ಸೋಮವಾರ, ಜೂನ್ 14, 2021
20 °C
ಹವ್ಯಾಸದ ಹಾದಿ

ಅಶ್ವಿನಿ ಕೈಚಳಕದಲ್ಲಿ ಹೂರಾಶಿ

ಎಸ್‌.ಎಚ್‌. Updated:

ಅಕ್ಷರ ಗಾತ್ರ : | |

ಕಲ್ಪನೆಗಳಿಗೆ ತೆರೆದುಕೊಳ್ಳುತ್ತಾ ಬಲಿಯುತ್ತದೆ ಹವ್ಯಾಸ. ಅದೇ ಗುಂಗಿಗೆ ಬಿದ್ದು ದಿನಕ್ಕೊಂದು ಬಗೆಯ ಪ್ರಯತ್ನ ಮಾಡುತ್ತಾ ಹೊಸಬಗೆಯ ವಿನ್ಯಾಸ ಹುಟ್ಟಿಕೊಳ್ಳುತ್ತದೆ. ಹಾಗೆಯೇ ಪ್ರಯತ್ನದ ಬೆನ್ನುಹತ್ತಿ ಬಗೆಬಗೆಯ ಹವ್ಯಾಸ ರೂಢಿಸಿಕೊಂಡವರು ಅಶ್ವಿನಿ ಕೆ.ಭಟ್.ಉತ್ತರ ಕನ್ನಡದ ಸಿದ್ಧಾಪುರದವರಾದ ಅಶ್ವಿನಿ  ಸುಮಾರು 18 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಸದ್ಯ ಯಲಹಂಕ ಉಪನಗರದಲ್ಲಿ ವಾಸಿಸುತ್ತಿರುವ ಅವರು ಪ್ರೀತಿಯ ಹೂಗಿಡಗಳಿಗೆ ನೀರೆರೆಯುತ್ತಲೇ ಇದ್ದಾರೆ. ಹೂವುಗಳ ಬಣ್ಣ, ಆಕಾರ ವೈವಿಧ್ಯಗಳಿಗೆ ಮಾರುಹೋಗಿದ್ದ ಅವರು ತನ್ನ ಹವ್ಯಾಸಗಳಲ್ಲೂ ಅನೇಕ ಬಗೆಯ ಹೂವುಗಳನ್ನೇ ಅರಳಿಸಿದ್ದಾರೆ.ಯಾವೆಲ್ಲಾ ವಸ್ತುಗಳಿಂದ ಹೂವಿನ ನಿಜ ಅಂದ ಸೃಷ್ಟಿಸಬಹುದು ಎಂದು ಸದಾ ಯೋಚಿಸುತ್ತಿರುವ ಅವರಿಗೆ ದಿನದಲ್ಲಿ ಕನಿಷ್ಠ ಅರ್ಧ ಗಂಟೆಯಾದರೂ ಕ್ರಾಫ್ಟ್‌ ಕೆಲಸ ಮಾಡಲೇಬೇಕು. ಅವರದ್ದೇ ಆದ ಸ್ವಂತ ಕಂಪೆನಿಯೂ ಇದ್ದು ಹವ್ಯಾಸಕ್ಕಾಗಿ ತುಸು ಸಮಯ ಹೊಂದಿಸಿಕೊಳ್ಳುತ್ತಾರೆ. ಅನೇಕ ಬಾರಿ ಪ್ರಯಾಣ ಬೆಳೆಸುವಾಗ ಕಾರ್‌ನಲ್ಲಿ ಮನಸು ಬಯಸುವ ಹವ್ಯಾಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಹೀಗಾಗಿ ಕಾರ್‌ನಲ್ಲಿ ಸದಾ ಪೇಪರ್‌, ಕತ್ತರಿ ಹಾಗೂ ಅದಕ್ಕೆ ಬೇಕಾಗುವ ಗ್ಲೂ ಇದ್ದೇ ಇರುತ್ತದೆ.ಅಂದಹಾಗೆ ಕ್ರೇಪ್‌, ಕಲರ್‌, ಕಾರ್ಡ್‌ ಬೋರ್ಡ್‌ ಪೇಪರ್‌ಗಳು, ಸ್ಪಾಂಜ್‌ ಶೀಟ್‌, ಸಾಕ್ಸ್‌ ಕ್ಲೋತ್‌ ಶೀಟ್‌, ಉಣ್ಣೆ, ರೇಷ್ಮೆ ಗೂಡು, ಥರ್ಮಕೋಲ್‌, ಬೆಂಕಿಕಡ್ಡಿ, ಸೋರೆಕಾಯಿ ಬೀಜ, ಕಟ್‌ ಪೀಸ್‌ ಬಟ್ಟೆ ತುಂಡುಗಳು, ಬ್ಲೌಸ್‌ ಪೀಸ್‌ಗಳು, ಪ್ಲಾಸ್ಟಿಕ್‌ ಕವರ್‌ಗಳು... ಹೀಗೆ ಅಶ್ವಿನಿ ಅವರ ಕಲ್ಪನೆಯಲ್ಲಿ ಎಲ್ಲವೂ ಪುಷ್ಪಗಳಾಗಿ ಅರಳುತ್ತವೆ. ಎಲ್ಲೇ ಹೋಗಲಿ, ಯಾವುದೇ ಬಗೆಯ ವಿಶೇಷ ಕಲಾಕೃತಿ ನೋಡಲಿ ತಾನೂ ಅಂಥದ್ದೇ ವಿನ್ಯಾಸದ  ವಸ್ತು ಮಾಡಬೇಕು ಎಂದು ಅಶ್ವಿನಿ ಪ್ರಯತ್ನಿಸುತ್ತಾರೆ.