ಭಾನುವಾರ, ಏಪ್ರಿಲ್ 11, 2021
30 °C

ಅಸಮರ್ಪಕ ನೀರು ಪೂರೈಕೆ ರೊಚ್ಚಿಗೆದ್ದ ಜನತೆಯಿಂದ ಕಚೇರಿ ಗಾಜು ಪುಡಿ .

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಸಮರ್ಪಕ ನೀರು ಪೂರೈಕೆ ರೊಚ್ಚಿಗೆದ್ದ ಜನತೆಯಿಂದ ಕಚೇರಿ ಗಾಜು ಪುಡಿ .

 ರಾಮನಗರ: ನಗರದ 20 ವಾರ್ಡ್‌ಗಳ ಜನರಿಗೆ ಕಳೆದ ಹತ್ತು ದಿನಗಳಿಂದ ಸಮರ್ಪಕ ನೀರು ಪೂರೈಕೆ ಮಾಡದ ಜಲಮಂಡಳಿ ಅಧಿಕಾರಿಗಳ ವಿರುದ್ಧ ರೊಚ್ಚಿಗೆದ್ದ ಜನರು ಕಚೇರಿಯ ಗಾಜುಗಳನ್ನು ಪುಡಿಪುಡಿ ಮಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ ಘಟನೆ ಸೋಮವಾರ ನಡೆಯಿತು. ನಗರಸಭೆಯ ವಾಣಿಜ್ಯ ಸಂಕೀರ್ಣದಲ್ಲಿರುವ ಜಲಮಂಡಳಿ ಕಚೇರಿಗೆ ನಗರಸಭಾ ಸದಸ್ಯ ನಿಜಾಮ್ ಪಾಷ ಅವರು ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ನೀರು ಸರಬರಾಜು ಮಾಡದ ಜಲಮಂಡಳಿಗೆ ಧಿಕ್ಕಾರ ಕೂಗಿದರು. ಅಧಿಕಾರಿಗಳ ಜತೆ ತಳ್ಳಾಟ, ನೂಕಾಟ ನಡೆಯಿತು. ಕೆಲ ದುಷ್ಕರ್ಮಿಗಳು ಕಚೇರಿಯ ಗಾಜುಗಳನ್ನು ಒಡೆದು ಪ್ರತಿಭಟಿಸಿದರು.ಕಳೆದ ಹತ್ತು ದಿನಗಳಿಂದ ನಗರದಲ್ಲಿ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ಹೀಗೆ ಜನರು ನೀರಿಗಾಗಿ ಹಾಹಾಕಾರ ಪಡುತ್ತಿದ್ದರೂ ಜಲಮಂಡಳಿ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತಾಳುತ್ತಿದ್ದಾರೆ ಎಂದು ಅವರು ದೂರಿದರು.21ನೇ ವಾರ್ಡಿನ ನಗರಸಭಾ ಸದಸ್ಯ ಶಿವಕುಮಾರಸ್ವಾಮಿ ಮಾತನಾಡಿ, ‘ಶಾಸಕರು, ಸರ್ಕಾರಿ ಅಧಿಕಾರಿಗಳು ಇರುವ 25 ರಿಂದ 28 ವಾರ್ಡ್‌ಗಳವರೆಗೆ ಸಮೃದ್ಧವಾಗಿ ನೀರು ಸರಬರಾಜಾಗುತ್ತದೆ. ಆದರೆ ಸಾಮಾನ್ಯ ಜನರು ವಾಸಿಸುವ 1ರಿಂದ 25 ವಾರ್ಡ್‌ವರೆಗೆ ನೀರಿಲ್ಲದೆ ನರಕಯಾತನೆ ಅನುಭವಿಸುವಂತಾಗಿದೆ ಎಂದು ಕಿಡಿಕಾರಿದರು.

 

ನಗರದಲ್ಲಿ ನೀರಿನ ಸಮಸ್ಯೆ ಉಲ್ಬಣಗೊಳ್ಳಲು ಕೊಳವೆ ಬಾವಿಗಳ ಮುಖಾಂತರ ಮಿನಿ ಟ್ಯಾಂಕುಗಳಿಗೆ ಸರಬರಾಜಾಗುತ್ತಿದ್ದ ನೀರಿನ ವ್ಯವಸ್ಥೆಯನ್ನು ಜಲಮಂಡಳಿ ಅಧಿಕಾರಿಗಳು ಏಕಾಏಕಿ ರದ್ದುಪಡಿಸಿರುವುದು ಕಾರಣ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. 31 ವಾರ್ಡ್‌ಗಳಿಗೂ ಕಾವೇರಿ ನೀರು ಸರಬರಾಜು ಮಾಡಲಾಗುವುದು ಎಂದು ಸುಳ್ಳು ಭರವಸೆ ನೀಡಿ ಜನರನ್ನು ವಂಚಿಸುತ್ತಿದ್ದಾರೆ ಎಂದರು.ನಂತರ ನಗರಸಭೆ ಅಧ್ಯಕ್ಷ ಸಾಬಾನ್ ಸಾಬ್, ಉಪಾಧ್ಯಕ್ಷ ಬಿ.ಉಮೇಶ್, ಮಾಜಿ ಅಧ್ಯಕ್ಷ ಕೆ.ಶೇಷಾದ್ರಿ, ಆಯುಕ್ತ ಸಿದ್ಧರಾಜು ಆಗಮಿಸಿ ಮಂಗಳವಾರ ನಗರಸಭೆಯ ತುರ್ತು ಸಭೆ ಕರೆಯಲಾಗಿದ್ದು, ನಗರದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ನಂತರ ಪ್ರತಿಭಟನಾಕಾರರು ಹಿಂದಿರುಗಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.