ಶುಕ್ರವಾರ, ಜನವರಿ 24, 2020
17 °C

ಅನುದಿನ ಗಾನ ಸಾಣೆ

–ಉಮಾ ಅನಂತ್‌ Updated:

ಅಕ್ಷರ ಗಾತ್ರ : | |

ಅನುದಿನ ಗಾನ ಸಾಣೆ

ಸಂಗೀತ ತ್ರಿಮೂರ್ತಿಗಳಲ್ಲಿ ಒಬ್ಬರಾದ ತ್ಯಾಗರಾಜರು ಕರ್ನಾಟಕ ಸಂಗೀತದ ವಾಗ್ಗೇಯಕಾರರಲ್ಲಿ ಮುಂಚೂಣಿಯಲ್ಲಿದ್ದವರು. ಸಾವಿರಾರು ಕೃತಿಗಳನ್ನು ‘ಶ್ರೀ ತ್ಯಾಗರಾಜ’ ಅಂಕಿತದಲ್ಲಿ ರಚಿಸಿರುವ ಈ ವಾಗ್ಗೇಯಕಾರರು ರಾಮನ ಮೇಲೆ ಹೆಚ್ಚಿನ ಕೀರ್ತನೆಗಳನ್ನು ರಚಿಸಿದವರು. ತ್ಯಾಗರಾಜರ ಕೃತಿಗಳಲ್ಲಿ ‘ಪಂಚರತ್ನ ಕೀರ್ತನೆ’ಗಳಂತೂ ಅತ್ಯಂತ ಜನಪ್ರಿಯ.ಪ್ರತಿವರ್ಷವೂ ಎಲ್ಲ ಸಂಗೀತ ಶಾಲೆಗಳಲ್ಲಿ, ಸಂಗೀತ ವಿದ್ವಾಂಸರ ಮನೆಗಳಲ್ಲಿ ತ್ಯಾಗರಾಜರ ಆರಾಧನೆಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ತ್ಯಾಗರಾಜರ ಪಂಚರತ್ನ ಕೃತಿಗಳನ್ನೂ ಸಾಮೂಹಿಕವಾಗಿ ಹಾಡಲಾಗುತ್ತದೆ. ಈ ಮಹಾನ್‌ ವಾಗ್ಗೇಯಕಾರರ ಹೆಸರನ್ನೇ ಇಟ್ಟುಕೊಂಡಿರುವ ಸಂಗೀತ ಶಾಲೆ ಕೋಣನಕುಂಟೆಯ ಸೌದಾಮಿನಿ ಬಡಾವಣೆಯಲ್ಲಿದೆ.ಶ್ರೀ ತ್ಯಾಗರಾಜ ಸಂಗೀತ ಶಾಲೆಯಲ್ಲಿ ವಿದುಷಿ ಸಾವಿತ್ರಿ ಈಶ್ವರ ಭಟ್‌ ಅಮೈ ಕರ್ನಾಟಕ ಶಾಸ್ತ್ರೀಯ ಸಂಗೀತ, ದೇವರನಾಮ, ಭಾವಗೀತೆ ಹೇಳಿಕೊಡುತ್ತಾರೆ. ಕೋಣನಕುಂಟೆಯಲ್ಲಿ 10 ವರ್ಷಗಳ ಹಿಂದೆ ಆರಂಭವಾದ ಈ ಸಂಗೀತ ಶಾಲೆಯಲ್ಲಿ 40 ಮಕ್ಕಳು ಸಂಗೀತ ಕಲಿಯುತ್ತಿದ್ದಾರೆ. ಕಳೆದ  30 ವರ್ಷಗಳಿಂದ ವಿದುಷಿ ಸಾವಿತ್ರಿ ಅವರು ಸಂಗೀತ ಪಾಠ ಮಾಡುತ್ತಾ ಬಂದರೂ ಅಧಿಕೃತವಾಗಿ ಸಂಗೀತ ಶಾಲೆ ಆರಂಭವಾದದ್ದು ಕಳೆದ 10 ವರ್ಷಗಳ ಹಿಂದೆ.ಇಲ್ಲಿ ಕಲಿತ ಹಲವಾರು ಮಕ್ಕಳು ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಡೆಸುವ ಸಂಗೀತದ ಜೂನಿಯರ್‌, ಸೀನಿಯರ್‌ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿ ಪಾಸಾಗಿದ್ದಾರೆ. ವಿದ್ವತ್‌ ಹಂತದ ಪರೀಕ್ಷೆಗೂ ತಯಾರಾಗುತ್ತಿದ್ದಾರೆ. ಕೆಲವು ಶಿಷ್ಯಂದಿರು ಈಗಾಗಲೇ ಅನೇಕ ವೇದಿಕೆಗಳಲ್ಲೂ ಹಾಡಿದ್ದಾರೆ. ಶಾಲಾ ಮಕ್ಕಳು ಮಾತ್ರವಲ್ಲದೆ ಗೃಹಿಣಿಯರು, ವಿವಿಧ ಉದ್ಯೋಗಸ್ಥರು ಇಲ್ಲಿ ಸಂಗೀತ ಕಲಿಯುತ್ತಿದ್ದಾರೆ. ಇಲ್ಲಿ ಕಲಿಯುತ್ತಿರುವ ಸ್ಫೂರ್ತಿ, ಅನುಶ್ರೀ ಮುಂತಾದವರು ಸಂಗೀತ ಜೂನಿಯರ್‌ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದಾರೆ.ಪಾಕ್ಷಿಕ ಭಜನೆ