ಶಾಲಾ ದಿನಗಳಲ್ಲಿ ಹೇಳಿಸಿಕೊಂಡ ಕ್ರೋಶಾ ಪಾಠ, ಅಮ್ಮ ಮಾಡುತ್ತಿದ್ದ ಪೇಪರ್‌ ಮಾಲೆ, ಏಲಕ್ಕಿ ಬೀಜದ ವಾಲ್‌ ಹ್ಯಾಂಗಿಂಗ್‌ಗಳು ಅಶ್ವಿನಿ ಅವರಿಗೆ ಸ್ಫೂರ್ತಿಯಾದವು. ‘ಕ್ರಿಯಾಶೀಲತೆಯನ್ನು ಒರೆಗೆಹಚ್ಚುವ ಏನಾದರೂ ಕೆಲಸದಲ್ಲಿ ಮೊದಲಿನಿಂದಲೂ ನನ್ನನ್ನು ನಾನು ತೊಡಗಿಸಿಕೊಳ್ಳುತ್ತಿದ್ದೆ.ದಾವಣೆಗೆರೆಯಲ್ಲಿ ಓದಿದ ನಾನು ಗಣಪತಿ ಹಬ್ಬದ ಸಂದರ್ಭದಲ್ಲಿ ಪೇಪರ್‌ ಮಾಲೆ ಮಾಡಿಕೊಡುತ್ತಿದ್ದೆ. ಅದೂ ಅಲ್ಲದೆ ನಿಯತಕಾಲಿಕೆಗಳಲ್ಲಿ ಬಂದ ಕ್ರಾಫ್ಟ್‌ ಸುದ್ದಿಗಳನ್ನು ಪ್ರೀತಿಯಿಂದ ನೋಡಿ ನಾನೂ ಮಾಡಲು ಮುಂದಾಗುತ್ತಿದ್ದೆ. ಅದೇ ಪ್ರಯತ್ನದಲ್ಲಿ ಸಿರಿಂಜ್‌ ಬಾಟಲಿಗಳ ಮಂಟಪವನ್ನು ಒಂಬತ್ತನೇ ತರಗತಿಯಲ್ಲಿ ಮಾಡಿ ಹಿಗ್ಗಿದ್ದೆ’  ಎನ್ನುತ್ತಾರೆ ಅಶ್ವಿನಿ.ಕ್ರೋಶಾ, ನಿಟ್ಟಿಂಗ್‌, 3ಡಿ ಆರಿಗಾಮಿ, ಫಿಶ್‌ ವೈಯರ್‌ನಿಂದ ವಿವಿಧ ವಸ್ತುಗಳನ್ನು ತಯಾರಿಸುವ ಅಶ್ವಿನಿ ಹವ್ಯಾಸಕ್ಕೆಂದೇ ಹೆಚ್ಚಿಗೆ ಏನನ್ನೂ ಕೊಂಡು ತರುವವರಲ್ಲ. ಬಳಸಿ ಉಳಿದ ವಸ್ತುಗಳನ್ನೇ ಅಲ್ಲಲ್ಲಿ ಎಸೆಯುವ ಬದಲು ಅವುಗಳಿಂದಲೇ ಮನಸೆಳೆಯುವ ಚಿತ್ರ ಮೂಡಿಸಬಹುದು ಎಂಬುದು ಅವರ ಕಟ್ಟುಪಾಡು. ಸ್ನೇಹಿತೆಯರಿಂದ ಹೇಳಿಸಿಕೊಂಡು ಇಲ್ಲವೇ ಸಮಯ ಸಿಕ್ಕಾಗ ಅಂತರ್ಜಾಲ ತಡಕಾಡಿ ವಿವಿಧ ಬಗೆಯ ಕೌಶಲವನ್ನು ಅರಿತುಕೊಳ್ಳುತ್ತಾರವರು.ಏನೇ ಮಾಡಲಿ ಅದನ್ನು ಮುಗಿಸಲು ತವಕಿಸುವ ಅವರು ಹೆಚ್ಚು ದಿನಗಳ, ಹೆಚ್ಚು ಪರಿಶ್ರಮ ಬೇಡುವ ಕೆಲಸವನ್ನು ಮತ್ತೆ ಮತ್ತೆ ಮಾಡಲು ಇಚ್ಛಿಸುವುದಿಲ್ಲ. ಮನೆ, ಕಚೇರಿ ಎಲ್ಲವನ್ನೂ ನಿಭಾಯಿಸಬೇಕಿರುವುದರಿಂದ ಅವರು ಯಾವುದೇ ಕೆಲಸ ಪ್ರಾರಂಭಿಸಿದರೂ ಹೆಚ್ಚೆಂದರೆ ಒಂದು ವಾರದಲ್ಲಾದರೂ ಮುಗಿಸಬೇಕು ಎಂಬ ನಿಯಮ ಹಾಕಿಕೊಂಡಿದ್ದಾರೆ. ಹೀಗಾಗಿಯೇ ಕ್ರೋಶಾ, ನಿಟ್ಟಿಂಗ್‌, 3ಡಿ ಆರಿಗಾಮಿ ಕೌಶಲವನ್ನು ತುಸು ಕಮ್ಮಿ ಮಾಡಿದ್ದಾರೆ.ಬಣ್ಣ ಬಣ್ಣದ ಪೇಪರ್‌, ಅಗತ್ಯ ಶೇಪ್‌ ಕೊಟ್ಟುಕೊಳ್ಳಲು ಬೇಕಾದ ಕತ್ತರಿ ಹಾಗೂ ಗ್ಲೂ ಇವಿಷ್ಟರಲ್ಲೇ ಕ್ರಿಯಾಶೀಲತೆ ಮೆರೆಯಲು ಸಾಧ್ಯವಿದೆ. ಅದೂ ಅಲ್ಲದೆ ಮಾಡುವ ತವಕ, ಪರಿಶ್ರಮವಿದ್ದರೆ ಕಲೆ ಒಲಿದುಬರುತ್ತದೆ ಎಂದು ನಂಬುವ ಅಶ್ವಿನಿ ಎಲ್ಲವನ್ನು ಪ್ರಯತ್ನದಿಂದಲೇ ತಮ್ಮದಾಗಿಸಿಕೊಂಡಿದ್ದಾರೆ.***

