ಗುರುವಾರ , ಮೇ 19, 2022
20 °C

ಅಳಿದ ಮೇಲೆ ಉಳಿದ ಬೆಳಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಳಿದ ಮೇಲೆ ಉಳಿದ ಬೆಳಕು

ಸ್ಟಾಕ್‌ಹೋಮ್, ಅಕ್ಟೋಬರ್ ಮೂರು, ಎರಡು ಸಾವಿರದ ಹನ್ನೊಂದು. ಖ್ಯಾತ ವೈದ್ಯ ವಿಜ್ಞಾನಿ ರಾಲ್ಫ್  ಸ್ಟೇಮನ್‌ರ ಮನೆಗೊಂದು ದೂರವಾಣಿ ಕರೆ. `ನಾವು ನೊಬೆಲ್ ಪ್ರಶಸ್ತಿ ಸಮಿತಿಯ ವತಿಯಿಂದ ಮಾತನಾಡುತ್ತಿದ್ದೇವೆ. ಸ್ಟೇಮನ್ ಅವರಿದ್ದಾರಾ?~. ಇತ್ತ ಕಡೆಯಿಂದ ಬೆಚ್ಚನೆಯ ಉಸಿರು. ಸ್ಟೇಮನ್ ಮೂರು ದಿನಗಳ ಹಿಂದಷ್ಟೇ ತೀರಿಕೊಂಡಿದ್ದರು. ನಾಲ್ಕು ವರ್ಷಗಳಿಂದ ಕಾಡುತ್ತಿದ್ದ ಪ್ಯಾನ್‌ಕ್ರಿಯಾಟಿಕ್ (ಮೇದೋಜೀರಕ ಗ್ರಂಥಿ) ಕ್ಯಾನ್ಸರ್‌ಗೆ ಅವರು ಬಲಿಯಾಗಿದ್ದರು. ನೊಬೆಲ್ ಪ್ರಶಸ್ತಿ ಸಮಿತಿಯ ದೂರವಾಣಿ ಕರೆಯಿಂದ ಸೂತಕದ ಮನೆಯಲ್ಲಿ ಸಣ್ಣದೊಂದು ಸಂಚಲನ.

ಶರೀರವಿಜ್ಞಾನ ಅಥವಾ ವೈದ್ಯಶಾಸ್ತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದವರಿಗೆ ನೀಡಲಾಗುವ 2011ರ ನೊಬೆಲ್ ಪ್ರಶಸ್ತಿ ಸ್ಟೇಮನ್ ಅವರಿಗೆ ದೊರೆತಿತ್ತು. ಬ್ರೂಸ್ ಬ್ಯೂಟ್ಲರ್ ಹಾಗೂ ಜ್ಯೂಲ್ಸ್ ಹಾಫ್‌ಮನ್ ಎಂಬ ವಿಜ್ಞಾನಿಗಳೂ ಈ ಪ್ರಶಸ್ತಿಯನ್ನು ಹಂಚಿಕೊಂಡಿದ್ದರು. ಈಗ ಸಂದಿಗ್ಧ ಪರಿಸ್ಥಿತಿ ಉಂಟಾಗಿದ್ದು ಸ್ಟೇಮನ್‌ರ ವಿಷಯದಲ್ಲಿ. ನೊಬೆಲ್ ಸಮಿತಿಯ ನಿಯಮಗಳ ಪ್ರಕಾರ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡುವಂತಿಲ್ಲ. ನೊಬೆಲ್ ಪ್ರಶಸ್ತಿಯ ಇತಿಹಾಸದಲ್ಲಿಯೇ ಕೇವಲ ಎರಡು ಬಾರಿ ಮಾತ್ರ ಮರಣೋತ್ತರ ಪ್ರಶಸ್ತಿ ನೀಡಲಾಗಿತ್ತು. 1931ರಲ್ಲಿ ಕವಿ ಎರಿಕ್ ಎಕ್ಸಲ್ ಕಾರ್ಲ್‌ಫೀಲ್ಡ್‌ರಿಗೆ ಸಾಹಿತ್ಯದಲ್ಲಿ ಹಾಗೂ 1961ರಲ್ಲಿ ವಿಶ್ವಸಂಸ್ಥೆಯ ಮುಖ್ಯಸ್ಥರಾಗಿದ್ದ ಡ್ಯಾಗ್ ಹ್ಯಾಮರ್‌ಜೋಲ್ಡ್‌ರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಗಿತ್ತು. ಆಫ್ರಿಕಾದಲ್ಲಿ ಶಾಂತಿಸಂಧಾನ ಮಾತುಕತೆಗೆ ಹೋಗುತ್ತಿದ್ದಾಗ ವಿಮಾನ ದುರಂತದಲ್ಲಿ ಹ್ಯಾಮರ್‌ಜೋಲ್ಡ್ ಸಾವನ್ನಪ್ಪಿದ್ದರು. ಆದರೆ ಈ ಬಾರಿ ನೊಬೆಲ್ ಪ್ರಶಸ್ತಿ ಪ್ರಕಟಿಸಿದಾಗ ಸ್ಟೇಮನ್ ತೀರಿಕೊಂಡ ವಿಷಯ ಸಮಿತಿಗೆ ತಿಳಿದಿರಲಿಲ್ಲ. ಪ್ರಶಸ್ತಿ ಪ್ರಕಟಗೊಂಡ ಮೂರು ದಿನಗಳ ಮುಂಚೆ, ಅಂದರೆ ಸೆಪ್ಟಂಬರ್ 30ರಂದೇ ಅವರು ವಿಧಿವಶರಾಗಿದ್ದರು.

