ಭಾನುವಾರ, ಮೇ 16, 2021
22 °C

ಅವ್ಯವಸ್ಥೆಯ ಗೂಡಿನೊಳಗೆ...

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

ಈ ದೇಶದ ಅಥ್ಲೆಟಿಕ್ಸ್ ಹಣೆಬರಹ ಮತ್ತೊಮ್ಮೆ ಬೆತ್ತಲಾಗಿದೆ!

ದಕ್ಷಿಣ ಕೊರಿಯಾದ ಡೇಗುವಿನಲ್ಲಿ ಆಗಸ್ಟ್ ಏಳರಿಂದ ಸೆಪ್ಟೆಂಬರ್ ನಾಲ್ಕರವರೆಗೆ ನಡೆದ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್ ಅದಕ್ಕೊಂದು ಸಾಕ್ಷಿ.ಇಲ್ಲಿ ನೋಡಿ, 20 ಲಕ್ಷ ಜನಸಂಖ್ಯೆಯ ದ್ವೀಪ ರಾಷ್ಟ್ರ ಗ್ರೆನೆಡಾ ಚಿನ್ನ ಗೆದ್ದು ಪದಕ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಆದರೆ ಪದಕ ಗೆದ್ದ 33 ರಾಷ್ಟ್ರಗಳ ಪಟ್ಟಿಯಲ್ಲಿ 110 ಕೋಟಿ ಜನಸಂಖ್ಯೆಯ ಭಾರತದ ಹೆಸರೇ ಇಲ್ಲ. ನಾಚಿಕೆಗೇಡಿನ ವಿಷಯವಿದು.ಈ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿದ್ದ ಪುಟ್ಟ ಪುಟ್ಟ ರಾಷ್ಟ್ರಗಳು ಕೂಡ ಅದ್ಭುತ ಸಾಧನೆ ಮಾಡಿವೆ. ಕೀನ್ಯಾ 17 ಪದಕ ಗೆದ್ದಿದೆ, ಜಮೈಕಾ 9 ಪದಕ ಜಯಿಸಿದೆ, ಇಥಿಯೋಪಿಯಾ 5 ಪದಕ ಗೆದ್ದಿದೆ. ಜಮೈಕಾದ ಜನಸಂಖ್ಯೆ 28 ಲಕ್ಷ. ಬೆಂಗಳೂರಿನ ಜನಸಂಖ್ಯೆ ಜಮೈಕಾದ ಮೂರರಷ್ಟಿದೆ. ಆದರೆ ಭಾರತಕ್ಕೆ ಒಂದು ಕಂಚಿನ ಪದಕ ಗೆಲ್ಲಲು ಸಾಧ್ಯವಾಗಿಲ್ಲ. ಈ ವಿಪರ್ಯಾಸಕ್ಕೆ ಕೊನೆ ಇಲ್ಲವೇ?`ಪೋಷಕರ ನೆರವಿನಿಂದಾಗಿ ನಾನು ಅಥ್ಲೆಟಿಕ್ಸ್‌ನಲ್ಲಿ ಇದ್ದೇನೆ. ಅವರ ಸಹಾಯವಿಲ್ಲದಿದ್ದರೆ ನಾನು ಆರು ವರ್ಷಗಳ ಹಿಂದೆಯೇ ಅಥ್ಲೆಟಿಕ್ಸ್‌ನಿಂದ ದೂರವಾಗಿರುತ್ತಿದ್ದೆ~ ಎಂದು ಡಿಸ್ಕಸ್ ಥ್ರೋ ಪಟು ಕರ್ನಾಟಕದ ವಿಕಾಸ್ ಗೌಡ ಹೇಳಿರುವ ಈ ಮಾತು ಭಾರತದ ಅಥ್ಲೆಟಿಕ್ಸ್‌ನ ಹಣೆಬರಹವನ್ನು ಬೆತ್ತಲು ಮಾಡುತ್ತದೆ.