ಸುಧಾದಲ್ಲಿ ಬಾಟಲಿಯಿಂದ ಮಂಟಪ  ಮಾಡುವುದು ಹೇಗೆ ಎಂದು ಓದಿದ್ದ ಅಶ್ವಿನಿ, ಕ್ಲಿನಿಕ್‌ ಒಂದಕ್ಕೆ ತೆರಳಿ ಸಿರಿಂಜ್‌ ಬಾಟಲಿಗಳನ್ನು ಸೇರಿಸಿ ಇಡುವಂತೆ ಹೇಳಿ ಡಸ್ಟ್‌ಬಿನ್‌ ಒಂದನ್ನು ಕೊಟ್ಟಿದ್ದರು. ಅಲ್ಲಿ ಸಂಗ್ರಹವಾದ ಬಾಟಲಿಗಳಿಂದ ಒಂಬತ್ತನೇ ತರಗತಿಯಲ್ಲಿ ಮಂಟಪ ಮಾಡಿದ್ದರು. ನಂತರ ಬಾಟಲಿ ಒಡೆದು ಮಂಟಪ ಚೂರಾಯಿತು. ಪ್ರೀತಿಯಿಂದ ಅದನ್ನು ಇನ್ನೊಮ್ಮೆ ತಯಾರಿಸಿ ಬೀಗಿದ್ದಾರೆ ಅವರು.

ಅದೇ ರೀತಿ ಥರ್ಮಕೋಲ್‌ನಲ್ಲಿ ಪಕಳೆ ವಿನ್ಯಾಸ ಮಾಡಿ ಹೂವುಗಳನ್ನು ತಯಾರಿಸಿದ್ದರು. ಬೇರೆಲ್ಲಾ ಹೂವುಗಳೊಂದಿಗೆ ಅಂದವಾಗಿ ಜೋಡಿಸಿಟ್ಟ ಆ ಹೂವುಗಳು ಮೆರುಗು ನೀಡಿದ್ದವು. ಆದರೆ ಗಾಳಿಗೆ ಅವು ಚೆಲ್ಲಾಪಿಲ್ಲಿಯಾಗಲಾರಂಭಿಸಿದವು. ಹೀಗಾಗಿ ಥರ್ಮಕೋಲ್‌ನಿಂದ ಹೂವು ನಿರ್ಮಿಸುವುದನ್ನು ಕಡಿಮೆ ಮಾಡಿದ್ದಾರೆ ಅಶ್ವಿನಿ.ಅಶ್ವಿನಿ ಅವರಿಂದ ಹವ್ಯಾಸದ ಪಟ್ಟು ಅರಿಯುವ ಮನಸ್ಸಿದ್ದರೆ– 9964152714.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.