ಇಮ್ಯುನಾಲಜಿ (ಪ್ರತಿರಕ್ಷಾ ಶಾಸ್ತ್ರ) ಕ್ಷೇತ್ರದಲ್ಲಿ ಜೀವನವಿಡೀ ಕೆಲಸ ಮಾಡಿ ರೋಗ ಉಂಟಾಗುವ ಕಾರಣಗಳ ಬಗ್ಗೆ ಹೊಸ ಹೊಳಹುಗಳನ್ನು ನೀಡಿದ ಹಾಗೂ ವಿಶೇಷವಾಗಿ ಕ್ಯಾನ್ಸರ್ ಮತ್ತು ಸೋಂಕುರೋಗಗಳ ತಡೆಗೆ ಹೊಸ ದಾರಿಗಳನ್ನು ಹುಡುಕಿದ, ಕೊನೆಗಾಲದಲ್ಲಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಕ್ಯಾನ್ಸರ್ ಕುರಿತ ತಮ್ಮ ಸಂಶೋಧನೆಗಳಿಗೆ ತಮ್ಮನ್ನೇ ಪ್ರಯೋಗಕ್ಕೆ ಒಡ್ಡಿಕೊಂಡು, ಮಾರಣಾಂತಿಕ ಕ್ಯಾನ್ಸರ್ ಅನ್ನು ಮುಂದೂಡಿದ ಸ್ಟೇಮನ್‌ರ ಸಾಧನೆಯನ್ನು ಕೊಂಡಾಡಿದ ನೊಬೆಲ್ ಸಮಿತಿ, `ಈ ಸಿಹಿಸುದ್ದಿಯನ್ನು ಕೇಳಲು ಅವರು ಬದುಕಿರಬೇಕಿತ್ತು~ ಎಂದು ಹೇಳಿ, ಪ್ರಶಸ್ತಿಯ ಮೊತ್ತವನ್ನು ಅವರ ವಾರಸುದಾರರಿಗೆ ನೀಡುವ ತೀರ್ಮಾನ ತೆಗೆದುಕೊಂಡಿತು. ಸ್ಟೇಮನ್‌ರ ಸಾವಿನ ದುಃಖದಲ್ಲಿದ್ದ ಕುಟುಂಬದ ಸದಸ್ಯರಿಗೆ (ಅವರಿಗೆ ಹೆಂಡತಿ ಹಾಗೂ ಮೂವರು ಮಕ್ಕಳಿದ್ದಾರೆ) ನೊಬೆಲ್ ಪ್ರಶಸ್ತಿ ಬಂದ ವಿಷಯ `ಕಹಿ ಸಿಹಿ~ಯ ಮಿಶ್ರಣವಾಗಿತ್ತು. `ಬೇವುಬೆಲ್ಲ~ ಎಂದರೆ ಇದೇ ತಾನೆ?

ರಾಲ್ಫ್  ಸ್ಟೇಮನ್

ದೇಹದಲ್ಲೊಂದು ಸೇನೆ!