`ಕಾಮನ್‌ವೆಲ್ತ್ ಕೂಟದಲ್ಲಿ ನಾನು ಬೆಳ್ಳಿ ಪದಕ ಗೆದ್ದೆ. ಅಮೇಲೆ ಪರಿಸ್ಥಿತಿ ಬದಲಾಗಬಹುದು ಎಂದು ಭಾವಿಸಿದ್ದೆ. ಫೆಡರೇಷನ್ ಹಾಗೂ ಕೇಂದ್ರ ಸರ್ಕಾರವನ್ನು ಸಹಾಯಕ್ಕಾಗಿ ಸಂಪರ್ಕಿಸಿದಾಗ ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದಷ್ಟೇ ಹೇಳಿದರು. ಅಂತಹ ಭರವಸೆ ಪುನರಾವರ್ತನೆ ಆಗುತ್ತಲೇ ಇದೆ~ ಎಂದು ವಿಕಾಸ್ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.ನಿಜ, ವಿಕಾಸ್ ಗೌಡ ಅವರಂತಹ ಅಥ್ಲೀಟ್‌ಗಳ ಕಡೆಗೆ ಗಮನ ಹರಿಸುವವರೇ ಇಲ್ಲಿಲ್ಲ. ಅವರು ಅಮೆರಿಕದಲ್ಲಿ ಸ್ವಂತ ದುಡ್ಡಿನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅಲ್ಲಿ ಬದುಕುವುದೇ ಕಷ್ಟ. ಇನ್ನೆಲ್ಲಿ ಹೈಟೆಕ್ ಕೋಚಿಂಗ್ ಪಡೆಯುವುದು? ಅವರ ಕೋಚ್ ಜಾನ್ ಗಾಡಿನಾ. ಅವರೊಬ್ಬ ದುಬಾರಿ ಕೋಚ್.ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಈಗ ಭಾರತದ ಭರವಸೆ ವಿಕಾಸ್ ಮಾತ್ರ. ಅವರು ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿದ್ದರು. ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್ ತಲುಪ್ದ್ದಿದರು. ಪುರುಷರ ವಿಭಾಗದಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್.ಆದರೆ ಅವರಂತಹ ಅಥ್ಲೀಟ್‌ಗಳಿಗೆ ಇಲ್ಲಿ ಸರಿಯಾದ ನೆರವು ಸಿಗುತ್ತಿಲ್ಲ. ಇನ್ನು ಉಳಿದ ಅಥ್ಲೀಟ್‌ಗಳ ಪಾಡು ಹೇಗಿರಬಹುದು ಊಹಿಸಿ...? ಹೀಗಾದರೆ ಮುಂದೆ ಭಾರತ ಪದಕ ಗೆಲ್ಲಲು ಸಾಧ್ಯವೇ? ಒಲಿಂಪಿಕ್ಸ್ ಪದಕ ಪಟ್ಟಿಯಲ್ಲಿ ಭಾರತದ ಹೆಸರು ಕಾಣಿಸುವುದೇ?

