ಶುಕ್ರವಾರ, ಮೇ 14, 2021
21 °C

ಅಮೆರಿಕ ಓಪನ್ ಟೆನಿಸ್: ಸ್ಟಾಸರ್ ಚಾಂಪಿಯನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್ (ಪಿಟಿಐ): ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಒಂಬತ್ತನೇ ಶ್ರೇಯಾಂಕದ ಆಸ್ಟ್ರೇಲಿಯಾದ ಆಟಗಾರ್ತಿ ಸಮಂತಾ ಸ್ಟಾಸರ್ ಇಲ್ಲಿ ನಡೆದ ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ವಿಭಾಗದ ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆದರು.ಈ ಮೂಲಕ ಚೊಚ್ಚಲ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯನ್ನು ಅವರು ಗೆದ್ದುಕೊಂಡರು. ಫೈನಲ್ ಪಂದ್ಯದಲ್ಲಿ ಸ್ಟಾಸರ್ ತೋರಿದ ಹೋರಾಟ ಮಾತ್ರ ಮೆಚ್ಚುವಂತದ್ದು. ಆತಿಥೇಯ ಅಮೆರಿಕದ ಸೆರೆನಾ ವಿಲಿಯಮ್ಸ ಅವರನ್ನು 6-2, 6-3ರ ನೇರ ಸೆಟ್‌ಗಳಿಂದ ಸೋಲಿಸಿ ಅಭಿಮಾನಿಗಳ ಸಂತಸಕ್ಕೆ ಸ್ಟಾಸರ್ ಕಾರಣವಾದರು. ಈ ಹೋರಾಟ ಒಂದು ಗಂಟೆ 13 ನಿಮಿಷಗಳ ಕಾಲ ನಡೆಯಿತು.ಸರ್ವಿಸ್ ಗೇಮ್‌ನಲ್ಲಿ ಸೆರೆನಾ ಆರಂಭದಲ್ಲಿಯೇ ತಪ್ಪು ಎಸಗಿದರು. ಈ ಅವಕಾಶವನ್ನು ಒಂಬತ್ತನೇ ಶ್ರೇಯಾಂಕದ ಆಟಗಾರ್ತಿ ಬಳಸಿಕೊಂಡರು. ಇದರಿಂದ ಅಮೆರಿಕ ಓಪನ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಮಹತ್ವದ ಅವಕಾಶವನ್ನು ಸೆರೆನಾ ಕಳೆದುಕೊಂಡರು.ಮೊದಲ ಸೆಟ್‌ನಲ್ಲಿ 3-2ರಲ್ಲಿ ಮುನ್ನಡೆಯಲ್ಲಿದ್ದ ಸೆರೆನಾ ತವರು ನೆಲದ ಅಭಿಮಾನಿಗಳ ಬೆಂಬಲದಲ್ಲಿ ಹುರುಪಿನಿಂದಲೇ ಆಡಿದರು. ಕೊನೆಯಲ್ಲಿ 12 ಪಾಯಿಂಟ್ಸ್ ಕಲೆ ಹಾಕಿ ಸ್ಟಾಸರ್ ಮುನ್ನಡೆ ಸಾಧಿಸಿದರು. ಮ್ಯಾರಥಾನ್ ಹೋರಾಟ ಕಂಡು ಬಂದ ಪಂದ್ಯದಲ್ಲಿ ಅತ್ಯುತ್ತಮ ಏಸ್‌ಗಳನ್ನು ಸಿಡಿಸಿದರು.