ಶುಕ್ರವಾರ, ಮೇ 7, 2021
26 °C
ಸಾಹಿತ್ಯ ಸಮ್ಮೇಳನದಲ್ಲಿ ಮುನ್ನೋಟ ತೆರೆದಿಟ್ಟ ಗೋಷ್ಠಿ

`ಅಭಿವೃದ್ಧಿಗೆ ಅವಕಾಶವಿದೆ; ಇಚ್ಛಾಶಕ್ತಿ ಬೇಕಿದೆ'

ಪ್ರಜಾವಾಣಿ ವಾರ್ತೆ/ ಎಂ.ಮಹೇಶ Updated:

ಅಕ್ಷರ ಗಾತ್ರ : | |

ದಾವಣಗೆರೆ (ಮುದೇನೂರು ಸಂಗಣ್ಣ ವೇದಿಕೆ):  ಜಿಲ್ಲೆಯಲ್ಲಿ ಪ್ರವಾಸೋದ್ಯಮ, ಕೈಗಾರಿಕೆ ಹಾಗೂ ಕೃಷಿ ಕ್ಷೇತ್ರ ಅಭಿವೃದ್ಧಿಪಡಿಸಲು ಬಹಳಷ್ಟು ಅವಕಾಶಗಳಿವೆ; ಈ ನಿಟ್ಟಿನಲ್ಲಿ ಸಂಬಂಧಿಸಿದವರು ಹಾಗೂ ಸರ್ಕಾರ ಇಚ್ಛಾಶಕ್ತಿ ತೋರಬೇಕು.- ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಬಾಪೂಜಿ ಸಭಾಂಗಣದಲ್ಲಿ ಭಾನುವಾರ 5ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಏರ್ಪಡಿಸಿದ್ದ `ದಾವಣಗೆರೆ ಜಿಲ್ಲೆಯ ಮುನ್ನೋಟ' ಗೋಷ್ಠಿಯಲ್ಲಿ ವ್ಯಕ್ತವಾದ ಒಟ್ಟಾರೆ ಆಶಯವಿದು.ಆಶಯ ಭಾಷಣ ಮಾಡಿದ ಎನ್.ಟಿ.ಎರ‌್ರಿಸ್ವಾಮಿ, 22 ಕೆರೆಗಳ ಏತ ನೀರಾವರಿ ಯೋಜನೆ ಶೀಘ್ರ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.`ಜಿಲ್ಲೆಯ ಪ್ರವಾಸೋದ್ಯಮ ಸಾಧ್ಯತೆ' ವಿಷಯ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಡಾ.ಕೆ.ರಾಮೇಶ್ವರಪ್ಪ ಮಾತನಾಡಿ, ಸಾಂಸ್ಕೃತಿಕ ಒಗ್ಗೂಡುವಿಕೆ ಅಭಿವೃದ್ಧಿ ಪಥ ನಿರ್ಮಾಣ ಮಾಡುತ್ತದೆ. ದಾವಣಗೆರೆಯಲ್ಲಿ ನೋಡಲು ಏನಿದೆ ಎಂಬ ಮಾತುಗಳು ಕೇಳಿಬರುತ್ತವೆ. ಇದು ಸರಿಯಲ್ಲ. ಒಬ್ಬ ಪ್ರವಾಸಿಗನಿಗೆ ಅಪ್ಯಾಯಮಾನವಾಗುವಷ್ಟು ಆಂತರಿಕ ಹಾಗೂ ಬಾಹ್ಯ ಸೌಂದರ್ಯದ ಲಕ್ಷಣಗಳು ಹಾಗೂ ಮನಸ್ಸಿನ ಮೇಲೆ ಪ್ರಭಾವ ಬೀರುವ ದಿವ್ಯ ಸದೃಶ ವಿಚಾರಗಳು ಇಲ್ಲಿವೆ ಎಂದು ಪ್ರತಿಪಾದಿಸಿದರು.ಏನೇನು ಅವಕಾಶ? : ದಾವಣಗೆರೆ, ಹರಿಹರ, ಹೊನ್ನಾಳಿ, ಚನ್ನಗಿರಿ ಭಾಗಗಳು ಮುಂಗಾರು ಸಂದರ್ಭದಲ್ಲಿ ಹಸಿರು ಹಾಸಿನಂತೆ ಕಂಗೊಳಿಸುತ್ತವೆ. ಇಲ್ಲಿ ತೆಂಕಣ ಗಾಳಿ ಬೀಸುವುದು ವಿಶೇಷಗಳಲ್ಲೊಂದು. ಹರಪನಹಳ್ಳಿ, ಜಗಳೂರು ಬರಪೀಡಿತ ಪ್ರದೇಶ, ಬಂಜರು ಎನ್ನುತ್ತಾರೆ. ಆದರೆ, ರಂಗಯ್ಯನದುರ್ಗ-ಚಿಗಟೇರಿ ಮಾರ್ಗವಾಗಿ ಸಂಚರಿಸಿದರೆ ಅಲ್ಲಿನ ಸಮೃದ್ಧ ಸೌಂದರ್ಯದ ಅರಿವಾಗುತ್ತದೆ.ಅಲ್ಲಿರುವ ರಂಗಯ್ಯನದುರ್ಗ ರಮ್ಯ ತಾಣಗಳಲ್ಲೊಂದು. ಸಮೃದ್ಧ ಸಸ್ಯ ವೈವಿಧ್ಯ ಹೊಂದಿರುವ ಜೋಳದಾಳದ ಅರಣ್ಯ ಪ್ರದೇಶವಿದೆ. ಇಲ್ಲಿನ ಮೌಲ್ಯ ಎಷ್ಟೋ ಮಂದಿಗೆ ಗೊತ್ತೇ ಇಲ್ಲ. ಇದನ್ನು ಮಲೆಮಹದೇಶ್ವರ ಬೆಟ್ಟದಂತೆ ಅಭಿವೃದ್ಧಿಪಡಿಸಲು ಅವಕಾಶಗಳಿವೆ. ಹೀಗಾಗಿ, ಜೋಳದಾಳ್ ಅರಣ್ಯವನ್ನು `ವನ್ಯಜೀವಿ ಧಾಮ' ಎಂದು ಘೋಷಿಸಬೇಕು ಎಂದರು.ಇಲ್ಲಿನ ಬಹುತೇಕ ಧಾರ್ಮಿಕ ಕ್ಷೇತ್ರಗಳು ಪ್ರವಾಸೋದ್ಯಮ ನಕ್ಷೆಯಲ್ಲಿ ಸೇರ್ಪಡೆ ಯಾಗದಿರುವುದು ದುರಂತ ಎಂದು ವಿಷಾದಿಸಿದರು.

