ಶನಿವಾರ, ಏಪ್ರಿಲ್ 17, 2021
31 °C

ಆದಾಯ ಹೆಚ್ಚಿಸಿಕೊಳ್ಳಲು ನಗರಸಭೆಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಣೆಬೆನ್ನೂರು: “ಪಾರ್ಕಿಂಗ್ ಶುಲ್ಕದ ಬಗ್ಗೆ ಸಾರ್ವಜನಿಕರಿಗೆ ತಿಳಿವಳಿಕೆ ನೀಡಿ. ನಗರಸಭೆ ಅಭಿವೃದ್ಧಿ ದೃಷ್ಟಿಯಿಂದ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು. ಅಧಿಕಾರಿಗಳು ಮತ್ತು ಸದಸ್ಯರು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು” ಎಂದು ಶಾಸಕ ಜಿ. ಶಿವಣ್ಣ ಸಲಹೆ ನೀಡಿದರು.ನಗರಸಭೆಯ ವಿಶ್ವೇಶ್ವರಯ್ಯ ಸಭಾಭವನದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿರು. 2.5 ಕೋಟಿ ರೂಪಾಯಿಗಳ 38 ಕಾಮಗಾರಿಗಳಿಗೆ ಸಾಮಾನ್ಯ ಸಭೆ ಅನುಮೋದನೆ ನೀಡಿತು. 2ನೇ ವಾರ್ಡ್‌ನ ಬಸವಣ್ಣದೇವರ ಗುಡಿ ರಸ್ತೆಗೆ ಆರ್.ಸಿ.ಸಿ ಮಾಡಲು ತಯಾರಿಸಿದ ಅಂದಾಜು ಪತ್ರಿಕೆ ಬಗ್ಗೆ ಸದಸ್ಯ ಬಸವರಾಜ ಲಕ್ಷ್ಮೇಶ್ವರ ಗಮನ ಸೆಳೆದಾಗ ಅಧ್ಯಕ್ಷ ಶೇಕಪ್ಪ ಹೊಸಗೌಡ್ರ ಹಾಗೂ ಶಾಸಕರು ಎಂಜಿನಿಯರ್ ಲಿಂಗರಾಜ ಅವರನ್ನು ತರಾಟೆಗೆ ತೆಗೆದೊಕೊಂಡರು.

“ಅಲ್ಲಿ ಡಾಂಬರು ರಸ್ತೆ ಚೆನ್ನಾಗಿದೆ. ಹೀಗಿದ್ದಾಗ ಅದಕ್ಕೆ ಹೇಗೆ ಅಂದಾಜು ಪತ್ರಿಕೆ ತಯಾರಿಸಿದಿರೀ? ಸರ್ಕಾರದ ಹಣ ಬೇಕಾಬಿಟ್ಟಿ ಖರ್ಚು ಮಾಡಲು ಹೇಗೆ ಮನಸ್ಸು ಬರುತ್ತದೆ” ಎಂದು ಶಾಸಕರು ತರಾಟೆಗೆ ತೆಗೆದುಕೊಂಡರು.ನಗರಸಭೆಯ ಎಲ್ಲ ಟೆಂಡರ್‌ಗಳಿಗೆ ಕೇವಲ ಇಬ್ಬರು ಗುತ್ತಿಗೆದಾರರು ಮಾತ್ರ ಟೆಂಡರ್ ಹಾಕುತ್ತಾರೆ ಎಂಬ ಬಗ್ಗೆ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದಾಗ, “ಟೆಂಡರನ್ನು ಪೇಪರ್‌ನಲ್ಲಿ ಕರೆದಿದ್ದೇವೆ. ಗುತ್ತಿಗೆದರರು ಟೆಂಡರ್ ಹಾಕದಿದ್ದರೆ ನಾವೇನು ಮಾಡಬೇಕು ಎಂದು ಅಧ್ಯಕ್ಷ ಶೇಖಪ್ಪ ಹೊಸಗೌಡ್ರ ಪ್ರತಿಕ್ರಿಯಿಸಿದರು. ಸರ್ಕಾರಿ ಶಾಲೆ- ಕಾಲೇಜುಗಳಿಗೆ, ದೇವಸ್ಥಾನಗಳಿಗೆ ನಗರಸಭೆಯಿಂದ ಉಚಿತವಾಗಿ ನೀರು ಪೂರೈಕೆ ಹಾಗೂ  ಖಾಸಗಿ ಶಾಲಾ- ಕಾಲೇಜುಗಳಿಗೆ ಪೂರೈಸುವ ನೀರಿಗೆ ಶುಲ್ಕವನ್ನು ಖಡ್ಡಾಯವಾಗಿ ವಸೂಲು ಮಾಡಬೇಕು ಎಂದು ಸಭೆ ತೀರ್ಮಾನಿಸಿತು.