ಭಾನುವಾರ, ಮೇ 16, 2021
28 °C

ಅನಾಥ ಮಕ್ಕಳ ಜೋಳಿಗೆ ಭಿಕ್ಷೆ

ಆರ್.ವೀರೇಂದ್ರ ಪ್ರಸಾದ್ /ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಇದೊಂದು ತರಹ ಜೋಳಿಗೆ ಭಿಕ್ಷೆ. ಆದರೆ ಇಲ್ಲಿ ದವಸ-ಧಾನ್ಯ ಭಿಕ್ಷೆ ಬೇಡುವುದಿಲ್ಲ. ಬದಲಾಗಿ ಮನೆಯಲ್ಲಿ ತಂದೆ-ತಾಯಿ ಇಲ್ಲದೆ ಅನಾಥರಾಗಿ ಇರುವ ಮಕ್ಕಳನ್ನು ಭಿಕ್ಷೆ ಕೇಳ ಲಾಗುತ್ತದೆ.ಗದಗ ಜಿಲ್ಲೆಯಾದ್ಯಂತ ಕಳೆದ 6 ವರ್ಷಗಳಿಂದ ಈ ಜೋಳಿಗೆ ಭಿಕ್ಷೆ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಗದುಗಿನ ಆದರ್ಶ ನಗರದಲ್ಲಿ ಇರುವ ಮಾತೃ ಪುನರ್ ಮಿಲನ ಸೇವಾ ಸಮಿತಿ. ಈಗ ಈ ಅನಾಥಾಶ್ರಮದಲ್ಲಿ 25 ಬಾಲಕರು ಆಶ್ರಯ ಪಡೆದುಕೊಂಡಿದ್ದಾರೆ.ಮಾತೃ ಪುನರ್ ಮಿಲನ ಸೇವಾ ಸಮಿತಿ ಪ್ರಾರಂಭದ ಹಿಂದೆಯೂ ಒಂದು `ಸೇವಾ~ ಕಥೆಯಿದೆ. ಈ ಆಶ್ರಮ ನಡೆಸಿಕೊಂಡು ಹೋಗುತ್ತಿರುವ ಗಂಗಾಧರ ನಭಾಪೂರ ಗೋವಾದ ಮದರ್ ಥೆರಸಾ ಬಾಲಾಶ್ರಮದಲ್ಲಿ ಚಿಕ್ಕಮಕ್ಕಳ ಸೇವೆ ಮಾಡುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲೇ ಕೆಲಸ ಮಾಡುತ್ತಲೆ ನರ್ಸಿಂಗ್ ಕೋರ್ಸ್ ಮಾಡಿಕೊಂಡರು.ಬಳಿಕ ರೆಫ್ರೀಜಿಯಷನ್ ಟೆಕ್ನಾಲಜಿಯಲ್ಲಿ ಡಿಪ್ಲೋಮಾ ಪದವಿ ಪಡೆದುಕೊಂಡರು. ತದನಂತರ ಫ್ರಾಂಕ್‌ಫರ್ಟ್‌ನ ವಿಮಾನ ನಿಲ್ದಾಣದಲ್ಲಿ ಕೆಲಸಕ್ಕೆ ಸೇರಿ ಒಂದೆರಡು ವರ್ಷ ಸೇವೆ ಸಲ್ಲಿಸಿದರು. ಆದರೆ ಅಲ್ಲಿ ತೃಪ್ತಿ ಕಾಣದೆ ಗದುಗಿಗೆ ಬಂದು ಅನಾಥ ಆಶ್ರಮವನ್ನು ತೆರೆದರು.ಗೋವಾದಲ್ಲಿ ಮಾಡಿದ ಕಾಯಕದ ಪ್ರಭಾವವೇ ಇಲ್ಲಿ ಅನಾಥ ಆಶ್ರಮ ಸ್ಥಾಪನೆ ಮಾಡಲು ಪ್ರೇರಣೆ ನೀಡಿತು ಎನ್ನುವ ಗಂಗಾಧರ, `ಅಲ್ಲಿದ್ದಾಗ ಚಿಕ್ಕ ಮಕ್ಕಳಿಗೆ ಸ್ನಾನ ಮಾಡಿಸುವುದು, ಬಟ್ಟೆ ತೊಡಿಸುವುದು, ಪೌಡರ್ ಹಾಕುವುದು  ಸೇರಿದಂತೆ ಅವರ ಪ್ರತಿಯೊಂದು ಅವಶ್ಯಕತೆಯನ್ನು ನೋಡಿಕೊಳ್ಳುತ್ತಿದೆ. ಇದರಿಂದಾಗಿ ಮಕ್ಕಳ ಮೇಲೆ ಗಾಢವಾದ ಬಾಂಧವ್ಯ ಬೆಳೆಯಿತು. ಆದ್ದರಿಂದ ಗದುಗಿನಲ್ಲೂ ಅನಾಥ ಮಕ್ಕಳನ್ನು ಸಾಕುತ್ತಿದ್ದೇನೆ~ ಎಂದರು.2006ರಲ್ಲಿ ಮಾತೃ ಪುನರ್ ಮಿಲನ ಸೇವಾ ಸಮಿತಿ ಪ್ರಾರಂಭಿಸಲಾಯಿತು. ಮೊದಲಿಗೆ 6 ಮಕ್ಕಳು ಮಾತ್ರ ಇದ್ದರು. ಬಳಿಕ ವರ್ಷ-ವರ್ಷ ಮಕ್ಕಳು ಹೆಚ್ಚಾಗುತ್ತಾ ಹೋದರು. ಈಗಾಗಲೇ ಜಿಲ್ಲೆಯಾದ್ಯಂತ ಸುಮಾರು 120ಕ್ಕೂ ಹೆಚ್ಚು ಅನಾಥ ಮಕ್ಕಳನ್ನು ಗುರುತಿ ಲಾಗಿದೆ. ಇವರಲ್ಲಿ ಬಾಲಕಿಯರೂ ಕೂಡಾ ಇದ್ದಾರೆ.