ಶುಕ್ರವಾರ, ಮೇ 27, 2022
21 °C

ಅನಾಥ ಮಕ್ಕಳಿಗೆ ಹರಿ ಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಬ್ಬೊರಿಗೆ ಒಂದೊಂದು ರೀತಿಯ ಹವ್ಯಾಸ, ಅಭ್ಯಾಸ, ಆಸೆ, ಬಯಕೆ. ಕೆಲವರಿಗಂತೂ ತಾವು ಹುಟ್ಟಿ ಬೆಳೆದ ಸಮಾಜಕ್ಕೆ ತಮ್ಮ ಕೈಲಾದ ಸಹಾಯ ಮಾಡಲೇ ಬೇಕೆನ್ನುವ ತುಡಿತ. ಆದರೆ ‘ಹಲ್ಲಿದ್ದವರಿಗೆ ಕಡಲೆ ಇಲ್ಲ; ಕಡಲೇ ಇದ್ದವರಿಗೆ ಹಲ್ಲಿಲ್ಲ’ ಎನ್ನುವಂತೆ ಈ ರೀತಿ ಸೇವಾ ಮನೋಭಾವ ಹೊಂದಿರುವ ಅನೇಕರಿಗೆ ಅವರ ಆರ್ಥಿಕ ಪರಿಸ್ಥಿತಿ ಸಹಕಾರಿಯಾಗಿರುವುದಿಲ್ಲ.ಆದರೆ ಇದನ್ನೆಲ್ಲ ಮೆಟ್ಟಿನಿಂತು ತಮ್ಮ ಕೈಲಾದ ರೀತಿಯಲ್ಲೇ ಸಹಾಯ ಮಾಡುವವರ ಸಂಖ್ಯೆ ಕಡಿಮೆಯಿಲ್ಲ.  ಇಂತಹವರ ಸಾಲಿಗೆ ಸೇರುತ್ತಾರೆ ಬಸವನಗುಡಿ ನಿವಾಸಿ ಹರೀಶ್. ಜೀವನೋಪಾಯಕ್ಕೆ ಇವರು ಮಾಡುತ್ತಿರುವುದು ಕ್ಷಾರಿಕ ವೃತ್ತಿ. ಸೌತ್ ಎಂಡ್ ವೃತ್ತದ ಬಳಿ ನ್ಯೂ ಮಾರ್ಡನ್ ಬಾಂಬೆ ಮೆನ್ಸ್ ಶಾಪ್ ನಡೆಸುತ್ತಿದ್ದಾರೆ.ಹಾಗಿದ್ದರೆ ಇವರಲ್ಲೇನು ವಿಶೇಷ ಎನ್ನುವಿರಾ? ಇದೇ ಕೇಳಿ... ಕಳೆದ 11 ವರ್ಷದಿಂದಲ್ಲೂ ಹರೀಶ್ ಅವರು ಸತತವಾಗಿ ಬುಲ್ ಟೆಂಪಲ್ ರಸ್ತೆಯಲ್ಲಿರುವ ‘ಅನಾಥ ಶಿಶು ನಿವಾಸ’ದ ಮಕ್ಕಳಿಗೆ ಉಚಿತವಾಗಿ ಕಟಿಂಗ್ ಮಾಡುತ್ತಿದ್ದಾರೆ. ಇವರ ಈ ಕಾರ್ಯಕ್ಕೆ ಮಕ್ಕಳಾದ ಹರೀಶ್, ಗಿರೀಶ್ ಹಾಗೂ ಸಂಬಂಧಿಕರಾದ ರವಿ, ಲೋಕೇಶ್, ಸುದರ್ಶನ್, ಗೋಪಿನಾಥ್, ದೀಪು, ಪ್ರದೀಪ್, ಪುರುಷೋತ್ತಮ್ ಸಾಥ್ ನೀಡುತ್ತಿದ್ದಾರೆ. ತಿಂಗಳು ಅಥವಾ ಒಂದೂವರೆ ತಿಂಗಳಿಗೊಮ್ಮೆ ತಪ್ಪದೇ ಅನಾಥಾಶ್ರಮಕ್ಕೆ ಹೋಗುವ ಇವರೆಲ್ಲ ಅಲ್ಲಿನ ಮಕ್ಕಳಿಗೆ ಕಟಿಂಗ್ ಮಾಡುವುದು ಮಾತ್ರವಲ್ಲದೇ, ಅವರೊಂದಿಗೆ ಬೆರೆತು ಆಟವಾಡಿ ಕಾಲ ಕಳೆಯುತ್ತಾರೆ. ಮಕ್ಕಳಿಗೂ ಇವರನ್ನು ಕಂಡರೆ ಎಲ್ಲಿಲ್ಲದ ಅಕ್ಕರೆ. ಇವರೆಲ್ಲ ಅವರ ಪ್ರೀತಿಯ ಅಂಕಲ್ ಹರೀಶ್. ನಾನು ಆಶ್ರಮದ ಜವಾಬ್ದಾರಿ ವಹಿಸಿಕೊಂಡು ಸುಮಾರು ಎರಡು ವರ್ಷ ಕಳೆಯುತ್ತಿದೆ. ಆಗಿನಿಂದಲೂ ಗಮನಿಸುತ್ತಿದ್ದೇನೆ. ಹರೀಶ್ ಮತ್ತು ಅವರ ಸಂಗಡಿಗರು ನಿಸ್ವಾರ್ಥದಿಂದ ತಮ್ಮ ಕಾರ್ಯವನ್ನು ಮಾಡುತ್ತಿದ್ದಾರೆ.ಒಮ್ಮೆಯೂ ಇದಕ್ಕಾಗಿ ಬೇಸರಿಸಿಕೊಂಡವರಲ್ಲ ಎನ್ನುತ್ತಾರೆ ಆಶ್ರಮದ ಮ್ಯಾನೇಜರ್ ರಾಘವೇಂದ್ರ.

