ಮಂಗಳವಾರ, ಜನವರಿ 28, 2020
25 °C
ಉನ್ನತ ಸಚಿವರ ತಂಡ ಶಿಫಾರಸು ಸಾಧ್ಯತೆ

ಆಂಧ್ರಕ್ಕೆ ವಿಶೇಷ ಸ್ಥಾನ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಆಂಧ್ರಪ್ರದೇಶ ವಿಭಜನೆ ಕುರಿತು ರಚಿಸಲಾಗಿರುವ ಸಚಿವರ ಉನ್ನತ ತಂಡವು (ಜಿಒಎಂ) ಉದ್ದೇಶಿತ ತೆಲಂಗಾಣ ಮತ್ತು ವಿಭ­ಜನೆ ನಂತರದ  ಉಳಿದ ಪ್ರದೇಶಕ್ಕೆ ಸಂವಿ­ಧಾನದ 371–ಡಿ ಕಲಂ ಅನ್ವಯ ವಿಶೇಷ ಸ್ಥಾನಮಾನ ಮುಂದು­­­ವ­ರಿಸುವಂತೆ ಶಿಫಾ­ರಸು ಮಾಡಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ.ಜೊತೆಗೆ ರಾಯಲಸೀಮೆ ಭಾಗದ ಕರ್ನೂಲು, ಅನಂತಪುರ   ಜಿಲ್ಲೆ­ಗಳನ್ನು ತೆಲಂಗಾಣಕ್ಕೆ ಸೇರಿಸುವ ಪ್ರಸ್ತಾವ ಪರಿಶೀಲಿಸುವುದಾಗಿಯೂ ‘ಜಿಒಎಂ’ ಹೇಳಿದೆ ಎಂದು ತಿಳಿದು­ಬಂದಿದೆ.ಆದರೆ, ಈ ಎರಡು ಜಿಲ್ಲೆಗಳನ್ನು ಉದ್ದೇಶಿತ ತೆಲಂಗಾಣಕ್ಕೆ ಸೇರಿಸುವ ಬಗ್ಗೆ ‘ಜಿಒಎಂ’ ಅಂತಿಮ ನಿರ್ಧಾರ ಕೈಗೊಂಡಿ­ದೆಯೇ ಎನ್ನುವುದು ಖಾತರಿ­ಯಾಗಿಲ್ಲ. ಆಂಧ್ರ ವಿಭಜನೆ ಕುರಿತ ಕರಡು ಮಸೂದೆಯನ್ನು ಅಂತಿಮ­ಗೊಳಿಸಲು ‘ಜಿಒಎಂ’ ಮಂಗಳವಾರ (ಡಿ. 3) ಅಂತಿಮ ಸಭೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.ಆಂಧ್ರಪ್ರದೇಶ ಪುನರ್‌ರಚನೆ ಕುರಿತ ಕರಡು ಮಸೂದೆ ಪ್ರಸ್ತಾವನೆಯನ್ನು ಜಿಒಎಂ ಶೀಘ್ರದಲ್ಲೇ ಸಂಪುಟಕ್ಕೆ ಸಲ್ಲಿಸಲಿದೆ. ಇದಕ್ಕೆ ‘ಆಂಧ್ರಪ್ರದೇಶ ಮತ್ತು ತೆಲಂ­ಗಾಣ ಮಸೂದೆ’ ಎಂದು ಹೆಸರಿಸಲು ಚಿಂತಿಸಿದೆ. ಈ ಮೂಲಕ ಸಂವಿಧಾನಕ್ಕೆ ತಿದ್ದುಪಡಿ ತರುವುದನ್ನು ತಪ್ಪಿಸುವ ಉದ್ದೇಶ ಹೊಂದಿರುವ ಜಿಒಎಂ, ಎರಡೂ ರಾಜ್ಯಗಳಿಗೆ ವಿಶೇಷ ಸ್ಥಾನ­ಮಾನ ಉಳಿಸಿಕೊಡಲು ಆಲೋಚಿಸಿದೆ ಎಂದು ಮೂಲಗಳು ಹೇಳಿವೆ.ತೆಲಂಗಾಣಕ್ಕೆ ಹೆಚ್ಚುವರಿ ಜಿಲ್ಲೆಗಳು?: ಕರ್ನೂಲು, ಅನಂತಪುರ ಜಿಲ್ಲೆಗಳನ್ನು ತೆಲಂ­ಗಾಣಕ್ಕೆ ಸೇರಿಸುವ ಪ್ರಸ್ತಾವವನ್ನು ಜಿಒಎಂ ಒಪ್ಪಿದರೆ, ಆಗ ಅಖಂಡ ಆಂಧ್ರ­ಪ್ರ­ದೇಶದ ವಿಧಾನಸಭಾ  ಕ್ಷೇತ್ರ­ಗ­ಳನ್ನು ಸಮಾನ­ವಾಗಿ ಎರಡೂ ರಾಜ್ಯ­ಗಳಿಗೆ 147 ಕ್ಷೇತ್ರಗಳಂತೆ ಹಂಚಿಕೆ ಮಾಡಿ­ದಂತೆ ಆಗುತ್ತದೆ. ಹಾಗೆಯೇ ವಿಧಾನ ಪರಿಷತ್‌ನ ತಲಾ 45 ಸ್ಥಾನ-­ಗಳು ಎರಡೂ ರಾಜ್ಯಗಳಿಗೆ ಲಭಿಸುತ್ತವೆ.ಜೊತೆಗೆ, ಕರ್ನೂಲು ಮತ್ತು ಅನಂತಪುರ ಜಿಲ್ಲೆಗಳು ಪ್ರಾದೇಶಿಕ­ವಾಗಿ ಹೈದರಾಬಾದ್‌ಗೆ ಸಮೀಪದ­ಲ್ಲಿವೆ ಮತ್ತು ಈ ಎರಡೂ ಜಿಲ್ಲೆಗಳಲ್ಲಿ ಗಣನೀಯ ಸಂಖ್ಯೆಯಲ್ಲಿ ಮುಸ್ಲಿಮರು ಇರುವ ಕಾರಣ ಈ ಪ್ರಸ್ತಾವವನ್ನು ಜಿಒಎಂ ಒಪ್ಪುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಆದರೆ, ಈ ಪ್ರಸ್ತಾವವನ್ನು ತೆಲಂ­ಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್‌), ಬಿಜೆಪಿ ವಿರೋ­ಧಿಸುವ ಸಾಧ್ಯತೆ ಇವೆ. ಮಜ್ಲಿಸ್–ಎ–ಇತೇಹ­ದುಲ್‌ ಮುಸ್ಲಿಮೀನ್‌ ಪಕ್ಷ ಹಾಗೂ ಆಂಧ್ರಪ್ರದೇಶದ ಕೆಲವು ಕಾಂಗ್ರೆಸ್‌ ಮುಖಂಡರು ಬೆಂಬಲಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.ಮುಂದಿನ ವರ್ಷ ಲೋಕಸಭಾ ಚುನಾವಣೆ ಎದುರಾಗುವ ಕಾರಣ ರಾಯ­ಲಸೀಮೆಯ ಈ ಎರಡು ಜಿಲ್ಲೆ­ಗಳನ್ನು ತೆಲಂಗಾಣಕ್ಕೆ ಸೇರಿಸುವು­ದ­ರಿಂದ ಕಾಂಗ್ರೆಸ್‌ಗೆ ಲಾಭವಿದೆ ಎನ್ನಲಾಗಿದೆ.  ಈ ಭಾಗದಲ್ಲಿ ಟಿಆರ್‌ಎಸ್‌ ಪ್ರಭಾವ ಇರುವುದರಿಂದ ಈ ಎರಡು ಜಿಲ್ಲೆ­ಗಳಲ್ಲಿ ಬಲಶಾಲಿಯಾಗಿರುವ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷವನ್ನು ಬಗ್ಗುಬಡಿಯಲು ಅನುಕೂಲವಾಗಲಿದೆ ಎನ್ನಲಾಗಿದೆ.

