ಸೋಮವಾರ, ಮೇ 17, 2021
23 °C

ಅನು ದಿನ ಹೊಸತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಭಿನಯವಷ್ಟೇ ನನ್ನ ಆದ್ಯತೆ. ಬಟ್ಟೆ, ಬ್ಯಾಗು, ಚಪ್ಪಲಿಗಳ ಮೋಹ ತಮಗಿಲ್ಲ ಎಂದು ಕೆಲವೇ ವರ್ಷಗಳ ಹಿಂದೆ ಉಲಿದಿದ್ದ ಅನುಷ್ಕಾ ಶರ್ಮ ಈಗ ತಮ್ಮ ಅಸಲಿಯತ್ತನ್ನು ಬಯಲುಮಾಡಿದ್ದಾರೆ.ಇತ್ತೀಚೆಗೆ ಬ್ಯಾಂಕಾಕ್‌ಗೆ ಹೋಗಿದ್ದಾಗ ಅವರಿಗೆ ಚೆಂದಚೆಂದದ ಬೂಟುಗಳು ಕಣ್ಣಿಗೆ ಬಿದ್ದಿವೆ. ಎಲ್ಲವೂ ವಿದೇಶೀ ಮಾಲು. ಒಂದೊಂದು ಜೊತೆಯನ್ನೂ ತೆಗೆಸಿ, ಅಂಗಡಿಯವನಿಂದ ಕಾಲಿಗೆ ತೊಡಿಸಿಕೊಂಡು, ನಿಧನಿಧಾನ ಅಲ್ಲೇ ಹೆಜ್ಜೆ ಇಡುತ್ತಾ ಬೂಟುಗಳು `ಕಂಫರ್ಟ್~ ಆಗಿವೆಯೇ ಎಂಬುದನ್ನು ಖಾತರಿಪಡಿಸಿಕೊಂಡರು. ಜೊತೆಯಲ್ಲಿದ್ದ ಫ್ಯಾಷನ್ ಸಹಾಯಕಿ ಕೂಡ ಅವರು ಹೆಕ್ಕಿ, ಅಳತೆ ನೋಡುತ್ತಿದ್ದ ಬೂಟುಗಳನ್ನು ಕಂಡು ಕಣ್ಣರಳಿಸಿದ್ದೇ ಅರಳಿಸಿದ್ದು.ತಾಸು ಅರ್ಧವಾಯಿತು, ಒಂದಾಯಿತು. ಅನುಷ್ಕಾ ಅಲ್ಲಿಂದ ಕದಲುವ ಲಕ್ಷಣ ಕಾಣಲಿಲ್ಲ. ಫ್ಯಾಷನ್ ಸಹಾಯಕಿಗಂತೂ ತರಹೇವಾರಿ ಬೂಟುಗಳನ್ನು ನೋಡುವ ಆ ಅವಕಾಶ ಹಬ್ಬದಂತಾಗಿತ್ತು. ಕೊನೆಗೆ ಅನುಷ್ಕಾ ತಮಗಿಷ್ಟವಾದ ಜೋಡಿ ಬೂಟುಗಳನ್ನೆಲ್ಲಾ ಒಟ್ಟುಗೂಡಿಸಿದರು. ಬರೋಬ್ಬರಿ 27 ಜೊತೆ.ಸ್ಟೆಲ್ಲಾ ಮೆಕಾರ್ಟ್ನಿ, ಮಾಷಿನೋ, ವೆಂಡೆಲ್ ರಾಡ್ರಿಗ್ಸ್ ಮೊದಲಾದ ಬ್ರಾಂಡ್‌ಗಳೆಂದರೆ ಅನುಷ್ಕಾಗೆ ಅಚ್ಚುಮೆಚ್ಚು. ತರುಣ್ ತಹ್ಲಾನಿ ವಿನ್ಯಾಸವೆಂದರೆ ಬಲು ಇಷ್ಟ.

ಅನುಷ್ಕಾ ಕಂಡರೆ ಹುಡುಗರು ಬೆಚ್ಚುತ್ತಾರೆ. ಶಾಹಿದ್ ಕಪೂರ್‌ನನ್ನು ತಮ್ಮ ಸ್ನೇಹಿತ ಎಂದು ಕರೆಯುವುದಕ್ಕೂ ಇಷ್ಟವಿಲ್ಲ ಎಂದು ನಿರ್ದಾಕ್ಷಿಣ್ಯವಾಗಿ ಹೇಳುವ ಅನುಷ್ಕಾ ತಮ್ಮಬಗ್ಗೆ ತಾವೇ ನುಡಿಮುತ್ತು ಪೋಣಿಸಿಕೊಳ್ಳುವುದು ಹೀಗೆ:

