ಶನಿವಾರ, ಜೂನ್ 19, 2021
27 °C

ಆಧುನಿಕ ಜಗತ್ತಿನ ಸವಾಲಿಗೆ ಹೊಸ ಚಿಂತನೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಧುನಿಕ ಜಗತ್ತಿನ ಸವಾಲಿಗೆ ಹೊಸ ಚಿಂತನೆ ಅಗತ್ಯ

ಬೆಂಗಳೂರು: `ಕೇವಲ ಭೂತಕಾಲದ ವೈಭವದಲ್ಲಿಯೇ ಮುಳುಗದೇ ಪ್ರಸ್ತುತ ಆಧುನಿಕ ಜಗತ್ತಿನ ಸವಾಲುಗಳಿಗೆ ಹೊಸ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ~ ಎಂದು ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಖಾತೆಯ ಸಚಿವ ಎಂ.ವೀರಪ್ಪ ಮೊಯಿಲಿ ಹೇಳಿದರು.ನಗರದಲ್ಲಿ ಶನಿವಾರ ಸಪ್ನ ಬುಕ್ ಹೌಸ್ ಆಯೋಜಿಸಿದ್ದ `ಆಧಾರ್~ ಯೋಜನೆಯ ಮುಖ್ಯಸ್ಥ ನಂದನ್ ನಿಲೇಕಣಿ ಅವರ `ಇಮ್ಯಾಜಿನಿಂಗ್ ಇಂಡಿಯಾ~ ಕೃತಿಯ ಕನ್ನಡಾನುವಾದ `ಬಿಂಬ ಭಾರತ~ ಪುಸ್ತಕದ ಬಿಡುಗಡೆ ನೆರವೇರಿಸಿ ಅವರು ಮಾತನಾಡಿದರು.`ಭಾರತೀಯ ಸಂಸ್ಕೃತಿಯಲ್ಲಿ ಎಲ್ಲ ಜ್ಞಾನಗಳಿದ್ದರೂ ನಾವು ಕೇವಲ ಹಳತನ್ನೇ ನೆಚ್ಚಿಕೊಂಡು ಕೂರಲು ಸಾಧ್ಯವಿಲ್ಲ. ಅತಿ ವೇಗದ ಬೆಳವಣಿಗೆಯ ಆಧುನಿಕ ಜಗತ್ತಿನ ಓಟಕ್ಕೆ ನಮ್ಮನ್ನೂ ಸಜ್ಜುಗೊಳಿಸಿಕೊಳ್ಳಬೇಕಿದೆ. ನಮ್ಮ ಜ್ಞಾನ ಹಾಗೂ ಚಿಂತನೆಗಳ ವಿಸ್ತಾರಕ್ಕಾಗಿ ನಾವು ಹೆಚ್ಚು ಹೆಚ್ಚು ಭಾಷೆಗಳನ್ನು ಕಲಿಯುವುದು ಅನಿವಾರ್ಯ ಎಂಬುದನ್ನು `ಬಿಂಬ ಭಾರತ~ ಕೃತಿ ಎತ್ತಿ ತೋರುತ್ತದೆ~ ಎಂದು ಅವರು ನುಡಿದರು.`ಗ್ರಾಮೀಣ ಭಾರತದಲ್ಲಿನ ಶೇಕಡಾ 60 ರಷ್ಟು ಜನಸಂಖ್ಯೆಯಿಂದ ಒಟ್ಟು ಉತ್ಪಾದನೆಯ ಬೆಳವಣಿಗೆ ಪ್ರಮಾಣ ಕೇವಲ ಶೇಕಡಾ 6 ರಷ್ಟಿದೆ. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಭಾರತದ ಒಟ್ಟೂ ನಿವ್ವಳ ಉತ್ಪಾದನೆಯ ಪ್ರಮಾಣದಲ್ಲಿ ಅಸಮಾನತೆ ಉಂಟಾಗಿದೆ. ಇದನ್ನು ನಿವಾರಿಸಿಕೊಳ್ಳಲು ಹೊಸ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಹೊಸ ಆರ್ಥಿಕ ಒಳನೋಟಗಳನ್ನು ಕೊಡುವ ನಂದನ್ ನಿಲೇಕಣಿ ಅವರ ದೃಷ್ಟಿಕೋನ ಮಹತ್ವದ್ದು~ ಎಂದು ಅವರು ಅಭಿಪ್ರಾಯ ಪಟ್ಟರು.