ಜಿಲ್ಲೆಯ ಪ್ರವಾಸೋದ್ಯಮ ಸಾಧ್ಯತೆಗಳ ಬಗ್ಗೆ 7 ಅಂಶಗಳನ್ನು ನೀಡಿದರು. ಐತಿಹಾಸಿಕ, ಧಾರ್ಮಿಕ, ಪ್ರಾಕೃತಿಕ ಮತ್ತು ವನ್ಯಜೀವಿ, ಸಾಹಸ ಮತ್ತು ಜಲ, ಕೃಷಿ, ವಾಣಿಜ್ಯ ಹಾಗೂ ವೈದ್ಯಕೀಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಬಹುದು. ಆದರೆ, ಬಹುತೇಕ ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಯಾಗಿಲ್ಲ. ದಾವಣಗೆರೆಗೆ ಬಂದವರು, ಸೂಳೆಕೆರೆ ನೋಡಿ ಹೋಗಬೇಕು ಎಂದುಕೊಳ್ಳುವಂಥ ವಾತಾವರಣ ನಿರ್ಮಿಸಬೇಕು ಎಂದು ಆಶಿಸಿದರು.ತಾಂತ್ರಿಕತೆ ಅಳವಡಿಸಿಕೊಳ್ಳಿ...