ಆರ್ಮಿ ಹಿನ್ನೆಲೆಯವಳು ನಾನು. ಅದಕ್ಕೇ ಇಷ್ಟು ಎತ್ತರ ಇದ್ದೇನೆ. ನಾನು ನಡೆಯುವುದನ್ನು ಕಲಿತ ಕೆಲವೇ ತಿಂಗಳಲ್ಲಿ ಅಪ್ಪ-ಅಮ್ಮ ಈಜುಕೊಳಕ್ಕೆ ಕರೆದುಕೊಂಡು ನೂಕಿದರು. ನಾಲ್ಕು ವರ್ಷದವಳಿದ್ದಾಗಲೇ ನಾನು ಅರ್ಧ ಮುಕ್ಕಾಲು ತಾಸು ಈಜುತ್ತಿದ್ದೆ. ಸೋನಂ, ದೀಪಿಕಾ ತರಹದ ನನ್ನ

 

ಓರಗೆಯ ನಟಿಯರೂ ಉದ್ದವಿದ್ದಾರೆ. ಒಂದು ವೇಳೆ ನಾನು ಈಜಾಡದೇ ಹೋಗಿದ್ದರೆ ಇಷ್ಟು ಉದ್ದ ಆಗುತ್ತಿರಲಿಲ್ಲವೇನೋ?

ಸಂಬಂಧಗಳನ್ನು ತಳುಕುಹಾಕುವುದರಲ್ಲಿ ನಮ್ಮ ಜನ ನಿಸ್ಸೀಮರು. ಸದ್ಯ ಶಾರುಖ್ ಖಾನ್ ಜೊತೆಗೆ ನನ್ನ ತಳುಕು ಹಾಕಲಿಲ್ಲ. ಮದುವೆಯಾಗಿ ಸುಖವಾಗಿರುವ ಅವರೊಟ್ಟಿಗೆ ಯಾರು ನಟಿಸಿದರೂ ಕೆಟ್ಟ ಹೆಸರು ಬರುವುದಿಲ್ಲ. ಅದಕ್ಕೇ ಮದುವೆಯಾಗಿರುವ ನಾಯಕರ ಜೊತೆ ನಟಿಸುವುದೇ ವಾಸಿ ಅನ್ನಿಸುತ್ತಿದೆ. ನಾನು ಒಮ್ಮೆಗೇ ಹತ್ತು ಸಿನಿಮಾಗಳನ್ನು ಒಪ್ಪಿಕೊಳ್ಳಬಹುದು. ಅಷ್ಟು ಅವಕಾಶಗಳೇನೋ ಇವೆ.ಆದರೆ, ಯಾವುದಕ್ಕೂ ನ್ಯಾಯ ಸಲ್ಲಿಸಲು ಸಾಧ್ಯವಾಗುವುದಿಲ್ಲ. ನಾನು ನಿಧಾನವೇ ಪ್ರಧಾನ ಎಂದು ನಂಬಿದವಳು. ನನ್ನ ಅಪ್ಪ-ಅಮ್ಮ ಶಿಸ್ತಿನಿಂದ ಬದುಕುವುದನ್ನು ಕಲಿಸಿದ್ದಾರೆ. ಕೆಲಸದಲ್ಲಿ ನನಗೆ ಇನ್ನಿಲ್ಲದ ಶ್ರದ್ಧೆ. ನಾಯಕ ಒಂದೇ ಟೇಕ್‌ನಲ್ಲಿ ಶಾಟ್ ಮುಗಿದರೆ ಸಾಕು ಎಂದುಕೊಂಡರೆ ಅದು ನನ್ನ ತಪ್ಪಲ್ಲ.

 

