ಬುಧವಾರ, ಜೂಲೈ 8, 2020
28 °C

ಅಸಾಂಜ್ ಕೈಯಲ್ಲಿ ಕಪ್ಪುಹಣ ಕುಳಗಳ ಜಾತಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಇಲ್ಲಿಯ ತನಕ ಬಹುತೇಕ ಅಮೆರಿಕವನ್ನು ಮಾತ್ರ ಬೆಚ್ಚಿ ಬೀಳಿಸುತ್ತಿದ್ದ ವಿಕಿಲೀಕ್ಸ್ ವೆಬ್‌ಸೈಟ್‌ನ ಸಂಸ್ಥಾಪಕ ಜ್ಯೂಲಿಯಾನ್ ಅಸಾಂಜ್ ಕೈಗೆ ಸ್ವಿಸ್ ಬ್ಯಾಂಕ್ ರಹಸ್ಯ ಖಾತೆಗಳ ಮಾಹಿತಿ ಅಧಿಕೃತವಾಗಿಯೇ ಸಿಕ್ಕಿಬಿಟ್ಟಿದೆ. ಇದರಿಂದ ಸಹಜವಾಗಿಯೇ ಕಪ್ಪು ಹಣವನ್ನು ಸ್ವಿಸ್ ಬ್ಯಾಂಕ್‌ಗಳಲ್ಲಿ ಬಚ್ಚಿಟ್ಟು ತೆಪ್ಪಗೆ ಕುಳಿತಿದ್ದ ಸಾವಿರಾರು ರಾಜಕಾರಣಿಗಳು, ಉದ್ಯಮಿಗಳು, ಶ್ರೀಮಂತರು ಮತ್ತು ವಂಚಕರಲ್ಲಿ ಕಂಪನ ಶುರುವಾಗಿದೆ.ಸ್ವಿಟ್ಜರ್ಲೆಂಡ್ ಮೂಲದ ಕೇಮನ್ ದ್ವೀಪದಲ್ಲಿರುವ ಬ್ಯಾಂಕ್ ಜ್ಯೂಲಿಯಸ್ ಬಿಯರ್‌ನ ಮಾಜಿ ಉದ್ಯೋಗಿ ರುಡಾಲ್ಫ್  ಎಲ್ಮೆರ್ ಅವರು ಸೋಮವಾರ ಇಲ್ಲಿ ಬಹಿರಂಗವಾಗಿಯೇ ಅಸಾಂಜ್ ಅವರನ್ನು ಭೇಟಿ ಮಾಡಿ 2,000 ಸ್ವಿಸ್ ಬ್ಯಾಂಕ್ ಖಾತೆಗಳನ್ನು ಹೊಂದಿರುವವರ ಮಾಹಿತಿಗಳು ಇರುವ ಎರಡು ಸಿ.ಡಿ.ಗಳನ್ನು ಹಸ್ತಾಂತರಿಸಿದರು.1990ರಿಂದ 2009ರ ತನಕ ಅಮೆರಿಕ, ಬ್ರಿಟನ್, ಜರ್ಮನಿ, ಏಷ್ಯಾ ಮತ್ತು ಇತರ ಹಲವು ರಾಷ್ಟ್ರಗಳಲ್ಲಿ ಕಪ್ಪುಹಣವನ್ನು  ಸ್ವಿಸ್ ಬ್ಯಾಂಕ್‌ಗಳಲ್ಲಿ ಇರಿಸಿದ ಮಾಹಿತಿಗಳು ಇದರಲ್ಲಿವೆ. ಹೀಗೆ ಕಪ್ಪು ಹಣವನ್ನು ಗೋಪ್ಯವಾಗಿ ಇಟ್ಟವರಲ್ಲಿ ಗಣ್ಯ ವ್ಯಕ್ತಿಗಳು, ಉದ್ಯಮಿಗಳು, ರಾಜಕಾರಣಿಗಳು ಇದ್ದಾರೆ ಎಂದು ಸ್ವಿಸ್ ಪತ್ರಿಕೆ ‘ಡೆರ್ ಸೊನ್‌ಟಾಗ್’ ಹೇಳಿದೆ. ಆದರೆ ಈ ಮೊದಲಿನ ರಹಸ್ಯ ರಾಜತಾಂತ್ರಿಕ ದಾಖಲೆಗಳಂತೆ ಇವುಗಳನ್ನು ಸಹ ಕೂಲಂಕಷ ಪರಿಶೀಲನೆ ನಡೆಸಿದ ಬಳಿಕವಷ್ಟೇ ವಿಕಿಲೀಕ್ಸ್ ವೆಬ್‌ಸೈಟ್‌ನಲ್ಲಿ ಪ್ರಕಟಿಸುವುದಾಗಿ ಅಸಾಂಜ್ ಹೇಳಿದ್ದಾರೆ. ಹೀಗಾಗಿ ಮಾಹಿತಿ ಬಹಿರಂಗವಾಗುವ ತನಕ ಕಪ್ಪುಹಣ ಕುಳಗಳ ಎದೆಯಲ್ಲಿ ಅವಲಕ್ಕಿ ಕುಟ್ಟುತ್ತಿರುವುದು ನಿಶ್ಚಿತವಾಗಿದ್ದು, ಸದ್ಯ ಇವರೆಲ್ಲರ ಜಾತಕ ಅಸಾಂಜ್ ಕೈಯಲ್ಲಿ ಇದ್ದಂತಾಗಿದೆ.