ಮಂಗಳವಾರ, ಮೇ 24, 2022
30 °C

ಅರ್ಥಪೂರ್ಣ ಪಿಸುಮಾತುಗಳ ಸ್ವಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ಸಂಸ್ಕೃತಿಯನ್ನು ರೂಪಿಸಿದ ಪ್ರಮುಖ ಧಾರೆಗಳಲ್ಲಿ ಜೈನ ಸಮುದಾಯಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ.ಆರಂಭದ ಕನ್ನಡ ಸಂಸ್ಕೃತಿ ಚರಿತ್ರೆ ಸಂಪೂರ್ಣವಾಗಿ ಜೈನಧರ್ಮಕ್ಕೆ ಸೇರಿದ್ದು. ಶ್ರೀವಿಜಯನಂತಹ ಕಾವ್ಯಚಿಂತಕ, ಪಂಪನಂತಹ ಕವಿ, ಶಿವಕೋಟ್ಯಾಚಾರ್ಯನಂತಹ ಕಥನಕಾರ ಕನ್ನಡ ಪರಂಪರೆಯ ಆರಂಭದಲ್ಲೇ ಕ್ರಿಯಾಶೀಲರಾಗಿದ್ದುದು ಕನ್ನಡ ಸಂಸ್ಕೃತಿ ಚರಿತ್ರೆಗೆ ಒಂದು ಮೇಲ್ಮಟ್ಟದ ಮಾದರಿ ಒದಗಿಸಿತು.ಸಾಮಾಜಿಕ ರಚನೆಯ ವಿನ್ಯಾಸವನ್ನು ರೂಪಿಸುವ ಪ್ರಬಲ ಶಕ್ತಿಗಳಾದ ರಾಜಕೀಯ ಮತ್ತು ಧರ್ಮಕ್ಕೆ ಪಂಪ ತನ್ನೆರಡು ಕೃತಿಗಳಲ್ಲಿ ಮುಖಾಮುಖಿಯಾದರೆ, ಮುಂದೆ ಜನ್ನನಂತಹ ಕವಿ ಸಂಸ್ಕೃತಿ ಹಾಗೂ ಪ್ರವೃತ್ತಿಗಳ ಸಂಘರ್ಷದ ಸ್ವರೂಪವನ್ನು, ಸಂಸ್ಕೃತಿಯ ಹೆಸರಿನಲ್ಲಿ ಪ್ರಭುತ್ವ ವ್ಯಕ್ತಿಯ ಮೇಲೆ ಮಾಡುವ ಆಕ್ರಮಣವನ್ನು ವಿಶ್ಲೇಷಿಸಲು ಪ್ರಯತ್ನಿಸುತ್ತಾನೆ.ರತ್ನಾಕರವರ್ಣಿ ದೈನಿಕವನ್ನು ಕಾವ್ಯವಾಗಿಸಿದ ಅಪರೂಪದ ಪ್ರತಿಭೆ. ಧರ್ಮವಾಗಲಿ, ಪ್ರಭುತ್ವವಾಗಲಿ ದಿನನಿತ್ಯದ ಬದುಕನ್ನು ಹೇಗೆ ಸಹನೀಯವಾಗಿಸಬಲ್ಲುದು ಎಂಬ ಸಾಧ್ಯತೆಯನ್ನು ರತ್ನಾಕರವರ್ಣಿ ತನ್ನ ಕಾವ್ಯದಲ್ಲಿ ಶೋಧಿಸುವ ಪ್ರಯತ್ನ ಮಾಡುತ್ತಾನೆ. ಹೀಗೆ ಜೈನಕವಿಗಳು ಬೇರೆ ಬೇರೆ ಘಟ್ಟಗಳಲ್ಲಿ ಮಾನವ ಜನಾಂಗದ ಸಮಸ್ಯೆಗಳಿಗೆ ಮುಖಾಮುಖಿಯಾಗುತ್ತ ಪರಿಹಾರದ ಸಾಧ್ಯತೆಗಳ ಅನೇಕ ಮಾದರಿಗಳನ್ನು ಒದಗಿಸಿಕೊಟ್ಟಿದ್ದಾರೆ.