ಏನಿದು 371–ಡಿ ಕಲಂ?

1973ರಲ್ಲಿ ಸಂವಿಧಾನಕ್ಕೆ 32ನೇ ತಿದ್ದುಪಡಿ ತರುವ ಮೂಲಕ ಆಂಧ್ರ­ಪ್ರದೇಶಕ್ಕೆ 371–ಡಿ ಕಲಂ ಅನ್ವಯ ವಿಶೇಷ ಸ್ಥಾನಮಾನ ನೀಡಲಾಯಿತು. ಇದರ ಅನ್ವಯ ರಾಜ್ಯದ ವಿವಿಧ ಭಾಗಗಳ ಜನರಿಗೆ ಸಮಾನ ಅವಕಾಶ­ಗಳನ್ನು ಕಲ್ಪಿಸುವ  ಆದೇಶಗಳನ್ನು ಕಾಲ ಕಾಲಕ್ಕೆ ಹೊರಡಿಸುವಂತಹ ಅಧಿಕಾರವು ರಾಷ್ಟ್ರಪತಿಗಳಿಗೆ ದೊರೆಯಿತು.ಈ ವಿಶೇಷ ಸ್ಥಾನಮಾನ ನೀಡಿಕೆಯಿಂದಾಗಿ ಸಂವಿಧಾನದ ಇನ್ನಿತರ ಕಲಂಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾದ ಕಾರಣ, ಆಂಧ್ರದ ಮುಖಂಡರೊಂದಿಗೆ ಕೇಂದ್ರ ಸರ್ಕಾರವು 1973ರ ಸೆ. 21ರಂದು ಆರು ಅಂಶಗಳ ಒಪ್ಪಂದಕ್ಕೆ ಬಂದಿತು. ರಾಜ್ಯದ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಸಮಾನ ರೀತಿಯ ಆದ್ಯತೆ ನೀಡುವುದು ಮತ್ತು ವಿವಿಧ ಭಾಗಗಳ ಜನರಿಗೆ ಶಿಕ್ಷಣ,  ಸರ್ಕಾರಿ ಉದ್ಯೋಗ ದಲ್ಲಿ ಸಮಾನ ಅವಕಾಶ ನೀಡುವ ಉದ್ದೇಶದಿಂದ ಒಪ್ಪಂದ ಮಾಡಿಕೊಳ್ಳ­ಲಾಯಿತು.

ಪ್ರತಿಕ್ರಿಯಿಸಿ (+)