ಶುಕ್ರವಾರ, ಜುಲೈ 30, 2021
28 °C

ಅಭಿವೃದ್ಧಿ ಕಾಣದ ಕೈಗಾರಿಕೆ ವಲಯ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶೇಷ ವರದಿ

ಬಂಗಾರಪೇಟೆ:
ಕೈಗಾರಿಕಾಭಿವೃದ್ಧಿಗೆ ವಿಫುಲ ಅವಕಾಶಗಳಿದ್ದರೂ ತಾಲ್ಲೂಕಿನ ಕೈಗಾರಿಕಾ ವಲಯ ಸಾಕಷ್ಟು ಹಿಂದುಳಿದ ಪರಿಣಾಮ ಇಲ್ಲಿನ ಕಾರ್ಮಿಕರಿಗೆ ಅಭಿವೃದ್ಧಿ ಮರೀಚಿಕೆಯಾಗಿ ಉಳಿದಿದೆ.ಕಾರ್ಮಿಕ ಹಕ್ಕು ಪ್ರತಿಪಾದನೆ, ಚಳವಳಿಯಲ್ಲಿ ತನ್ನದೇ ಕೊಡುಗೆಯನ್ನು ನೀಡಿರುವ ತಾಲ್ಲೂಕಿನವರೇ ಆದ ಕ್ಯಾಸಂಬಳ್ಳಿ ಚಂಗಲರಾಯರೆಡ್ಡಿ ರಾಜ್ಯಮಟ್ಟದ ಕಾರ್ಮಿಕ ನಾಯಕರಾಗಿ ಗಮನ ಸೆಳೆದವರು. ಅವರು ಚಾಂಪಿಯನ್‌ ರೀವ್ಸ್‌ ಮೈನ್ಸ್‌ ಲೇಬರ್‌ ಅಸೋಸಿಯೇಷನ್‌ ಸಂಘದ ಅಧ್ಯಕ್ಷರಾಗಿದ್ದವರು. ಇಲ್ಲಿನ ಗಂಗಾಧರನ್‌ ಅವರ ನೇತೃತ್ವದಲ್ಲಿ  ಊರಿಗಾಂ ಮೈನ್ಸ್‌ ಲೇಬರ್‌ ಅಸೋಸಿಯೇಷನ್‌ ಸಂಘದಿಂದ ಕಾರ್ಮಿಕ ಹಕ್ಕುಗಳಿಗೆ ಒತ್ತಾಯಿಸಿ 1946 ರಲ್ಲಿಯೇ 78 ದಿನಗಳ ಸುಧೀರ್ಘ ದರಣಿ ನಡೆದಿತ್ತು.ಆಗ ಕ್ಷೇತ್ರದಲ್ಲಿ ಒಟ್ಟು 45 ಕೈಗಾರಿಕಾ ಘಟಕಗಳಿದ್ದವು. ಆದರೆ ಪ್ರಸ್ತುತ ಅವುಗಳಲ್ಲಿ ಕೇವಲ 35 ಮಾತ್ರ ಕಾರ್ಯನಿರ್ವಹಿಸುತ್ತಿವೆ. 15 ಅಕ್ಕಿ ಗಿರಣಿಗಳಲ್ಲಿ 13 ಕೆಲಸ ಮಾಡುತ್ತಿವೆ. 5 ಸಿದ್ಧ ಉಡುಪು ಘಟಕಗಳಿವೆ.

