿಸುವ ಬದಲು, ಇಲಿಗಳನ್ನು ಓಡಿಸುವ ಪ್ರಯತ್ನ ಮಾಡಿದ್ದರೆ ಒಳ್ಳೆಯದಿತ್ತು. ಹೈಕೋರ್ಟ್ ಸಮೀಪ ಬೀದಿ ವ್ಯಾಪಾರಿಗಳ ಸಂಖ್ಯೆಯೂ ಹೆಚ್ಚಾಗಿದ್ದು, ಈ ತಿನಿಸುಗಳಿಗೆ ಇಲಿಗಳು ಆಕರ್ಷಿತವಾಗುವ ಸಾಧ್ಯತೆಗಳಿವೆ~ ಎಂದು ಅಭಿಪ್ರಾಯ ಪಟ್ಟರು.ಪರಿಸರವಾದಿಗಳ ಸಂಘಟನೆಯ ಲಿಯೋ ಸಲ್ಡಾನಾ ಹೇಳುವಂತೆ, `ಇಲಿಗಳಿಗೂ, ಪಾರಿವಾಳಗಳಿಗೂ ಯಾವುದೇ ಸಂಬಂಧವಿಲ್ಲ. ದೂಳು ತುಂಬಿರುವ ಕೊಠಡಿಗಳಲ್ಲಿ ಇಲಿಗಳು ಬರುವುದು ಸಹಜ. ಇಲಿಗಳ ನೆಪವೊಡ್ಡಿ ಪಾರಿವಾಳಗಳನ್ನು ಓಡಿಸುವುದು ಸರಿಯಲ್ಲ~.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.