1943ರಲ್ಲಿ ಕೆನಡಾದ ಮಾಂಟ್ರಿಯಲ್‌ನಲ್ಲಿ ಜನಿಸಿ, ನ್ಯೂಯಾರ್ಕಿನ ರಾಕ್‌ಫೆಲರ್ ವಿಶ್ವವಿದ್ಯಾಲಯದಲ್ಲಿ ವೈದ್ಯವಿಜ್ಞಾನಿಯಾಗಿದ್ದ ರ‌್ಯಾಲ್ಫ್ ಸ್ಟೇಮನ್ ಇಮ್ಯುನಾಲಜಿಯಲ್ಲಿ ಮಾಡಿದ ಸಾಧನೆಗಳನ್ನು ತಿಳಿಯುವ ಮೊದಲು, `ಇಮ್ಯುನಾಲಜಿ~ ಎಂಬ ಸಂಕೀರ್ಣ ಶಾಸ್ತ್ರದ ಬಗ್ಗೆ ಕೆಲವು ವಿಷಯಗಳನ್ನು ಸ್ಥೂಲವಾಗಿ ಚರ್ಚಿಸಬಹುದು. `ಇಮ್ಯುನಾಲಜಿ~ ಶಬ್ದ ಲ್ಯಾಟಿನ್ ಮೂಲದ `ಇಮ್ಯುನಿಸ್~ನಿಂದ ಬಂದದ್ದು. ಇಮ್ಯುನಿಸ್ ಎಂದರೆ ತೆರಿಗೆಯಿಂದ ವಿನಾಯಿತಿ. ಗ್ರೀಕ್ ದೊರೆಗಳ ಅಧಿಕಾರಿಗಳು ತೆರಿಗೆಯಿಂದ ವಿನಾಯಿತಿ ಪಡೆದಿದ್ದರು. ಇಂಥದೊಂದು ವಿನಾಯಿತಿ ನಮ್ಮ ದೇಹಶಾಸ್ತ್ರಕ್ಕೆ ಸಂಬಂಧಿಸಿದಂತೆಯೂ ಇದೆ. ನಮ್ಮ ದೇಹವನ್ನು ರೋಗಾಣುಗಳಿಂದ ಹಾಗೂ ಹೊರಗಿನ ಹಾನಿಕಾರಕ ವಸ್ತುಗಳಿಂದ ವಿನಾಯಿತಿ ದೊರಕಿಸಿಕೊಡಲು ಸದಾ ಹೋರಾಡುತ್ತಿರುವ ಮಿಲಿಟರಿ ವ್ಯವಸ್ಥೆಯೇ ಈ `ಇಮ್ಯೂನ್~ ಅಥವಾ ಪ್ರತಿರೋಧ ವ್ಯವಸ್ಥೆ. ಹೊರಗಿನ ರೋಗಾಣುಗಳಿಗೆ ನಮ್ಮ ದೇಹ ತೋರಿಸುವ ಪ್ರತಿರೋಧವೇ `ಇಮ್ಯುನಿಟಿ~ ಎಂದು ಹೇಳಬಹುದು.

ದೇಹದ `ತನ್ನತನ~ವನ್ನು ಸದಾ ಕಾಯುವ ಭಾರ ಈ ಇಮ್ಯೂನ್ ವ್ಯವಸ್ಥೆಯದ್ದು. ನಮ್ಮ ಗ್ರಹಿಕೆಗೂ ನಿಲುಕದ ಅದರದೇ ಆದ ಪ್ರತ್ಯೇಕ ಲೋಕವೊಂದನ್ನು ಅದು ಹೊಂದಿದೆ. ಕೋಟೆಯನ್ನು ಕಾವಲು ಕಾಯುವ ಸೈನಿಕರಂತೆ ದೇಹದ ಪ್ರತಿ ಜೀವಕೋಶದ ಸ್ಥಿತಿಗತಿಗಳನ್ನು ವಿಚಾರಿಸಿಕೊಳ್ಳುತ್ತಾ, ರೋಗಾಣುಗಳ ಆಕ್ರಮಣವನ್ನು ಎದುರಿಸುತ್ತಾ ಸದಾ ಚಲನಶೀಲವಾಗಿರುತ್ತದೆ.