ಅಮೆರಿಕ, ಚೀನಾ, ರಷ್ಯಾದಂತಹ ದೇಶಗಳ ಸ್ಪರ್ಧಿಗಳೊಂದಿಗೆ ಪೈಪೋಟಿ ನಡೆಸಲು ನಮ್ಮ ದೇಶದ ಅಥ್ಲೀಟ್‌ಗಳಿಗೆ ಸೂಕ್ತ ತರಬೇತಿ ಅಗತ್ಯ. ಅನುಭವಿ ಕೋಚ್‌ಗಳ ಮಾರ್ಗದರ್ಶನ ಬೇಕು. ವಿಶ್ವ ದರ್ಜೆಯ ಸೌಲಭ್ಯಗಳು ಅಗತ್ಯವಿದೆ.

 

ಮಾನಸಿಕ ಹಾಗೂ ದೈಹಿಕವಾಗಿ ಆಟಗಾರರನ್ನು ಸಶಕ್ತಗೊಳಿಸಬೇಕು. ಹಾಗೇ, ಪೌಷ್ಟಿಕಾಂಶ ಆಹಾರ ಬೇಕು. ಆದರೆ ಇಲ್ಲಿನ ಪರಿಸ್ಥಿತಿ ನೋಡಿದರೆ ಅಥ್ಲೀಟ್‌ಗಳು ತಲೆ ತಿರುಗಿ ಬೀಳಬೇಕು!ಈಜುಪಟು ಮೈಕಲ್ ಫೆಲ್ಪ್ಸ್ ಎಂಟು ಚಿನ್ನದ ಪದಕ ಗೆದ್ದಿದ್ದು ಅಮೆರಿಕಾದಲ್ಲಿರುವ ಸೂಕ್ತ ಸೌಲಭ್ಯಗಳಿಂದ. ಆದರೆ ಅಭಿನವ್ ಬಿಂದ್ರಾ ತಮ್ಮ ನಿವಾಸದಲ್ಲಿ ಶೂಟಿಂಗ್ ರೇಂಜ್ ನಿರ್ಮಿಸಿಕೊಂಡು, ಅಭ್ಯಾಸ ನಡೆಸಿ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದು ಬಂದಿದ್ದರು. ಇದು ಭಾರತದ ಅಥ್ಲೀಟ್‌ಗಳ ದುರದೃಷ್ಟ ಎನ್ನಬೇಕು ಅಷ್ಟೆ.ತುಂಬಾ ದೂರ ಹೋಗುವುದೇಕೆ? ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲೇ ಸೂಕ್ತ ವ್ಯವಸ್ಥೆ ಇಲ್ಲ. ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯ ವ್ಯವಸ್ಥೆ ಹದಗೆಟ್ಟು ಹೋಗಿದೆ. ಸರ್ಕಾರಿ ಹಾಸ್ಟೆಲ್‌ಗಳ ಪರಿಸ್ಥಿತಿ ಅಧೋಗತಿ. ಪೋಷಕಾಂಶ ಆಹಾರ ನೀಡುತ್ತೇವೆ ಎಂದು ಹೇಳಿ ನಿಂಬೆ ಹಣ್ಣಿನ ಜ್ಯೂಸ್ ನೀಡುತ್ತಾರೆ!ಈ ದೇಶದ ಕ್ರೀಡಾ ವ್ಯವಸ್ಥೆ ಎಷ್ಟೊಂದು ಹದಗೆಟ್ಟಿದೆ ಎಂಬುದಕ್ಕೆ ಕ್ರೀಡಾ ಆಡಳಿತದಾರರಾದ ಸುರೇಶ್ ಕಲ್ಮಾಡಿ ಹಾಗೂ ಲಲಿತ್ ಭಾನೋಟ್ ಜೈಲಿನಲ್ಲಿ ಕಂಬಿ ಏಣಿಸುತ್ತಿರುವುದೇ ಸಾಕ್ಷಿ.ಐದು ಬಾರಿಯ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್ ಒಲಿಂಪಿಕ್‌ಗೆ ಅರ್ಹತೆ ಪಡೆಯಲು ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ವಿದೇಶಿ ಕೋಚ್ ನೇಮಿಸಿ ಎಂಬ ಅವರ ಮನವಿ ಯಾರ ಕಿವಿಯನ್ನೂ ತಟ್ಟುತ್ತಿಲ್ಲ. ಈ ಬಗ್ಗೆ ಮೇರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಧಿಯಿಲ್ಲದೇ ಅವರೀಗ ಪುರುಷ ತಂಡದ ಕೋಚ್‌ನ ಮಾರ್ಗದರ್ಶನ ಪಡೆಯುತ್ತಿದ್ದಾರೆ.