ಹಿರಿಯ ಕವಿ ಎಚ್.ಎಸ್.ವೆಂಕಟೇಶಮೂರ್ತಿ ಮಾತನಾಡಿ, `ಭಾರತದ ಸಮಸ್ಯೆಗಳೆಂದು ತಿಳಿದಿರುವ ಜನಸಂಖ್ಯಾ ಸ್ಪೋಟ, ಉದ್ಯಮಗಳ ಅತಿಯಾದ ಬೆಳವಣಿಗೆ, ಇಂಗ್ಲಿಷ್ ಭಾಷೆ ಹಾಗೂ ನಗರೀಕರಣಗಳನ್ನು ನಿಲೇಕಣಿ ಅವರು ದೇಶಕ್ಕೆ ಆಗುವ ಲಾಭದ ದೃಷ್ಟಿಯಿಂದ ನೋಡುವ ಕ್ರಮ ಹೊಸತಾದುದು. ಜ್ಞಾನದ ವಿಸ್ತಾರಕ್ಕಾಗಿ ಈ ನೆಲದ ಸಂಸ್ಕೃತಿಯೊಂದಿಗೇ ಹೊಸ ನೋಟಗಳನ್ನು ರೂಪಿಸಿರುವ ಪುಸ್ತಕದ ಚಿಂತನೆಗಳೊಂದಿಗೆ ಹಲವು ವಿರೋಧಾಭಾಸಗಳೂ ಉಳಿದುಕೊಳ್ಳುತ್ತವೆ.ಭವಿಷ್ಯದ ಭಾರತದ ಬಗ್ಗೆ ಚಿಂತಿಸುವ ಕೃತಿ ಪ್ರಾದೇಶಿಕ ಭಾಷೆಗಳ ಉಳಿವು ಹಾಗೂ ಅಭಿವೃದ್ಧಿಯಿಂದಾಗಿ ದೇಶ ಏನನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬುದರ ಬಗ್ಗೆ ಉತ್ತರ ನೀಡುವುದಿಲ್ಲ. ಬಹುಶಃ ಇದು ಕೃತಿಯ ಚಿಂತನೆಯ ಮಿತಿ~ ಎಂದು ಅವರು ಹೇಳಿದರು.ಶಿಕ್ಷಣ ತಜ್ಞ ಹಾಗೂ ಪುಸ್ತಕದ ಅನುವಾದಕ ಪ್ರೊ.ಕೆ.ಈ.ರಾಧಾಕೃಷ್ಣ ಮಾತನಾಡಿ, `ಎಡ-ಬಲ ಎಂಬ ಪಂಥಗಳಿಂದ ಮುಕ್ತವಾದ ಚಿಂತನೆಗಳ ಕೃತಿ ಇದು. ಇಲ್ಲಿನ ಹೊಸ ಚಿಂತನೆಗಳನ್ನು ಕನ್ನಡಕ್ಕೂ ತರಬೇಕೆಂಬ ತುಡಿತ ಹೆಚ್ಚಾದ್ದರಿಂದ ಕೃತಿಯ ಅನುವಾದಕ್ಕೆ ತೊಡಗಿದೆ. ಕೃತಿಯಲ್ಲಿನ ಚಿಂತನೆಗಳ ಹೊಸ ನೋಟ ಅಭಿವೃದ್ಧಿಯ ಈವರೆಗಿನ ವ್ಯಾಖ್ಯಾನಗಳನ್ನೇ ಮುರಿಯುವಂತಿದೆ~ ಎಂದರು.ಮೂಲ ಕೃತಿಯ ಕರ್ತೃ ನಂದನ್ ನಿಲೇಕಣಿ ಮಾತನಾಡಿ, `ಪ್ರತಿ ಎರಡು ವರ್ಷಗಳಿಗೊಮ್ಮೆ ತಂತ್ರಜ್ಞಾನ ತೀವ್ರಗತಿಯಲ್ಲಿ ಬೆಳವಣಿಗೆ ಕಾಣುತ್ತಿದೆ. ಜಾಗತಿಕ ಬೆಳವಣಿಗೆಗೆ ಅನುಗುಣವಾಗಿ ಭಾರತವೂ ಬೆಳವಣಿಗೆ ಸಾಧಿಸಬೇಕಾದುದು ಅಗತ್ಯ~ ಎಂದರು.ಸಮಾರಂಭದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಯದ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಪ್ರಧಾನ್ ಗುರುದತ್ತ, ಸಪ್ನ ಬುಕ್ ಹೌಸ್‌ನ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.