ಮಂಗಳವಾರ, ಮೇ 18, 2021
22 °C

ಅಲುಗಿದ ಕುರ್ಚಿ- ಮೇಜು, ಬಿರುಕು ಬಿಟ್ಟ ಗೋಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜಧಾನಿಯ ಮಹಾತ್ಮಗಾಂಧಿ ರಸ್ತೆ, ಕೋರಮಂಗಲ, ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ, ಆರ್.ಟಿ.ನಗರ, ಗಂಗಾನಗರ, ಸುಲ್ತಾನ್ ಪಾಳ್ಯ, ಜೆ.ಪಿ.ನಗರ, ಬ್ಯಾಟರಾಯನಪುರ ಮೊದಲಾದ ಕಡೆಗಳಲ್ಲಿ ನಾಗರಿಕರಿಗೆ ಬುಧವಾರ ಮಧ್ಯಾಹ್ನ ಭೂಮಿ ಕಂಪಿಸಿದ ಅನುಭವವಾಯಿತು.ಮೇಜು, ಕುರ್ಚಿಗಳು ಅಲುಗಾಡಿದ್ದರಿಂದ ಭಯಗೊಂಡ ನಾಗರಿಕರು ತಕ್ಷಣ ಮನೆ ಮತ್ತು ಕಚೇರಿಗಳಿಂದ ಹೊರಗೆ ಓಡಿ ಬಂದರು. ನಂತರ ಸಾವರಿಸಿಕೊಂಡು ಮನೆ, ಕಚೇರಿಗಳಿಗೆ ತೆರಳಿದರು. ವಿಶೇಷವಾಗಿ ಅಪಾರ್ಟ್‌ಮೆಂಟ್‌ಗಳು ಮತ್ತು ಬಹುಮಹಡಿ ಕಟ್ಟಡಗಳಲ್ಲಿ ಇದ್ದವರಿಗೆ ಕಂಪನದ ಅನುಭವ ಹೆಚ್ಚಾಗಿಯೇ ಆಯಿತು. ಕೆಲ ಮಹಡಿಗಳಲ್ಲಿ ಟ್ಯೂಬ್‌ಲೈಟ್‌ಗಳು ಬಿದ್ದು ಒಡೆದು ಹೋದವು. ಕೆಲವು ಕಟ್ಟಡಗಳ ಗೋಡೆ ಬಿರುಕು ಕಾಣಿಸಿಕೊಂಡಿತು.ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ವಿ.ಎಸ್.ಪ್ರಕಾಶ್, `ಮೂರು ಮತ್ತು ಅದಕ್ಕಿಂತ ಮೇಲ್ಪಟ್ಟ ಅಂತಸ್ತುಗಳಲ್ಲಿ ವಾಸವಿದ್ದ ಅಥವಾ ಕಾರ್ಯನಿರ್ವಹಿಸುತ್ತಿದ್ದ ಜನರಿಗೆ ಮಾತ್ರ ಕಂಪನದ ಅರಿವು ಆಗಿದೆ. ಅದಕ್ಕಿಂತ ಕೆಳ ಮಹಡಿಗಳಲ್ಲಿದ್ದವರು, ಬಯಲು ಅಥವಾ ರಸ್ತೆಗಳಲ್ಲಿದ್ದವರಿಗೆ ಕಂಪನ ಗೊತ್ತಾಗಿಲ್ಲ~ ಎಂದರು.ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿಯೂ ಭೂಮಿ ಕಂಪಿಸಿದ ಅನುಭವವಾಗಿ ನೌಕರರು ಭಯದಿಂದ ಕಚೇರಿಗಳಿಂದ ಹೊರಗೆ ಓಡಿ ಬಂದರು. ಕೃಷಿ ವಿವಿ ಘಟಿಕೋತ್ಸವದ ಬಗ್ಗೆ ಮಾಹಿತಿ ನೀಡಲು ಕುಲಪತಿಗಳು ಕರೆದಿದ್ದ ಪತ್ರಿಕಾಗೋಷ್ಠಿಗೆ ಹಾಜರಾಗಿದ್ದ ಮಾಧ್ಯಮ ಪ್ರತಿನಿಧಿಗಳಿಗೂ ಭೂಮಿ ನಡುಗಿದ ಅನುಭವವಾಯಿತು.ಇನ್ನೇನು ಕುಲಪತಿಗಳು ಆಗಮಿಸಿ ಪತ್ರಿಕಾಗೋಷ್ಠಿ ನಡೆಸಿಕೊಡಬೇಕೆನ್ನುವಷ್ಟರಲ್ಲಿ ಕಟ್ಟಡ ನಡುಗಿದ ಅನುಭವವಾಯಿತು. ಆ ವೇಳೆಗೆ ಆಡಳಿತ ಕಚೇರಿ ಸಂಕೀರ್ಣದಲ್ಲಿ ಕೆಲಸ ನಿರ್ವಹಿಸುತ್ತಿದ್ದ ನೌಕರರು ಹಾಗೂ ಸಿಬ್ಬಂದಿ ಭಯಭೀತರಾಗಿ ಹೊರಗೆ ಓಡುತ್ತಿದ್ದರು. ಪಕ್ಕದ ಗ್ರಂಥಾಲಯ ಕಟ್ಟಡದ ಸಿಬ್ಬಂದಿ ಕೂಡ ಆತಂಕದಿಂದ ಕಚೇರಿಗಳಿಂದ ಹೊರಗೆ ಓಡಿ ಬಂದರು. ಕೊನೆಗೆ ಮಾಧ್ಯಮ ಪ್ರತಿನಿಧಿಗಳು ಕೂಡ ಗಾಬರಿಯಿಂದ ನೌಕರರನ್ನು ಹಿಂಬಾಲಿಸುವಂತಾಯಿತು.`ನನಗೆ ಕಟ್ಟಡ ನಡುಗಿದ ಅನುಭವವಾಯಿತು. ಆರೋಗ್ಯ ಸರಿ ಇಲ್ಲದಿರುವುದರಿಂದ ಹೀಗಾಗಿರಬಹುದು ಎಂದು ತಿಳಿದುಕೊಂಡೆ. ಆದರೆ, ಕೆಳಗಡೆ ಕಾಲಿಟ್ಟಾಗ ಕಟ್ಟಡ ಮತ್ತೆ ನಡುಗಿದಂತಾಯಿತು. ಕಚೇರಿಯಲ್ಲಿನ ಇತರರಿಗೂ ಇದೇ ಅನುಭವವಾಗಿದ್ದರಿಂದ ಕೆಳಗೆ ಓಡಿ ಬಂದೆವು~ ಎಂದು ಎಸ್ಟೇಟ್ ಅಧಿಕಾರಿಯ ಆಪ್ತ ಕಾರ್ಯದರ್ಶಿ ಸರೋಜಾ ತಮ್ಮ ಅನುಭವ ಹಂಚಿಕೊಂಡರು.`ಗ್ರಂಥಾಲಯದಲ್ಲಿನ ರ‌್ಯಾಕ್‌ಗಳು ಅಲುಗಾಡಿದಂತಾದವು. ಒಂದು ರೀತಿ ತಲೆಸುತ್ತಿದಂತಾಯಿತು. 5 ಮತ್ತು 6ನೇ ಮಹಡಿಯಲ್ಲಿನ ಸಿಬ್ಬಂದಿಗೂ ಇದೇ ರೀತಿಯ ಅನುಭವವಾಯಿತು~ ಎಂದು ವಾಚ್‌ಮನ್ ಶಿವಣ್ಣ ಪ್ರತಿಕ್ರಿಯಿಸಿದರು.ಹೊಸಕೋಟೆಯಲ್ಲಿ ಕಂಪನ: ಪಟ್ಟಣದ ವಿಶ್ವೇಶ್ವರಯ್ಯ ಬಡಾವಣೆಯ ಕೆಲವು ಭಾಗಗಳಲ್ಲಿ ಬುಧವಾರ ಮಧ್ಯಾಹ್ನ ಭೂಮಿ ಕಂಪಿಸಿದ ಬಗ್ಗೆ ವರದಿಯಾಗಿದೆ. ಗಂಗಮ್ಮಗುಡಿ ರಸ್ತೆಯ ಶ್ರೀನಿವಾಸ್ ಅವರ ಮನೆಯಲ್ಲಿ ಕೆಲವು ಫೋಟೋಗಳು ಕೆಳಕ್ಕೆ ಬಿದ್ದಾಗ ಗಾಬರಿಗೊಂಡ ಮನೆಯವರು ಮನೆಯಿಂದ ಆಚೆ ಓಡಿ ಬಂದುದಾಗಿ ತಿಳಿಸಿದರು. ಪಟ್ಟಣದ ಬೇರೆಲ್ಲೂ ಕಂಪನದ ಬಗ್ಗೆ ವರದಿಯಾಗಿಲ್ಲ.ಮೆಟ್ರೊ ಮೇಲೆ ಪರಿಣಾಮವಿಲ್ಲ

