ಬುಧವಾರ, ಮೇ 25, 2022
24 °C

ಅಸಂಬದ್ಧ ವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿ ಸಲ್ಲಿಸಿದ ಲೋಕಾಯುಕ್ತ ವರದಿಗೆ ರಾಜ್ಯದ ಬಿಜೆಪಿ ಸರ್ಕಾರ ಅಧಿಕೃತವಾಗಿ ನೀಡಿರುವ ಪ್ರತಿಕ್ರಿಯೆ ಹಾಸ್ಯಾಸ್ಪದವಾಗಿದೆ. ಅಸಂಬದ್ಧವೂ ಆಗಿದೆ. ತಾನೇ ರೂಪಿಸಿದ ಲೋಕಾಯುಕ್ತ ಕಾನೂನು, ಲೋಕಾಯುಕ್ತಕ್ಕೆ ಒಪ್ಪಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಲ್ಲಿಸಿದ ಮನವಿ ಹಾಗೂ ಲೋಕಾಯುಕ್ತರ ಕಾನೂನು ಜ್ಞಾನದ ಬಗ್ಗೆ ಆಳವಾದ ಅಜ್ಞಾನವನ್ನು ಸರ್ಕಾರದ ಪ್ರತಿಕ್ರಿಯೆ ಪ್ರದರ್ಶಿಸಿದೆ.

 

`ಸಚಿವರು ಸಾರ್ವಜನಿಕ ಸೇವಕರೇ~ ಎಂಬ ಬಗ್ಗೆ ಲೋಕಾಯುಕ್ತರಿಂದ ಸ್ಪಷ್ಟನೆ ಕೇಳಿರುವ ರೀತಿ ಅಧಿಕಾರಮದದ ಪರಮಾವಧಿ. ರಾಜ್ಯದ ಸಂಪುಟ ಸದಸ್ಯರೆಲ್ಲ ತಾವು ಮತ್ತು ತಮ್ಮ ಅಧಿಕಾರಿಗಳು ಸಾರ್ವಜನಿಕರ ಮಾಲೀಕರೆಂದು ತಿಳಿದಿದ್ದಾರೆಯೇ? ಇದು ಖಂಡನಾರ್ಹ ವರ್ತನೆ.

 

