ಗುರುವಾರ , ಮೇ 19, 2022
20 °C

ಆಪತ್ತಿನಲ್ಲಿ ವಿಪತ್ತು ನಿರ್ವಹಣಾ ಕೋಶ!

ಬಸವರಾಜ್ ಸಂಪಳ್ಳಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ನವನಗರದ ಜಿಲ್ಲಾಡಳಿತ ಭವನದಲ್ಲಿರುವ ವಿಪತ್ತು ನಿರ್ವಹಣಾ ಕೋಶವೇ ಆಪತ್ತಿಗೆ ತುತ್ತಾಗಿದೆ!ಹೌದು, ಜಿಲ್ಲೆಯಲ್ಲಿ ಪ್ರಾಕೃತಿಕ (ಪ್ರವಾಹ, ಭೂಕಂಪ, ಬಿರುಗಾಳಿ, ಭೂಕುಸಿತ, ಅತಿವೃಷ್ಟಿ, ಬರ ಇತ್ಯಾದಿ) ಅಥವಾ ಮಾನವ ನಿರ್ಮಿತ ಆಪತ್ತುಗಳು (ಭಯೋತ್ಪಾದಕ, ಉಗ್ರವಾದಿ ಚಟುವಟಿಕೆ,  ಬೆಂಕಿ ಅನಾಹುತ, ಕಟ್ಟಡ ಕುಸಿತ, ವಾಹನ ಅಪಘಾತ) ಸಂಭವಿಸಿದಾಗ ಜಿಲ್ಲಾಡಳಿತಕ್ಕೆ ತಕ್ಷಣ ಮಾಹಿತಿ ರವಾನಿಸಲು ಹಾಗೂ ನೆರವು ಕೇಳಲು ಇರುವ ವಿಪತ್ತು ನಿರ್ವಹಣಾ ಕೋಶವೇ ಸ್ತಬ್ಧವಾಗಿದೆ.ಜಿಲ್ಲಾಡಳಿತ ಭವನದ 19 ಎ ಕೊಠಡಿಯಲ್ಲಿರುವ ವಿಪತ್ತು ನಿರ್ವಹಣಾ ಕೋಶ ಹತ್ತಾರು ಸಮಸ್ಯೆಗಳಿಂದ ನಲುಗುತ್ತಿದೆ.