ನಾನು ಶಾಟ್ ಪಕ್ಕಾ ಆಗಿ ಬರಬೇಕೆಂದು ಹೆಣಗಾಡುವವಳು. ಅದಕ್ಕೇ ತೃಪ್ತಿಯಾಗುವವರೆಗೆ ರೀಟೇಕ್‌ಗಳಿಗೆ ನಿರ್ದೇಶಕರನ್ನು ಒತ್ತಾಯಿಸಿದ್ದಿದೆ. ಹಾಗೆಂದು ಅದೇ ನನ್ನ ಚಾಳಿಯಲ್ಲ. ಎಲ್ಲರೂ ತಂತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ಇಡೀ ಸಿನಿಮಾ ಚೆನ್ನಾಗಿರುತ್ತದೆ ಅನ್ನೋದು ನನ್ನ ಭಾವನೆ.ಒಬ್ಬಳೇ ಇದ್ದಾಗ ನಾನು ತುಂಬಾ ಸುಖಿ. ಇಷ್ಟ ಬಂದದ್ದನ್ನು ಮಾಡುತ್ತೇನೆ. ಸಣ್ಣವಳಿದ್ದಾಗ ತಿಂದಿದ್ದ ಚಾಕೊಲೇಟ್‌ನ ಕವರ್‌ಗಳನ್ನೆಲ್ಲಾ ಒಂದು ದೊಡ್ಡ ಡಬ್ಬಕ್ಕೆ ತುಂಬಿಸಿಟ್ಟಿದ್ದೇನೆ. ಅದನ್ನು ಈಗಲೂ ತೆಗೆದು ನೋಡುತ್ತೇನೆ. ನಾನು ತಿಂದ ಕೆಲವು ಚಾಕೊಲೇಟ್‌ಗಳು ಈಗ ಸಿಗುವುದೇ ಇಲ್ಲ. ಒಮ್ಮೆ ನಾನು ಬಾಲ್ಯದಲ್ಲಿ ತಿಂದಿದ್ದ ವಿದೇಶಿ ಚಾಕೊಲೇಟ್‌ಗಾಗಿ ಎಲ್ಲೆಂದರಲ್ಲಿ ಹುಡುಕಾಡಿದೆ. ಕೊನೆಗೆ ಅದು ಸ್ಪೇನ್‌ನಲ್ಲಿ ಸಿಕ್ಕಿತು.ನನ್ನ ಸ್ನೇಹಿತೆ ಅಲ್ಲಿಂದಲೇ ಅದನ್ನು ಕಳುಹಿಸಿಕೊಟ್ಟಳು. ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಈಗಲೂ ನನಗೆ ಸೆರೆಲ್ಯಾಕ್ ಅಂದರೆ ಪಂಚಪ್ರಾಣ. ಅದನ್ನು ಕಲಸಿಕೊಂಡು ತಿನ್ನುತ್ತೇನೆ. ಕೆಲವೊಮ್ಮೆ ಹಾಲಿಗೆ ಹಾಕಿಕೊಂಡು ಕುಡಿಯುತ್ತೇನೆ.ಅಪ್ಪನ ಪೋಸ್ಟಿಂಗ್ ಈಗ ರಾಜಾಸ್ತಾನದಲ್ಲಿ. ಆರ್ಮಿಯಲ್ಲಿ ಈಗಲೂ ನನಗೆ ಸ್ನೇಹಿತೆಯರಿದ್ದಾರೆ. ಬೆಂಗಳೂರಿನಲ್ಲಿ ಸ್ನೇಹ ಎಂಬ ಇನ್ನೊಬ್ಬ ಸ್ನೇಹಿತೆ ಅಚ್ಚುಮೆಚ್ಚು. ಬಿಡುವಿನಲ್ಲಿ ನಾವೆಲ್ಲಾ ಎಲ್ಲಾದರೂ ಸೇರಿ, ಹರಟೆ ಕೊಚ್ಚುತ್ತೇವೆ.ಯಾರ‌್ಯಾರನ್ನೋ ಕರೆತಂದು ನನ್ನ ಪಕ್ಕದಲ್ಲಿ ನಿಲ್ಲಿಸಿ, ನಾನು ಎಲ್ಲರಿಗಿಂತ ಎತ್ತರ ಎನ್ನುತ್ತಾ ಅಪ್ಪ ಖುಷಿಪಡುತ್ತಾರೆ. ಒಮ್ಮೆ ಶಾಹಿದ್ ಕಪೂರ್‌ಗೆ ಯಾರೋ, ನಿನಗಿಂತ ಅನುಷ್ಕಾ ಎತ್ತರ ಇದ್ದಾಳೆ ಎಂದಿದ್ದರಂತೆ. ಆಗ ಅವರಿಗೆ ಕೋಪ ಬಂದಿತ್ತು. ನಾನು ಅವರಿಗಿಂತ ಎತ್ತರ ಇದ್ದೇನೋ ಇಲ್ಲವೋ ಎಂದು ಅಳೆದೇ ಇಲ್ಲ. ಅಂದರೆ, ಅವರ ಪಕ್ಕ, ಹತ್ತಿರದಲ್ಲಿ ನಿಂತರೂ ನನಗೆ ನಟನೆಯಷ್ಟೆ ಮುಖ್ಯವಾಗಿರುತ್ತದೆ; ಬೇರೇನೂ ಅಲ್ಲ...~ಹರಿಯುವ ನದಿ ನೀರಿನಂತೆ ಮಾತನಾಡುವ ಅನುಷ್ಕಾ ಜೊತೆ ಈಗ ಅಮ್ಮ ಇದ್ದಾರೆ. ಆದರೆ, ಈ ನಟಿ ಹೆಚ್ಚು ಮಿಸ್ ಮಾಡಿಕೊಳ್ಳುವುದು ಅಪ್ಪನನ್ನು.

ಅಂದಹಾಗೆ, ಬ್ಯಾಂಕಾಕ್‌ನ ಚಪ್ಪಲಿ ಅಂಗಡಿಯಿಂದ ಬಟ್ಟೆ ಅಂಗಡಿಗೆ ಅವರು ಹೋದಮೇಲೆ ಪ್ಯಾಕ್ ಆದ ವಸ್ತ್ರಗಳ ಸಂಖ್ಯೆ 30! 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.