‘ಪ್ರತಿ ವರ್ಷವೂ ಈ ಸಂಗೀತ ಶಾಲೆಯಲ್ಲಿ ತ್ಯಾಗರಾಜ-, ಪುರಂದರದಾಸರ ಆರಾಧನೆಯನ್ನು ಅದ್ದೂರಿಯಾಗಿ ಆಚರಿಸುತ್ತೇವೆ. ನಮ್ಮ ಗುರುಗಳ ಸ್ಮರಣಾರ್ಥವೂ ವಿಶೇಷ ಸಂಗೀತ ಕಾರ್ಯಕ್ರಮವನ್ನು ಈ ಸಂಗೀತ ಶಾಲೆ ನಡೆಸುತ್ತಾ ಬಂದಿದೆ. ಈ ಕಾರ್ಯಕ್ರಮಗಳಲ್ಲಿ ಮಕ್ಕಳಿಗೆ ಹಾಡಲು ವೇದಿಕೆ ಒದಗಿಸಲಾಗುತ್ತದೆ. ಹಿರಿಯ ಮತ್ತು ಉದಯೋನ್ಮುಖ ಸಂಗೀತಗಾರರನ್ನು ಕರೆಸಿ ಶಾಸ್ತ್ರೀಯ ಸಂಗೀತ ಕಛೇರಿಯನ್ನೂ ಏರ್ಪಡಿಸುತ್ತೇವೆ’ ಎಂದು ವಿವರ ನೀಡುತ್ತಾರೆ ವಿದುಷಿ ಸಾವಿತ್ರಿ ಭಟ್‌.‘ತ್ಯಾಗರಾಜ ಸಂಗೀತ ಶಾಲೆಯಲ್ಲಿ ಗುಂಪಿನಲ್ಲಿ ಮತ್ತು ಪ್ರತ್ಯೇಕ ಪಾಠವೂ ಹೇಳಿಕೊಡುತ್ತೇನೆ. ಪ್ರತಿ 15 ದಿನಗಳಿಗೊಮ್ಮೆ  ನಮ್ಮ ಬಡಾವಣೆಯ ಬೇರೆ ಬೇರೆ ಮನೆಗಳಲ್ಲಿ ಭಜನೆ ಮತ್ತು ದೇವರನಾಮಗಳನ್ನು ಆಸಕ್ತರಿಗೆ ನಾನು ಹೇಳಿಕೊಡಲು ಹೋಗುತ್ತೇನೆ. ಇದರಿಂದ ಸಂಗೀತವನ್ನು ಹರಡಿದಂತಾಗುತ್ತದೆ. ಜನರಲ್ಲಿ ಸದ್ಭಾವನೆ ಬೆಳೆಯುತ್ತದೆ. ಮಕ್ಕಳಲ್ಲಿ ಸಂಗೀತ ಕಲಿಕೆಯ ಆಸಕ್ತಿ ಹೆಚ್ಚುತ್ತದೆ. ಆರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ’ ಎಂದೂ ಹೇಳುತ್ತಾರೆ ಈ ವಿದುಷಿ.‘ಈಗಿನ ಶಿಕ್ಷಣ ಪದ್ಧತಿಯಲ್ಲಿ ಮಕ್ಕಳಿಗೆ ಓದಿನ ಹೊರೆ, ಬೌದ್ಧಿಕ ಒತ್ತಡ ಹೆಚ್ಚು. ಇದರಿಂದ ಮಕ್ಕಳು ಮಾನಸಿಕವಾಗಿ ಕೀಳರಿಮೆ, ಒತ್ತಡ ಎದುರಿಸುತ್ತಾರೆ. ಇಂಥ ಸಂದರ್ಭದಲ್ಲಿ ದಿನಕ್ಕೆ ಕನಿಷ್ಠ ಅರ್ಧ ಗಂಟೆ ಸಂಗೀತ ಅಭ್ಯಾಸ ಮಾಡಿದರೆ ಮನಸ್ಸು ಹಗುರವಾಗುತ್ತದೆ. ಸಂಗೀತ ಕೇಳಿದರೂ ಮನಸ್ಸು ಉಲ್ಲಾಸಮಯವಾಗುತ್ತದೆ.ಕಲಿಯುವಾಗ ತಾಳ ಮತ್ತು ಶ್ರುತಿಗೆ ಹೆಚ್ಚಿನ ಗಮನ ಕೊಡಬೇಕಾಗಿರುವುದರಿಂದ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚುತ್ತದೆ. ಹಾಡುವುದರಿಂದ, ಹಿರಿಯ ವಿದ್ವಾಂಸರ ಸಂಗೀತ ಕೇಳುವುದರಿಂದ, ವಿವಿಧ ಗಾಯನ ಮತ್ತು ವಾದನ ಕಛೇರಿಗಳಿಗೆ ಹೋಗುವುದರಿಂದ, ಸಂಗೀತ ಶಾಸ್ತ್ರಕ್ಕೆ ಸಂಬಂಧಿಸಿದ ಪುಸ್ತಕ ಓದುವುದರಿಂದ ನಾವು ನಮ್ಮ ಸಂಗೀತ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಾಧ್ಯ’ ಎಂದು ಮಕ್ಕಳಿಗೆ ಕಿವಿಮಾತು ಹೇಳುತ್ತಾರೆ ಅವರು.ಸಂಗೀತ- ಗಮಕ

