ಗುರುವಾರ , ಮೇ 13, 2021
39 °C
ಪಂಚರಂಗಿ

`ಅನುದಿನವೂ ಕನಸಿನ ಬದುಕು'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ದಿ ಡರ್ಟಿ ಪಿಕ್ಚರ್', `ಕಹಾನಿ'  ಹಿಂದಿ ಚಿತ್ರಗಳು ಬಿಡುಗಡೆಯಾದ ನಂತರ ವಿದ್ಯಾ ಬಾಲನ್ ಚಿತ್ರಬದುಕಿನ ಗ್ರಾಫ್ ಬದಲಾಯಿತು. ಅದುವರೆಗೆ `ಪರಿಣಿತಾ' ಚಿತ್ರದ ತಣ್ಣನೆಯ ನಾಯಕಿಯಾಗಿಯೇ ಜನಮಾನಸದಲ್ಲಿ ಉಳಿದಿದ್ದ ಅವರು ಆಮೇಲೆ ತುಳಿದದ್ದು ಭಿನ್ನ ಹಾದಿ. ಈಗ ಅವರ ಚಿತ್ರಪಟ್ಟಿಗೆ `ಘನಚಕ್ಕರ್' ಸೇರಲಿದೆ.`ಡರ್ಟಿ ಪಿಕ್ಚರ್, ಕಹಾನಿ ಚಿತ್ರಗಳಿಂದ ಅಭಿನಯದಲ್ಲಿ ಹೊಸತನ್ನು ಪ್ರಯತ್ನಿಸುವ ಧೈರ್ಯ ಬಂದಿತು. ಕಲಾವಿದೆಯಾಗಿ ಬೆಳೆಯಲು ಪಾತ್ರ ವೈವಿಧ್ಯ ಇದ್ದರೆ ಒಳ್ಳೆಯದು. ಅದು ನನಗೆ ಆ ಚಿತ್ರಗಳಿಂದ ಸಿಕ್ಕಿತು. ಘನಚಕ್ಕರ್‌ನಲ್ಲಿ ನನ್ನದು ವಿಚಿತ್ರ ವೇಷ ಭೂಷಣ ಇರುವ ಪಾತ್ರ.ಮಧ್ಯಮ ವರ್ಗದ ಪಂಜಾಬಿ ಮಹಿಳೆಯ ಪಾತ್ರ ಅದು. ತಾನು ತೊಡುವ ವಿಲಕ್ಷಣ ಬಣ್ಣದ, ವಿಚಿತ್ರ ವಿನ್ಯಾಸದ ಉಡುಪುಗಳನ್ನೇ ಫ್ಯಾಷನ್ ಎಂದು ನಂಬಿರುವ ನೀತು ಎಂಬ ವನಿತೆಯ ಆ ಪಾತ್ರ ಸಾಕಷ್ಟು ಅಭಿನಯವನ್ನು ಬೇಡುವಂಥದ್ದು. ಆ ಪಾತ್ರದಲ್ಲಿ ಭಾವಸೂಕ್ಷ್ಮಗಳೂ ಸಾಕಷ್ಟಿವೆ' ಎನ್ನುವ ವಿದ್ಯಾ ಆ ಪಾತ್ರದ ಕುರಿತು ತಮಗಿರುವ ಕಕ್ಕುಲತೆಯನ್ನು ವಿವರವಾಗಿ ಹೇಳಿಕೊಳ್ಳುತ್ತಾರೆ.ಮದುವೆಯಾದ ನಂತರದ ಬದುಕು ಹೇಗಿದೆ ಎಂಬ ಪ್ರಶ್ನೆ ವಿದ್ಯಾ ಅವರಿಗೀಗ ಮಾಮೂಲಾಗಿದೆ. ಇದಕ್ಕೆ ಅವರು ಕೊಡುವ ಉತ್ತರ: `ಏನೇನೂ ಬದಲಾಗಿಲ್ಲ. ಮದುವೆಗೆ ಎರಡು ವಾರ ಮುಂಚೆ ಘನಚಕ್ಕರ್ ಸಿನಿಮಾದ ಚಿತ್ರೀಕರಣ ಪ್ರಾರಂಭವಾಯಿತು.ಮದುವೆಯ ನಂತರವೂ ಚಿತ್ರೀಕರಣ ಮುಂದುವರಿಯಿತು. ನಾವು ಒಪ್ಪಿ ಮದುವೆಯಾದವರನ್ನು ಅವರು ಹೇಗಿದ್ದಾರೆಯೋ ಹಾಗೆಯೇ ಸ್ವೀಕರಿಸಿ, ಅರ್ಥ ಮಾಡಿಕೊಳ್ಳುವುದರಲ್ಲೂ ಖುಷಿ ಇದೆ. ಬದುಕು ಅರ್ಥಪೂರ್ಣವಾಗುವುದೇ ಪರಸ್ಪರ ಅರ್ಥ ಮಾಡಿಕೊಳ್ಳುವುದರಲ್ಲಿ'.ಮನೆ ಕೆಲಸ, ವೃತ್ತಿ ಬದುಕು ಎರಡರ ನಡುವಿನ ಆಯ್ಕೆಯ ಪ್ರಶ್ನೆಯೇ ವಿದ್ಯಾ ಅವರಿಗೆ ಇದುವರೆಗೆ ಉದ್ಭವಿಸಿಲ್ಲ. ನಟಿಯಾಗದೇ ಇದ್ದರೆ ಬೇರೆ ಏನಾಗುತ್ತಿದ್ದಿರಿ ಎಂಬ ಪ್ರಶ್ನೆಗೂ ಅವರಲ್ಲಿ ಉತ್ತರವಿಲ್ಲ. `ನಟಿಯಾಗಬೇಕು ಎಂಬುದ ಕನಸಾಗಿತ್ತು.ಅದು ಪ್ರತಿದಿನವೂ ನನಸಾಗುತ್ತಿದೆ. ನನಗೆ ಎಂಬತ್ತು ವರ್ಷವಾದರೂ ಒಂದಲ್ಲ ಒಂದು ಪಾತ್ರ ನನಗಾಗಿ ಇದ್ದೇ ಇರುತ್ತದೆ'- ಹೀಗೆ ದೊಡ್ಡ ಆಶಾವಾದವನ್ನು ವಿದ್ಯಾ ವ್ಯಕ್ತಪಡಿಸುತ್ತಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.