ಭಾನುವಾರ, ಮಾರ್ಚ್ 7, 2021
30 °C

ಅಭಿಮಾನದ ಫ್ರೇಂನೊಳಗೆ ರಾಜ್

ರಮೇಶ ಕೆ. Updated:

ಅಕ್ಷರ ಗಾತ್ರ : | |

ಅಭಿಮಾನದ ಫ್ರೇಂನೊಳಗೆ ರಾಜ್

ನೆಚ್ಚಿನ ನಟರ ಸಿನಿಮಾಗಳು ತೆರೆಕಂಡಾಗ ಅಭಿಮಾನಿಗಳು ಅವರ ಕಟೌಟ್‌ಗಳಿಗೆ ಹಾರ ಹಾಕಿ, ಹೂ ತೂರಿ ಸಂತೋಷ ವ್ಯಕ್ತಪಡಿಸುತ್ತಾರೆ. ಕೆಲವು ಅಭಿಮಾನಿಗಳು ಹಾಲಿನ ಅಭಿಷೇಕವನ್ನೂ ಮಾಡುತ್ತಾರೆ.ಸಿನಿಮಾದ ಅಥವಾ ನಾಯಕನ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುವವರೂ ಇದ್ದಾರೆ. ಆದರೆ ಇಲ್ಲೊಬ್ಬ ಅಭಿಮಾನಿ ಕಳೆದ ಹತ್ತು ವರ್ಷಗಳಿಂದ ತನ್ನ ನೆಚ್ಚಿನ ನಾಯಕನ 7ರಿಂದ 8 ಸಾವಿರ ಫೋಟೊಗಳನ್ನು ಪ್ರದರ್ಶಿಸುವ ಮೂಲಕ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ.ಬಿ.ವಿ.ಕೆ. ಅಯ್ಯಂಗಾರ್ ರಸ್ತೆಯಲ್ಲಿರುವ ಲಕ್ಷ್ಮೀವೆಂಕಟೇಶ್ವರ ಫ್ರೇಂ ವರ್ಕ್ಸ್‌ನ ಸುರೇಶ್‌ಬಾಬು ಈ ಅಭಿಮಾನಿ. ನಲವತ್ತು ವರ್ಷಗಳಿಂದ ಫೋಟೊಗಳಿಗೆ ಫ್ರೇಮ್ ಹಾಕುವ ಕಾಯಕ ಸುರೇಶ್ ಅವರದ್ದು. ಅಣ್ಣ ಕುಮಾರ್ ಕೂಡ ಬೆನ್ನಿಗಿದ್ದಾರೆ.ವಿಶೇಷವೆಂದರೆ ಇವರ ಕುಟುಂಬದ ಎಲ್ಲಾ ಸದಸ್ಯರು ಡಾ.ರಾಜ್‌ಕುಮಾರ್ ಅಭಿಮಾನಿಗಳು. ಈಶ್ವರ, ಗಣೇಶ, ತಿಮ್ಮಪ್ಪ ಹಾಗೂ ಲಕ್ಷ್ಮಿ ಸೇರಿದಂತೆ ದೇವರ ಚಿತ್ರಗಳಿಗೆ ಸುಂದರ ಫ್ರೇಮ್ ಹಾಕಿ ಮಾರಾಟ ಮಾಡುವುದು ಇವರ ವೃತ್ತಿ.ಜೊತೆಗೆ ನೆಚ್ಚಿನ ನಟರಾದ ಡಾ.ರಾಜ್ ಅವರ ಅಪರೂಪದ ಛಾಯಾಚಿತ್ರಗಳನ್ನು ಸಂಗ್ರಹಿಸುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಅವರ ಛಾಯಾಚಿತ್ರಗಳಿಗೂ ಆಕರ್ಷಕ ಫ್ರೇಮ್ ಹಾಕಿ ಪ್ರದರ್ಶನಕ್ಕಿಡಲು ಪ್ರಾರಂಭಿಸಿದರು. ಇಂದು ಇವರ ಬಳಿ ಏಳರಿಂದ ಎಂಟು ಸಾವಿರ ಛಾಯಾಚಿತ್ರಗಳ ಸಂಗ್ರಹವಿದೆ.ಅವರ ಅಂಗಡಿಯು ರಾಜ್‌ಕುಮಾರ್ ಫೋಟೊ ಫ್ರೇಮ್ ವರ್ಕ್ಸ್ ಅಂಗಡಿ ಎಂದೇ ಪ್ರಸಿದ್ಧಿಯಾಗಿದೆ. ಬಾಬು ಪ್ರತಿವರ್ಷ ಅಣ್ಣಾವ್ರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ. ದಕ್ಷಿಣ ಭಾರತದ ಖ್ಯಾತ ನಟರಾಗಿದ್ದ ರಾಜಕುಮಾರ್ ಅವರ ಕುಟುಂಬ ಸದಸ್ಯರ ಹುಟ್ಟುಹಬ್ಬಗಳಂದು ನೆನಪಿಗಾಗಿ ರಾಜ್ ಭಾವಚಿತ್ರವನ್ನು ನೀಡಿದ್ದಾರೆ.ಬಾಬು ಅವರ ಅಂಗಡಿಯಲ್ಲಿ ದೇವರ ಫೋಟೊಗಳಿಗಿಂತ ಡಾ.ರಾಜ್ ಅವರ ಛಾಯಾಚಿತ್ರಗಳೇ ಹೆಚ್ಚಾಗಿ ಮಾರಾಟವಾಗುತ್ತವೆ. ಧಾರವಾಡ, ಹುಬ್ಬಳ್ಳಿ, ಬಾಗಲಕೋಟೆ ಸೇರಿದಂತೆ ಇನ್ನಿತರೆ ಕಡೆಗಳಿಂದ ಬರುವ ಅಭಿಮಾನಿಗಳು ಹೆಚ್ಚಾಗಿ ಕಸ್ತೂರಿ ನಿವಾಸ ಚಿತ್ರದ ಭುಜದ ಮೇಲೆ ಪಾರಿವಾಳವಿರುವ ಚಿತ್ರವನ್ನು ಕೊಂಡುಕೊಳ್ಳುತ್ತಾರೆ ಎಂದು ಬಾಬು ಹೇಳುತ್ತಾರೆ.

