ಭಾನುವಾರ, ಮಾರ್ಚ್ 7, 2021
31 °C

ಅರಣ್ಯವನ್ನು ಜನ ಉಳಿಸುತ್ತಾರೆ, ಯುನೆಸ್ಕೊ ಬೇಕಿಲ್ಲ

ಸಂದರ್ಶನ: ಎ.ಎಂ.ಸುರೇಶ Updated:

ಅಕ್ಷರ ಗಾತ್ರ : | |

ಅರಣ್ಯವನ್ನು ಜನ ಉಳಿಸುತ್ತಾರೆ, ಯುನೆಸ್ಕೊ ಬೇಕಿಲ್ಲ

ಪಶ್ಚಿಮಘಟ್ಟದ ಹತ್ತು ತಾಣಗಳನ್ನು ಯುನೆಸ್ಕೊ ವಿಶ್ವಪರಂಪರೆ ಪಟ್ಟಿಗೆ ಸೇರಿಸಿರುವುದನ್ನು ರಾಜ್ಯ ಸರ್ಕಾರವೇ ವಿರೋಧಿಸುತ್ತಿದೆ. ಈ ಕುರಿತು ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ ಅವರು `ಪ್ರಜಾವಾಣಿ~ ಜತೆ ಮಾತನಾಡಿದ್ದಾರೆ.* ನೀವು ವಿರೋಧಿಸುತ್ತಿರುವುದು ಯಾಕೆ?

- ನಾವು ಸಂಪೂರ್ಣವಾಗಿ ವಿರೋಧಿಸುವುದಿಲ್ಲ. ಸ್ಥಳೀಯ ಜನರ ಜೀವನದ ಮೇಲೆ ದುಷ್ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು. ಆ ಪ್ರದೇಶದ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡದಿದ್ದರೆ ಅವರ ಹಕ್ಕುಗಳನ್ನು ಕಿತ್ತುಕೊಂಡಂತೆ ಆಗುತ್ತದೆ. ಅಭಿವೃದ್ಧಿ ಕಾರ್ಯಗಳಿಗೆ ಅನುಮತಿ ನೀಡಲು ಆಗುವುದಿಲ್ಲ.  15 ಅಡಿ ರಸ್ತೆಯನ್ನು 30 ಅಡಿಗೆ ವಿಸ್ತರಿಸಬೇಕಾದರೂ ಕೇಂದ್ರದ ಅನುಮತಿ ಬೇಕಾಗುತ್ತದೆ. ಮನೆ ಕಟ್ಟಿಕೊಳ್ಳಲು ಆಗುವುದಿಲ್ಲ.* ಪಶ್ಚಿಮಘಟ್ಟದ ವ್ಯಾಪ್ತಿ ಹೊಂದಿರುವ ಪಕ್ಕದ ರಾಜ್ಯಗಳು ವಿರೋಧ ಮಾಡಿಲ್ಲ, ನಿಮ್ಮ ವಿರೋಧ ಯಾಕೆ?

- ಶೇ 60ರಷ್ಟು ಅರಣ್ಯ ಪ್ರದೇಶ ನಮ್ಮ ರಾಜ್ಯದಲ್ಲಿದೆ. ಮಹಾರಾಷ್ಟ್ರದಲ್ಲಿ ಅರಣ್ಯವೇ ಇಲ್ಲ. ಅಲ್ಲಿ ಆನೆ, ಹುಲಿಗಳನ್ನು ಕಾಣಲು ಸಾಧ್ಯವೇ ಇಲ್ಲ. ಕರ್ನಾಟಕದಲ್ಲಿ ಆರು ಸಾವಿರ ಆನೆಗಳು, 300 ಹುಲಿಗಳಿವೆ. ಕೇರಳ, ಕರ್ನಾಟಕ, ತಮಿಳುನಾಡಿನಲ್ಲಿ ಮಾತ್ರ ಅರಣ್ಯವಿದೆ.* ನಿಮ್ಮ ಪಕ್ಷದ ಆಡಳಿತ ಇರುವ ಗುಜರಾತ್, ಗೋವಾ ರಾಜ್ಯಗಳು ಸ್ವಾಗತ ಮಾಡಿವೆಯಲ್ಲಾ?

- ಮೊದಲೇ ಹೇಳಿದ ಹಾಗೆ ಗುಜರಾತ್, ಗೋವಾದ ಹೆಚ್ಚಿನ ಪ್ರದೇಶದಲ್ಲಿ ಅರಣ್ಯವಿಲ್ಲ. ಪಕ್ಕದ ಗೋವಾದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಅರಣ್ಯ ಪ್ರದೇಶವಿದೆ.* ಹಿಂದೆ ಎ.ಬಿ.ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಯುನೆಸ್ಕೊ ಮಾನ್ಯತೆ ಪಡೆಯುವ ವಿಚಾರಕ್ಕೆ ಚಾಲನೆ ದೊರೆಯಿತು. ಈಗ ಬಿಜೆಪಿ ಸರ್ಕಾರವೇ ವಿರೋಧ ಮಾಡುವುದು ಸರಿಯೇ?