ದಿನದ 24 ಗಂಟೆ ಕಾರ್ಯಾಚರಣೆ ನಡೆಸುವ ವಿಪತ್ತು ನಿರ್ವಹಣಾ ಕೋಶ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ವಿವಿಧ ಇಲಾಖೆಯ ಸಿಬ್ಬಂದಿಯನ್ನು ವಾರಕ್ಕೊಮ್ಮೆ ಪಾಳೆ ಆಧಾರದ ಮೇಲೆ ಕೆಲಸಕ್ಕೆ ನಿಯೋಜಿಸಲಾಗುತ್ತದೆ.ಪ್ರತಿ ದಿನ ಬೆಳಿಗ್ಗೆ 6ಕ್ಕೆ ಬರುವ ಒಬ್ಬ ಸಿಬ್ಬಂದಿ ಮಧ್ಯಾಹ್ನ 2ರ ವರೆಗೆ ಇರುತ್ತಾರೆ. ಬಳಿಕ 2ರಿಂದ ರಾತ್ರಿ 10ರ ವರೆಗೆ ಇನ್ನೊಬ್ಬರು ಹಾಗೂ ರಾತ್ರಿ 10ರಿಂದ ಬೆಳಿಗ್ಗೆ 6ರ ವರೆಗೆ ಮತ್ತೊಬ್ಬರು ಹೀಗೆ ಮೂರು ಜನ ಸಿಬ್ಬಂದಿ ಪಾಳೆ ಆಧಾರದ ಮೇಲೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಾರೆ.`ಪ್ರತಿ ದಿನ ಕಚೇರಿಗೆ ಬರುವುದು, ಹಾಜರಿ ಪುಸ್ತಕದಲ್ಲಿ ಸಹಿ ಮಾಡುವುದನ್ನು ಬಿಟ್ಟು ಮಾಡಲು ಬೇರೇನೂ ಕೆಲಸವಿಲ್ಲ. ಕಚೇರಿಯಲ್ಲಿ ಕುಳಿತು ಕುಳಿತು ಬೇಸರವಾದರೆ ಜಿಲ್ಲಾಡಳಿತ ಭವನದಲ್ಲೇ ಇರುವ ಬೇರೆ ಕಚೇರಿಗಳಿಗೆ ಇಲ್ಲವೇ ಹೋಟೆಲ್‌ಗೆ ಹೋಗಿ ಹರಟೆ ಹೊಡೆಯುವುದು ಮತ್ತೆ ಕಚೇರಿಗೆ ಬಂದು ಕುಳಿತುಕೊಳ್ಳುವುದೇ ತಲೆನೋವಿನ ಕೆಲಸವಾಗಿದೆ' ಎನ್ನುತ್ತಾರೆ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ.ಕಚೇರಿಯ ದೂರವಾಣಿ (08354- 201420) ನಿಶಬ್ದವಾಗಿ ವರ್ಷವೇ ಗತಿಸಿದ್ದರೂ ಇನ್ನೂ ದುರಸ್ತಿಗೊಳಿಸಿಲ್ಲ. 2011ನೇ ನವೆಂಬರ್ 24ರಂದು ಬಂದಿರುವ ಕರೆಯೇ ಕೊನೆಯ ದೂರವಾಣಿ ಕರೆಯಾಗಿದೆ. ಬಳಿಕ ಇಲ್ಲಿಗೆ ಯಾವೊಂದು ಕರೆಯೂ ಬಂದಿಲ್ಲ. ಒಂದು ವೇಳೆ ಕರೆ ಬಂದಿದ್ದರೂ ದೂರವಾಣಿ ಡೆಡ್ ಆಗಿರುವುದರಿಂದ ಯಾವುದೇ ಪ್ರಯೋಜನವಿಲ್ಲದಂತಾಗಿದೆ.

ವಿಪತ್ತು ನಿರ್ವಹಣಾ ಕೋಶದಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಇರಬೇಕಾಗಿದ್ದರೂ ಯಾವ ಪೊಲೀಸ್ ಸಿಬ್ಬಂದಿಯೂ ಇಲ್ಲಿ ಕಾಣಸಿಗುವುದಿಲ್ಲ. ಬದಲಿಗೆ ಪೊಲೀಸ್ ಟೊಪ್ಪಿಗಳು ಮಾತ್ರ ಅನಾಥವಾಗಿ ಬಿದ್ದು ದೂಳು ತಿನ್ನುತ್ತಿವೆ.ವಿಪತ್ತು ನಿರ್ವಹಣಾ ಕೋಶದಲ್ಲಿರುವ ಕಂಪ್ಯೂಟರ್ ಆನ್ ಆಗದೇ ಅದೆಷ್ಟು ದಿನಗಳಾಗಿವೆಯೋ ದೇವರೇ ಬಲ್ಲ. ವಿಪತ್ತುಗಳು ಸಂಭವಿಸಿದಾಗ ಕೈಗೊಳ್ಳಬೇಕಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಫಲಕಗಳೂ ಅಸ್ತವ್ಯಸ್ತವಾಗಿ ಕಚೇರಿಯಲ್ಲಿ ಬಿದ್ದುಕೊಂಡಿವೆ.`ಹೆಸರಿಗೆ ಮಾತ್ರ ಇರುವ ವಿಪತ್ತು ನಿರ್ವಹಣಾ ಕೋಶಕ್ಕೆ `ಜೀವ' ತುಂಬುವ ಕಾರ್ಯ ಜಿಲ್ಲಾಡಳಿತದಿಂದ ಆಗಬೇಕಿದೆ. ಜಿಲ್ಲೆಯಲ್ಲಿ ಆಕಸ್ಮಿಕ ಅವಘಡಗಳಾದರೆ ಜೀವ ಮತ್ತು ಆಸ್ತಿಗೆ ಹೆಚ್ಚಿನ ಹಾನಿಯಾಗದಂತೆ ತಡೆಯಲು ನೆರವಾಗಲಿದೆ' ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.