ಕೆಂಭಾವಿ: ಕರ್ನಾಟಕದ ರಾಜಕೀಯ ಮತ್ತು ಧಾರ್ಮಿಕ ಇತಿಹಾಸದಲ್ಲಿ ಹನ್ನೆರಡನೆಯ ಶತಮಾನ ಪರಿವರ್ತನೆಯ ಸಂಧಿಕಾಲ. ಅನೇಕ ದೃಷ್ಟಿಗಳಿಂದಾಗಿ ಈ ಯುಗಕ್ಕೆ ಮಹತ್ವವಿದೆ. ಹೊಸ ಯುಗ ಧರ್ಮವಾದ ಶೈವ, ವೀರಶೈವ ಧರ್ಮ ಪ್ರಾಬಲ್ಯ ಮೆರೆದ ಕಾಲ.

ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿನ ವಾದ-ಪ್ರತಿವಾದ, ಕ್ರಿಯೆ-ಪ್ರತಿಕ್ರಿಯೆ, ಸಂಘರ್ಷ-ಸಾಮರಸ್ಯಗಳು ಆಂದೋಲನದ ಸ್ವರೂಪವನ್ನು ತಾಳಿ ಸಾಹಿತ್ಯ ಹಾಗೂ ಸಮಾಜದ ಮೇಲೆ ಗಾಢ ಪ್ರಭಾವ ಬೀರಿದ ಸಂಕ್ರಮಣ ಕಾಲ. ಇದರ ಫಲಶ್ರುತಿಯಾಗಿ ಮೂಡಿ ಬಂದುದೇ ಕನ್ನಡಕ್ಕೆ ವಿಶಿಷ್ಟವಾದ ವಚನ ಸಾಹಿತ್ಯ ಪ್ರಕಾರ.

ಈ ಸಾಹಿತ್ಯದ ನಿರ್ಮಾತೃಗಳಾದ ವಚನಕಾರರು, ಶೈವ, ವೀರಶೈವ ಭಕ್ತಿ ಪಂಥದ ಶಿವೋಪಾಸಕರಾದ ಶಿವಶರಣರು. ಅಂಥ ಶಿವಶರಣರಲ್ಲಿ ಆದ್ಯರು ದೇವರ ದಾಸಿಮಯ್ಯ.ದೇವರ ದಾಸಿಮಯ್ಯನವರು ಆದ್ಯ ವಚನಕಾರ ಎಂಬುದಷ್ಟೇ ಅವರ ಹೆಗ್ಗಳಿಕೆಯಲ್ಲ. ಮುಂದಿನ ಹನ್ನೆರಡನೆಯ ಶತಮಾನದ ಆಂದೋಲನಕ್ಕೆ ಹನ್ನೊಂದನೆಯ ಶತಮಾನದಲ್ಲಿಯೇ ಅಂದರೆ ಸರಿ ಸುಮಾರು ನೂರು ವರ್ಷಗಳ ಮುಂಚೆಯೇ ನಾಂದಿ ಹಾಡಿದವರು. ನೀಲ ನಕ್ಷೆ ತಯಾರಿಸಿ ನೀಡಿದ ನೀಲ ನಕ್ಷೆಗಾರರು.

ವೃತ್ತಿಯಿಂದ ನೇಕಾರ ಅಥವಾ ಜೇಡರಾದ ಇವರನ್ನು ಜೇಡರ ದಾಸಿಮಯ್ಯ ಎಂತಲೂ, ಇವರ ಬದುಕಿನ ಸಿದ್ಧಿ ಸಾಧನೆಗಳನ್ನು ಕಂಡು ಕೇಳಿ ಗೌರವಿಸಿ ದೇವರ ದಾಸಿಮಯ್ಯ ಎಂದೂ ಕರೆಯುವುದು ರೂಢಿಯಾಗಿದೆ.

ಕಲ್ಯಾಣಿ ಚಾಲುಕ್ಯ ಜಗದೇಕಮಲ್ಲ ಇಮ್ಮಡಿ ಜಯಸಿಂಹ (ಕ್ರಿ.ಶ.1015-1042)ನ ಹೆಂಡತಿ ಮಹಾರಾಣಿ ಸುಗ್ಗಲಾದೇವಿ ಇವನಿಂದ ದೀಕ್ಷೆ ಪಡೆದ ಶಿಷ್ಯೆ. ಇಂದಿನ ಯಾದಗಿರಿ ಜಿಲ್ಲೆಯ, ಸುರಪುರ ತಾಲ್ಲೂಕಿನ, ಮುದನೂರು ದೇವರ ದಾಸಿಮಯ್ಯನವರ ಜನ್ಮಸ್ಥಳ. ಅಲ್ಲಿನ ರಾಮನಾಥ ಇವರ ಆರಾಧ್ಯ ದೈವ ಮತ್ತು ಇವರ ವಚನಗಳ ಅಂಕಿತಕ್ಕೆ ಪ್ರೇರಣೆ.

ದುಗ್ಗಳಾದೇವಿ ದಾಸಿಮಯ್ಯನವರ ಧರ್ಮಪತ್ನಿ. ಇವರಿಬ್ಬರದೂ ಹೇಳಿ ಮಾಡಿಸಿದ ಅಪರೂಪದ ಜೋಡಿ. `ನೆರೆನಂಬೋ ನೆರೆನಂಬೋ ದಾಸ-ದುಗ್ಗಳೆಯರಂತೆ~ ಎಂದು ಹೊಗಳಿಸಿಕೊಳ್ಳುವಷ್ಟು ಅಪರೂಪದ ದಾಂಪತ್ಯ ಈ ದಂಪತಿಗಳದ್ದು.

