ಮಂಗಳವಾರ, ಮಾರ್ಚ್ 9, 2021
18 °C
ಮುಳುಗಡೆ ಕರಾಳ ಛಾಯೆಯಿಂದ ನರಳುತ್ತಿರುವ ಸಿಗಂದೂರು, ತುಮರಿ, ಕರೂರು

ಅಭಿವೃದ್ಧಿ ಎಂದರೆ ಅಣೆಕಟ್ಟು ಅಲ್ಲ: ಡಿಸೋಜ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಭಿವೃದ್ಧಿ ಎಂದರೆ ಅಣೆಕಟ್ಟು ಅಲ್ಲ: ಡಿಸೋಜ

ಕಾರ್ಗಲ್: ಶೈಕ್ಷಣಿಕವಾಗಿ ಸಾಧನೆ ಮಾಡುವ ವಿದ್ಯಾರ್ಥಿ ಪ್ರತಿಭೆ ಗುರುತಿಸಿ ಗೌರವಿಸುವ ಕೆಲಸ ನಾಗರಿಕ ಸಮಾಜದಿಂದ ಆಗಬೇಕು ಎಂದು  ಸಾಹಿತಿ ನಾ. ಡಿಸೋಜ ಅಭಿಪ್ರಾಯಪಟ್ಟರು.ಇಲ್ಲಿನ ಚೌಡೇಶ್ವರಿ ದೇವಾಲಯ ಸಂಕೀರ್ಣದ ಮಾರುತಿ ರಂಗ ಮಂದಿರದಲ್ಲಿ ಮಂಗಳವಾರ 16ನೇ ಪ್ರತಿಷ್ಠಾ ವರ್ಧಂತಿ ಉತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಪ್ರತಿಭಾ ಪುಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‘ನನ್ನ ಕಾರ್ಯಕ್ಷೇತ್ರ ಮತ್ತು ಕರ್ಮ ಕ್ಷೇತ್ರ ಕಾರ್ಗಲ್ ಆಗಿದ್ದು, ಇಲ್ಲಿಂದಲೇ ನಾನು ಸಾಹಿತ್ಯ ಕೃಷಿಯನ್ನು ಆರಂಭ ಮಾಡಿದೆ. ಇಲ್ಲಿನ ನೆಲ ಜಲ, ಗಿಡ ಮರಗಳು, ಪ್ರಾಣಿ ಪಕ್ಷಿಗಳು ಒಂದೊಂದು ಬಗೆಯಲ್ಲಿ ಮುಳುಗಡೆಯ ಕಥೆಯನ್ನು ನನ್ನ ತಲೆಯಲ್ಲಿ ತುಂಬಲು ಮತ್ತು ಸಾಹಿತ್ಯ ಆಸಕ್ತಿ ಮೂಡಲು ಕಾರಣವಾಯಿತು’ ಎಂದು ಗತ ಜೀವನವನ್ನು ಡಿಸೋಜ ನೆನಪಿಸಿಕೊಂಡರು.ಸರ್ಕಾರ ಅಭಿವೃದ್ಧಿ ಎಂದರೆ ಅಣೆಕಟ್ಟನ್ನು ಕಟ್ಟುವುದು ಮಾತ್ರ ಎಂದು ಭಾವಿಸಿದೆ. ಮುಳುಗಡೆ ಎಂದರೆ ಕೇವಲ ನೀರು ನಿಲ್ಲುವ ಎನ್ನುವ ಜಾಗ ಭ್ರಮೆ ಇದೆ. ಆದರೆ ನನ್ನ ಪ್ರಕಾರ ಮುಳುಗಡೆ ಎನ್ನುವುದು ಕೇವಲ ನೀರು ನಿಲ್ಲುವ ಜಾಗ ಅಲ್ಲ. ಒಂದು ಜನಾಂಗದ ಸಮಸ್ತ ಬದುಕು ಇಲ್ಲಿ ಮುಳುಗಡೆ ಆಗುತ್ತದೆ. ಒಂದು ಜನಾಂಗದ ಕಲೆ, ಸಂಸ್ಕೃತಿ, ಪರಿಸರ, ಗಿಡ ಮರಗಳು, ಪ್ರಾಣಿ ಪಕ್ಷಿಗಳು, ಭೂಮಿಯ ಮೇಲೆ ಇಟ್ಟ ಭಾವನಾತ್ಮಕವಾದ ಸಂಬಂಧಗಳು ಮುಳುಗಡೆ ಆಗುತ್ತದೆ. ಇದನ್ನು ಸರ್ಕಾರಗಳು ಗಂಭೀರವಾಗಿ ಅರಿತು ಕೊಳ್ಳಬೇಕು ಎಂದರು.ಮುಳುಗಡೆಯ ಕರಾಳ ಛಾಯೆಯಿಂದ ಇಂದಿಗೂ ನರಳುತ್ತಿರುವ ಸಿಗಂದೂರು, ತುಮರಿ, ಕರೂರು ಹೋಬಳಿ ಕೇಂದ್ರಗಳು  ಸರಿಯಾದ ರಸ್ತೆ ಇಲ್ಲದೇ ಪರದಾಡುತ್ತಿದ್ದಾರೆ. ಪ್ರತಿ ಸರ್ಕಾರಗಳು ಚುನಾವಣೆ ಬಂದ ಕೂಡಲೇ ತುಮರಿ ಸೇತುವೆ ಕಾಮಗಾರಿಗೆ ಶಿಲಾನ್ಯಾಸ

ಮಾಡುತ್ತಾರೆ. ನಂತರ ಆ ವಿಚಾರ ಸತ್ತು ಹೋಗುತ್ತಿದೆ. ಇದು ಸರಿ ಅಲ್ಲ, ಪ್ರಜಾ ಪ್ರಭುತ್ವವ್ಯವಸ್ಥೆಗೆ ವಿರುದ್ಧವಾಗಿ ಜನ ದಂಗೆ ಏಳುವ ಸ್ಥಿತಿಯನ್ನು ಸರ್ಕಾರ ತಂದು ಕೊಳ್ಳಬಾರದು ಎಂದು ಪರೋಕ್ಷವಾಗಿ ಎಚ್ಚರಿಸಿದರು.ಚೌಡೇಶ್ವರಿ ಪ್ರತಿಷ್ಠಾನದ ಕಾರ್ಯದರ್ಶಿ ಎಸ್.ಎಂ.ಪೈ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟಿನ ಉಪಾಧ್ಯಕ್ಷ ಅಜಿತ್ ಎಸ್ ಮಹಾಲೆ ಉಪಸ್ಥಿತರಿದ್ದರು.ನಾ. ಡಿಸೋಜ ದಂಪತಿಯನ್ನು  ಪ್ರತಿಷ್ಠಾನದ ವತಿಯಿಂದ ಶಿವಾನಂದ ಪ್ರಭು ಮತ್ತು ಶಿಲ್ಪಾ ಎಸ್ ಪ್ರಭು

ಸನ್ಮಾನಿಸಿದರು.ಸತೀಶ್ ಮಹಾಲೆ ವಂದಿಸಿದರು. ಟಿ.ಸುರೇಶ್ ಕಾರ್ಯಕ್ರಮ ನಿರೂಪಿಸಿದರು. ಮೋಹನ್ ಎಂ ಪೈ ಪ್ರಾಸ್ತಾವಿಕವಾಗಿ ಮಾತನಾಡಿದರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.