ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರಕ್ಕೆ ಏರದ, ಮೂರಕ್ಕೆ ಇಳಿಯದ ಮಂಡ್ಯ

Last Updated 19 ಫೆಬ್ರುವರಿ 2015, 7:18 IST
ಅಕ್ಷರ ಗಾತ್ರ

ಮಂಡ್ಯ: ಸಕ್ಕರೆ ನಾಡು, ಕೃಷಿಕರ ಬೀಡು, ಪ್ರವಾಸ ಸ್ಥಳಗಳ ತಾಣ, ಕನ್ನಡದ ಕಂಪು ಉಳಿಸಿಕೊಂಡಿರುವ ಮಂಡ್ಯ ಜಿಲ್ಲೆಗೆ ಈಗ ಅಮೃತ ಮಹೋತ್ಸವದ ಘಳಿಗೆ. ಸ್ವತಂತ್ರ ಜಿಲ್ಲೆಯಾಗಿ ರಚನೆಗೊಂಡ 75 ವರ್ಷಗಳಲ್ಲಿ ಹಲವಾರು ಹಿರಿಮೆಗಳಿಗೆ ಜಿಲ್ಲೆ ಪಾತ್ರವಾಗಿದೆ. ಹಾಗೆಯೇ, ಅಪವಾದಗಳಿಗೂ ಗುರಿಯಾಗಿದೆ.

ಕೃಷಿಯೇ ಮಂಡ್ಯ ಜಿಲ್ಲೆಯ ಜನರ ಮೂಲ ಉದ್ಯೋಗ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ, ಇಲ್ಲಿ ಕೃಷಿಯ ಜತೆಗೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವವರ ಸಂಖ್ಯೆ ಹೆಚ್ಚಿದೆ. ಹಾಗಾಗಿಯೇ, ಹಾಲು ಉತ್ಪಾದನೆಯಲ್ಲಿ ಜಿಲ್ಲೆ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಬೇರೆ ಭಾಷೆಗಳ ಪ್ರಭಾವ ಹೆಚ್ಚಿಗೆ ಇರದ ಕಾರಣ ಈಗಲೂ ಜಿಲ್ಲೆಯಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಶೇ 95ಕ್ಕೂ ಹೆಚ್ಚಿದೆ.

ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ದೂರದೃಷ್ಟಿಯ ಲಾಭ ಜಿಲ್ಲೆಗೆ ದಕ್ಕಿದೆ. ಕೆಆರ್‌ಎಸ್‌ ಅಣೆಕಟ್ಟು ನಿರ್ಮಾಣ, ಶಿಂಷಾ ಜಲ ವಿದ್ಯುತ್‌ ಘಟಕ, ಮೈಷುಗರ್ ಸಕ್ಕರೆ ಕಾರ್ಖಾನೆ ಸ್ಥಾಪನೆ... ಹೀಗೆ ಉದಾಹರಣೆಯಾಗಿ ಹೆಸರಿಸಬಹುದು. ಕಾವೇರಿ ನದಿ ಜಿಲ್ಲೆಯ ಜೀವನಾಡಿಯಾಗಿದೆ. ಅದರೊಂದಿಗೆ ಹೇಮಾವತಿ, ಲೋಕಪಾವನಿ, ಶಿಂಷಾ ಹಾಗೂ ವೀರವೈಷ್ಣವಿ, ಲಕ್ಷ್ಮಣತೀರ್ಥ ನದಿಗಳು ಹರಿದಿವೆ.

ತನ್ನೊಡಲೊಳಗೆ ಇರುವ ಕೆಆರ್ಎಸ್‌ನ ಬೃಂದಾವನ ಉದ್ಯಾನ, ರಂಗನತಿಟ್ಟು ಪಕ್ಷಿಧಾಮ, ಗಗನಚುಕ್ಕಿ ಜಲಪಾತದಂತಹ ಪ್ರವಾಸಿ ತಾಣಗಳಿಂದ ಗುರುತಿಸಿಕೊಂಡಿದೆ. ‘ಮದ್ದೂರು ವಡೆ’ ಈಗಲೂ ಬಾಯಲ್ಲಿ ನೀರೂರಿಸುತ್ತದೆ. 75 ವರ್ಷದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ಆದರೆ, ಸಾಧಿಸಬೇಕಾದಷ್ಟು ಪ್ರಗತಿ ಸಾಧಿಸಿಲ್ಲ ಎಂಬ ಕೊರಗೂ ಇದೆ.