ಕನ್ನಡ ವಿದ್ವತ್ ಪ್ರಪಂಚ ಈ ಎಲ್ಲವನ್ನೂ ಸೂಕ್ಷ್ಮ ಅಧ್ಯಯನಕ್ಕೆ ಒಳಗು ಮಾಡಿದೆ. ಹಂಪ ನಾಗರಾಜಯ್ಯನವರು ಜೈನಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿರುವ ನಮ್ಮ ಪ್ರಮುಖ ವಿದ್ವಾಂಸರಲ್ಲಿ ಒಬ್ಬರು. ಸುಮಾರು ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ಜೈನಸಾಹಿತ್ಯವನ್ನು ಕುರಿತಂತೆಯೇ ಅವರು ರಚಿಸಿದ್ದಾರೆ.ಹಂಪನಾ ಅವರ ಅಧ್ಯಯನದ ಸ್ವರೂಪವನ್ನು ಗಮನಿಸಿದರೆ ರೂಢಿಯ ಜೈನಸಾಹಿತ್ಯದ ಅಧ್ಯಯನದ ಮಾದರಿಗಿಂತ ಭಿನ್ನವಾದ ಹಾದಿಯನ್ನು ಅವರು ಹಿಡಿದಂತೆ ತೋರುತ್ತದೆ. ಶಾಸನ ಸಾಹಿತ್ಯ, ಜನಪದ ಕಲೆಗಳು, ನೋಂಪಿಯ ಕತೆಗಳು- ಹೀಗೆ ಪರ್ಯಾಯ ಸಂಸ್ಕೃತಿಯೆನ್ನಬಹುದಾದ ಹಾದಿಯಲ್ಲಿ ಅವರ ಜೈನಸಾಹಿತ್ಯದ ಅಧ್ಯಯನವಿದೆ.ವಸಾಹತೋತ್ತರ ಚಿಂತನೆಯ ಈ ಸಂದರ್ಭದಲ್ಲಿ ಈ ಬಗೆಯ ಅಧ್ಯಯನದ ಮಹತ್ವವನ್ನು ನಾನು ವಿವರಿಸಬೇಕಿಲ್ಲ.ಹೀಗೆ ಜೈನಸಾಹಿತ್ಯದ ಅಧ್ಯಯನಕ್ಕೆ ಹೊಸ ನೆಲೆಯೊಂದನ್ನು ಕಲ್ಪಿಸುತ್ತಿರುವ ಹಂಪ ನಾಗರಾಜಯ್ಯನವರಿಗೆ ಎಪ್ಪತ್ತೈದು ವರ್ಷಗಳು ತುಂಬಿದ ಸಂದರ್ಭದಲ್ಲಿ ಜೈನಸಾಹಿತ್ಯದ ಅಧ್ಯಯನದ ಗ್ರಂಥವೊಂದನ್ನು ಗೌರವಸೂಚಕವಾಗಿ ಹೊರತಂದಿರುವುದು ಅರ್ಥಪೂರ್ಣವಾಗಿದೆ.ಪ್ಯಾರಿಸ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಪ್ರೊ. ನಳಿನಿ ಬಲಬೀರ್ ಅವರು ಸಂಪಾದಿಸಿರುವ ‘ಸ್ವಸ್ತಿ’ ಜೈನಸಾಹಿತ್ಯದ ಅಧ್ಯಯನಕ್ಕೆ ಸಂಬಂಧಿಸಿದ ಮೂವತ್ತಮೂರು ಲೇಖನಗಳನ್ನೊಳಗೊಂಡ ಒಂದು ಆಕರಗ್ರಂಥ.