ವರದಿ ಸಲ್ಲಿಕೆಯಾದ ಮೂರು ತಿಂಗಳಲ್ಲಿ ಅದನ್ನು ಆಧರಿಸಿ ಕ್ರಮ ಕೈಗೊಳ್ಳಬೇಕಾದ ಕರ್ತವ್ಯದಿಂದ ತಪ್ಪಿಸಿಕೊಳ್ಳಲು ರಾಜ್ಯದ ಸಚಿವ ಸಂಪುಟ ಹುಡುಕಿದ ಕ್ಷುಲ್ಲಕ ನೆಪಗಳು ಇವು ಎಂಬುದು ಜನತೆಗೆ ಅರ್ಥವಾಗದ ಸಂಗತಿಯಲ್ಲ. ರಾಜ್ಯದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸಾರ್ವಜನಿಕ ಬದುಕಿನಲ್ಲಿ ನೈತಿಕತೆ ಆಧರಿಸಿದ ಅಭಿವೃದ್ಧಿಯ ನೂತನ ಶಕೆಯನ್ನು ಆರಂಭಿಸಬಹುದೆಂಬ ಜನತೆಯ ನಿರೀಕ್ಷೆಯನ್ನು, ಸಂಪುಟದ ಈ ವರ್ತನೆ ಹುಸಿಗೊಳಿಸಿದೆ. ರಾಜಕೀಯ ಲಾಭ ಮತ್ತು ಅಕ್ರಮ ಆಸ್ತಿ ಗಳಿಕೆಗಾಗಿ ರಾಜ್ಯದ ನೈಸರ್ಗಿಕ ಸಂಪತ್ತಿನ ಅವ್ಯಾಹತ ಲೂಟಿಗೆ ಆಸ್ಪದ ನೀಡುವ ಮೂಲಕ ಜನತೆ ಇಟ್ಟ ವಿಶ್ವಾಸಕ್ಕೆ ದ್ರೋಹ ಎಸಗಿದ ಸರ್ಕಾರದಿಂದ ಇದಕ್ಕಿಂತ ಭಿನ್ನವಾದ ಪ್ರತಿಕ್ರಿಯೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂಬ ಹತಾಶೆಯ ತೀರ್ಮಾನಕ್ಕೆ ಜನ ಬರುವಂತಾಗಿದೆ.ಭ್ರಷ್ಟಾಚಾರ ಪ್ರಕರಣಗಳ ತನಿಖೆಗಾಗಿ ಸರ್ಕಾರವೇ ಅಸ್ತಿತ್ವಕ್ಕೆ ತಂದ ಲೋಕಾಯುಕ್ತ ವ್ಯವಸ್ಥೆಯನ್ನು ಬಿಜೆಪಿ ಸರ್ಕಾರವೇ ದುರ್ಬಲಗೊಳಿಸುತ್ತಿದೆ. ಸದ್ಯ ಲೋಕಾಯುಕ್ತರಿಲ್ಲ. ಉಪಲೋಕಾಯುಕ್ತರೂ ಇಲ್ಲ. ವಿವಾದ ಮತ್ತು ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ಈ ಎರಡೂ ಹುದ್ದೆಗಳು ತೆರವಾಗಿವೆ. ಹಿಂದಿನ ಲೋಕಾಯುಕ್ತರಾಗಿದ್ದ ನ್ಯಾ. ಸಂತೋಷ ಹೆಗ್ಡೆ ಅವರಿಗೆ ಸಮರ್ಥ ಸಹಾಯಕರಾಗಿದ್ದ ದಕ್ಷ ಪೊಲೀಸ್ ಅಧಿಕಾರಿಗಳನ್ನು ಸರ್ಕಾರವೇ ನಾಗರಿಕ ಸೇವೆಯ ವಿಭಾಗಗಳಿಗೆ ವರ್ಗ ಮಾಡಿದೆ. ತೆರವಾಗಿದ್ದ ಹುದ್ದೆಗಳನ್ನೂ ತುಂಬಿಲ್ಲ. ಹೆಚ್ಚಿನ ಅಧಿಕಾರವಿರಲಿ, ಅವಶ್ಯಕ ಸಿಬ್ಬಂದಿಯನ್ನೇ ಲೋಕಾಯುಕ್ತಕ್ಕೆ ನೀಡುತ್ತಿಲ್ಲ.ಲೋಕಾಯುಕ್ತರ ಹುದ್ದೆ ತೆರವಾಗಿದ್ದು, ಪ್ರಭಾರವಾಗಿ ಆ ಹುದ್ದೆಯನ್ನು ನಿರ್ವಹಿಸುತ್ತಿದ್ದ ಉಪಲೋಕಾಯುಕ್ತರೂ ರಾಜೀನಾಮೆ ನೀಡಿರುವ ಸಂದರ್ಭದಲ್ಲಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಲ್ಲಿಸಿದ ವರದಿಯ ಬಗ್ಗೆ ಲೋಕಾಯುಕ್ತ ಸಂಸ್ಥೆಯಿಂದ ಸ್ಪಷ್ಟನೆ ಕೇಳುತ್ತಿರುವುದರ ಹಿಂದೆ ಕಾಲಹರಣದ ದುಷ್ಟ ಉದ್ದೇಶವೇ ಇದೆ.`ಸಚಿವರು ಸಾರ್ವಜನಿಕ ಸೇವಕರೇ?~, `ಇಲ್ಲಿ ಸಹಜ ನ್ಯಾಯವನ್ನು ಪಾಲಿಸಲಾಗಿದೆಯೇ?~ ಎಂಬಂಥ ಪ್ರಶ್ನೆಗಳಿಗೆ ಲೋಕಾಯುಕ್ತ ರಿಜಿಸ್ಟ್ರಾರ್ ಅವರಿಂದ ಸ್ಪಷ್ಟನೆಯನ್ನು ಸರ್ಕಾರ ನಿರೀಕ್ಷಿಸಿದೆಯೇ? ಕಳೆದು ಹೋಗಿರುವ ಪಕ್ಷದ ವರ್ಚಸ್ಸನ್ನು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರಿಗೆ ಮರಳಿ ತರುವ ಉದ್ದೇಶವಿದ್ದರೆ ತಮ್ಮ ಉಳಿದ ಆಡಳಿತದ ಅವಧಿಯಲ್ಲಾದರೂ ಕಳಂಕಿತರನ್ನು ರಕ್ಷಿಸುವ ದುಸ್ಸಾಹಸಕ್ಕೆ ಮುಂದಾಗದೆ ಕಾನೂನು ಪ್ರಕಾರ ಆಡಳಿತ ನಡೆಸುವುದಕ್ಕೆ ಮನಸ್ಸು ಮಾಡಲಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.