ಇಮ್ಯೂನ್ ವ್ಯವಸ್ಥೆ ಎರಡು ಸ್ತರಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಮೊದಲನೆಯದು ನಮಗೆ ಹುಟ್ಟಿನಿಂದ ಸ್ವಾಭಾವಿಕವಾಗಿ ಬಂದ ರೋಗನಿರೋಧಕ ಶಕ್ತಿ. ಇದು `ಇನ್ನೇಟ್ ಇಮ್ಯೂನಿಟಿ~ (ಸ್ವಾಭಾವಿಕ ಪ್ರತಿರಕ್ಷೆ). ನಮ್ಮ ಚರ್ಮ, ಹಲವು ಕಿಣ್ವಗಳು, ಬಿಳಿಯ ರಕ್ತಕಣಗಳು, ಮ್ಯಾಕ್ರೋಫೇಜ್ ಹಾಗೂ ನ್ಯಾಚುರಲ್ ಕಿಲ್ಲರ್ ಎಂಬ ಜೀವಕೋಶಗಳು ಸ್ವಾಭಾವಿಕ ಪ್ರತಿರಕ್ಷೆಯಲ್ಲಿ ಪಾಲ್ಗೊಳ್ಳುತ್ತವೆ. ನಮ್ಮ ಚರ್ಮ ರೋಗಾಣುಗಳಿಗೆ ಅಭೇದ್ಯವೆನಿಸಿದರೆ, ಬಿಳಿಯ ರಕ್ತಕಣ ಹಾಗೂ ಮಾಕ್ರೋಫೇಜ್‌ಗಳು ಅವುಗಳನ್ನು ನುಂಗಿ ನಾಶ ಮಾಡುತ್ತವೆ. ನ್ಯಾಚುರಲ್ ಕಿಲ್ಲರ್ ಜೀವಕೋಶಗಳು ಹೊರಗಿನಿಂದಲೇ ರೋಗಾಣುಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸುತ್ತವೆ.

ಎರಡನೆಯ ಸ್ತರದ ಪ್ರತಿರಕ್ಷೆ ನಮಗೆ ಹುಟ್ಟಿನಿಂದ ಬಂದಿರದೆ, ಜೀವಿತ ಕಾಲದಲ್ಲಿ ರೋಗಾಣುಗಳಿಗೆ ಅನುಗುಣವಾಗಿ ರೂಪಾಂತರ ಹೊಂದಿ ನಮ್ಮನ್ನು ರಕ್ಷಿಸುತ್ತದೆ. ಇದನ್ನು `ಅಡಾಪ್ಟಿವ್ ಇಮ್ಯೂನಿಟಿ~ (ಹೊಂದಿಕೊಳ್ಳಬಲ್ಲ ಪ್ರತಿರಕ್ಷೆ) ಎನ್ನುತ್ತಾರೆ. `ಆ್ಯನ್ಟಿಬಾಡಿ~ (ಪ್ರತಿಕಾಯ) ಮತ್ತು `ಟಿ~ ಹಾಗೂ `ಬಿ~ ಲಿಂಫ್ಲೇಸೈಟ್‌ಗಳು (ದುಗ್ದಕಣಗಳು) ಈ ಕಾರ್ಯ ನಿರ್ವಹಿಸುತ್ತವೆ. ರೋಗಾಣುಗಳ ನಾಶದಲ್ಲಿ ಇದು ಅತ್ಯಂತ ಪರಿಣಾಮಕಾರಿಯಾಗಿದ್ದು, ಭವಿಷ್ಯದಲ್ಲಿ ಅದೇ ರೋಗಾಣುವನ್ನು ಗುರುತಿಸುವ ನೆನಪಿನಶಕ್ತಿಯನ್ನು ಗಳಿಸಿಕೊಳ್ಳುತ್ತದೆ.

ಪ್ರತಿರಕ್ಷೆಯ ಈ ಎರಡೂ ವಿಭಾಗಗಳ ಸೂಕ್ಷ್ಮವಿವರಗಳು, ಅವುಗಳ ಅಂತರ್‌ಸಂಬಂಧ, ರೋಗಾಣುಗಳನ್ನು ಅವು ಗುರುತಿಸುವ, ಗ್ರಹಿಸುವ ಪರಿ, ಜೀವಕೋಶಗಳಲ್ಲಿ ಆಗುವ ಯಾವುದೇ ಅಸಹಜ ಬದಲಾವಣೆಗಳಿಗೆ (ಉದಾ: ಕ್ಯಾನ್ಸರ್) ಸ್ಪಂದಿಸುವ ರೀತಿ- ಇವೆಲ್ಲವುಗಳನ್ನು ಅಭ್ಯಸಿಸಿ ವೈದ್ಯಶಾಸ್ತ್ರದಲ್ಲಿ ಭಾರೀ ಬದಲಾವಣೆಗೆ ಕಾರಣರಾದ ಮೂವರೂ ವಿಜ್ಞಾನಿಗಳಿಗೇ ಈ ಬಾರಿಯ ನೊಬೆಲ್ ಸಂದಿರುವುದು.