ಇಟ್ಟಿಗೆ, ಹೆಂಚು ಕಾರ್ಖಾನೆಗಳಿವೆ. ವರ್ಕ್‌ಶಾಪ್‌, ಹೋಟೆಲ್‌ಗಳಿವೆ.ಅವುಗಳಲ್ಲಿ ಬಹಳಷ್ಟು ಘಟಕಗಳಲ್ಲಿ ಶೌಚಾಲಯ, ಉಪಹಾರಗೃಹ, ವಿಶ್ರಾಂತಿ ಕೊಠಡಿ, ಚಿಕಿತ್ಸಾಲಯ, ಮಕ್ಕಳಿಗೆ ಶಿಶು ವಿಹಾರ, ಸಾರಿಗೆ ವ್ಯವಸ್ಥೆಗಳಿರಲಿ ಸಮರ್ಪಕ ವೇತನ, ಕನಿಷ್ಠ ವೇತನ, ಹೆರಿಗೆ ಸೌಕರ್ಯ, ಬೋನಸ್‌, ಕಾರ್ಮಿಕ ಕಲ್ಯಾಣ ನಿಧಿ, ಉಪಧನ, ಸಮಾನ ವೇತನ, ಪರಿಹಾರ ಸೌಲಭ್ಯಗಳು ಕೈಗೆಟುಕುತ್ತಿಲ್ಲ.2001 ನೇ ಜನಗಣತಿಯಂತೆ ತಾಲ್ಲೂಕಿನ ಜನಸಂಖ್ಯೆಯಲ್ಲಿ ಶೇ. 55.8 ಜನ ಮುಖ್ಯ ಕೆಲಸಗಾರರಾಗಿದ್ದರು. ಅವರ ಪೈಕಿ ಶೇ. 39.9 ಕೃಷಿ ವ್ಯವಸಾಯಗಾರರು, ಶೇ. 15.9 ಕೃಷಿ ಕಾರ್ಮಿಕರು, ಉಳಿದ ಶೇ. 44.2 ರಷ್ಟು ಜಾನುವಾರು, ಅರಣ್ಯ, ಮೀನುಗಾರಿಕೆ, ಬೇಟೆ, ಹಣ್ಣಿನ ತೋಟ, ಗಣಿಗಾರಿಕೆ, ಕೈಗಾರಿಕೆ, ನಿರ್ಮಾಣ, ವ್ಯಾಪಾರ-ವಾಣಿಜ್ಯ, ಸಾರಿಗೆ, ಸಂಗ್ರಹಣೆ, ಸಂಪರ್ಕ ಕ್ಷೇತ್ರಗಳಲ್ಲಿ ತೊಡಗಿದ್ದಾರೆ.ಬಹಳಷ್ಟು ಕಡೆ ಒತ್ತಾಯದ ದುಡಿತ, ದುಡಿಮೆಗೆ ಅನಾರೋಗ್ಯಕರ ವಾತಾವರಣ, ಪೌಷ್ಠಿಕ ಆಹಾರ, ವೈದ್ಯಕೀಯ ಸೌಲಭ್ಯ, ಶೈಕ್ಷಣಿಕ ಸೌಲಭ್ಯ ಕೊರತೆ, ಸಾಮಾಜಿಕ ಶೋಷಣೆ ಎದ್ದು ಕಾಣುವಂತಿದೆ.ಕೆಲಸ ಮಾಡುವುದಕ್ಕೆ ನಿರಾಕರಿಸುವುದು, ಬೀಗಮುದ್ರೆ ಬೆದರಿಕೆ ನಿರಂತರವಾಗಿದ್ದರೂ ಪರಿಹಾರ ಕ್ರಮಗಳಿಲ್ಲದೇ ಕಾರ್ಮಿಕರು ಹೊತ್ತು ಕೂಳಿಗಾಗಿ ದುಡಿಯುತ್ತಲೇ ಇದ್ದಾರೆ. ಕೈಗಾರಿಕೆ ತೆರೆಯಲು ಸರ್ಕಾರದಿಂದ ರಿಯಾಯಿತಿ ದರದಲ್ಲಿ ನೂರಾರು ಎಕರೆ ಜಮೀನು, ಅತ್ಯಲ್ಪ ದರದಲ್ಲಿ ಕೋಟ್ಯಂತರ ರೂಪಾಯಿ ಸಾಲ, ಪುನಃಶ್ಚೇತನಕ್ಕೆ ಪ್ರೋತ್ಸಾಹ ಧನ ದೊರೆತರೂ ಹಲವು ಕೈಗಾರಿಕೆಗಳನ್ನು ಮತ್ತೆ ಆರಂಭಿಸಿದ ಉದಾಹರಣೆಗಳೂ ಕಡಿಮೆ.ಕಾರ್ಮಿಕರ ಅಭ್ಯುದಯಕ್ಕಾಗಿ ಕೇಂದ್ರ ಸರ್ಕಾರ ಹತ್ತಾರು ಕಾಯಿದೆ, ಯೋಜನೆಗಳನ್ನು ಜಾರಿಗೆ ತಂದಿದೆ. 

ಅವುಗಳಲ್ಲಿ ಮುಖ್ಯವಾಗಿ ಟ್ರೇಡ್‌ ಯೂನಿಯನ್‌ ಕಾಯ್ದೆ, ಔದ್ಯೋಗಿಕ ವ್ಯಾಜ್ಯ ಕಾಯ್ದೆ, ವೇತನ ಪಾವತಿ ಕಾಯ್ದೆ, ಕನಿಷ್ಠ ವೇತನ ಕಾಯ್ದೆ,  ಹೆರಿಗೆ ಸೌಲಭ್ಯ ಕಾಯ್ದೆ,  ಕಾರ್ಮಿಕ ಕಲ್ಯಾಣ ನಿಧಿ ಕಾಯ್ದೆ, ಬೀಡಿ ಮತ್ತು ಸಿಗಾರ್‌ ಕಾರ್ಮಿಕ ಕಾಯ್ದೆ,  ಬಾಲಕಾರ್ಮಿಕರ ಕಾಯ್ದೆ ಇನ್ನು ಹಲವು  ಕಾಯ್ದೆಗಳು ಜಾರಿಗೆ ಬಂದಿದ್ದರೂ ತಾಲ್ಲೂಕಿನ ಕಾರ್ಮಿಕರ ಬಹಳಷ್ಟು ಬವಣೆಗಳಿಗೆ ಮುಕ್ತಿ ಸಿಕ್ಕಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.