ಮಂಗಳವಾರ, ಮೇ 24, 2022
29 °C

ಅಪ್ಪನ ನೆರಳಿಂದ ಆಚೆ ನಿಂತ ಮಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಣ್ಣ ತುಂಬ ಸಿನಿಮಾ ಕನಸು. ಕಟ್ಟಿಕೊಂಡ ಕನಸುಗಳನ್ನು ಈಡೇರಿಸಿಕೊಳ್ಳಲು ಯಾರ ನೆರವೂ ತಮಗೆ ಬೇಕಿಲ್ಲ ಎನ್ನುವ ಸ್ವಾಭಿಮಾನ. `ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಳ್ಳುವ ಜಾಯಮಾನ ನನ್ನದಲ್ಲ' ಎನ್ನುವ ಈ ಹುಡುಗಿಯ ಹೆಸರು ಸೋನಂ ಕಪೂರ್. ಅಪ್ಪನ ಹಂಗಿಲ್ಲದೇ ಬಾಲಿವುಡ್‌ನಲ್ಲಿ ಬಣ್ಣದ ಬದುಕು ಕಟ್ಟಿಕೊಂಡ ಪರಿಯನ್ನು ನಟಿ ಸೋನಂ ವಿವರಿಸುವುದು ಹೀಗೆ...`ಬಾಲಿವುಡ್‌ನಲ್ಲಿ ನನ್ನ ಅಪ್ಪನ ಪ್ರಭಾವ ಸಾಕಷ್ಟಿದೆ. ಒಬ್ಬ ನಟ, ನಿರ್ಮಾಪಕನ ಮಗಳಾಗಿ ನಾನು ಎಂದಿಗೂ ಅವರ ಪ್ರಭಾವವನ್ನು ಬಳಸಿಕೊಂಡು ಮೇಲೆ ಬರಲು ಇಷ್ಟಪಡಲಿಲ್ಲ. ಸ್ವಂತ ಪ್ರತಿಭೆಯ ಮೂಲಕ ಬೆಳೆಯಬೇಕು ಎಂಬುದು ನನ್ನ ಛಲ. ದೊಡ್ಡ ಆಲದ ಮರದ ಕೆಳಗೆ ಸಣ್ಣಪುಟ್ಟ ಗಿಡಗಳು ಮಾತ್ರ ಬೆಳೆಯಬಲ್ಲವು. ಅದೇ ರೀತಿ, ನಾನು ಕೂಡ ಅಪ್ಪನ ಪ್ರಭಾವಳಿಯೊಳಗೆ ಸಿಲುಕಿ ನನ್ನ ಅಸ್ಮಿತೆಯನ್ನು ಮಂಕಾಗಿಸಿಕೊಳ್ಳಲು ಇಷ್ಟಪಡುವುದಿಲ್ಲ. ಇದೇ ಕಾರಣಕ್ಕಾಗಿ ಬಾಲಿವುಡ್‌ನಲ್ಲಿ ನಟಿಯಾಗಿ ಬೆಳೆಯಬೇಕೆಂಬ ಆಸೆ ಈಡೇರಿಸಿಕೊಳ್ಳಲು ನಾನೇ ಒಂದು ಪಥ ನಿರ್ಮಾಣ ಮಾಡಿಕೊಂಡೆ' ಎನ್ನುತ್ತಾರೆ 28ವರ್ಷ ವಯಸ್ಸಿನ ಬೆಡಗಿ ಸೋನಂ.ಬಾಲಿವುಡ್ ಅಂಗಳಕ್ಕೆ ಕಾಲಿಟ್ಟು ಆರು ವರ್ಷ ಕಳೆದಿವೆ. ಹನ್ನೊಂದು ಸಿನಿಮಾಗಳಲ್ಲಿ ನಟಿಸಿದ ಅನುಭವಿದೆ. ದಕ್ಷಿಣದ ನಟ ಧನುಷ್ ಜತೆ ನಟಿಸಿದ್ದ `ರಾಂಝಣಾ' ಚಿತ್ರ ಸೋನಂ ಕಪೂರ್‌ಗೆ ಈಗ ಯಶಸ್ಸಿನ ರುಚಿ ಉಣಿಸುತ್ತಿದೆ. `ರಾಂಝಣಾ' ಚಿತ್ರದ ಯಶಸ್ಸು ಆಕೆಗೆ ಮತ್ತಷ್ಟು ಬಲತುಂಬಿದೆಯಂತೆ. “ಉದ್ದೇಶಪೂರ್ವಕವಾಗಿಯೇ ನಾನು ಮೊದಲಿನಿಂದಲೂ ಅಪ್ಪ ಅನಿಲ್ ಕಪೂರ್ ಅವರ ಜತೆ ಒಂದು ಅಂತರ ಕಾಯ್ದುಕೊಂಡಿದ್ದೇನೆ. ನನ್ನ ಈ ನಿರ್ಧಾರ ಬೇರೆಯವರಿಗೆ ತೀರಾ ಅತಿ ಎನಿಸಬಹುದು. ಆದರೆ, ಬಾಲಿವುಡ್‌ನಲ್ಲಿ ನನ್ನತನವನ್ನು ಬೆಳೆಸಿಕೊಳ್ಳುವ ಸಲುವಾಗಿ ಇಂತಹ ನಿರ್ಧಾರ ಅನಿವಾರ್ಯ. ಇದುವರೆಗೂ ನಾನು ಅಪ್ಪನ ಎದುರು ನಿಂತು, `ನನಗಾಗಿ ನೀನು ಇದನ್ನು ಮಾಡಿಕೊಡು' ಎಂದು ಯಾವ ಬೇಡಿಯನ್ನೂ ಇಟ್ಟಿಲ್ಲ” ಎನ್ನುತ್ತಾರೆ ಸೋನಂ.2006ರಲ್ಲಿ ತೆರೆಕಂಡಿದ್ದ ಸೋನಂ ಕಪೂರ್ ಅಭಿನಯದ ಪ್ರಥಮ ಚಿತ್ರ `ಸಾವರಿಯಾ'. ಆನಂತರದಲ್ಲಿ ಬಂದ `ಡೆಲ್ಲಿ 6', `ಪ್ಲೇಯರ್ಸ್' ಮತ್ತು `ಮೌಸಂ' ಚಿತ್ರಗಳು ಈಕೆಗೆ ಯಶಸ್ಸು ತಂದುಕೊಡಲಿಲ್ಲ. ಬದಲಾಗಿ ಸೋಲಿನ ಆಘಾತವನ್ನೇ ನೀಡಿದವು. `ನನಗೀಗ ಅರ್ಥವಾಗುತ್ತಿದೆ. ನಾನು ಈ ಹಿಂದೆ ನಟಿಸಿದ್ದ ಚಿತ್ರದ ಪಾತ್ರಗಳಲ್ಲಿ ನನ್ನ ಗ್ಲಾಮರಸ್ ಇಮೇಜ್ ಮತ್ತು ರೂಪ-ಲಾವಣ್ಯಗಳಷ್ಟೇ ಬಳಕೆಯಾದವು. ಸ್ಟಾರ್ ನಟರಿಗೆ ಅಥವಾ ಚಿತ್ರಕ್ಕೆ ಗ್ಲಾಮರ್ ತುಂಬುವಂಥ ಪಾತ್ರಗಳಲ್ಲಿ ನಟಿಸಿ ತಪ್ಪು ಮಾಡಿದೆ. ಈ ಚಿತ್ರಗಳ್ಯಾವುವೂ ನನಗೆ ಸ್ಟಾರ್ ಪಟ್ಟ ತಂದುಕೊಡಲಿಲ್ಲ. ಬೆಳ್ಳಿತೆರೆ ಮೇಲೆ ಸೌಂದರ್ಯ ತೋರುವ ಪಾತ್ರಗಳಲ್ಲಿ ನಟಿಸುವ ಜರೂರು ಇರಲಿಲ್ಲ ಎಂದು ನನಗೀಗ ಅರ್ಥವಾಗಿದೆ. ಈ ಸಂಗತಿ ಬಹುಬೇಗ ಅರ್ಥವಾಗಿದ್ದು ನನ್ನ ಅದೃಷ್ಟ. ಇನ್ನು ಮುಂದೆ ನನ್ನ ನಟನೆಯ ಪ್ರತಿಭೆಯನ್ನು ಒರೆಗೆ ಹಚ್ಚುವ ಚಿತ್ರಗಳಲ್ಲಿ ಮಾತ್ರ ನಟಿಸುವ ತೀರ್ಮಾನ ಮಾಡಿದ್ದೇನೆ. ಅಂದರೆ, ಇದರರ್ಥ ನಾನು ಇನ್ನು ಮುಂದೆ ಕೇವಲ `ರಾಂಝಾಣಾ', `ಬಾಗ್ ಮಿಲ್ಕಾ ಬಾಗ್'ನಂತಹ ಚಿತ್ರಗಳಲ್ಲಿ ಮಾತ್ರ ನಟಿಸುತ್ತೇನೆ ಎಂದಲ್ಲ' ಎಂದು ತಮ್ಮ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸುತ್ತಾರೆ ಸೋನಂ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.