 

`ಕಸ್ತೂರಿ ನಿವಾಸ~, `ಪ್ರತಿಧ್ವನಿ~, `ಲಗ್ನಪತ್ರಿಕೆ~ ಚಿತ್ರಗಳ ಸರಣಿ ಫೋಟೊಗಳ ಆಲ್ಬಂ ಸಹ ಸಂಗ್ರಹಿಸಿದ್ದಾರೆ. ಮುತ್ತುರಾಜನ ಅಪರೂಪದ ಚಿತ್ರಗಳನ್ನು ಕೆಲವು ನಿರ್ಮಾಣ ಸಂಸ್ಥೆಗಳು, ಅಭಿಮಾನಿಗಳಿಂದ ಸಂಗ್ರಹಿಸಿದ್ದು, ಕೆಲವರು ಅಂಗಡಿಗೆ ತಾವಾಗಿಯೇ ಬಂದು ಛಾಯಾಚಿತ್ರ ಕೊಟ್ಟುಹೋಗಿದ್ದಾರೆ ಎನ್ನುತ್ತಾರೆ ಅವರು.ರಾಜಕಾರಣಿಗಳು, ಸಿನಿಮಾ ನಟರೊಂದಿಗೆ ಹಾಗೂ ಪ್ರಶಸ್ತಿ ಸ್ವೀಕರಿಸಿದ ಸಂದರ್ಭದ ಚಿತ್ರಗಳು... ಹೀಗೆ ವಿವಿಧ ಬಗೆಯ ರಾಜ್ ಛಾಯಾಚಿತ್ರಗಳನ್ನು ಸಂಗ್ರಹಿಸಿದ್ದಾರೆ. 8x12 ಅಳತೆ ಚಿತ್ರದಿಂದ 30x40 ಅಳತೆಯ ಭಾವಚಿತ್ರಗಳು ಇವರ ಬಳಿ ಇವೆ. ನೂರು ರೂಪಾಯಿಯಿಂದ ಹತ್ತು ಸಾವಿರ ರೂವರೆಗಿನ ಫೋಟೊಗಳು ಇಲ್ಲಿವೆ.`ಹಣಕ್ಕಾಗಿ ಈ ಹವ್ಯಾಸ ಬೆಳೆಸಿಕೊಂಡಿಲ್ಲ. ಅಭಿಮಾನದಿಂದ ಸಂಗ್ರಹಿಸುತ್ತೇನೆ~ ಎನ್ನುವ ಬಾಬು ಪ್ರಕಾರ ನಿತ್ಯ ಐದರಿಂದ ಆರು ಫೋಟೊಗಳು ವ್ಯಾಪಾರವಾಗುತ್ತವೆ. ಏಪ್ರಿಲ್‌ನಲ್ಲಿ ಹೆಚ್ಚಾಗಿ ರಾಜ್‌ಕುಮಾರ್ ಚಿತ್ರಗಳನ್ನು ಕೇಳಿಕೊಂಡು ಬರುತ್ತಾರೆ ಎನ್ನುತ್ತಾರೆ.