ಗಡಿಗೇರ ಓಣಿ, ಬಸವಣ್ಣನಗುಡಿ ಓಣಿಯ ಬಾವಿಗಳನ್ನು ಸ್ವಚ್ಚಗೊಳಿಸುವಂತೆ ಸದಸ್ಯರು ಸೂಚಿಸಿದಾಗ, ‘ನಮ್ಮ ವಾರ್ಡಿನ ಬಾವಿ ಸ್ವಚ್ಚಗೊಳಿಸಿ ಎಂದು ಎರಡು ವರ್ಷಗಳಿಂದ ಹೇಳುತ್ತ ಬಂದಿದ್ದೇನೆ, ಯಾವೊಬ್ಬ ಅಧಿಕಾರಿಗಳೂ ಇತ್ತ ಸುಳಿದಿಲ್ಲ. ಗಬ್ಬು ವಾಸನೆಯಿಂದ ಕೂಡಿದ್ದು, ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ ಎಂದು ಸದಸ್ಯ ಶಿವಪ್ಪ ಮಣೇಗಾರ ಆಕ್ರೋಶ ವ್ಯಕ್ತಪಡಿಸಿದರು.ಅಡವಿ ಆಂಜನೇಯ ಬಡಾವಣೆಗೆ ಹೋಗುವ ರಸ್ತೆಯ ಗಂಗಾಪೂರ ಕ್ರಾಸ್‌ನಿಂದ ದೊಡ್ಡ ಕೆರೆಯ ಕೋಡಿಯವರೆಗೆ ಡಾಂಬರೀಕರಣ ಮಾಡಲು ತಯಾರಿಸಿದ ರೂ. 10 ಲಕ್ಷ ಅಂದಾಜು ಪತ್ರಿಕೆಗೆ, ಹುಣಸೀಕಟ್ಟಿ ರಸ್ತೆ ಪಕ್ಕದ ಪಂಪಾನಗರದಲ್ಲಿ 1ನೇ ಕ್ರಾಸ್ ಹಾಗೂ 7ನೇ ಕ್ರಾಸ್ ಮತ್ತು ಅಡ್ಡ ರಸ್ತೆಗಳಿಗೆ ಡಾಂಬರೀಕರಣ ಮಾಡಲು ರೂ. 10 ಲಕ್ಷ ಕಾಮಗಾರಿಗೆ; ವಾಗೀಶನಗರ ಎಪಿಎಂಸಿ ಗೇಟ್ ಹತ್ತಿರ ಚರಂಡಿ ದುರಸ್ತಿ ಮಾಡಲು, ಸೈಕಲ್‌ಗಾರ ಓಣಿಗೆ ಚರಂಡಿ ನಿರ್ಮಿಸಲು ರೂ. 10 ಲಕ್ಷ; ಮಾದ ಹೊಂಡದ ಪಿಚ್ಚಿಂಗ್ ದುರಸ್ತಿಗೆ ರೂ. 3.83 ಲಕ್ಷ, ಹಳೇ ಮಟನ್ ಮಾರ್ಕೆಟ್ ದುರಸ್ತಿ ಕೆಲಸಕ್ಕೆ ರೂ. 66 ಲಕ್ಷದ ಅಂದಾಜು ಪತ್ರಿಕೆಗೆ ಸಭೆ ಮಂಜೂರು ನೀಡಿತು.ನಗರಸಭೆ 2ನೇ ಮಹಡಿಗೆ ದಕ್ಷಿಣ ಭಾಗದ ಚಾವಣಿ ಹಾಕಲು ತಯಾರಿಸಿದ ಅಂದಾಜು ಮೊತ್ತ ರೂ. 10 ಲಕ್ಷ; ಉಮಾಶಂಕರನಗರದ ಕರಬಸಪ್ಪ ಮಲ್ಲಾಡದ ಮನೆಯಿಂದ ಹೊನ್ನಾಳಿಯವರ ಮನೆವರೆಗೆ ಗಟಾರ ಮಾಡಲು ತಯಾರಿಸಿದ ಅಂದಾಜು ಮೊತ್ತ ರೂ. 10 ಲಕ್ಷ; ಶ್ರೀರಾಮನಗರದ ನಗರಯೋಜನಾ ಪ್ರಾಧಿಕಾರ ರಸ್ತೆ ಡಾಂಬರೀಕರಣ ಮಾಡಲು ರೂ. 10 ಲಕ್ಷ ಕಾಮಗಾರಿಗೆ, ಸರ್ಕಾರಿ ಆಸ್ಪತ್ರೆಗೆ ನಿವೇಶನ ನೀಡಲು, ಮುದೇನೂರು, ಮಾಗೋಡ ಹಾಗೂ ಸಿದ್ಧೇಶ್ವರ ನಗರದ  ನೀರು ಶುದ್ಧೀಕರಣ ಘಟಕಗಳಿಗೆ ಮೋಟರ್ ಟರ್ಬೈನ್, ಪಂಪ್ ಸೆಟ್, ಟ್ರಾನ್ಸ್‌ಫರ್ಮರ್, ದುರಸ್ಥಿ ಕೆಲಸಗಳಿಗೆ ಸಭೆ ಅನುಮೋದನೆ ನೀಡಿತು.ಸಭೆಯಲ್ಲಿ ಉಪಾಧ್ಯಕ್ಷ ಪ್ರಕಾಶ ಪೂಜಾರ ಉಪಸ್ಥಿತರಿದ್ದರು. ಪೌರಾಯುಕ್ತ ಎಂ.ಎಂ. ಕರಭಿಮಣ್ಣನವರ ಸ್ವಾಗತಿಸಿದರು. ಎಂಜಿನಿಯರ್ ಎಂ.ವಿ. ಗಿರಡ್ಡಿ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.