ಉತ್ತಮ ಪ್ರದರ್ಶನ ನೀಡಿದ್ದ ಸೆರೆನಾ ಫೈನಲ್ ಪಂದ್ಯ ಹೊರತು ಪಡಿಸಿದರೆ ಯಾವುದೇ ಸೆಟ್‌ನಲ್ಲಿ ಸೋಲು ಕಂಡಿರಲಿಲ್ಲ. 29 ವರ್ಷದ ಈ ಆಟಗಾರ್ತಿ ಈ ಟೂರ್ನಿಯಲ್ಲಿ ಗೆದ್ದಿದ್ದರೆ 14ನೇ ಸಲ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಅವರ ಮಡಿಲು ಸೇರುತ್ತಿತ್ತು.ಅಮೆರಿಕ ಓಪನ್ ಟೂರ್ನಿಯಲ್ಲಿ ಮೂರು ಬಾರಿ ಚಾಂಪಿಯನ್ ಆಗಿರುವ ಸೆರೆನಾ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಆಟಗಾರ್ತಿಗೆ ಯಾವ ಹಂತದಲ್ಲಿಯೂ ಸವಾಲು ಎನಿಸಲಿಲ್ಲ. ಅರ್ಥರ್ ಆ್ಯಷ್ ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ 23 ಸಾವಿರ ಅಭಿಮಾನಿಗಳ ನಡುವೆ ಆತಿಥೇಯ ಆಟಗಾರ್ತಿಗೆ ಸೋಲುಣಿಸುತ್ತಿದ್ದಂತೆಯೇ ಸ್ಟಾಸರ್ `ಸ್ಟಾರ್~ ಆಗಿ ಮರೆದರು.ಈ ಮೂಲಕ  31 ವರ್ಷಗಳ ನಂತರ ಸಿಂಗಲ್ಸ್‌ನಲ್ಲಿ ಮಹತ್ವದ ಪ್ರಶಸ್ತಿಯೊಂದನ್ನು ಆಸ್ಟ್ರೇಲಿಯಾಕ್ಕೆ ತಂದು ಕೊಟ್ಟರು. ಸ್ಟ್ರಾಸರ್ ಆಡಿದ ಎರಡನೇ ಗ್ರ್ಯಾನ್ ಸ್ಲಾಮ್ ಟೂರ್ನಿಯ ಫೈನಲ್ ಪಂದ್ಯವಿದು. ಕಳೆದ ವರ್ಷ ಫ್ರೆಂಚ್ ಓಪನ್ ಟೂರ್ನಿಯಲ್ಲಿ ರನ್ನರ್ ಅಪ್ ಆಗಿದ್ದರು.  ಈ ವರ್ಷದಲ್ಲಿ ಮಹತ್ವದ ಪ್ರಶಸ್ತಿ ಜಯಿಸುತ್ತಿರುವ ಮೂರನೇ ಮೊದಲ ಆಟಗಾರ್ತಿ ಎನಿಸಿದರು. ಫ್ರೆಂಚ್ ಓಪನ್ ಟೂರ್ನಿಯಲ್ಲಿ ಚೀನಾದ ಲೀ ನಾ, ವಿಂಬಲ್ಡನ್ ಟೂರ್ನಿಯಲ್ಲಿ ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ ಚೊಚ್ಚಲ ಪ್ರಶಸ್ತಿ ಜಯಿಸಿದ್ದರು.`ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ್ತಿ ನಾನೇ ಆಗಿದ್ದೆ. ಆದರೂ ನಿರಾಸೆ ಅನುಭವಿಸಬೇಕಾಯಿತು. ಇದು ಈಗ ಮುಗಿದ ವಿಷಯ~ ಎಂದ ಸೆರೆನಾ ಮ್ಯಾಚ್ ಅಂಪೈರ್ ಇವಾ ಅಸ್ದೆರಿಕಾ ಕೆಲ ತಪ್ಪು ನಿರ್ಣಯ ನೀಡಿದರು ಎಂದು ಟೀಕಿಸಿದರು. `ಸ್ಟಾಸರ್ ಅತ್ಯುತ್ತಮವಾಗಿ ಆಡಿದರು. ಆಕೆ ಆಡಿದ ರೀತಿ ಅತ್ಯುತ್ತಮ ಎಂದು ಶ್ಲಾಘಿಸಿದರು.