ಮಂಗಳವಾರ, ಮಾರ್ಚ್ 2, 2021
28 °C
ಕೈಬಿಟ್ಟು ಹೋದ ಸರ್ಕಾರಿ ಕೊಳವೆ ಬಾವಿ

ಅಧಿಕಾರಿಗಳ ನಿರ್ಲಕ್ಷ್ಯ: ಪರಿಶಿಷ್ಟರ ಗ್ರಾಮದ ರಸ್ತೆ ಪರರ ಪಾಲು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಧಿಕಾರಿಗಳ ನಿರ್ಲಕ್ಷ್ಯ: ಪರಿಶಿಷ್ಟರ ಗ್ರಾಮದ ರಸ್ತೆ ಪರರ ಪಾಲು!

ಹರಪನಹಳ್ಳಿ: ಜನರ ಬಾಯಾರಿಕೆ ತಣಿಸಬೇಕಿದ್ದ ಸರ್ಕಾರಿ ಕೊಳವೆಬಾವಿ ಖಾಸಗಿ ವ್ಯಕ್ತಿಯೊಬ್ಬರ ಜಮೀನಿನ ಬೆಳೆಗೆ ನೀರುಣಿಸುತ್ತಿದೆ!. ಗ್ರಾಮಸ್ಥರ ಸಂಚಾರಕ್ಕೆ ಉಪಯೋಗವಾಗಬೇಕಿದ್ದ ಸಾರ್ವಜನಿಕ ರಸ್ತೆಯೂ ಈಗ ರೈತರೊಬ್ಬರ ಸುಪರ್ದಿಗೆ ಒಳಗಾಗಿದೆ! ಹೀಗಾಗಿ, ಗ್ರಾಮದ ನಿವಾಸಿಗಳು ಊರು ಬಿಟ್ಟು ಹೊರ ಹೋಗಬೇಕೆಂದರೆ ರಸ್ತೆ ಮಾಲೀಕನ ಅನುಮತಿ ಪಡೆದುಕೊಂಡೇ ಸಂಚರಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ!–ಇಂಥ ವಿಚಿತ್ರ ಹಾಗೂ ವಿಲಕ್ಷಣ ಜಹಗೀರುದಾರಿಕೆ ಕಪಿಮುಷ್ಟಿಗೆ ಸಿಲುಕಿ ಕನಲುತ್ತಿರುವ ಗ್ರಾಮದ ಹೆಸರು ಪಾವನಪುರ. ಈ ಊರಿನ ಹೆಸರು ‘ಪಾವನ’ಪುರ. ಆದರೆ, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ತುತ್ತಾದ ಪರಿಣಾಮ ಇಂದಿಗೂ ಹಲವು ಮೂಲಸೌಕರ್ಯಗಳ ಕೊರತೆಯಿಂದ ನಲುಗುತ್ತಿದೆ. ಅನುಷ್ಠಾನಕ್ಕೆ ತರಲಾದ ಕೆಲ ಸೌಕರ್ಯಗಳು ಅಧಿಕಾರಿಗಳ ನಿರ್ಲಕ್ಷ್ಯದ  ಪರಿಣಾಮ ಖಾಸಗಿ ವ್ಯಕ್ತಿಗಳ ಒಡೆತನದ ಪಾಲಾಗಿವೆ. ಹೀಗಾಗಿ, ಗ್ರಾಮಸ್ಥರ ಬದುಕು ಥೇಟ್‌ ‘ಅಡಕತ್ತರಿಗೆ ಸಿಲುಕಿದೆ.ಕಡಬಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಪಾವನಪುರ ಗ್ರಾಮದಲ್ಲಿ ಸುಮಾರು 90ಕ್ಕೂ ಅಧಿಕ ಪರಿಶಿಷ್ಟ ಕುಟುಂಬಗಳೇ ವಾಸಿಸುತ್ತಿವೆ. ಸುಮಾರು 750ಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಈ ಊರಿಗೆ ಕನಿಷ್ಠ ಮೂಲಸೌಕರ್ಯ ಒದಗಿಸುವಲ್ಲಿ ಅಧಿಕಾರಿಗಳು ಬೇಜವಾಬ್ದಾರಿತನ ಮೆರೆದಿದ್ದಾರೆ. ಆಗೊಮ್ಮೆ– ಈಗೊಮ್ಮೆ ಅವೈಜ್ಞಾನಿಕವಾಗಿ ಅಳವಡಿಸಿದ ಕೆಲ ಸೌಲಭ್ಯಗಳನ್ನು ಇಲ್ಲಿನ ನಾಗರಿಕರು ಅನುಭವಿಸುವ ಬದಲು ಪರರ ಪಾಲಾಗಿವೆ ಎಂಬುದಕ್ಕೆ ಇಲ್ಲಿ ಎರಡು ಉದಾಹರಣೆಗಳಿವೆ ಗಮನಿಸಿ.