ಮಂಗಳವಾರ, ಜೂನ್ 22, 2021
29 °C

ಅಶ್ಲೀಲ ಚಿತ್ರ ವೀಕ್ಷಣೆ ಪ್ರಕರಣ: ಸವದಿ ತಪ್ಪಿತಸ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಣೆಗೆ ಸಂಬಂಧಿಸಿದ ಸದನದ ವಿಚಾರಣಾ ಸಮಿತಿ ಸೋಮವಾರ ವಿಧಾನಸಭೆಯ ಅಧ್ಯಕ್ಷ ಕೆ.ಜಿ.ಬೋಪಯ್ಯ ಅವರಿಗೆ ವರದಿ ಸಲ್ಲಿಸಿದ್ದು, ಮಾಜಿ ಸಚಿವ ಲಕ್ಷ್ಮಣ ಸವದಿ ಅವರನ್ನು ಸದನಕ್ಕೆ ಕರೆಸಿ ಎಚ್ಚರಿಕೆ ನೀಡುವಂತೆ ಶಿಫಾರಸು ಮಾಡಿದೆ. ಸಿ.ಸಿ.ಪಾಟೀಲ ಮತ್ತು ಕೃಷ್ಣ ಪಾಲೆಮಾರ್ ಅವರ ವಿರುದ್ಧದ ಆರೋಪ ಸಾಬೀತುಪಡಿಸಬಲ್ಲ ಸಾಕ್ಷ್ಯಾಧಾರಗಳಿಲ್ಲ ಎಂದು ತಿಳಿಸಿದೆ.ಸೋಮವಾರ ಸಂಜೆ ಸಮಿತಿಯ ಅಧ್ಯಕ್ಷ  ಶ್ರೀಶೈಲಪ್ಪ ಬಿದರೂರು ನೇತೃತ್ವದಲ್ಲಿ ಕೊನೆಯ ಸುತ್ತಿನ ಸಭೆ ನಡೆಯಿತು. ಬಳಿಕ ಸದಸ್ಯರಾದ ನೆಹರು ಓಲೇಕಾರ, ಬಿ.ಸುರೇಶ್‌ಗೌಡ ಮತ್ತು ಎಸ್.ಆರ್.ವಿಶ್ವನಾಥ್  ಅವರೊಂದಿಗೆ ಬೋಪಯ್ಯ ಅವರ ಕಚೇರಿಗೆ ತೆರಳಿದ ಬಿದರೂರು ಅವರು, ಸಮಿತಿಯ ವರದಿಯನ್ನು ಸಲ್ಲಿಸಿದರು.

 

38 ಪುಟಗಳ ವರದಿ ಮತ್ತು ಸಂಬಂಧಿಸಿದ ದಾಖಲೆಗಳನ್ನು ಸಮಿತಿ ಸ್ಪೀಕರ್ ಅವರಿಗೆ ಸಲ್ಲಿಸಿದೆ. ವರದಿ ಸಲ್ಲಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಬಿದರೂರು, `ಸ್ಪೀಕರ್ ಅವರು ನೀಡಿದ್ದ ಆದೇಶದ ಪರಿಮಿತಿಯಲ್ಲಿ ಸಮಗ್ರ ವಿಚಾರಣೆ ನಡೆಸಿ ವರದಿ ಸಲ್ಲಿಸಿದ್ದೇವೆ. ನಿಷ್ಪಕ್ಷಪಾತವಾಗಿ ವರದಿ ಸಿದ್ಧಪಡಿಸಿ ಸಲ್ಲಿಸಿದ್ದು, ಒಂದು ಸವಾಲಿನ ಕೆಲಸವನ್ನು ಸರಿಯಾಗಿ ನಿರ್ವಹಿಸಿದ್ದೇವೆ~ ಎಂದರು.

 