‘ಸ್ವಿಸ್ ಬ್ಯಾಂಕ್‌ಗಳಲ್ಲಿ ಹೊರ ದೇಶಗಳಲ್ಲಿ ತೆರಿಗೆ ವಂಚಿಸಿದ ದುಡ್ಡನ್ನು ಇಟ್ಟುಕೊಳ್ಳುವ ಕೆಲಸ ನಡೆಯುತ್ತಿದೆ. ಈ ವ್ಯವಸ್ಥೆಗೆ ನನ್ನ ವಿರೋಧವಿದೆ. ಸಮಾಜಕ್ಕೆ ತೀವ್ರ ಹಾನಿ ಉಂಟುಮಾಡುತ್ತಿರುವ ಈ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ಸಮಾಜಕ್ಕೆ ನಾನು ತಿಳಿಸಬೇಕಿದೆ. ಹೀಗಾಗಿ ಅಸಾಂಜ್‌ಗೆ ಈ ಮಾಹಿತಿಗಳನ್ನು ನೀಡಿದ್ದೇನೆ’ ಎಂದು ಎಲ್ಮೆರ್ ತಿಳಿಸಿದರು. ವಿಶೇಷವೆಂದರೆ ಸ್ವಿಸ್ ಬ್ಯಾಂಕಿಂಗ್ ಗೋಪ್ಯ ಕಾನೂನುಗಳನ್ನು ಉಲ್ಲಂಘಿಸಿದ್ದಾಗಿ ಅವರು ಸ್ವಿಸ್ ಕೋರ್ಟ್‌ನಲ್ಲಿ ಪ್ರಕರಣ ಎದುರಿಸುತ್ತಿದ್ದು, ಕೋರ್ಟ್ ಮುಂದೆ ಹಾಜರಾಗುವುದಕ್ಕೆ ಕೇವಲ ಎರಡು ದಿನಗಳ ಮೊದಲು ಮಹತ್ವದ ಮಾಹಿತಿಯನ್ನು ಹಸ್ತಾಂತರಿಸಿ ತಮ್ಮ ತಲೆಯ ಭಾರ ಇಳಿಸಿಕೊಂಡಿದ್ದಾರೆ.ಆದರೆ ಈ ಸಿ.ಡಿ.ಗಳಲ್ಲಿ ಇರುವ ಅಂಶಗಳು, ಕಂಪೆನಿಗಳು ಮತ್ತು ವ್ಯಕ್ತಿಗಳ ಹೆಸರನ್ನು ತಾವು ಬಹಿರಂಗಪಡಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.ಎಲ್ಮೆರ್ ಅವರು ಈ ಮೊದಲು ವಿಶ್ವವಿದ್ಯಾಲಯಗಳ ಮೂಲಕ ತಮ್ಮಲ್ಲಿರುವ ಮಾಹಿತಿ ಬಹಿರಂಗಕ್ಕೆ ಯತ್ನಿಸಿದ್ದರು. ಆದರೆ ಅವರ ಯತ್ನಕ್ಕೆ ಯಶಸ್ಸು ಸಿಕ್ಕಿರಲಿಲ್ಲ. ಇದೀಗ ವಿಕಿಲೀಕ್ಸ್ ಮಹತ್ವದ ವೇದಿಕೆಯಾಗಿ ದೊರಕಿದೆ. ಆದರೆ ಎಲ್ಮೆರ್ ಅವರ ಈ ಕ್ರಮವನ್ನು ಜ್ಯೂಲಿಯಸ್ ಬಿಯರ್ ಬ್ಯಾಂಕ್ ಉಗ್ರವಾಗಿ ಖಂಡಿಸಿದ್ದು, ಅವರು ನೀಡಿದ ಮಾಹಿತಿಗಳು ಸತ್ಯಕ್ಕೆ ದೂರವಾದವುಗಳು, ಬ್ಯಾಂಕ್‌ನ ಹೆಸರಿಗೆ ಮಸಿ ಬಳಿಯುವುದಕ್ಕೇ ಈ ರೀತಿ ವರ್ತಿಸುತ್ತಿದ್ದಾರೆ ಎಂದು ಹೇಳಿದೆ.ಅಸಾಂಜ್‌ಗೆ ಕೂಡ ಇದು ಒಂದು ವಿಶಿಷ್ಟ ಅನುಭವವಾಗಿ ಕಾಣಿಸಿದೆ. ಸ್ವೀಡನ್‌ನಲ್ಲಿ ಇಬ್ಬರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇರೆಗೆ ಬಂಧನಕ್ಕೊಳಗಾಗಿ ಕಳೆದ ತಿಂಗಳು ಬಿಡುಗಡೆಯಾಗಿರುವ ಅವರು ಪ್ರಥಮ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಈ ಸಿ.ಡಿ. ಪಡೆಯುವ ಕಾರ್ಯಕ್ರಮದಲ್ಲೇ.

ಸ್ವಿಸ್ ಬ್ಯಾಂಕ್ ಖಾತೆಗಳ ವಿವರ ಇರುವ ಸಿ.ಡಿ.ಗಳಲ್ಲಿ ಭಾರತೀಯರ ಹೆಸರೂ ಅಡಗಿದೆಯೇ ಎಂಬ ಬಗ್ಗೆ ಯಾವುದೇ ಮಾಹಿತಿಯೂ ಲಭಿಸಿಲ್ಲ. ಆದರೆ ಲಭ್ಯ ಮಾಹಿತಿಗಳು ಅಧಿಕೃತ ಎಂಬುದು ಸಾಬೀತಾಗಲು ಹೆಚ್ಚು ಸಮಯ ತೆಗೆದುಕೊಳ್ಳದಿದ್ದರೆ ಮಾಹಿತಿಗಳೆಲ್ಲ ಬೇಗನೆ ವಿಕಿಲೀಕ್ಸ್‌ನಲ್ಲಿ ಬಹಿರಂಗವಾಗುವುದು ನಿಶ್ಚಿತ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.