- ವಾಜಪೇಯಿ ವಿಚಾರಗಳಿಗೆ ವಿರೋಧವಿಲ್ಲ. ಆದರೆ ಇದರಿಂದ ಆಗುವ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಮಾಡದೆ ಕಣ್ಣುಮುಚ್ಚಿಕೊಂಡು ಒಪ್ಪಿಗೆ ನೀಡುವುದು ಸರಿಯಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಮೊದಲು ಜಂಟಿ ಅಧ್ಯಯನ ಆಗಬೇಕು. ಸಾರ್ವಜನಿಕರ ಅಭಿಪ್ರಾಯಗಳನ್ನು ಗೌರವಿಸಬೇಕು. ಅರಣ್ಯ ಪ್ರದೇಶದಲ್ಲಿ ವಾಸ ಮಾಡುತ್ತಿರುವ ಜನರಿಗೆ ಪುನರ್ವಸತಿ ಕಲ್ಪಿಸಲು ವಿಶೇಷ ಪ್ಯಾಕೇಜ್ ಪ್ರಕಟಿಸಬೇಕು.* ಪರಂಪರೆ ಪಟ್ಟಿಗೆ ಸೇರಿಸುವುದರಿಂದ ಅರಣ್ಯ ಲೂಟಿ ತಡೆಯಲು ಅನುಕೂಲ ಆಗುವುದಲ್ಲವೇ?

- ಅಲ್ಲಿ ವಾಸ ಮಾಡುತ್ತಿರುವ ಜನರೇ ಅರಣ್ಯ ಸಂರಕ್ಷಣೆ ಮಾಡಿದ್ದಾರೆ. ಅವರಿಗೂ ಅರಣ್ಯದ ಬಗ್ಗೆ ಕಾಳಜಿ ಇದೆ.  ಕೆಲ ಭಾಗಗಳಲ್ಲಿ ಅರಣ್ಯ ಸಂಪತ್ತಿನ ಲೂಟಿ ನಡೆಯುತ್ತಿರಬಹುದು. ಪರ್ಯಾಯ ವ್ಯವಸ್ಥೆ ಮಾಡದಿದ್ದರೆ ಯುನೆಸ್ಕೊ ಮಾನ್ಯತೆ ದೊರೆತ ನಂತರವೂ ಲೂಟಿ ಮುಂದುವರಿಯುತ್ತದೆ.* ಅಭಿವೃದ್ಧಿಗೆ ಅಡ್ಡಿಯಾಗುತ್ತದೆ ಎಂಬುದು ಅಪಪ್ರಚಾರ. ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಎಂದು ಪರಿಸರವಾದಿಗಳು ಹೇಳುತ್ತಿದ್ದಾರಲ್ಲಾ?

- ಪರಿಸರ ವಾದಿಗಳ ಕಾಳಜಿ ನಮಗೂ ಅರ್ಥವಾಗುತ್ತದೆ. ಆದರೆ ಅವರು ಒಂದು ವಾರ ಕಾಲ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ವಾಸ ಮಾಡಿದರೆ ಅಲ್ಲಿನ ನಿಜವಾದ ಸಮಸ್ಯೆಗಳು ಏನು ಎಂಬುದು ಅರ್ಥವಾಗುತ್ತದೆ. ಅಲ್ಲಿನ ಜನರ ಸ್ಥಿತಿಗತಿ ತುಂಬಾ ಕೆಟ್ಟದ್ದಾಗಿದೆ.* ಕೇಂದ್ರದಲ್ಲಿ ಯುಪಿಎ ಸರ್ಕಾರ ಇರುವುದರಿಂದ ರಾಜಕೀಯ ಕಾರಣಕ್ಕೆ ವಿರೋಧ ಮಾಡುತ್ತಿದ್ದೀರಾ?

- ಆ ರೀತಿ ಏನೂ ಇಲ್ಲ. ನಾನೂ ಪರಿಸರ ಪ್ರೇಮಿ. ಸಿನಿಮಾ ಕ್ಷೇತ್ರದಿಂದ ರಾಜಕೀಯ ಪ್ರವೇಶಿಸಿರುವ ನಾನು ಚಿಕ್ಕಂದಿನಿಂದಲೇ ಪರಿಸರದ ಬಗ್ಗೆ ಕಾಳಜಿ ಬೆಳೆಸಿಕೊಂಡಿದ್ದೇನೆ. ಅಲ್ಲಿ ವಾಸ ಮಾಡುತ್ತಿರುವ ಜನರು ಶತಮಾನಗಳಿಂದ ಕಾಡನ್ನು ರಕ್ಷಣೆ ಮಾಡಿಕೊಂಡು ಬಂದಿದ್ದರಿಂದಲೇ ಈಗ ವಿಶ್ವಪರಂಪರೆ ಪಟ್ಟಿಗೆ ಸೇರ್ಪಡೆಯಾಗಿದೆ ಎಂಬುದನ್ನು ಮರೆಯಬಾರದು.* ಯಾವುದೇ ಹೊಸ ಕಾನೂನುಗಳನ್ನು ಹೇರುವುದಿಲ್ಲ ಎಂದು ಯುನೆಸ್ಕೊ ತನ್ನ ಸೂಚನೆಗಳಲ್ಲಿ ತಿಳಿಸಿದೆಯಲ್ಲಾ?

