ಶನಿವಾರ, ಏಪ್ರಿಲ್ 10, 2021
32 °C

ಅರಕಲಗೂಡು, ಶನಿವಾರಸಂತೆ, ಕೊಡ್ಲಿಪೇಟೆಯಲ್ಲಿ ಲಘು ಭೂಕಂಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರಕಲಗೂಡು/ಸೋಮವಾರಪೇಟೆ: ಹಾಸನ ಜಿಲ್ಲೆ ಅರಕಲಗೂಡು ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮಗಳು ಹಾಗೂ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ, ಕೊಡ್ಲಿಪೇಟೆ ಹೋಬಳಿಗಳಲ್ಲಿ ಗುರುವಾರ ಮುಂಜಾನೆ 6.20 ರಲ್ಲಿ ಲಘು ಭೂಕಂಪನದ ಅನುಭವವಾಗಿದೆ. ಇದರಿಂದ ಈ ಭಾಗದ ಜನತೆ ಕೆಲಹೊತ್ತು ಭಯಭೀತರಾಗಿದ್ದರು.ಅರಕಲಗೂಡು ವರದಿ: ಪಟ್ಟಣದ ಸುತ್ತಲಿನ ಸುಮಾರು 20 ಕಿ.ಮೀ ವ್ಯಾಪ್ತಿಯಲ್ಲಿ ಗುರುವಾರ ಬೆಳಿಗ್ಗೆ ಭೂಮಿ ಕಂಪಿಸಿ ಜನರಲ್ಲಿ ಭೀತಿ ಮೂಡಿಸಿತು. ಬೆಳಿಗ್ಗೆ 6.20 ರಲ್ಲಿ ಕೆಲ ಕ್ಷಣ ಭೂಮಿ ಕಂಪಿಸಿದ ಅನುಭವ ಜನರಿಗೆ ಆಯಿತು. ಮನೆಗಳಲ್ಲಿ ಜೋಡಿಸಿದ್ದ ಪಾತ್ರೆಗಳು ನೆಲಕ್ಕುರುಳಿದವು. ಮನೆಯಲ್ಲಿದ್ದವರಿಗೆ ಜೋಲಿ ಹೊಡೆದ ಅನುಭವವಾಯಿತು. ಇದರಿಂದ ಗಾಬರಿಗೊಂಡ ಜನತೆ ಮನೆಯಿಂದ ಹೊರಗೆ ಓಡಿಬಂದರು.ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.6 ರಷ್ಟು ದಾಖಲಾಗಿದೆ. ಭೂಕಂಪನದ ಕೇಂದ್ರ ತಾಲ್ಲೂಕಿನ ಮುದಿಗೆರೆ ಗ್ರಾಮ ಎಂದು ಗುರುತಿಸಲಾಗಿದೆ. ಹೇಮಾವತಿ ಜಲಾಶಯದ ಹಿನ್ನೀರಿನ ಸಮೀಪ ಇರುವ ಈ ಗ್ರಾಮದಲ್ಲಿ ಕಂಪನ ಸಂಭವಿಸುತ್ತಿದ್ದಂತೆ ಜನರು ಆತಂಕಕ್ಕೆ ಒಳಗಾದರು. ಗ್ರಾಮದ ಮೂರು ಮನೆಗಳಲ್ಲಿ ಸಣ್ಣ ಪ್ರಮಾಣದ ಬಿರುಕು ಕಾಣಿಸಿಕೊಂಡಿದೆ.ಬೀಜಘಟ್ಟ, ಮಲ್ಲಿಪಟ್ಟಣ, ವಿಜಾಪುರ ಅರಣ್ಯಗ್ರಾಮ, ಹುಲಿಕಲ್, ಕತ್ತಿಮಲ್ಲೇನಹಳ್ಳಿ, ಕೆಲ್ಲೂರು, ಸಂತೆಮರೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಜನರು ತಿಳಿಸಿದ್ದಾರೆ.

ಸಕಲೇಶಪುರ ಉಪವಿಭಾಗಾಧಿಕಾರಿ ಪಲ್ಲವಿ ಅಕುರಾತಿ, ತಹಶೀಲ್ದಾರ್ ಜಗದೀಶ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಘಟನೆ ನಡೆದ ಗ್ರಾಮಗಳಿಗೆ ತೆರಳಿ ಪರಿಶೀಲನೆ ನಡೆಸಿದರು.ಸೋಮವಾರಪೇಟೆ ವರದಿ: ಹಾಸನ ಜ್ಲ್ಲಿಲೆಯ ಗಡಿಯಲ್ಲಿರುವ ಶನಿವಾರಸಂತೆ ಹಾಗೂ ಕೊಡ್ಲಿಪೇಟೆ ಹೋಬಳಿಯ ಹಲವು ಕಡೆಗಳಲ್ಲಿ ಗುರುವಾರ ಬೆಳಿಗ್ಗೆ 6.20ರ ಸುಮಾರಿಗೆ ಲಘು ಭೂಕಂಪನ ಅನುಭವವಾಗಿದೆ.