ವಿದುಷಿ ಸಾವಿತ್ರಿ ಭಟ್‌ ಮೂಲತಃ ಕಾಸರಗೋಡು ಜಿಲ್ಲೆ ಎಡನಾಡು ಗ್ರಾಮದವರು. ತಮ್ಮ 10ನೇ ವಯಸ್ಸಿಗೇ ಕರ್ನಾಟಕ ಸಂಗೀತ ಕಲಿಯಲಾರಂಭಿಸಿದರು. ಆರಂಭ ಪಾಠವನ್ನು ವಿದ್ವಾನ್‌ ಎಸ್‌.ವಿ. ಪದ್ಮನಾಭ ಅವರ ಬಳಿ ಕಲಿತರು. ಹೆಚ್ಚಿನ ಸಂಗೀತಾಭ್ಯಾಸವನ್ನು ವಿದ್ವಾನ್‌ ಮಧೂರು ಪದ್ಮನಾಭ ಸರಳಾಯ ಅವರ ಬಳಿ ಮಾಡಿದರು. ಮನೆಯಲ್ಲಿ ಸದಾ ಯಕ್ಷಗಾನ, ಸಂಗೀತದ ವಾತಾವರಣ ಇತ್ತು. ತಂದೆಯವರ ಪ್ರೋತ್ಸಾಹದಿಂದ ಸಂಗೀತದ ವಿದ್ವತ್‌ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಪಾಸಾದರು.ಹೀಗೆ ಎಳೆಯ ವಯಸ್ಸಿನಲ್ಲೇ ಸಂಗೀತ ವಿದುಷಿಯಾಗಿದ್ದ ಸಾವಿತ್ರಿ ಅವರು ಅನೇಕ ಕಛೇರಿಗಳನ್ನು ನೀಡಲಾರಂಭಿಸಿದರು. ಬಳಿಕ ಅಮೈ ಈಶ್ವರ ಭಟ್‌ ಅವರನ್ನು ಮದುವೆಯಾದರು. ಅವರು ಕೂಡ ಗಮಕ ಶಾಸ್ತ್ರದಲ್ಲಿ ವಿದ್ವಾಂಸರು. ಹೀಗೆ ಸಂಗೀತ, ಗಮಕ, ಯಕ್ಷಗಾನಗಳಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು ಕಲೆಯನ್ನು ಪೋಷಿಸುತ್ತಾ ಬಂದರು.ತಾವು ಕಲಿತ ಶಾಸ್ತ್ರೀಯ ಸಂಗೀತವನ್ನು ಮಕ್ಕಳಿಗೆ, ಆಸಕ್ತರಿಗೆ ಹೇಳಿಕೊಡುವುದರಲ್ಲೇ ನಿರತರಾಗಿರುವ ಈ ವಿದುಷಿ  ಸಂಗೀತ ಕಛೇರಿ ನೀಡಿದ್ದು ಕಡಿಮೆ. ಸಂಗೀತ ಪಾಠದಲ್ಲೇ ನಿತ್ಯವೂ ತಲ್ಲೀನ.ವಿಳಾಸ: ವಿದುಷಿ ಎ. ಸಾವಿತ್ರಿ ಈಶ್ವರ ಭಟ್‌, ಶ್ರೀ ತ್ಯಾಗರಾಜ ಸಂಗೀತ ಶಾಲೆ, ನಂ. 9, ‘ಮಂಜುಶ್ರೀ’, ಒಂದನೇ ಅಡ್ಡ ರಸ್ತೆ, ಸೌದಾಮಿನಿ ಬಡಾವಣೆ, ಕೋಣನಕುಂಟೆ, ಬೆಂಗಳೂರು-62.

ಫೋನ್‌: 99726 21474 

ಪ್ರತಿಕ್ರಿಯಿಸಿ (+)