ಸೋಮವಾರ, ಆಗಸ್ಟ್ 3, 2020
28 °C

ಅಧ್ಯಯನ ಕೇಂದ್ರದಲ್ಲಿ ರೈತರಿಂದ ಸಾಗುವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಧ್ಯಯನ ಕೇಂದ್ರದಲ್ಲಿ ರೈತರಿಂದ ಸಾಗುವಳಿ

ರಾಯಚೂರು: ತಮಗೆ ಸೇರಿದ 188 ಎಕರೆ ಜಮೀನನ್ನು ರಾಜ್ಯ ಸರ್ಕಾರವು 1993ರಲ್ಲಿ ಕಾನೂನು ಬಾಹಿರವಾಗಿ ಗುಲ್ಬರ್ಗ ವಿಶ್ವವಿದ್ಯಾಲಯದ ರಾಯಚೂರು ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ವರ್ಗಾಯಿಸಿದೆ. 19 ವರ್ಷವಾದರೂ ನಯಾಪೈಸೆ ಪರಿಹಾರ ಕೊಟ್ಟಿಲ್ಲ. ತಮ್ಮ ಜಮೀನು ತಮಗೇ ಬೇಕು ಎಂದು ತಾಲ್ಲೂಕಿನ ಯರಗೇರಾ ಗ್ರಾಮದ 17 ರೈತ ಕುಟುಂಬ ವರ್ಗದ ಸದಸ್ಯರು ಸೋಮವಾರ ಇಲ್ಲಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಆವರಣದಲ್ಲಿ `ಸಾಗುವಳಿ~ ಆರಂಭಿಸಿದರು.

ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಆರ್ ಮಾನಸಯ್ಯ ನೇತೃತ್ವದಲ್ಲಿ ಎತ್ತು ನೇಗಿಲುಗಳೊಂದಿಗೆ  ಧಾವಿಸಿದ ರೈತರ ಕುಟುಂಬದ ಸುಮಾರು 200ಕ್ಕೂ ಹೆಚ್ಚು ಜನ, ಇದು ತಮ್ಮದೇ ಜಮೀನು. ಇನ್ನು ಮುಂದೆ ಇಲ್ಲಿ ಕೃಷಿ ಚಟುವಟಿಕೆ ಶುರು ಮಾಡುತ್ತೇವೆ ಎಂದು ಸಾಗುವಳಿ ಆರಂಭಿಸಿದರು.

ದಬ್ಬಾಳಿಕೆ ಮಾಡಿ ಸರ್ಕಾರವು ಈ ಜಮೀನನ್ನು 19 ವರ್ಷದ ಹಿಂದೆ ಕಿತ್ತುಕೊಂಡಿತ್ತು. ಪರಿಹಾರವನ್ನೂ ಕೊಟ್ಟಿಲ್ಲ. ಭೂಮಿ ಪ್ರವೇಶಕ್ಕೂ ಆಸ್ಪದ ನೀಡಿರಲಿಲ್ಲ. ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ಮಾಡಲಾಗಿದೆ.

ಮೂರು ಸುತ್ತು ಮಾತುಕತೆ ನಡೆಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಜಮೀನು ಸ್ವಾಧೀನಕ್ಕೆ ರೈತರು ಮುಂದಾಗಿದ್ದಾರೆ. ಸಂಘಟನೆ ಅವರಿಗೆ ಬೆಂಬಲವಾಗಿ ನಿಂತಿದೆ ಎಂದು  ಮಾನಸಯ್ಯ `ಪ್ರಜಾವಾಣಿ~ಗೆ ಹೇಳಿದರು.

ಸಹಾಯಕ ಆಯುಕ್ತ ಭೇಟಿ: ಸ್ಥಳಕ್ಕೆ ಭೇಟಿ ನೀಡಿದ ಸಹಾಯಕ ಆಯುಕ್ತ ಯೋಗೇಶ ರೈತರ ಜತೆ ಚರ್ಚೆ ನಡೆಸಿದರು. ಮನವೊಲಿಸುವ ಪ್ರಯತ್ನ ಫಲ ಕಾಣಲಿಲ್ಲ. ತಾವು ಸಾಗುವಳಿ ಮುಂದುವರಿಸಲಿದ್ದು ತಮಗೆ ರಕ್ಷಣೆ ಕೊಡಬೇಕು ಎಂದು ರೈತರು ಮನವಿ ಮಾಡಿದರು. ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ ಎಸ್ ರಾಜಶೇಖರ, ಜಿಲ್ಲಾ ಕಾರ್ಯದರ್ಶಿ ಸಯ್ಯದ್ ಅಬ್ಬಾಸ್ ಅಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.