-  ಪಶ್ಚಿಮ ಘಟ್ಟ ಪ್ರದೇಶದ 6-7 ಜಿಲ್ಲೆಗಳ ಜನ ಜೀವನದ ಬಗ್ಗೆ ಯುನೆಸ್ಕೊಗೆ ಅರಿವು ಇಲ್ಲ. ಒಂದು ಕೊಳವೆಬಾವಿ ಕೊರೆಯಬೇಕಾದರೂ ಕೇಂದ್ರದ ಅನುಮತಿ ಪಡೆಯಬೇಕಾಗುತ್ತದೆ. ಶತಮಾನಗಳಿಂದ ಇರುವ ದೇವಸ್ಥಾನಕ್ಕೆ ಸುಣ್ಣಬಣ್ಣ ಬಳಿಯಲೂ ಆಗುವುದಿಲ್ಲ. ಆದ್ದರಿಂದ ಈ ಎಲ್ಲ ವಿಚಾರಗಳ ಬಗ್ಗೆ ಕೇಂದ್ರದ ಗಮನ ಸೆಳೆಯಲಾಗುವುದು.* ವಿಶ್ವಪರಂಪರೆ ತಾಣ ನಿರ್ವಹಣಾ ಸಮಿತಿಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಇರುತ್ತಾರೆ, ಯುನೆಸ್ಕೊ, ಕೇಂದ್ರದ ಪ್ರತಿನಿಧಿಗಳು ಇರುವುದಿಲ್ಲ ಎಂದರೂ ಆತಂಕ ಯಾಕೆ?

- ಇದು ತುರ್ತಾಗಿ ಆಗಬೇಕಾದ ಕೆಲಸ ಅಲ್ಲ. ಮೊದಲು ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಗೊಂದಲಗಳ ಬಗ್ಗೆ ಸ್ಪಷ್ಟಚಿತ್ರಣ ಇಲ್ಲದೆ ಇದ್ದರೆ ಅಧಿಕಾರಿಗಳು ಸಹ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಾರೆ.  ಆದ್ದರಿಂದ ಒಪ್ಪಂದಕ್ಕೆ ಸಹಿ ಹಾಕುವ ಮೊದಲೇ ಎಲ್ಲವೂ ಇತ್ಯರ್ಥವಾಗಬೇಕು.* ಯುನೆಸ್ಕೊ ಪ್ರತಿನಿಧಿಗಳೊಂದಿಗೆ ಚರ್ಚೆ ಮಾಡಿದ್ದೀರಾ?

- ಇಲ್ಲ. ಮೊದಲು ಕೇಂದ್ರ ಸರ್ಕಾರದೊಂದಿಗೆ ಮಾತನಾಡುತ್ತೇನೆ. ಮುಂದಿನ ವಾರ ಕೇಂದ್ರದ ಅರಣ್ಯ ಸಚಿವರನ್ನು ಭೇಟಿಯಾಗಿ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡುತ್ತೇನೆ.* ಯುನೆಸ್ಕೊ ಸಲಹೆಗಳು ಅರಣ್ಯ ಅಭಿವೃದ್ಧಿಗೆ ಪೂರಕವಾಗಿವೆ ಅಲ್ಲವೇ?

- ನಮಗೂ ಅರಣ್ಯದ ಬಗ್ಗೆ ಕಾಳಜಿ ಇರುವುದರಿಂದಲೇ ಬಂಡೀಪುರದ ಮೂಲಕ ತಮಿಳುನಾಡಿಗೆ ರಾತ್ರಿ 9 ಗಂಟೆ ನಂತರ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಆನೆಗಳು, ಹುಲಿಗಳು, ವನ್ಯಜೀವಿಗಳು ಉಳಿಯಬೇಕು ಎಂಬ ಅಪೇಕ್ಷೆ ನಮಗೂ ಇದೆ.* ವಿರೋಧದ ಹಿಂದೆ ಗಣಿ, ಟಿಂಬರ್, ಎಸ್ಟೇಟ್ ಲಾಬಿ ಇದೆಯೇ?

- ಖಂಡಿತ ಇಲ್ಲ. ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ, ಕಿರು ವಿದ್ಯುತ್ ಯೋಜನೆಗಳಿಗೆ ಒಪ್ಪಿಗೆ ನೀಡಿಲ್ಲ. ಗಣಿಗಾರಿಕೆಗೆ ಅನುಮತಿ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.