ವೀರೇಂದ್ರ ಹೆಗ್ಗಡೆಯವರ ಒಂದು ಲೇಖನ ಕನ್ನಡದಲ್ಲಿ, ರಾಜಾರಾಮ್ ಜೈನ್ ಅವರ ಒಂದು ಲೇಖನ ಹಿಂದಿಯಲ್ಲಿರುವುದನ್ನು ಬಿಟ್ಟರೆ ಉಳಿದೆಲ್ಲ ಲೇಖನಗಳೂ ಇಂಗ್ಲಿಷಿನಲ್ಲಿವೆ. ಜರ್ಮನಿ, ಫ್ರಾನ್ಸ್, ಬೆಲ್ಜಿಯಂ, ಅಮೆರಿಕಾ, ಇಂಗ್ಲೆಂಡ್ ಮೊದಲಾದ ದೇಶಗಳಲ್ಲಿನ ವಿದ್ವಾಂಸರು ಇಲ್ಲಿ ಲೇಖನಗಳನ್ನು ಬರೆದಿದ್ದಾರೆ.ಭಾರತದ ಬೇರೆ ಬೇರೆ ರಾಜ್ಯಗಳ ರಾಜಸ್ತಾನ, ತಮಿಳುನಾಡು, ಮಹಾರಾಷ್ಟ್ರ, ಉತ್ತರಪ್ರದೇಶ, ಆಂಧ್ರಪ್ರದೇಶ- ಲೇಖಕರ ಬರಹಗಳೂ ಇಲ್ಲಿವೆ. ಹೀಗಾಗಿ ಕನ್ನಡದ ನಮ್ಮ ‘ಹಂಪನಾ’ ಅವರಿಗೆ ಜಾಗತಿಕ ನೆಲೆಯಲ್ಲಿ ಸಲ್ಲುತ್ತಿರುವ ಗೌರವದ ಸಂಕೇತವಾಗಿ ‘ಸ್ವಸ್ತಿ’ ರೂಪುಗೊಂಡಿದೆ.‘ಸ್ವಸ್ತಿ’ ಹಂಪನಾ ಅವರಿಗೆ ಅರ್ಪಿಸುತ್ತಿರುವ ಗೌರವ ಗ್ರಂಥವಾದರೂ ಅವರ ಬಗ್ಗೆ ಇಲ್ಲಿ ಲೇಖನಗಳಿಲ್ಲ. ಅವರ ಬರಹಕ್ಕೆ ಸಂಬಂಧಿಸಿದಂತೆ ಮಾಹಿತಿ ಮಾತ್ರ ಇದೆ. ಅವರ ಆಸಕ್ತಿಯ ಕ್ಷೇತ್ರವಾದ ಜೈನ ಸಂಸ್ಕೃತಿಯನ್ನು ಕೇಂದ್ರವಾಗಿಟ್ಟುಕೊಂಡು ಬೇರೆ ಬೇರೆ ನೆಲೆಗಳಲ್ಲಿ ಅಧ್ಯಯನ ಮಾಡಿದ ಲೇಖನಗಳು ಇಲ್ಲಿವೆ.ಗ್ರಂಥದಲ್ಲಿ ಐದು ಭಾಗಗಳಿದ್ದು ಶಾಸನಗಳಲ್ಲಿ ಜೈನಸಂಸ್ಕೃತಿಯಿಂದ ಹಿಡಿದು ಸಮಕಾಲೀನ ಸಂದರ್ಭದವರೆಗೂ ಇಲ್ಲಿಯ ಅಧ್ಯಯನದ ವಿಸ್ತಾರವಿದೆ. ಪ್ರೊ.ಬೊಲಿ ಅವರ ಲೇಖನವನ್ನು ಓದುತ್ತಿದ್ದಾಗ ಅವರ ಅಧ್ಯಯನದ ವಿಸ್ತಾರ ನನ್ನಲ್ಲಿ ಬೆರಗು ಮೂಡಿಸಿತು. ಸುಮಾರು ನೂರಕ್ಕೂ ಹೆಚ್ಚು ಗ್ರಂಥಗಳ ಪರಾಮರ್ಶನ ಟಿಪ್ಪಣಿಗಳನ್ನು ಈ ಲೇಖನ ಒಳಗೊಂಡಿದೆ. ಇದರ ಅರ್ಥವಿಷ್ಟೆ: ‘ಅಧಿಕೃತತೆ’ ಇಂಥ ಲೇಖನಗಳಲ್ಲಿ ನಮಗೆ ಪ್ರಧಾನವಾಗಿ ಕಾಣಿಸುತ್ತದೆ. ಇಲ್ಲಿನ ಬಹುತೇಕ ಲೇಖನಗಳಲ್ಲಿ ಈ ಬಗೆಯ ಶಿಸ್ತಿದೆ.