ಆರೋಪ ಸಾಬೀತು: ಉನ್ನತ ಮೂಲಗಳ ಪ್ರಕಾರ, `ಸವದಿ ತಪ್ಪೆಸಗಿರುವುದು ದೃಢಪಟ್ಟಿದೆ ಎಂದು ಸಮಿತಿ ವರದಿಯಲ್ಲಿ ತಿಳಿಸಿದೆ. ಅವರು ಸದನದಲ್ಲಿ ವೀಕ್ಷಿಸಿದ ಅಶ್ಲೀಲ ದೃಶ್ಯ ವಿಚಾರಣೆ ವೇಳೆ ಲಭ್ಯವಾಗಿದ್ದು, ಮಾಜಿ ಸಚಿವರು ಸದನದ ನಿಯಮಗಳಿಗೆ ವಿರುದ್ಧವಾಗಿ ನಡೆದಿರುವುದು ದೃಢಪಟ್ಟಿದೆ. ಸ್ಪೀಕರ್ ಅವರನ್ನು ಸದನಕ್ಕೆ ಕರೆಸಿ ಎಚ್ಚರಿಕೆ ನೀಡುವ ಮೂಲಕ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಬೇಕು~ ಎಂದು ಸಮಿತಿ ಶಿಫಾರಸು ಮಾಡಿದೆ.ಇದೇ ಪ್ರಕರಣದಲ್ಲಿ ಸಿಲುಕಿದ್ದ ಮಾಜಿ ಸಚಿವರಾದ ಸಿ.ಸಿ.ಪಾಟೀಲ ಮತ್ತು ಕೃಷ್ಣ ಪಾಲೆಮಾರ್ ವಿರುದ್ಧದ   ಆರೋಪ ಸಾಬೀತುಪಡಿಸುವ ಸಾಕ್ಷ್ಯಗಳು ಲಭ್ಯವಾಗಿಲ್ಲ ಎಂದು ವಿಚಾರಣಾ ಸಮಿತಿ ಅಭಿಪ್ರಾಯಪಟ್ಟಿದೆ. ಈ ಇಬ್ಬರಿಗೆ ಸಂಬಂಧಿಸಿದಂತೆ ಮುಂದಿನ ತೀರ್ಮಾನ ಕೈಗೊಳ್ಳುವುದನ್ನು ಸ್ಪೀಕರ್ ವಿವೇಚನೆಗೆ ಬಿಟ್ಟಿರುವುದಾಗಿ ಸಮಿತಿ ವರದಿಯಲ್ಲಿ ಉಲ್ಲೇಖಿಸಿದೆ ಎಂದು ಗೊತ್ತಾಗಿದೆ.`ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಣೆಗೆ ಸಂಬಂಧಿಸಿದಂತೆ ದೃಶ್ಯಾವಳಿಗಳನ್ನು ಪ್ರಸಾರ ಮಾಡಿರುವ ದೃಶ್ಯ ಮಾಧ್ಯಮಗಳು ತಪ್ಪೆಸಗಿವೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಕೆಲವು ಮಾಧ್ಯಮಗಳು ಸದನದಲ್ಲಿ ನಡೆದ ಘಟನೆಗೆ ತಳುಕು ಹಾಕಿ ಇತರೆ ದೃಶ್ಯಗಳನ್ನೂ ಪ್ರಸಾರ ಮಾಡಿವೆ. ಇಂತಹ ಘಟನೆಗಳು ನಡೆಯದಂತೆ ಕಡಿವಾಣ ಹಾಕಬೇಕು. ಸದನದ ಕಲಾಪಗಳ ನೇರ ಪ್ರಸಾರಕ್ಕೆ ಅವಕಾಶ ನೀಡಬೇಕು.

 

ಆದರೆ, ಸದನದ ಕಲಾಪಕ್ಕೆ ಹೊರತಾದ ಇತರೆ ನಡವಳಿಕೆಗಳು ಮತ್ತು ವಿಷಯಗಳಿಗೆ ಸಂಬಂಧಿಸಿದ ವರದಿ, ಕಾರ್ಯಕ್ರಮ ಪ್ರಸಾರ ಮಾಡುವ ಮುನ್ನ ಸ್ಪೀಕರ್ ಅನುಮತಿ ಪಡೆಯುವುದನ್ನು ಕಡ್ಡಾಯ ಗೊಳಿಸಬೇಕು~ ಎಂಬ ಶಿಫಾರಸು ಕೂಡ ವರದಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.ಮೊಬೈಲ್ ನಿಷೇಧ: ಸದನದ ಒಳಗೆ ಮೊಬೈಲ್ ತರುವುದು ಮತ್ತು ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಬೇಕು. ದಿನಪತ್ರಿಕೆಗಳು ಸೇರಿದಂತೆ ಯಾವುದೇ ಪತ್ರಿಕೆಗಳನ್ನು ಸ್ಪೀಕರ್ ಅನುಮತಿ ಇಲ್ಲದೇ ಸದನದ ಒಳಕ್ಕೆ ತರುವಂತಿಲ್ಲ. ಈ ನಿಯಮವನ್ನೂ ಬಿಗಿಯಾಗಿ ಜಾರಿಗೊಳಿಸಬೇಕು ಎಂಬ ಶಿಫಾರಸು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.