ಅನಾಥ ಆಶ್ರಮದಲ್ಲಿ ಇರುವ ಬಾಲಕರಲ್ಲಿ ಕೆಲವರಿಗೆ ತಂದೆ ಇದ್ದು ತಾಯಿ ಇಲ್ಲ. ಮತ್ತೆ ಕೆಲವರು ಅಜ್ಜ-ಅಜ್ಜಿ ನೆರಳಿನಲ್ಲಿ ಇದ್ದವರು. ಇನ್ನು ಹಲವಾರು ಹುಡುಗರು ತಂದೆ ಇಲ್ಲ ತಾಯಿ ಇದ್ದು, ಅವರು ಬೇರೆ ಮದುವೆಯಾಗಿರುವುದರಿಂದ ಅನಾಥವಾಗಿ ಮಾತೃ ಪುನರ್ ಮಿಲನದ ಆಶ್ರಯವನ್ನು ಪಡೆದುಕೊಂಡಿವೆ.ಅನಾಥ ಆಶ್ರಮದ ವತಿಯಿಂದ ಕಾಲ-ಕಾಲಕ್ಕೆ ಸಮೀಕ್ಷೆ ನಡೆಸಲಾ ಗುತ್ತದೆ. ಬಳಿಕ ಎಲ್ಲಿ ಅನಾಥ ಮಕ್ಕಳು ಸಿಗುತ್ತವೊ ಅಂತಹವರ ಮನೆಗೆ ಹೋಗಿ ` ನಿಮ್ಮ ಮಗುವನ್ನು ನಮಗೆ ಕೊಡಿ. ನಾವು ಆ ಮಗುವಿಗೆ ಶಿಕ್ಷಣ ಕೊಡಿಸಿ, ಆತನಿಗೊಂದು ದಾರಿ ತೋರಿಸಿ; ಭಾರತದ ಒಬ್ಬ ಉತ್ತಮ ಪ್ರಜೆಯನ್ನು ರೂಪಿಸುತ್ತೇವೆ~ ಎಂದು ವಿನಂತಿ ಮಾಡಿ, ಪೋಷಕರನ್ನು ಒಪ್ಪಿಸಲಾಗುತ್ತದೆ. ಬಳಿಕ ಸರ್ಕಾರಿ ನಿಯಮಾನುಸಾರ ಮಕ್ಕಳನ್ನು ಅನಾಥಾಶ್ರಮಕ್ಕೆ ದಾಖಲು ಮಾಡಿ ಕೊಳ್ಳಲಾಗುತ್ತದೆ.ಈಗ ಇರುವ ಮಕ್ಕಳು ಸಮೀಪದ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ. ಆಶ್ರಮದಲ್ಲೂ ಪಾಠ-ಪ್ರವಚನ, ಆಟದ ಚಟುವಟಿಕೆಗಳು ನಡೆಯುತ್ತವೆ. ಇಲ್ಲಿವರೆಗೆ ಗಂಗಾಧರ ನಭಾಪೂರ ತಾವು ದುಡಿದಿದ್ದ ಹಣವನ್ನು ಆಶ್ರಮಕ್ಕೆ ವಿನಿಯೋಗಿಸಿದ್ದಾರೆ.ಮಕ್ಕಳು ಜಾಸ್ತಿಯಾಗುತ್ತಿದ್ದಂತೆ ಖರ್ಚು ಹೆಚ್ಚಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯೂ ಇತ್ತೀಚೆಗೆ ಸ್ವಲ್ಪ ಅನುದಾನವನ್ನು ನೀಡುತ್ತಿದೆ. ಅಲ್ಲದೇ ಕೆಲ ದಾನಿಗಳು ಸಹಾಯವನ್ನು ನೀಡಿದ್ದಾರೆ. ಮುಂದೆ ಇದೇ ರೀತಿ ಸಶಕ್ತವಾಗಿ ಆಶ್ರಮ ಮುಂದುವರೆಯಬೇಕಾದರೆ ದಾನಿಗಳ ಸಹಾಯಹಸ್ತ ಅವಶ್ಯ ವಾಗಿದೆ. ಆಸಕ್ತರು ದೂ:98806 27704ಗೆ ಹಲೋ ಎಂದರೆ ಅನಾಥ ಮಕ್ಕಳ ಮೊಗದಲ್ಲಿ ಮಂದಹಾಸ ನಿರಂತರವಾಗಿರುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.