ಶುಕ್ರವಾರ, ಏಪ್ರಿಲ್ 23, 2021
21 °C

ಅಮೆರಿಕ ರಾಜಕೀಯದಲ್ಲಿ ಭಾರತೀಯರ ಹಿಡಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಐಎಎನ್‌ಎಸ್):  ಅಮೆರಿಕ ರಾಜಕೀಯದಲ್ಲಿ ಇತ್ತೀಚೆಗೆ ಭಾರತೀಯ ಮೂಲದ ಅಮೆರಿಕನ್ನರ ಹಿಡಿತ ಹೆಚ್ಚುತ್ತಿದ್ದು, ನವೆಂಬರ್ 6ರಂದು ನಡೆಯಲಿರುವ ಬಹು ಪೈಪೋಟಿಯ ಅಮೆರಿಕ ಅಧ್ಯಕ್ಷರ ಚುನಾವಣೆಯಲ್ಲಿ ಯಾರೇ ಗೆಲ್ಲಲಿ ಹೊಸ ಸರ್ಕಾರದಲ್ಲಿ ಭಾರತೀಯ ಮೂಲದವರು ಮಹತ್ವದ ಪಾತ್ರ ವಹಿಸುವುದು ಖಚಿತವಾಗಿದೆ.ಬರಾಕ್ ಒಬಾಮ ಅವರ ಸರ್ಕಾರದಲ್ಲಿ ದಾಖಲೆ ಸಂಖ್ಯೆಯಲ್ಲಿ ಭಾರತೀಯರು ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ ಅಧ್ಯಕ್ಷೀಯ ಚುನಾವಣೆಗೆ ಮತ್ತೊಮ್ಮೆ ಒಬಾಮ ಹೆಸರು ಸೂಚಿಸುವ ಮುನ್ನ ಡೆಮಾಕ್ರಟಿಕ್ ಪಕ್ಷದ ಸಮಾವೇಶದಲ್ಲಿ ಭಾರತೀಯ ಮೂಲದ ಅಮೆರಿಕನ್ನರ ಗುಂಪಿನ ಕೊಡುಗೆಯನ್ನು ಶ್ಲಾಘಿಸಲಾಗಿತ್ತು.ಮಿಟ್ ರೋಮ್ನಿ ಅಭ್ಯರ್ಥಿಯಾಗಿರುವ ರಿಪಬ್ಲಿಕನ್ ಪಕ್ಷ ಸಹ ಇಬ್ಬರು ಭಾರತೀಯ ಮೂಲದ ಗವರ್ನರ್‌ಗಳನ್ನು ಹೊಂದಿರುವುದಕ್ಕೆ ಹೆಮ್ಮೆ ಪಡುತ್ತಿದೆ. ಲೂಸಿಯಾನಾ ಗವರ್ನರ್ ಬಾಬಿ ಜಿಂದಾಲ್ ಹಾಗೂ ಸೌತ್ ಕೆರೋಲಿನಾ ಗವರ್ನರ್ ನಿಕ್ಕಿ ಹ್ಯಾಲೆ ರಿಪಬ್ಲಿಕನ್ ಪಕ್ಷದಲ್ಲಿ ಪ್ರಭಾವಿಗಳಾಗಿದ್ದು, ಮಿಟ್ ರೋಮ್ನಿ ಜತೆಯಲ್ಲಿ ಉಪಾಧ್ಯಕ್ಷರ ಸ್ಥಾನಕ್ಕೆ ಸ್ಪರ್ಧಿಸಲು ಈ ಇಬ್ಬರ ಹೆಸರು ಕೇಳಿ ಬಂದಿತ್ತು.ಅಮೆರಿಕದಲ್ಲಿ 30 ಲಕ್ಷಕ್ಕೂ ಹೆಚ್ಚು ಭಾರತೀಯ ಮೂಲದವರಿದ್ದು, ಡೆಮಾಕ್ರಟಿಕ್ ಹಾಗೂ ರಿಪಬ್ಲಿಕನ್ ಪಕ್ಷಗಳೆರಡು ಈ ಗುಂಪನ್ನು ಒಲೈಸಲು ಕಸರತ್ತು ಮಾಡುತ್ತಿವೆ. ಒಬಾಮ ಮತ್ತು ರೋಮ್ನಿ ನಡುವೆ ತೀವ್ರ ಹಣಾಹಣಿ ಖಚಿತವಾಗಿರುವುದರಿಂದ ಮತದಾರರ ಪಟ್ಟಿಯಲ್ಲಿರುವ 5 ಲಕ್ಷ ಭಾರತೀಯರು ಚುನಾವಣೆಯ ದಿಕ್ಕು ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ.ವಾಷಿಂಗ್ಟನ್, ನ್ಯೂಯಾರ್ಕ್ ಹಾಗೂ ಪಶ್ಚಿಮ ಕರಾವಳಿಗಳಲ್ಲಿ ಭಾರತೀಯರಿಗಾಗಿಯೇ ಹೊರಡುವ ಪತ್ರಿಕೆಗಳಲ್ಲಿ ಒಬಾಮ ಮತ್ತು ರೋಮ್ನಿ ಬಣಗಳು ಪೂರ್ಣ ಪುಟದ ಜಾಹೀರಾತು ನೀಡಿವೆ.`ಬರಾಕ್ ಒಬಾಮ ಕೆಲವರಿಗೆ ಮಾತ್ರ ಅಧ್ಯಕ್ಷರಲ್ಲ. ಅವರು ನಮಗೆಲ್ಲರಿಗಾಗಿ ಹೋರಾಡುತ್ತಾರೆ~ ಎಂದು ಈ ಜಾಹೀರಾತಿನಲ್ಲಿ ಹೇಳಲಾಗಿದೆ. ಹಿಂದಿ ಭಾಷೆಯಲ್ಲಿ ಸಹ ಈ ಜಾಹೀರಾತುಗಳನ್ನು ನೀಡಲಾಗುತ್ತಿದೆ.`ಭವ್ಯ ಅಮೆರಿಕದ ಕನಸು ಕಾಣುತ್ತಿರುವವರೆಲ್ಲ ರೋಮ್ನಿಗೆ ಮತ ಹಾಕಿ. ಅಮೆರಿಕವನ್ನು ಮತ್ತಷ್ಟು ಬಲಗೊಳಿಸೋಣ~ ಎಂಬ ಜಾಹೀರಾತು ಸಹ ಉತ್ತರ ಕ್ಯಾಲಿಫೋರ್ನಿಯಾ ಭಾಗದಲ್ಲಿ ರಾರಾಜಿಸುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.