ಬ್ರೂಸ್ ಬ್ಯೂಟರ್

ನಾಳೆಗಳ ಬಗ್ಗೆ ಭರವಸೆ

ಇಮ್ಯೂನಿಟಿ ಎಂಬ ಎರಡು ಸುತ್ತಿನ ಕೋಟೆಗಳಲ್ಲಿ ಮೊದಲನೆಯ ರೋಗನಿರೋಧಕ ತಡೆಯಾದ ಇನ್ನೇಟ್ ಇಮ್ಯೂನಿಟಿಯ ಕುರಿತು ಬ್ರೂಸ್ ಬ್ಯೂಟ್ಲರ್ ಹಾಗೂ ಜ್ಯೂಲ್ಸ್ ಹಾಫ್‌ಮನ್ ಕೆಲಸ ಮಾಡಿದ್ದಾರೆ. ಇಮ್ಯೂನಾಲಜಿಯ ಮೂಲಭೂತ ಪ್ರಶ್ನೆಯಾದ ರೋಗಾಣುಗಳು ದೇಹವನ್ನು ಹೇಗೆ ಪ್ರವೇಶಿಸುತ್ತವೆ ಎಂಬುದರ ಕುರಿತು ಅಧ್ಯಯನ ನಡೆಸಿರುವ ಇವರು, ಬಿಳಿರಕ್ತಕಣಗಳ ಮೇಲೆ ಕುರ್ಚಿಗಳಂತೆ ಇರುವ `ಗ್ರಾಹಕ ಪ್ರೋಟೀನ್~ಗಳು (ರಿಸೆಪ್ಟಾರ್ ಪ್ರೋಟೀನ್) ರೋಗಾಣುಗಳನ್ನು ಗುರುತಿಸಿ ಅವುಗಳ ನಾಶಕ್ಕೆ ನಾಂದಿ ಹಾಡುತ್ತವೆ ಎಂದು 1990ರಲ್ಲಿ ಕಂಡುಹಿಡಿದರು. ಗ್ರಾಹಕ ಪ್ರೋಟೀನ್‌ಗಳಿಗೆ ಆಕರ್ಷಿತವಾಗಿ (ದೀಪಕ್ಕೆ ಆಕರ್ಷಿತವಾಗುವ ಪತಂಗಗಳಂತೆ) ಅವುಗಳ ಮೇಲೆ ಕೂರುವ ರೋಗಾಣುಗಳನ್ನು ಬಿಳಿರಕ್ತಕಣಗಳು ಫ್ಯಾಗೋಸೈಟೋಸಿಸ್ (ನುಂಗಿಹಾಕುವ ಪ್ರಕ್ರಿಯೆ) ಮೂಲಕ ನಾಶಮಾಡುತ್ತವೆ ಎಂದು ತಿಳಿಸಿದರು. ಇವರ ಸಂಶೋಧನೆಗಳು ರೋಗನಿರೋಧಕ ಲಸಿಕೆ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ಭರವಸೆ ಮೂಡಿಸಿವೆ. ಆಸಕ್ತಿಯ ವಿಷಯವೆಂದರೆ ಬ್ರೂಸ್ ಬ್ಯೂಟರ್ ಮಾನವನಲ್ಲಿ `ಟಾಲ್ ಲೈಕ್ ರಿಸೆಪ್ಟಾರ್~ (ಟಿಎಲ್‌ಆರ್) ಎನ್ನುವ ಗ್ರಾಹಕ ಪ್ರೋಟೀನ್ ಕಂಡುಹಿಡಿದರೆ, ಜ್ಯೂಲ್ಸ್ ಹಾಫ್‌ಮನ್ 1996ರಲ್ಲಿ ನೊಣಗಳು (ಫ್ರೂಟ್ ಫ್ಲೈ) ರೋಗನಿರೋಧ ಶಕ್ತಿಯನ್ನು ಹೇಗೆ ಹೊಂದುತ್ತದೆ ಎಂದು ಅಭ್ಯಸಿಸಿ ಸ್ವಾಭಾವಿಕ ಪ್ರತಿರಕ್ಷೆಯ ರಹಸ್ಯಗಳನ್ನು ಬಯಲು ಮಾಡಿದ್ದಾರೆ.