ಕೆಲವರು ಬಟ್ಟೆ, ಊಟ, ವಸತಿ, ಹಣ, ಹಾಸಿಗೆ, ಹೊದಿಕೆ ಹೀಗೆ ನಾನಾ ರೂಪದಲ್ಲಿ ಅನಾಥ ಮಕ್ಕಳು, ಆಶ್ರಮಕ್ಕೆ ಸಹಾಯ ಮಾಡಿದರೆ, ಉಚಿತವಾಗಿ ಕಟಿಂಗ್ ಮಾಡುವ ಮೂಲಕ ಸೇವೆ ಸಲ್ಲಿಸುತ್ತಿರುವ ಹರೀಶ್ ಅವರ ಕೆಲಸ ನಿಜಕ್ಕೂ ಶ್ಲಾಘನೀಯ.ಆದರೆ ಅವರ ಸಮಾಜ ಸೇವೆ ಇಷ್ಟಕ್ಕೇ ನಿಂತಿಲ್ಲ. 25 ವರ್ಷದಿಂದ ಬಡ ಕುಟುಂಬಗಳ ಅನುಕೂಲಕ್ಕಾಗಿ ಉಚಿತ ವಿವಾಹ ಮಾಡಿಸುತ್ತಿದ್ದಾರೆ, ಅಸ್ಪೃಶ್ಯತೆ ನಿರ್ಮೂಲನೆಗಾಗಿ 25 ಜನರ ತಂಡದೊಂದಿಗೆ ರಾಜ್ಯದ ವಿವಿಧೆಡೆ ಸಂಚರಿಸಿ 1 ಲಕ್ಷ ದಲಿತರಿಗೆ ಉಚಿತ ಕ್ಷೌರ ಸೇವೆ ಒದಗಿಸಿದ್ದಾರೆ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಉಚಿತ ಕ್ಷೌರದ ಮೂಲಕ ಬಡ ರೋಗಿಗಳ ಸೇವೆ ಮಾಡಿದ್ದಾರೆ. ಇವರ ಸಂಪರ್ಕ ಸಂಖ್ಯೆ: 99018 43778.


 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.