`ನಮ್ಮ ಮೆಟ್ರೊ~ದ ಎತ್ತರಿಸಿದ ಮಾರ್ಗ ಮತ್ತು ಅದರ ನಿಲ್ದಾಣಗಳಲ್ಲಿ ಭೂಕಂಪನದ ಯಾವುದೇ ಅನುಭವ ಆಗಲಿಲ್ಲ~ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ವಕ್ತಾರ ಬಿ.ಎಲ್.ವೈ.ಚವಾಣ್ ಅವರು ತಿಳಿಸಿದರು.`ಶಾಂತಿನಗರದಲ್ಲಿರುವ ನಿಗಮದ ಕಚೇರಿಯಲ್ಲಿ ಮಧ್ಯಾಹ್ನ ಕುರ್ಚಿಗಳು ಅಲುಗಾಡಿದ ಅನುಭವವಾಯಿತು. ಅದು ಬಿಟ್ಟರೆ ಮೆಟ್ರೊ ರೈಲುಗಳು ಓಡಾಡುತ್ತಿರುವ ಬೈಯಪ್ಪನಹಳ್ಳಿ- ಎಂ.ಜಿ.ರಸ್ತೆವರೆಗಿನ ಮಾರ್ಗದಲ್ಲಿ ಕಂಪನದ ಯಾವುದೇ ವರದಿಗಳು ಬಂದಿಲ್ಲ. ಹೀಗಾಗಿ ರೈಲುಗಳ ಓಡಾಟವನ್ನು ಸ್ಥಗಿತಗೊಳಿಸುವ ಪ್ರಶ್ನೆಯೇ ಉದ್ಭವವಾಗಲಿಲ್ಲ~ ಎಂದರು.