ರೋಗಾಣುಗಳು ಮೊದಲ ಸುತ್ತಿನ ತಡೆಯಾದ ಇನ್ನೇಟ್ ಇಮ್ಯೂನಿಟಿಯನ್ನು ಭೇದಿಸಿ ಒಳನುಗ್ಗಿದರೆ ಅವುಗಳನ್ನು ತಡೆಯಲು ಎರಡನೇ ಸ್ತರದ `ಅಡಾಪ್ಟಿವ್ ಇಮ್ಯೂನಿಟಿ~ ಕಾರ್ಯಪ್ರವೃತ್ತವಾಗುತ್ತದೆ. ಈ ಹಂತದ ರಹಸ್ಯಗಳನ್ನು ಅರಿಯುವಲ್ಲಿ ಸ್ಟೇಮನ್‌ರ ಕೊಡುಗೆ ಅಪಾರ. ಅಡಾಪ್ಟಿನ್ ಇಮ್ಯೂನಿಟಿಯಲ್ಲಿ ರೋಗಾಣುಗಳನ್ನು ನಾಶಮಾಡುವ ಕಣಗಳು ಮುಖ್ಯವಾಗಿ `ಟಿ~ ಹಾಗೂ `ಬಿ~ ಲಿಂಫೋಸೈಟ್‌ಗಳು. ಇವು ದುಗ್ದಗ್ರಂಥಿಗಳಲ್ಲಿ (ಲಿಂಫ್ ನೋಡ್ಸ್) ಹಾಗೂ ಸ್ಪ್ಲೀನ್ ಅಂಗದಲ್ಲಿ ಕೇಂದ್ರೀಕೃತವಾಗಿವೆ. ದೇಹದ ಎಲ್ಲ ಭಾಗಗಳಿಂದ ಒಳಪ್ರವೇಶಿಸುವ ರೋಗಾಣುಗಳನ್ನು ಇವುಗಳ ಬಳಿ ಕೊಂಡೊಯ್ಯುವ ವಾಹನ ಕೋಶವಾದ `ಡೆಂಡ್ರೈಟಿಕ್ ಕೋಶ~ವನ್ನು 1970ರಲ್ಲಿ ಸ್ಟೇಮನ್, ಝಾನ್ವಿರ್‌ಕಾನ್ ಎಂಬ ಇನ್ನೊಬ್ಬ ವಿಜ್ಞಾನಿಯ ಜೊತೆಗೂಡಿ ಕಂಡುಹಿಡಿದರು. ಅದಕ್ಕೂ ಮೊದಲು ಲ್ಯಾಂಗರ್‌ಹ್ಯಾನ್ ಎನ್ನುವ ವೈದ್ಯಕೀಯ ವಿದ್ಯಾರ್ಥಿ ಈ ಕೋಶಗಳನ್ನು ಗುರುತಿಸಿದ್ದನು. ಆದರೆ ಅವು ನರಕೋಶಗಳು ಎಂದು ಗ್ರಹಿಸಿದ್ದನು. ಈ ಕೋಶಗಳ ಹೊರಮೈ ಮರದ ಕೊಂಬೆಗಳ ಹಾಗೆ ಚಾಚಿಕೊಂಡಿರುವುದರಿಂದ (ಡೆಂಡ್ರಾನ್ ಎಂದರೆ ಲ್ಯಾಟಿನ್ ಭಾಷೆಯಲ್ಲಿ ಮರ) ಇವುಗಳಿಗೆ ಈ ಹೆಸರು. ಇವು ನಕ್ಷತ್ರಗಳ ಹಾಗೂ ಕಾಣುತ್ತವೆ. ರೋಗಾಣುಗಳು ಪ್ರವೇಶಿಸುವ ಎಲ್ಲ ಆಯಕಟ್ಟಿನ ಸ್ಥಳಗಳಲ್ಲಿ (ಉದಾಳ ಚರ್ಮ) ಇವು ಹರಡಿಕೊಂಡು ಕಾವಲುಗಾರರಂತೆ ನಮ್ಮನ್ನು ಕಾಯುತ್ತವೆ. ಇವೂ ಒಂದು ಬಗೆಯ ಬಿಳಿರಕ್ತಕಣಗಳು.