`ಕೃಷಿ- ಆಧುನಿಕ ದೃಷ್ಟಿಕೋನ' ವಿಷಯ ಕುರಿತು ಮಾತನಾಡಿದ ಡಾ.ಎಂ.ಜಿ.ಬಸವನಗೌಡ, `ನಮ್ಮೆಲ್ಲರನ್ನು ಸಲಹುವ ಭೂಮಿ ತಾಯಿ ಆರೋಗ್ಯದ ಮೇಲೇಕಿಷ್ಟು ಅಸಡ್ಡೆ ತೋರುತ್ತಿದ್ದೇವೆ ಎಂಬುದನ್ನು ಪ್ರಶ್ನಿಸಿ ಕೊಳ್ಳಬೇಕಿದೆ. ಆಗಾಗ ಮಣ್ಣಿನ ಪರೀಕ್ಷೆ ಮಾಡಿಸಿ, ಅದರಂತೆ ಕೃಷಿ ಕೈಗೊಳ್ಳಬೇಕು. ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳಬೇಕು. ಹಸಿರೆಲೆ ಗೊಬ್ಬರನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಬೇಕು. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ' ಎಂದು ಸಲಹೆ ನೀಡಿದರು.

 

ಬೆಳೆಗಾರರೇ `ಸರಕು ಆಸಕ್ತ ಗುಂಪು'ಗಳನ್ನು ಮಾಡಿಕೊಂಡರೆ ಬೆಳೆದ ಬೆಳೆಗೆ ಉತ್ತಮ ಬೆಲೆ ಪಡೆಯಬಹುದು. ಮೆಕ್ಕೆಜೋಳ ಸಂಸ್ಕರಣ ಘಟಕ ಸ್ಥಾಪನೆಗೆ ಅವಕಾಶವಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದಲ್ಲಿ ಕೃಷಿ ವಿಷಯ ಸೇರಿಸಬೇಕು. ದಾವಣಗೆರೆಯಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.ಅಧ್ಯಕ್ಷತೆ ವಹಿಸಿ `ಕೈಗಾರಿಕೆ, ವಾಣಿಜ್ಯ ಮತ್ತು ತಂತ್ರಜ್ಞಾನ ಸಾಧ್ಯತೆ' ವಿಷಯ ಕುರಿತು ಮಾತನಾಡಿದ ಕೈಗಾರಿಕೋದ್ಯಮಿ ಅಥಣಿ ಎಸ್. ವೀರಣ್ಣ, ಜಿಲ್ಲೆಯಲ್ಲಿ ಹಿಂದೆ ಎಂಟು ಹತ್ತಿ ಮಿಲ್‌ಗಳಿದ್ದವು. ಈ ಎರಡಕ್ಕಿಳಿದಿದೆ. ರಾಜಕೀಯ ಇಚ್ಛಾಶಕ್ತಿಯ ಕೊರತೆ ಕಾರಣದಿಂದ, ಜಿಲ್ಲೆಯಲ್ಲಿ ಕೈಗಾರಿಕಾ ಕ್ಷೇತ್ರ ಹಿಂದುಳಿದಿದೆ. ಸರ್ಕಾರ ಕೈಗಾರಿಕೆ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದರು.ಸರ್ಕಾರ, ್ಙ 1ಕ್ಕೆ 1 ಕಿ.ಲೋ. ಅಕ್ಕಿ ಕೊಡುವುದರಿಂದ ಕಾರ್ಮಿಕರ ಕೊರತೆ ಮತ್ತಷ್ಟು ಹೆಚ್ಚಾಗುತ್ತದೆ ಎಂದು ದೂರಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.