ಭೂಕಂಪನ: ಜನರ ಅನಿಸಿಕೆ...

`ಮಧ್ಯಾಹ್ನ 2.20ರ ವೇಳೆಗೆ ಚಾಮರಾಜಪೇಟೆಯ ಹೋಟೆಲ್‌ನಲ್ಲಿ ಊಟ ಮಾಡುತ್ತಿದ್ದೆ. ಒಂದು ಕ್ಷಣ ಭೂಮಿ ಕಂಪಿಸಿದ ಅನುಭವವಾಯಿತು~

-ಸೋಮಶೇಖರ್, ರಿಕ್ಷಾ ಚಾಲಕ

`ಕಂಪನ ನಡೆದುದು ನನಗೇನು ಗೊತ್ತಾಗಿಲ್ಲ. ನಮ್ಮ ಅಂಗಡಿಯ ಇಬ್ಬರು ಸಿಬ್ಬಂದಿ ಊಟ ಮಾಡುತ್ತಿದ್ದಾಗ ಲೋಟಗಳು ಅಲುಗಾಡಿಗಿದವು ಎಂದು ತಿಳಿಸಿದರು. ಮುಂಜಾಗ್ರತಾ ಕ್ರಮವಾಗಿ ಸ್ವಲ್ಪ ಹೊತ್ತು ಹೊರಗೆ ಬಂದು ನಿಂತೆವು~

-ಸುನಿಲ್, ಅಂಗಡಿ ನೌಕರ

`ನಮ್ಮಲ್ಲಿ ಕಂಪನದ ಅನುಭವವಾಗಿಲ್ಲ. ಮುನ್ನೆಚ್ಚರಿಕೆಯ ಕ್ರಮವಾಗಿ ಸಂಸ್ಥೆಯ ಮಾಲೀಕರು ರಜೆ ಘೋಷಿಸಿದರು~

- ಸುಧೀಂದ್ರ, ಖಾಸಗಿ ಜೈವಿಕ ತಂತ್ರಜ್ಞಾನ ಕಂಪೆನಿ ಎಂಜಿನಿಯರ್ಪಾಲಿಕೆಯಿಂದ ಮುನ್ನೆಚ್ಚರಿಕೆ

ಬುಧವಾರ ನಗರದಲ್ಲಿ ಭೂಮಿ ಕಂಪಿಸಿದ ಅನುಭವದಿಂದ ನಾಗರಿಕರು ಆತಂಕಗೊಂಡಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲ ನಿಯಂತ್ರಣ ಕೊಠಡಿಗಳಲ್ಲಿ ಸಿಬ್ಬಂದಿ, ಪ್ರಹರಿ ವಾಹನಗಳು ಹಾಗೂ ಇತರೆ ಉಪಕರಣಗಳನ್ನು ಸಜ್ಜಾಗಿಟ್ಟುಕೊಳ್ಳುವಂತೆ ಪಾಲಿಕೆ ಆಯುಕ್ತರು ಎಲ್ಲ ವಲಯಗಳ ಜಂಟಿ ಆಯುಕ್ತರು ಹಾಗೂ ಮುಖ್ಯ ಎಂಜಿನಿಯರ್‌ಗಳಿಗೆ ಸೂಚನೆ ನೀಡಿದ್ದಾರೆ.ಸಾರ್ವಜನಿಕರು ಯಾವುದೇ ಕಾರಣಕ್ಕೂ ಗಾಬರಿಪಡದೆ ತುರ್ತು ಸಂದರ್ಭಗಳಲ್ಲಿ ಪಾಲಿಕೆಯ ನಿಯಂತ್ರಣ ಕೊಠಡಿಗಳನ್ನು ಸಂಪರ್ಕಿಸಲು ಕೋರಲಾಗಿದೆ. ಸಹಾಯವಾಣಿ/ ದೂರವಾಣಿ ಸಂಖ್ಯೆ: 22660000/ 22221188.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.