ರೋಗಾಣುಗಳು ದೇಹವನ್ನು ಪ್ರವೇಶಿಸುತ್ತ್ದ್ದಿದಂತೆಯೇ ತಮ್ಮ ಉದ್ದನೆಯ ಬಾಹುಗಳಿಂದ ಅವುಗಳನ್ನು ಹಿಡಿದು, ನುಂಗಿ, `ಟಿ~ ಲಿಂಪೋಸ್ಟೆಟ್‌ಗಳ ಬಳಿ ಅವುಗಳನ್ನು ಸಾಗಿಸುತ್ತವೆ. ಡೆಂಡ್ರೈಟಿಕ್ ಕೋಶಗಳು ಇಡೀ ಇಮ್ಯೂನ್ ವ್ಯವಸ್ಥೆಯನ್ನು ಉತ್ತೇಜಿಸುವ ಅಥವಾ ಮಂದಗೊಳಿಸುವ ಶಕ್ತಿಯನ್ನು ಹೊಂದಿವೆ.

ನಮ್ಮ ದೇಹದಲ್ಲಿ ಗಸ್ತು ತಿರುಗುವ ಅವು ರೋಗಾಣುಗಳನ್ನಷ್ಟೇ ಅಲ್ಲದೆ, ಕ್ಯಾನ್ಸರ್ ಕೋಶಗಳನ್ನು ಗುರುತಿಸಿ ಅವುಗಳನ್ನು ನಾಶಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕೆಲವು ಬಾರಿ ನಮ್ಮ ಇಮ್ಯೂನ್ ವ್ಯವಸ್ಥೆ ನಮಗೇ ಹಾನಿಕಾರಕವಾದಾಗ (ಆಟೋ ಇಮ್ಯೂನ್ ರೋಗಗಳು) ಡೆಂಡ್ರೈಟಿಕ್ ಕೋಶಗಳು ಮಧ್ಯೆ ಪ್ರವೇಶಿಸಿ ಪ್ರತಿರಕ್ಷೆಯ ಪ್ರಕ್ರಿಯೆಯನ್ನು ಮಂದಗೊಳಿಸಿ, ನಮ್ಮ ಜೀವಕೋಶಗಳ ಹಾನಿಯನ್ನು ತಪ್ಪಿಸುತ್ತವೆ. ಇದನ್ನು `ಇಮ್ಯೂನ್ ಟಾಲರನ್ಸ್~ (ಪ್ರತಿರಕ್ಷೆಯ ಸಹನಶಕ್ತಿ) ಎನ್ನುತ್ತಾರೆ. ಹೀಗೆ ಅಸ್ಥಿಮಜ್ಜೆಯಲ್ಲಿ ಜನಿಸಿ ಇಮ್ಯೂನ್ ವ್ಯವಸ್ಥೆಯ ಎಲ್ಲ ಕೋಶಗಳಿಗೆ ಮಧ್ಯವರ್ತಿಯಾಗಿ ಕೆಲಸ ಮಾಡುವ ಇವುಗಳನ್ನು `ಕಂಡಕ್ಟರ್ ಆಫ್ ಇಮ್ಯೂನ್ ಆರ್ಕೆಸ್ಟ್ರಾ~ (ಪ್ರತಿರಕ್ಷಾ ಸಂಗೀತ ನಿರ್ವಾಹಕ!) ಎನ್ನುತ್ತಾರೆ. ಇಮ್ಯೂನ್ ವ್ಯವಸ್ಥೆಯ `ಮಿಸ್ಸಿಂಗ್ ಲಿಂಕ್~ ಆಗಿದ್ದ ಡೆಂಡ್ರೈಟಿಕ್ ಕೋಶಗಳನ್ನು ಕಂಡುಹಿಡಿದು ಅವುಗಳ ಕಾರ್ಯವೈಖರಿ ವಿವರಿಸಿದ ಕೀರ್ತಿ ಸ್ಟೇಮನ್‌ರದ್ದಾಗಿದೆ.

ಡೆಂಡ್ರೈಟಿಕ್ ಕೋಶಗಳ ಸಂಶೋಧನೆಗಳನ್ನು ಆಧರಿಸಿ ವಿವಿಧ ರೋಗಗಳಿಗೆ ಹಾಗೂ ಕ್ಯಾನ್ಸರ್ ತಡೆಗೆ ಹೊಸ ಚಿಕಿತ್ಸಾ ವಿಧಾನಗಳನ್ನೂ, ರೋಗನಿರೋಧ ಲಸಿಕೆಯನ್ನು ಕಂಡುಹಿಡಿಯುವ ಕೆಲಸ ಸಾಗಿದೆ. ಈ ಸಂಶೋಧನೆಯನ್ನು ಆಧರಿಸಿದ ಜಗತ್ತಿನ ಮೊದಲ ಕ್ಯಾನ್ಸರ್ ಚಿಕಿತ್ಸಾ ಲಸಿಕೆ (ಥೆರಪ್ಯುಟಿಕ್ ವ್ಯಾಕ್ಸಿನ್) `ಡೆಂಡ್ರಾನ್ಸ್ ಪ್ರೊವೆಂಜ್~ ಪ್ರೊಸ್ಟೇಟ್ ಗ್ರಂಥಿಯ ಕ್ಯಾನ್ಸರಿನ ಚಿಕಿತ್ಸೆಗೆ ಬಳಸುತ್ತಾರೆ.