`ಏನು ಹೇಳಬೇಕು ಎಂಬುದು ತಿಳಿಯುತ್ತಿಲ್ಲ. ಜೀವನದ ಅತ್ಯುತ್ತಮ ದಿನಗಳಲ್ಲಿ ಇದು ಒಂದು. ಕನಸೋ ನನಸೋ ಗೊತ್ತಾಗುತ್ತಿಲ್ಲ~ ಎಂದು ಸ್ಟಾಸರ್ ಭಾವುಕರಾಗಿ ನುಡಿದರು. 1980ರಲ್ಲಿ ವಿಂಬಲ್ಡನ್ ಟೂರ್ನಿಯ ಸಿಂಗಲ್ಸ್‌ನಲ್ಲಿ ಆಸ್ಟ್ರೇಲಿಯಾ ಇವೊನೆ ಗೂಲಾಗೊಂಗ್ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಜಯಿಸಿದ್ದರು. ಈಗ 31 ವರ್ಷಗಳ ನಂತರ ಸ್ಟಾಸರ್ ಈ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ 1973ರಲ್ಲಿ ಮಾರ್ಗರೇಟ್ ಕೋರ್ಟ್‌ನಲ್ಲಿ ಆಸ್ಟ್ರೇಲಿಯಾದ ಆಟಗಾರ್ತಿ ಪ್ರಶಸ್ತಿ ಗೆದ್ದಿದ್ದರು.ಅಭಿನಂದನೆಗಳ ಮಹಾಪೂರ: ಚೊಚ್ಚಲ ಅಮೆರಿಕ ಓಪನ್ ಪ್ರಶಸ್ತಿ ಜಯಿಸಿರುವ ಸ್ಟಾಸರ್ ಸಾಧನೆಗೆ ಅಭಿಮಾನಿಗಳಿಂದ, ಪ್ರಧಾನಿ. ಕ್ರೀಡಾಸಚಿವ ಹಾಗೂ ಕುಟುಂಬ ವರ್ಗದವರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.ಆಸ್ಟ್ರೇಲಿಯಾ ಪ್ರಧಾನಿ ಜುಲಿಯಾ ಗಿಲಾರ್ಡ್ ಹಾಗೂ ಕ್ರೀಡಾ ಸಚಿವ ಮಾರ್ಕ್ ಅಬೀಬ್ ಈ ಟೆನಿಸ್ ಆಟಗಾರ್ತಿಗೆ ಅಭಿನಂದನೆ ಸಲ್ಲಿಸಿದ್ದಾರೆ. `ಕೌಶಲಯುತ ಆಟ ಪ್ರದರ್ಶಿಸಿದ ಸ್ಟಾಸರ್ ಇಡೀ ರಾಷ್ಟ್ರವೇ ಸಂಭ್ರಮಿಸುವಂತ ಸಾಧನೆ ಮಾಡಿದ್ದಾರೆ. ಕ್ರೀಡಾ ಕ್ಷೇತ್ರದ ಭವಿಷ್ಯದಲ್ಲಿ ನಮ್ಮ ದೇಶ ಇನ್ನೂ ಹೆಚ್ಚಿನ ಸಾಧನೆ ಮಾಡಲು ಇದು ಮುನ್ನುಡಿ~ ಎಂದು ಪ್ರಧಾನಿ ಹಾಗೂ ಕ್ರೀಡಾ ಸಚಿವ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಹಬರ್-ರೈಮೆಂಡ್ ಜೋಡಿಗೆ ಪ್ರಶಸ್ತಿ: ಇದೇ ಟೂರ್ನಿಯ ಮಹಿಳೆಯರ ವಿಭಾಗದ ಡಬಲ್ಸ್‌ನಲ್ಲಿ ಅಮೆರಿಕದ ಲಿಜಿಯಲ್ ಹಬರ್-ಲೀಸಾ ರೈಮಂಡ್ ಜೋಡಿ 4-6, 7-6, 7-6ರಲ್ಲಿ ಅಮೆರಿಕದ ವಿನಿಯಾ ಕಿಂಗ್ ಹಾಗೂ ಕಜಕಸ್ತಾನದ ಯರಸ್ಲೊವಾ ಶಡೊವಾ ಜೋಡಿಯನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.