ಬುಧವಾರ, ಮೇ 18, 2022
23 °C

ಅರಿಶಿಣ ವ್ಯಾಪಾರಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಾಲಿಂಗಪುರ: ಸ್ಥಳೀಯ ಶ್ರೀ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಅರಿಶಿಣ ವ್ಯಾಪಾರ ವಹಿವಾಟಿಗೆ ಈಚೆಗೆ ಚಾಲನೆ ನೀಡಲಾಯಿತು.

ರಾಜ್ಯದ ಏಕೈಕ ಅರಿಶಿಣ ಮಾರುಕಟ್ಟೆ ಎಂಬ ಹೆಸರು ಪಡೆದಿರುವ ಮಹಾಲಿಂಗಪುರ ಮಾರುಕಟ್ಟೆಯಲ್ಲಿ ಮೊದಲ ದಿನವೇ ಕ್ವಿಂಟಾಲಿಗೆ ರೂ.12,000ದಿಂದ ರೂ. 15,100ರ ದರದಲ್ಲಿ ಅರಿಶಿಣ ಮಾರಾಟವಾಯಿತು.

ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟಿಗೆ ಮುಧೋಳ ತಹಸೀಲ್ದಾರ ಶಂಕರಗೌಡ ಸೋಮನಾಳ ಚಾಲನೆ ನೀಡಿ ಮಾತನಾಡಿದರು. ಕಬ್ಬು ಮತ್ತು ಅರಿಶಿಣಕ್ಕೆ ಉತ್ತಮ ಮಾರುಕಟ್ಟೆ ಒದಗಿಸಿ ಭದ್ರತೆ ಒದಗಿಸಲು ಸಾಧ್ಯವಾಗಿದೆ. ಇದುವರೆಗೆ ಇಲ್ಲಿಯ ರೈತರು ಅರಿಶಿಣ ಮಾರಾಟಕ್ಕೆ ಮಹಾರಾಷ್ಟ್ರದ ಸಾಂಗ್ಲಿಗೆ ಹೋಗಬೇಕಾಗಿತ್ತು. ಈಗ ಇಲ್ಲಿಯೇ ವ್ಯಾಪಾರ ಮಾಡಿ, ವೆಚ್ಚವನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ಅರಿಶಿಣ ವಿಧಗಳಾದ ಸೇಲಂ ಗಟ್ಟು ಪ್ರತಿ ಕ್ವಿಂಟಾಲ್‌ಗೆ ರೂ. 15,000ಕ್ಕೆ ಮಾರಾಟವಾಗಿದ್ದರೆ ಕಡಪಾ ಮತ್ತು ಚೂರಾ ಅರಿಶಿಣ ಇನ್ನೂ ಮಾರುಕಟ್ಟೆಗೆ ಬರಬೇಕಿದೆ.

‘ಮಹಾಲಿಂಗಪುರ ಮಾರುಕಟ್ಟೆಯಲ್ಲಿ ಪಾರದರ್ಶಕತೆಗೆ ಆದ್ಯತೆ ನೀಡಲಾಗಿದೆ. ತೂಕದಲ್ಲಿ ಮೋಸವಿಲ್ಲ, ರೈತರಿಗೆ ಮುಂಗಡ ಹಣ ನೀಡುವ ಜೊತೆಗೆ ದಲ್ಲಾಲಿ ಸೌಲಭ್ಯ ಕೂಡ ರಿಯಾಯಿತಿ ದರದಲ್ಲಿದೆ. ಒಟ್ಟಾರೆ ರೈತರ ಅನಕೂಲಕ್ಕಾಗಿ ಗಮನ ನೀಡಲಾಗಿದೆ’ ಎಂದು ವರ್ತಕರ ಸಂಘದ ಅಧ್ಯಕ್ಷ ಎಚ್.ಟಿ. ಅಂಬಲಝೇರಿ ಹೇಳಿದರು.

ಗುರುನಾಥ ಜಮಖಂಡಿ, ರವೀಂದ್ರ ಢಪಳಾಪುರ, ಚಂದ್ರು ಗೊಂದಿ, ಬಸವರಾಜ ಸುಣಧೋಳಿ, ದಲಾಲ ವರ್ತಕರ ಸಂಘದ ಕಾರ್ಯದರ್ಶಿ ಶ್ರೀಶೈಲ ಕಿರಗಟಗಿ, ಎಪಿಎಂಸಿ ಕಾರ್ಯದರ್ಶಿ ವಿಜಯಕುಮಾರ ಗಳವೆ, ಮುಧೋಳ ಪುರಸಭೆ ಮುಖ್ಯಾಧಿಕಾರಿ ರಮೇಶ ಸುಣಗಾರ ಹಾಗೂ ರಾಠೋಡ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.