ಸಾವಿನ ಹೊಸ್ತಿಲಲ್ಲಿ ಬೆಳಕು!

ಕ್ಯಾನ್ಸರ್ ಚಿಕಿತ್ಸೆಗೆ ನೆರವಾಗುವ ಪರಿಣಾಮಕಾರಿ ಮೂಲಭೂತ ಸಂಶೋಧನೆಗಳನ್ನು ಮಾಡಿದ ಸ್ಟೇಮನ್ ಅದೇ ಕ್ಯಾನ್ಸರಿಗೆ ಬಲಿಯಾಗಿದ್ದು ಒಂದು ವಿಪರ್ಯಾಸ. ಆದರೆ ನೋವನ್ನೇ ಯಶಸ್ಸಿನ ಮೆಟ್ಟಿಲಾಗಿಸಿದ ಸ್ಟೇಮನ್ ತನ್ನ ಸಂಶೋಧನೆಯಾದ ಡೆಂಡ್ರೈಟಿಕ್ ಕೋಶಗಳನ್ನೇ ತನ್ನ ಮೇಲೆ ಪ್ರಯೋಗಿಸಿಕೊಂಡು, ಕ್ಯಾನ್ಸರ್ ಅನ್ನು ಮುಂದೂಡುತ್ತಾ ಬಂದರು. ನೊಬೆಲ್ ಪ್ರಶಸ್ತಿ ಪ್ರಕಟಿಸಿದ ಒಂದು ವಾರ ಮೊದಲು ಆಸ್ಪತ್ರೆಗೆ ದಾಖಲಾಗಿದ್ದ ಸ್ಟೇಮನ್‌ಗೆ ಅವರ ಮಗಳು ಹೇಳಿದ್ದಳು- `ಅಪ್ಪಾ ನೀನು ಬದುಕಬೇಕು, ಮುಂದಿನವಾರ ನಿನಗೆ ನೊಬೆಲ್ ಪ್ರಶಸ್ತಿ ಸಿಗುತ್ತದೆ. ಮಗಳ ಮಾತಿಗೆ ಸ್ಟೇಮನ್ ನಸುನಗುತ್ತ ಹೇಳಿದ್ದರು- `ಉಸಿರು ಹಿಡಿದುಕೊಂಡಿರಲು ಪ್ರಯತ್ನಿಸುತ್ತೇನೆ~. ಗುರುವಾರ (ಸೆ.29) ಕೋಮಾಗೆ ಜಾರಿದ ಸ್ಟೇಮನ್ ತನ್ನ ದೇಹದೊಳಗೆ ಇರುವ ಡೆಂಡ್ರೈಟಿಕ್ ಕೋಶಗಳನ್ನು ಅಭಿನಂದಿಸಿ, ಇಮ್ಯೂನ್ ವ್ಯವಸ್ಥೆಯ ಲೋಕದೊಳಕ್ಕೆ ಒಂದು ಸುತ್ತು ಹಾಕಿ ಮರುದಿನ ದೇಹ ತ್ಯಜಿಸಿರಬೇಕು...

ಪತಿಯ ಸಾವಿನ ದುಃಖದಲ್ಲಿದ್ದ ಕ್ಲಾಡಿಯ ಸ್ಟೇಮನ್ ಪ್ರಶಸ್ತಿ ದೊರೆತ ಸುದ್ದಿ ತಿಳಿದಾಗ ಹೇಳಿದ ಮಾತು ಸ್ಟೇಮನ್ ಬಗ್ಗೆ ಮಾತ್ರವಲ್ಲ ಇಡೀ ಬದುಕಿನ ವ್ಯಾಖ್ಯಾನವನ್ನೇ ಮಾಡಿದಂತಿದೆ.

`ಅದು ಒಂದು ಅಲೆಯಂತೆ

ಅಗಣಿತ ದುಃಖದ ಅಲೆಯಂತೆ, ನಂತರ

ತೇಲಿಬಂದಿತು ಒಂದು ಖುಷಿಯ, ಉತ್ಸಾಹದ ಅಲೆ~.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.