ಹಾಗೇ, ಪಿಸ್ತೂಲ್ ತಂಡಕ್ಕೆ ಕೋಚ್ ಇಲ್ಲ. ಶೂಟರ್ ಅಭಿನವ್ ಬಿಂದ್ರಾ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತಕ್ಕೆ ವೈಯಕ್ತಿಕ ವಿಭಾಗದಲ್ಲಿ ಸ್ವರ್ಣ ಪದಕ ಗೆದ್ದುಕೊಟ್ಟ ಮೊದಲ ಸ್ಪರ್ಧಿ. ಇಂತಹ ಸ್ಪರ್ಧೆಯೇ ಈಗ ಸಂಕಷ್ಟದಲ್ಲಿದೆ. ಈಗ ಹೇಳಿ, ಇಲ್ಲಿ ತಪ್ಪು ಯಾರದ್ದು?ಬೀಜಿಂಗ್ ಒಲಿಂಪಿಕ್ಸ್‌ನ ಕುಸ್ತಿಯಲ್ಲಿ ಪದಕ ಗೆದ್ದ ಸುಶೀಲ್‌ಗೆ ಕೋಚ್ ಯಾರಿದ್ದರು ಹೇಳಿ? ಒಬ್ಬ ಕುಸ್ತಿ ಸ್ಪರ್ಧಿಯ ಜೊತೆ ಫಿಸಿಯೊ ಇರಬೇಕು. ಸೂಕ್ತ ಕೋಚ್ ಇರಬೇಕು. ಆದರೆ ಇವರ‌್ಯಾರನ್ನು ಬೀಜಿಂಗ್ ಕಳುಹಿಸಿರಲಿಲ್ಲ.ಪಾಪಾ ಸುಶೀಲ್ ತಾನೇ ಏನು ಮಾಡಿಯಾರು? ತಂಡದ ಮ್ಯಾನೇಜರ್ ಆಗಿ ತೆರಳಿದ್ದ ಕರ್ತರ್ ಸಿಂಗ್ ಅವರೇ ಮಸಾಜರ್ ಕೆಲಸ ಮಾಡಬೇಕಾಯಿತು! ಇಷ್ಟೆಲ್ಲಾ ಕಷ್ಟಗಳ ಮಧ್ಯೆ ಪದಕ ಗೆದ್ದ್ದ್ದಿದರು ಸುಶೀಲ್.ಅಥ್ಲೀಟ್‌ಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆಯೇ ಸೌಲಭ್ಯಗಳ ಕೊರತೆ. ಸರ್ಕಾರ ಹಾಗೂ ಕೀಡಾ ಸಂಸ್ಥೆಗಳಿಗೆ ಈ ಸಮಸ್ಯೆ ಇನ್ನೂ ಅರ್ಥವಾಗಿಲ್ಲ. ಕಾರ್ಪೊರೇಟರ್‌ಗಳಿಗೆ ಕ್ರಿಕೆಟ್ ಬಿಟ್ಟರೆ ಬೇರೆ ಕ್ರೀಡೆ ಗೊತ್ತೇ ಇಲ್ಲವೇನೋ?ಹಾಗೇ, ವಿದೇಶದಲ್ಲಿ ಸ್ಪರ್ಧೆಗಳು ನಡೆಯುವಾಗ ಕೆಲ ಅಥ್ಲೀಟ್‌ಗಳಿಗೆ ಗರ ಬಡಿಯುತ್ತದೆ. ದೇಶಿ ಕ್ರೀಡಾಕೂಟಗಳಲ್ಲಿ ತೋರುವ ಪ್ರದರ್ಶನವನ್ನೂ ಅವರು ಪುನರಾವರ್ತಿಸಲು ಪರದಾಡುತ್ತಾರೆ. ಕೊಂಚ ಪ್ರಚಾರಕ್ಕೆ ಬರುತ್ತಿದ್ದಂತೆ ಅಡ್ಡ ದಾರಿ ಹಿಡಿಯುತ್ತಾರೆ. ಇತ್ತೀಚೆಗೆ ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದ ಎಂಟು ಮಂದಿ ಅಥ್ಲೀಟ್‌ಗಳೇ ಅದಕ್ಕೆ ಸಾಕ್ಷಿ.ಹಾಗಾಗಿಯೇ, ಮುಂದಿನ ವರ್ಷ ಲಂಡನ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತ ಪದಕ ಗೆಲ್ಲುವ ಭರವಸೆಯನ್ನೇ ಕ್ರೀಡಾ ಪ್ರೇಮಿಗಳು ಇಟ್ಟುಕೊಂಡಿಲ್ಲ. ಈ ದೇಶ ಅಥ್ಲೆಟಿಕ್ಸ್‌ನಲ್ಲಿ ಸುಧಾರಣೆ ಕಾಣುವುದು ಯಾವಾಗ ಹೇಳಿ?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.