ಶನಿವಾರ, ಜನವರಿ 25, 2020
28 °C

ಅಮೆರಿಕ ರಾಜತಾಂತ್ರಿಕರ ರಕ್ಷಣೆಗೆ ಕತ್ತರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಅಮೆರಿಕದ ಕೆಲವು ಶ್ರೇಣಿಯ ರಾಜ­ತಾಂತ್ರಿಕ ಅಧಿಕಾರಿಗಳ ರಕ್ಷಣೆಯನ್ನು ಭಾರತ ಸರ್ಕಾರ ಕಡಿತಗೊಳಿಸಿದೆ. ಹಾಗೆಯೇ ಅವರ ಕುಟುಂಬ ಸದಸ್ಯರ ಎಲ್ಲ ರೀತಿಯ ರಾಜತಾಂತ್ರಿಕ ರಕ್ಷಣೆಯನ್ನು ರದ್ದುಪಡಿಸಿದೆ.ಭಾರತದ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಪ್ರಕರಣಕ್ಕೆ ಕಠಿಣ ಪ್ರತಿ ಕ್ರಮದ ಭಾಗವಾಗಿ ಈ ಕ್ರಮ­ಗಳನ್ನು ಕೈಗೊಳ್ಳಲಾಗಿದೆ. ಇತ್ತೀಚೆಗೆ, ವೀಸಾ ವಂಚನೆ ಪ್ರಕರಣದಲ್ಲಿ ದೇವ­ಯಾನಿ ಅವರನ್ನು ಬಂಧಿಸಿ, ಅಪಮಾನಕರ ದೇಹ ಶೋಧಕ್ಕೆ ಒಳಪಡಿಸಲಾಗಿತ್ತು. ಭಾರತದಲ್ಲಿರುವ ಅಮೆರಿಕದ ನಾಲ್ಕು ಕಾನ್ಸುಲ್‌ ಕಚೇರಿಗಳ ಅಧಿಕಾರಿಗಳಿಗೆ ಹೊಸ ಗುರುತು ಚೀಟಿಗಳನ್ನು ನೀಡಲಾಗುವುದು.‘ಈ ಗುರುತು ಚೀಟಿಗಳ ಪ್ರಕಾರ, ಈ ಅಧಿಕಾರಿಗಳ ರಾಜತಾಂತ್ರಿಕ ರಕ್ಷಣೆ ಕಡಿತಗೊಳ್ಳಲಿದ್ದು, ಗಂಭೀರ ಪ್ರಕರಣ­ಗಳಲ್ಲಿ ಅವರಿಗೆ  ರಕ್ಷಣೆ ದೊರೆಯು­ವುದೇ ಇಲ್ಲ. ’ ಅಮೆರಿಕದಲ್ಲಿರುವ ಭಾರತೀಯ ಕಾನ್ಸುಲ್‌ ಅಧಿಕಾರಿಗಳಿಗೆ ನಿರ್ಬಂಧಿತ ರಕ್ಷಣೆ ಮಾತ್ರ ಇರುವುದಕ್ಕೆ ಪ್ರತಿಯಾಗಿ ಭಾರತ ಸರ್ಕಾರ ಈ ಕ್ರಮ ಕೈಗೊಂಡಿದೆ.

ಅಮೆರಿಕದ ಕಾನ್ಸುಲ್‌ ಅಧಿಕಾರಿಗಳ ಕುಟುಂಬದ ಸದಸ್ಯರ ರಾಜತಾಂತ್ರಿಕ ಗುರುತು ಪತ್ರಗಳನ್ನು ರದ್ದು ಪಡಿಸ­ಲಾಗಿದೆ. ಅಮೆರಿಕದಲ್ಲಿರುವ ಭಾರ­ತೀಯ ಕಾನ್ಸುಲ್‌ ಅಧಿಕಾರಿಗಳ ಕುಟುಂಬ ಸದಸ್ಯರಿಗೆ ಇಂತಹ ಯಾವುದೇ ಅನುಕೂಲಗಳನ್ನು ಅಮೆರಿಕ ಸರ್ಕಾರ ಒದಗಿಸುತ್ತಿಲ್ಲ.ವೀಸಾ ವಂಚನೆ ಪ್ರಕರಣದಲ್ಲಿ, ಭಾರತದ ಹಿರಿಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರ ಬಂಧನ ಮತ್ತು ಅಪಮಾನಕರ ದೇಹ ಶೋಧದ ನಂತರ ಭಾರತ ಸಿಟ್ಟಿನಿಂದಲೇ ಪ್ರತಿಕ್ರಿಯೆ ನೀಡುತ್ತಿದೆ. ಅಮೆರಿಕದ ರಾಜತಾಂತ್ರಿಕ ಅಧಿಕಾರಿಗಳಿಗೆ ನೀಡಲಾಗುತ್ತಿದ್ದ ಹಲವು ಅನುಕೂಲಗಳನ್ನು ಹಿಂದಕ್ಕೆ ಪಡೆಯಲಾಗಿದೆ.ರಾಜತಾಂತ್ರಿಕ ರಕ್ಷಣೆ ಮತ್ತು ಇತರ ಅನುಕೂಲಗಳ ಪರಾಮರ್ಶೆಗಾಗಿ ಅಮೆ­ರಿಕದ ಎಲ್ಲ ಕಾನ್ಸುಲ್‌ ಅಧಿಕಾರಿಗಳು ಮತ್ತು ಅವರ ಕುಟುಂಬದ ಸದಸ್ಯರ ಗುರುತು ಪತ್ರಗಳನ್ನು ಹಿಂದಿರುಗಿಸಲು ಸೋಮವಾರದವರೆಗೆ ಗಡುವು ನೀಡ­ಲಾಗಿತ್ತು. ಗಡುವು ಅಂತ್ಯಗೊಂಡಿರುವ ಹಿನ್ನೆಲೆಯಲ್ಲಿ ದೃಢ ಕ್ರಮಗಳನ್ನು ಕೈಗೊಳ್ಳಲು ಭಾರತ ಸರ್ಕಾರ ನಿರ್ಧರಿಸಿದೆ.

ಪ್ರತಿಕ್ರಿಯಿಸಿ (+)