ಪ್ರಕರಣ 1: ಗ್ರಾಮದ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸುವ ಹಿನ್ನೆಲೆಯಲ್ಲಿ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಇಲಾಖೆ ಕಳೆದ ಹದಿನೈದು ವರ್ಷಗಳ ಹಿಂದೆ ಕೊಳವೆಬಾವಿ ಒಂದನ್ನು ಕೊರೆಸಿತು. ಆದರೆ, ಅದರಲ್ಲಿ ಅಂತರ್ಜಲ ಪಾತಾಳಕ್ಕೆ ಕುಸಿದ ಪರಿಣಾಮ, ಮೂರ್ನಾಲ್ಕು ವರ್ಷಗಳ ಹಿಂದೆ ಮತ್ತೊಂದು ಕೊಳವೆಬಾವಿಯನ್ನು ಕೊರೆಸಲಾಯಿತು. ನೀರು ಸಹ ಶುದ್ಧವಾಗಿದ್ದ ಹಿನ್ನೆಲೆಯಲ್ಲಿ ಇಲಾಖೆಯೇ ಪಂಪ್‌ ಅಳವಡಿಸಿ, ಗ್ರಾಮಕ್ಕೆ ಪೈಪ್‌ಲೈನ್‌ ಸಂಪರ್ಕ ಕಲ್ಪಿಸಿತು. ಗ್ರಾಮಸ್ಥರಿಗೆ ಕುಡಿಯಲು ನೀರು ಪೂರೈಕೆ ಮಾಡಬೇಕು ಅನ್ನುವಷ್ಟರಲ್ಲಿ ಕೊಳವೆಬಾವಿ ಕೊರೆದ ಸ್ಥಳದ ಪಕ್ಕದ ಜಮೀನಿನ ಹಿಕ್ಕಿಂಗೇರಿ ಗ್ರಾಮದ ಉಪ್ಪಾರ ಗಂಗಪ್ಪ ಎಂಬ ರೈತ ಕೊಳವೆಬಾವಿ ತನಗೆ ಸೇರಿದ್ದು ಎಂದು ತಕರಾರು ತೆಗೆದರು.ವಿವಾದ ನ್ಯಾಯಾಲಯದ ಮೆಟ್ಟಿಲೇರಿತು. ಆದರೆ, ಅಂದಿನ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶಿವಪ್ಪ ಎಂಬುವವರು ನ್ಯಾಯಾಲಯಕ್ಕೆ ಸರಿಯಾದ ದಾಖಲೆ ಮೂಲಕ ವಸ್ತುಸ್ಥಿತಿಯನ್ನು ಮನವರಿಕೆ ಮಾಡಲು ಮುಂದಾಗಲಿಲ್ಲ. ಹೀಗಾಗಿ, ನ್ಯಾಯಾಲಯವೂ ಸಹ ಕೊಳವೆಬಾವಿ ಗಂಗಪ್ಪ ಅವರಿಗೆ ಸೇರಿದ್ದು ಎಂದು ತೀರ್ಮಾನಿಸಿತು ಎನ್ನುತ್ತಾರೆ ಗ್ರಾಮಸ್ಥರು.ಗ್ರಾಮಸ್ಥರ ಉಪಯೋಗಕ್ಕಾಗಿ ಕೊರೆಸಲಾದ ಕೊಳವೆಬಾವಿ ಖಾಸಗಿ ವ್ಯಕ್ತಿ ಒಡೆತನಕ್ಕೆ ತೆಗೆದುಕೊಂಡಿರುವ ಪ್ರಕರಣ ಗ್ರಾಮದ ಯುವಕರ ಅಸಮಾಧಾನಕ್ಕೆ ಕಾರಣವಾಯಿತು. ಹೀಗಾಗಿ, ಕಳೆದ ಏ. 17ರಂದು ನಡೆದ ಲೋಕಸಭಾ ಚುನಾವಣೆಗೂ ಮುನ್ನದಿನ ಚುನಾವಣೆ ಸಿಬ್ಬಂದಿ ಗ್ರಾಮಕ್ಕೆ ಪ್ರವೇಶಿಸದಂತೆ ನಿರ್ಬಂಧ ವಿಧಿಸುವ ಮೂಲಕ ಪ್ರತಿಭಟನೆಗೆ ಮುಂದಾದರು. ಸ್ಥಳಕ್ಕೆ ಉಪ ವಿಭಾಗಾಧಿಕಾರಿ, ತಹಶೀಲ್ದಾರ್‌ ಭೇಟಿ ನೀಡಿ ಚುನಾವಣೆ ಬಳಿಕ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು.ಚುನಾವಣೆಗೆ ಬಳಿಕ, ಕೊಳವೆಬಾವಿ ವಿವಾದಕ್ಕೆ ಸಂಬಂಧಿಸಿದಂತೆ ಸರ್ವೇ ನಡೆಸಲು ಉಪವಿಭಾಗಾಧಿಕಾರಿ ಪಿ.