ಸೋಮವಾರ, ಮೇ 23, 2022
28 °C

ಅಲ್ಪಾವಧಿ ಬಡ್ಡಿ ದರ ಹೆಚ್ಚಳ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ):   ಭಾರತೀಯ ರಿಸರ್ವ್ ಬ್ಯಾಂಕ್, 2010-11ನೇ ಹಣಕಾಸು ವರ್ಷದ ಮಧ್ಯಂತರ ತ್ರೈಮಾಸಿಕದ ಸಾಧನೆಯನ್ನು ಗುರುವಾರ (ಮಾರ್ಚ್ 17) ಪರಾಮರ್ಶಿಸಲಿದೆ.ಬ್ಯಾಂಕ್‌ನ ಗವರ್ನರ್ ಡಿ. ಸುಬ್ಬರಾವ್ ಅವರು ಹಣಕಾಸು ನೀತಿ  ಪ್ರಕಟಿಸಲಿದ್ದು, ಗರಿಷ್ಠ ಮಟ್ಟದ ಆಹಾರ ಹಣದುಬ್ಬರ, ಕೈಗಾರಿಕಾ ಉತ್ಪಾದನೆ ಕುಸಿತ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗೆ ಸಂಬಂಧಿಸಿದ ಅನಿಶ್ಚಿತತೆ ಹಿನ್ನೆಲೆಯಲ್ಲಿ ನೀತಿ ನಿರೂಪಣಾ ಬಡ್ಡಿ ದರಗಳನ್ನು  ಶೇ 0.25ರಷ್ಟು ಹೆಚ್ಚಿಸಬಹುದು ಎಂದು ನಿರೀಕ್ಷಿಸಲಾಗಿದೆ.ಜನವರಿ ತಿಂಗಳಲ್ಲಿಯೇ ಕೇಂದ್ರೀಯ ಬ್ಯಾಂಕ್ ತನ್ನ ಅಲ್ಪಾವಧಿ ಬಡ್ಡಿ ದರಗಳನ್ನು ಹೆಚ್ಚಿಸಿದ್ದು, ಇದುವರೆಗೆ ಬ್ಯಾಂಕ್ ವರ್ಷವೊಂದರಲ್ಲಿ 7 ಬಾರಿ ದರಗಳನ್ನು ಹೆಚ್ಚಿಸಿದಂತಾಗಿದೆ. ಬಡ್ಡಿ ದರಗಳನ್ನು ಇನ್ನಷ್ಟು ಹೆಚ್ಚಿಸುವುದರಿಂದ ಬೆಲೆ ಏರಿಕೆಗೆ ಕಡಿವಾಣ ವಿಧಿಸಲು ಸಾಧ್ಯವೇ ಎನ್ನುವುದರ ಬಗ್ಗೆ ಪರಿಣತರು ಖಚಿತ ಅಭಿಪ್ರಾಯ  ಹೊಂದಿಲ್ಲ. ‘ಆರ್‌ಬಿಐ’ ಮುಂದೇ ಕೆಲವೇ ಆಯ್ಕೆಗಳಿದ್ದು, ಬಡ್ಡಿ ದರ ಹೆಚ್ಚಿಸುವುದು ಅನಿವಾರ್ಯವಾಗಿದೆ.ಈಗ ಹಣದುಬ್ಬರವು ಗರಿಷ್ಠ ಮಟ್ಟದಲ್ಲಿಯೇ ಇರುವುದರಿಂದ ಅಲ್ಪಾವಧಿ ಬಡ್ಡಿ ದರಗಳನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಗಳು ಇವೆ ಎಂದು ನಿರೀಕ್ಷಿಸಲಾಗಿದೆ. ಬೆಳವಣಿಗೆ ಮತ್ತು ಹಣದುಬ್ಬರ ಮಧ್ಯೆ ಸಮತೋಲನ ಸಾಧಿಸಬೇಕಾಗಿರುವುದರಿಂದ ಬಡ್ಡಿ  ದರ ಹೆಚ್ಚಳದ ಬಗ್ಗೆ ಎಚ್ಚರಿಕೆ ಧೋರಣೆ ತಳೆಯಬೇಕಾಗಿದೆ.ಕೈಗಾರಿಕಾ ರಂಗದ ವಿರೋಧ: ಈ ಮಧ್ಯೆ, ಆರ್‌ಬಿಐನ ಸಂಭವನೀಯ ಅಲ್ಪಾವಧಿ ಬಡ್ಡಿ ಹೆಚ್ಚಳಕ್ಕೆ ವಿರೋಧ ವ್ಯಕ್ತಪಡಿಸಿರುವ ಕೈಗಾರಿಕಾ ಸಂಘಟನೆಗಳು, ಕೇಂದ್ರ ಸರ್ಕಾರದ ಯೋಜನೇತರ ವೆಚ್ಚ, ಉತ್ಪಾದನೇತರ ವೆಚ್ಚಗಳಿಗೆ ಕಡಿವಾಣ ವಿಧಿಸಲು ಮುಂದಾಗಬೇಕು ಎಂದು ಸಲಹೆ ನೀಡಿವೆ.ಇದುವರೆಗೆ ಜಾರಿಗೆ ತಂದಿರುವ ಹಣಕಾಸು ಮತ್ತು ತೆರಿಗೆ ಕ್ರಮಗಳು ಉದ್ದೇಶಿತ ಪ್ರಯೋಜನ ಒದಗಿಸುವಲ್ಲಿ ವಿಫಲವಾಗಿವೆ ಎಂದು ಕೈಗಾರಿಕಾ  ಮತ್ತು ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಅಭಿಪ್ರಾಯಪಟ್ಟಿದೆ.ಹಣದುಬ್ಬರ ಒತ್ತಡ ಹೆಚ್ಚುತ್ತಿರುವುದರಿಂದ ಬ್ಯಾಂಕ್ ಬಡ್ಡಿ ದರಗಳು ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿವೆ.  ಹಣದುಬ್ಬರವು ಸರಕುಗಳ ಪೂರೈಕೆ ಅಭಾವದಿಂದ ಉಂಟಾಗಿದ್ದು, ಅದನ್ನು ಬರೀ ಹಣಕಾಸು ಕ್ರಮಗಳಿಂದ ಪರಿಹರಿಸಲು ಸಾಧ್ಯವಿಲ್ಲ ಎಂದು ಅರ್ಥಶಾಸ್ತ್ರಜ್ಞ ಸಿದ್ದಾರ್ಥ ಶಂಕರ್ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.