`ಭೂಮಿಯೊಳಗೆ ಗುಡುಗುಡು ಶಬ್ದವಾಯಿತು. ಪಾತ್ರೆಗಳು, ಮನೆಯ ಬಾಗಿಲುಗಳು ಅಲುಗಾಡಿದ ಅನುಭವವಾಯಿತು. ಕೂಡಲೇ ಮನೆಮಂದಿಯೆಲ್ಲ ಹೊರಗೆ ಓಡಿಬಂದೆವು~ ಎಂದು ಶನಿವಾರಸಂತೆ ಹೋಬಳಿ ಬೀಟಿಕಟ್ಟೆಯ ಕೀರ್ತಿ ಮುತ್ತಣ್ಣ ಹೇಳಿದರು.ಹಾಸನ ಜಿಲ್ಲೆಯ ಅರಕಲುಗೂಡು ತಾಲ್ಲೂಕಿಗೆ ಹೊಂದಿಕೊಂಡ ಗಡಿ ಗ್ರಾಮಗಳಲ್ಲಿ ಹೆಚ್ಚಿನ ಜನರಿಗೆ ಭೂಕಂಪನದ ಅನುಭವವಾಗಿದೆ. ಹಂಡ್ಲಿ, ಕಿತ್ತೂರು, ಕಟ್ಟೆಪುರ, ನಿಲುವಾಗಿಲು, ಬೆಸ್ಸೂರು ಗ್ರಾಮಗಳಲ್ಲಿನ ಜನರು ಭೂಕಂಪನವಾಗಿರವುದಾಗಿ ಖಾತ್ರಿ ಪಡಿಸಿದ್ದಾರೆ.ಮೆಣಸ, ನಿಡ್ತ, ಆಲೂರು ಸಿದ್ದಾಪುರ, ಬಾಣಾವಾರ, ಸಂಗಯ್ಯನ ಪುರ ಹಾಗೂ ಗೋಣಿಮರೂರು ಗ್ರಾಮಗಳಲ್ಲಿ ಜನರಿಗೂ ಅನುಭವವಾಗಿದೆ.ಸೋಮವಾರಪೇಟೆ, ಮಾದಾಪುರ, ಶಾಂತಳ್ಳಿ, ಕುಶಾಲನಗರ ಹಾಗೂ ಸುಂಠಿಕೊಪ್ಪ ಹೋಬಳಿಗಳಲ್ಲಿ ಭೂಕಂಪನವಾಗಿರುವ ವರದಿಯಾಗಿಲ್ಲ.ನಡುಗಿದ ನೆಲ, ಆತಂಕಗೊಂಡ ಜನ

ಶನಿವಾರಸಂತೆ: ಶನಿವಾರಸಂತೆ ಹೋಬಳಿಯಲ್ಲಿ ಗುರುವಾರ ಬೆಳಿಗ್ಗೆ 6.20ರ ಸುಮಾರಿಗೆ  ಭೂಮಿಯೊಳಗಿನಿಂದ ಗುಡುಗಿನ ಶಬ್ದ ಕೇಳಿಸಿದ್ದು, ವಸ್ತುಗಳು ಕಂಪಿಸಿದ ಅನುಭವವಾಗಿ ಕೆಲವರು ದಿಗ್ಭ್ರಮೆಗೊಂಡು ಮನೆಯೊಳಗಿಂದ ಓಡಿಬಂದ ಘಟನೆ ನಡೆದಿದೆ.ಶನಿವಾರಸಂತೆ ಪಟ್ಟಣ ಸೇರಿದಂತೆ ಕಿತ್ತೂರು, ಶಾಂತವೇರಿ, ನಿಡ್ತ, ಬಿಳಾಹ, ಶಿರಂಗಾಲ, ಗುಡುಗಳಲೆ, ಹೆಮ್ಮನೆ ಗ್ರಾಮಗಳಲ್ಲಿ ಜನತೆ ಭೂಮಿಯೊಳಗಡೆಯಿಂದ ಗುಡುಗಿನಂತಹ ಶಬ್ದ ಕೇಳಿಸಿತಲ್ಲದೇ ಮನೆಯ ವಸ್ತುಗಳು ಕಂಪಿಸಿದುದಾಗಿ ತಿಳಿಸಿದ್ದಾರೆ.ಪಟ್ಟಣದ ಯೋಗ ತರಗತಿ, ಆಟದ ಮೈದಾನ, ಕೆಲ ಮನೆಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಶಿರಂಗಾಲ ಗ್ರಾಮದ ಅದ್ರಾಮ್ ಅವರ ಮನೆಯ ಮೇಲ್ಭಾಗಕ್ಕೆ ಹೊದಿಸಿದ್ದ ಶೀಟುಗಳು ಮತ್ತು ಬಾಗಿಲು ಜರುಗಿ ಮನೆಯವರು ಹೊರ ಬಂದಿದ್ದಾರೆ. ಕಿತ್ತೂರು ಗ್ರಾಮದಲ್ಲಿ ಕೆಲ ಮನೆಗಳಲ್ಲಿ ಜೋಡಿಸಿಟ್ಟಿದ್ದ ಪಾತ್ರೆಗಳು ಸದ್ದು ಮಾಡಿವೆ. ಕೊಡ್ಲಿಪೇಟೆಯಲ್ಲೂ ಕೆಲವರಿಗೆ ಶಬ್ದದ ಅರಿವಾಗಿದೆ.ಶನಿವಾರಸಂತೆಯ ಸಿ.ಪ್ರಕಾಶ್ಚಂದ್ರ, ಎ.ಡಿ.ಮೋಹನ್, ಪೊಲೀಸ್ ಇಲಾಖೆಯ ಪ್ರಕಾಶ್, ಕೊಡ್ಲಿಪೇಟೆಯ ಕೆ.ಎಂ.ಮೊಯ್ದಿನ್, ಪ್ರವೀಣ್, ಗಿರೀಶ್, ಶರತ್, ನಾಗಣ್ಣ, ಪಂಚಾಯಿತಿ ಕಾರ್ಯದರ್ಶಿ ಹೂವಯ್ಯ, ಹೆಮ್ಮನೆಯ ಖತೀಜಾ, ಕಾಂತ ಮತ್ತಿತರರು ತಮಗಾದ ಅನುಭವವನ್ನು ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.