ನನಗೆ ಕುತೂಹಲ ಮೂಡಿಸಿದ್ದು ವರ್ತಮಾನದ ಜೈನ ಸಂಸ್ಕೃತಿಯ ಬಗೆಗಿನ ಕಡೆಯ ಭಾಗ. ಯುವಜನಾಂಗಕ್ಕೂ ಧರ್ಮಕ್ಕೂ ಇರುವ ಸಂಬಂಧ ಯಾವ ಬಗೆಯದು? ಜೈನಧರ್ಮದ ಇತಿಹಾಸವನ್ನು ಗಮನಿಸಿದರೆ ಅತ್ಯಂತ ಕಟ್ಟುನಿಟ್ಟಿನ ವಿಧಿವಿಧಾನಗಳು ನಮಗೆ ಕಾಣಿಸುತ್ತವೆ.ಇಪ್ಪತ್ತೊಂದನೇ ಶತಮಾನದ ಈ ವೇಗದ ಯುಗದಲ್ಲಿ ಈ ‘ಸಂಸ್ಕೃತಿ’ಯ ಸ್ವರೂಪ ಯಾವ ರೀತಿ ರೂಪಾಂತರಗೊಳ್ಳುತ್ತಿದೆ? ಕ್ಷೇತ್ರ ಅಧ್ಯಯನದ ಮೂಲಕ ಕೆಲವು ಮಾಹಿತಿಗಳು ನಮಗಿಲ್ಲಿ ಸಿಗುತ್ತವೆ. ಆದರೆ ಈ ಬಗ್ಗೆ ಆಳ ಚಿಂತನೆ ಇಲ್ಲಿ ಕಾಣಿಸುವುದಿಲ್ಲ. ಜನ್ನ, ರತ್ನಾಕರವರ್ಣಿಯಂಥವರು ತೋರುವ ಪ್ರತಿಭಟನೆಯ ಮಾದರಿಗಳ ಅಧ್ಯಯನವೇ ನಮಗೆ ಹೆಚ್ಚು ಒಳನೋಟಗಳನ್ನು ಒದಗಿಸಿಕೊಡುತ್ತದೆ.ವರ್ತಮಾನದಲ್ಲಿ ಜೈನಸಂಸ್ಕೃತಿಯನ್ನು ಪುನರ್ ವ್ಯಾಖ್ಯಾನಿಸುವ ಅಗತ್ಯವಿದೆ. ಪ್ಯುಕೋ ಹೇಳುವ ಹಾಗೆ ನಮ್ಮ ವಿದ್ವತ್‌ಪ್ರಪಂಚ ತನ್ನ ‘ಜ್ಞಾನದ ಅಧಿಕಾರ’ದ ಬಲದಿಂದ ಅಧ್ಯಯನದ ಒಂದು ಪರಂಪರೆಯನ್ನು ರೂಪಿಸಿಬಿಟ್ಟಿದೆ. ಇದು ನಮ್ಮ ಆಲೋಚನಾ ಕ್ರಮವನ್ನೂ ನಿಯಂತ್ರಿಸುತ್ತಿದೆ.ಇದರಿಂದಾಚೆಗೆ ನಿಂತು ಚಿಂತಿಸಿದಾಗ ಮಾತ್ರ ಹೊಸ ಹುಟ್ಟು ಸಾಧ್ಯ; ಯಾವುದೇ ಕೃತಿಯಲ್ಲಿಯೂ, ಸಂಸ್ಕೃತಿಯಲ್ಲಿಯೂ ಸಾಲುಗಳ ನಡುವಿನ ತೆರವು ನಮಗೆ ಏನನ್ನೋ ಹೇಳುತ್ತಿರುತ್ತದೆ; ಪಿಸುಗುಡುತ್ತಿರುತ್ತದೆ. ಆ ಪಿಸುಮಾತುಗಳನ್ನು ಕೇಳಿಸಿಕೊಳ್ಳುವ ಪ್ರಯತ್ನದಲ್ಲಿಯೇ ನಮ್ಮ ಚಿಂತನೆಗೆ ಹೊಸ ಎಳೆಗಳನ್ನು ಸೇರಿಸುವುದು ಸಾಧ್ಯ. ‘ಸ್ವಸ್ತಿ’ಯಂಥ ಗ್ರಂಥಗಳು ಹಾಗೆ ನಮ್ಮನ್ನು ಒತ್ತಾಯಿಸುತ್ತವೆ ಎಂಬುದರಿಂದಲೇ ನಮಗೆ ಮುಖ್ಯವಾಗುತ್ತವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.