ಬಾಬು ಅವರ ಫ್ರೇಂ ವರ್ಕ್ಸ್ ಮಳಿಗೆಗೆ ಪುನೀತ್ ರಾಜ್‌ಕುಮಾರ್ ಸಹ ಭೇಟಿ ನೀಡಿ ತಂದೆಯ ಅಪರೂಪದ ಚಿತ್ರಗಳನ್ನು ವೀಕ್ಷಿಸಿದ್ದಾರೆ.ಏಪ್ರಿಲ್ 24ರಂದು ಡಾ.ರಾಜ್‌ಕುಮಾರ್ ಅವರ ಹುಟ್ಟುಹಬ್ಬವನ್ನು ಅಖಿಲ ಕರ್ನಾಟಕ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘ ಅದ್ದೂರಿಯಾಗಿ ಆಚರಿಸಲು ಮುಂದಾಗಿದೆ. ಆ ದಿನ ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮಗಳನ್ನು ಅಭಿಮಾನಿಗಳು ಆಯೋಜಿಸಿದ್ದಾರೆ. ಅವರೊಂದಿಗೆ ಕಂಠೀರವ ಸ್ಟುಡಿಯೋ ಆವರಣದ ರಾಜ್‌ಕುಮಾರ್ ಪುಣ್ಯಭೂಮಿಯಲ್ಲಿ ಹುಟ್ಟುಹಬ್ಬ ಆಚರಿಸುತ್ತೇನೆ ಎಂದು ಸಂತೋಷದಿಂದ ಹೇಳುತ್ತಾರೆ ಬಾಬು.ಇಂಥ ಅಭಿಮಾನಿ ಬಾಬು ಅವರಿಗೆ ರಾಜ್‌ಕುಮಾರ್ ಅವರ ಒಂದು ಲಕ್ಷ ಫೋಟೊಗಳನ್ನು ಸಂಗ್ರಹಿಸಿ ಗಿನ್ನೆಸ್ ದಾಖಲೆ ಮಾಡಬೇಕೆಂಬ ಹಂಬಲವಿದೆ. ಜೊತೆಗೆ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರಿಗಾಗಿ ರಾಜ್ ಛಾಯಾಚಿತ್ರಗಳ ಪ್ರದರ್ಶನ ಆಯೋಜಿಸಬೇಕೆಂಬ ಬಯಕೆ ಕೂಡ ಇದೆ.ಬೆಳಿಗ್ಗೆ 11ರಿಂದ ರಾತ್ರಿ 10ರವರೆಗೆ ಅಂಗಡಿ ತೆರೆದಿರುತ್ತದೆ. ಬಾಬು ಅವರನ್ನು ಸಂಪರ್ಕಿಸಲು 94495 50971

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.