ಎನ್‌. ಲೋಕೇಶ್‌ ಸೂಚನೆ ನೀಡಿದರು. ಅದರನ್ವಯ ಸರ್ವೇ ನಡೆಸಿದಾಗ, ಕೊಳವೆಬಾವಿ ಗಂಗಪ್ಪನ ಜಮೀನಿನಲ್ಲಿ ಇಲ್ಲ. ಆತನ, ಜಮೀನಿನ ಕೆಲ ಭಾಗ ಪಕ್ಕದ ಜಮೀನಿನ ಮಾಲೀಕರಾದ ಕುಬೇರಪ್ಪ ಮತ್ತು ಸೋದರರಿಗೆ ಸೇರುತ್ತದೆ ಎಂಬ ಅಂಶ ಬೆಳಕಿಗೆ ಬಂದಿದೆ.ಪ್ರಕರಣ 2: ಹಿಕ್ಕಿಂಗೇರಿ ಕ್ರಾಸ್‌ನಿಂದ ಗ್ರಾಮಕ್ಕೆ ಸಂಪರ್ಕ ಬೆಸೆಯಲು ಗಂಗಪ್ಪ ಹಾಗೂ ಕುಬೇರಪ್ಪ ಅವರ ಜಮೀನುಗಳ ಮಧ್ಯೆದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಸರ್ಕಾರ ಮಣ್ಣಿನ ರಸ್ತೆ ನಿರ್ಮಿಸಿದೆ. ಯಾವಾಗ, ಸರ್ವೇ ಸಂದರ್ಭದಲ್ಲಿ ರಸ್ತೆ ಸಂಪೂರ್ಣ ತನ್ನ ಜಮೀನಿನ ವ್ಯಾಪ್ತಿಗೆ ಒಳಪಡುತ್ತದೆ ಎಂದು ಗೊತ್ತಾಗುತ್ತಿದ್ದಂತಿಯೇ ಕುಬೇರಪ್ಪ ರಾತ್ರೋರಾತ್ರಿ ತನ್ನ ಜಮೀನಿನ ಸರಹದ್ದಿನ ತನಕ ರಸ್ತೆಯನ್ನು ಒಂದು ಭಾಗವನ್ನು ಸಂಪೂರ್ಣವಾಗಿ ಕೆಡಿಸುವ ಮೂಲಕ ಜಮೀನಿಗೆ ಒಳಪಡಿಸಿಕೊಂಡಿದ್ದಾನೆ. ಸದ್ಯಕ್ಕೆ ಕಾಲ್ನಡಿಗೆ ಸಂಚಾರಕ್ಕೆ ಮಾತ್ರ ಅವಕಾಶ ನೀಡಿದ್ದಾನೆ. ಹೀಗಾಗಿ, ಗ್ರಾಮಸ್ಥರ ಪಾಲಿಗೆ ಇರುವ ಏಕೈಕ ಮಣ್ಣಿನ ರಸ್ತೆಯೂ ರೈತನ ವಶಕ್ಕೆ ಒಳಪಟ್ಟಿದೆ.ಊರಿಂದ ಯಾವ ಊರಿಗೆ ಹೋಗಬೇಕೆಂದರೂ ಇದೇ ಸೀಳು ದಾರಿಯಲ್ಲಿ ಕಾಲ್ನಡಿಗೆ ಮೂಲಕವೇ ಸಂಚರಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಇನ್ನೇನು ಶಾಲೆಗಳು ಆರಂಭವಾಗುತ್ತಿವೆ. ವಿದ್ಯಾರ್ಥಿಗಳು ನಿತ್ಯ ಶಾಲೆಗೆ ಹೋಗಲು ದಾರಿ ಕಾಣದೇ ಚಿಂತೆಯಲ್ಲಿದ್ದಾರೆ.

ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಸೇರಿದಂತೆ ಸರ್ಕಾರ ಹಾಗೂ ಅಧಿಕಾರಿಗಳಿಗೆ ಕನಿಷ್ಠ ಮಾನ ಮರ್ಯಾದೆ ಇದ್ದರೇ ಕೂಡಲೇ ಶಿಸ್ತು ಕ್ರಮ ಜರುಗಿಸುವ ಮೂಲಕ ಗ್ರಾಮಸ್ಥರಿಗೆ ಕನಿಷ್ಠ ಮೂಲಸೌಕರ್ಯ ಒದಗಿಸಲಿ. ಜತೆಗೆ, ಖಾಸಗಿ ಒಡೆತನಕ್ಕೆ ಸಿಲುಕಿರುವ ಸರ್ಕಾರಿ ಯೋಜನೆಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಲಿ ಎಂಬುದು ಗ್ರಾಮಸ್ಥರ ಒತ್ತಾಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.