ದೇವರ ದಾಸಿಮಯ್ಯನವರು ವಚನಕಾರರೆಂತೋ, ಅಂತೆಯೇ ದಾರ್ಶನಿಕರು, ಪವಾಡ ಪುರುಷರು. ಜೈನರನ್ನು ವಾದದಲ್ಲಿ ಸೋಲಿಸಿ ಘಟದಲ್ಲಿನ ವಿಷಸರ್ಪವನ್ನು ಮಂಗಳಮಯ ಶಿವಲಿಂಗವನ್ನಾಗಿಸಿದ, ತಾನುಟ್ಟ, ತಾನು ನೇಯ್ದ ಬಟ್ಟೆಯನ್ನೇ ಜಂಗಮ ರೂಪಿ ಶಿವನಿಗೆ ದಾನ ಮಾಡಿ ತವನಿಧಿ ಪಡೆದ ಮಹಿಮಾ ಶಾಲಿ. ಮುಂದಿನ ಅನೇಕರು ಅವರ ಬದುಕಿನ ಸಿದ್ದಿ ಸಾಧನೆಯನ್ನು ಸ್ಮರಿಸಿ ಅವರನ್ನು ಕೊಂಡಾಡಿದ್ದಾರೆ. ಅನೇಕರು ಶಾಸನಗಳನ್ನು ಬರೆಯಿಸಿದ್ದಾರೆ.

ಅಂಥವುಗಳಲ್ಲಿ ಪ್ರಮುಖವಾದವು ಕ್ರಿ.ಶ.1148 ರ ಗೊಬ್ಬೂರಿನ ಶಾಸನ, ಕ್ರಿ.ಶ.1167ರ ಚಿಕ್ಕಮುದನೂರಿನ ಶಾಸನ, ಕ್ರಿ.ಶ.1200 ರ ಅರಸೀಕೆರೆ ಶಾಸನ, ಕ್ರಿ.ಶ.1259 ರ ಹಿರಿಯೂರಿನ ಶಾಸನ. ಅಲ್ಲದೇ ಬ್ರಹ್ಮಶಿವ, ಹರಿಹರ, ತೆಲುಗಿನ ಪಾಲ್ಕುರಿಕೆ ಸೋಮನಾಥ, ಭೀಮಕವಿ, ವಿರೂಪಾಕ್ಷ ಪಂಡಿತ, ಸಿದ್ದ ನಂಜೇಶ

ಮುಂತಾದವರು ಪ್ರಾಸಂಗಿಕವಾಗಿ ದೇವರ ದಾಸಿಮಯ್ಯನವರನ್ನು ಕುರಿತು ಉಲ್ಲೆೀಖಿಸಿದರೆ, ಸಂಸ್ಕೃತದ ದೇವ ಕವಿ ಕನ್ನಡದ ರಾಘವಾಂಕ, ವಿರೂಪಾಕ್ಷ ದೇಶಿಕ, ಸಿದ್ಧ ಮಲ್ಲಾರ್ಯ ಮತ್ತು ಅಯ್ಯಪ್ಪ ಕವಿ ಮುಂತಾದವರು ದಾಸಿಮಯ್ಯನವರನ್ನು ಕುರಿತು ಬೃಹತ್ ದೇವಾಂಗ ಪುರಾಣಗಳನ್ನು ರಚಿಸಿದ್ದಾರೆ.

ದಾಸಿಮಯ್ಯನವರ ವಚನಗಳು ಗಾತ್ರದಲ್ಲಿ ಚಿಕ್ಕವು. ಭಾಷೆ ತೀರ ಸರಳ. ಆದರೆ ಈ ಸರಳ ಸಂಕ್ಷಿಪ್ತತೆಯಲ್ಲಿಯೇ ತೀವ್ರವಾದ ಅನುಭವವನ್ನು ತರುವ ಅವರ ರೀತಿ ಅನನ್ಯ ಮತ್ತು ಆಶ್ಚರ್ಯಕರವಾದುದು. ಹಾಗೆಯೇ ಶಬ್ದ ಚಿತ್ರಗಳನ್ನು ನೀಡುವುದರಲ್ಲಿ ದಾಸಿಮಯ್ಯನವರು ಪರಿಣಿತರು. ಹಸಿವಿನ ಸುತ್ತ ಚಿತ್ರಿತವಾದ ಹಾವು, ವಿಷ, ಗಾರುಡಿಗ, ಡಾಂಭಿಕ ಭಕ್ತಿಯನ್ನು ಸೂಚಿಸುವ ಮಠದ ಇಲಿ ಬೆಕ್ಕುಗಳ ಚಿತ್ರಣ ಅಸದೃಶ್ಯವಾಗಿವೆ.
ಅವರ ವಿಡಂಬನೆ ಒಮ್ಮಮ್ಮೆ ನಯವಾದರೆ ಮತ್ತೊಮ್ಮೆ ಒರಟಾಗುತ್ತದೆ. ಶ್ರೇಷ್ಠ ಚಿಂತಕರಾದ ಇವರ ವಚನಗಳಲ್ಲಿ ಬುದ್ಧಿ-ಭಾವಗಳ ವಿದ್ಯುದ್ದಾಲಿಂಗನ ಹದವಾಗಿ ಸಮ್ಮಿಳಿತಗೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.