ಮಂಡ್ಯ ತಾಲ್ಲೂಕಿನ ಹಲ್ಲೇಗೆರೆ ಮೂಲದ ವಿವೇಕ ಹಲ್ಲೇಗೆರೆ ಮೂರ್ತಿ ಅವರು ಅಮೆರಿಕಾದ ‘ಸರ್ಜನ್‌ ಜನರಲ್‌’ ಆಗಿರುವುದು, ಜಿಲ್ಲೆಯ ಶ್ರೀರಂಗಪಟ್ಟಣ ಮೂಲದ ವಿಜ್ಞಾನಿ ಎಸ್‌.ಕೆ. ಶಿವಕುಮಾರ್ ಅವರು ಇಸ್ರೋದ ನಿರ್ದೇಶಕರಾಗಿರುವುದು ಹೆಮ್ಮೆಯ ಸಂಗತಿಗಳಾಗಿವೆ.
ಹುಲಿಕೆರೆಯ ಬಳಿ ನಿರ್ಮಿಸಿರುವ 2.8 ಕಿ.ಮೀ. ಉದ್ದದ ಹುಲಿಕೆರೆ ಬುಗ (ಟನೆಲ್‌), ಶಿಂಷಾದ ಜಲ ವಿದ್ಯುತ್‌ ಘಟಕ ಏಷ್ಯಾದಲ್ಲಿಯೇ ಮೊದಲು ಎಂಬ ಹಿರಿಮೆಗೆ ಪಾತ್ರವಾಗಿವೆ.

ಹಲವಾರು ವರ್ಷಗಳಿಂದ ಭ್ರೂಣಹತ್ಯೆಯಲ್ಲಿ ಮಂಡ್ಯ ಜಿಲ್ಲೆ ಎರಡನೇ ಸ್ಥಾನದಲ್ಲಿರುವುದು. ಈ ವರ್ಷ ಎಚ್‌ಐವಿ/ಏಡ್ಸ್‌ ಬೆಳವಣಿಗೆ ದರದಲ್ಲಿಯೂ ಎರಡನೇ ಸ್ಥಾನದಲ್ಲಿದ್ದು, ಆತಂಕ ತರುವ ವಿಷಯಗಳಾಗಿವೆ. ಕೃಷಿ ‘ಮೊಣಕಾಲ ಮಟ ಕಬ್ಬು, ಎದೆಮಟ ಸಾಲ’ ಎಂಬ ಗಾದೆ ಮಾತು ಇಲ್ಲಿ ಬಹಳ ಜನಪ್ರಿಯ. ಇದು ಜಿಲ್ಲೆಯ ಕೃಷಿಕನ ಜೀವನ ಬಿಂಬಿಸುತ್ತದೆ ಎಂದರೆ ತಪ್ಪಾಗಲಾರದು. ಈಗಲೂ ಇಲ್ಲಿ ಕೃಷಿ ಪ್ರಧಾನವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಅದು ಲಾಭದಾಯಕವಾಗಿ ಉಳಿದಿಲ್ಲ.

ಸ್ವಾತಂತ್ರ್ಯಪೂರ್ವದಲ್ಲಿ ನಿರ್ಮಾಣವಾಗಿರುವ ಕೆಆರ್ಎಸ್‌ ಅಣೆಕಟ್ಟು ಹೊರತುಪಡಿಸಿದರೆ, ಮತ್ತೊಂದು ದೊಡ್ಡ ಪ್ರಮಾಣದ ನೀರಾವರಿ ಯೋಜನೆ ರೂಪಿಸಲಾಗಿಲ್ಲ. ಅಲ್ಲಲ್ಲಿ ಏತ ನೀರಾವರಿ ಯೋಜನೆ ಜಾರಿಗೊಳಿಸಿರುವರಾದರೂ ಯಶಸ್ಸಿಗಿಂತ ವೈಫಲ್ಯ ಆಗಿರುವ ಯೋಜನೆಗಳ ಸಂಖ್ಯೆಯೇ ಹೆಚ್ಚಿದೆ. ಕಬ್ಬು ಅಷ್ಟೇ ಅಲ್ಲ, ರಾಜ್ಯದಲ್ಲಿಯೇ ಅತಿ ಹೆಚ್ಚು ರೇಷ್ಮೆಯನ್ನು ಮಂಡ್ಯದಲ್ಲಿ ಬೆಳೆಯುತ್ತಾರೆ. ಮದ್ದೂರಿನ ಎಳನೀರು, ಮಂಡ್ಯದ ಬೆಲ್ಲದ ಮಾರುಕಟ್ಟೆ ದೊಡ್ಡ ಹೆಸರು ಮಾಡಿವೆ. ತೆಂಗು, ಭತ್ತ ಇಲ್ಲಿನ ಪ್ರಮುಖ ಬೆಳೆಗಳಾಗಿವೆ.

ಶಿಕ್ಷಣ: ಕಳೆದ ಏಳು ದಶಕಗಳಲ್ಲಿ ಜಿಲ್ಲೆಯಲ್ಲಿ ಶಾಲಾ–ಕಾಲೇಜುಗಳ ಸಂಖ್ಯೆ ಹಲವಾರು ಪಟ್ಟು ಹೆಚ್ಚಾಗಿದೆ. ವೈದ್ಯಕೀಯ, ಎಂಜಿನಿಯರಿಂಗ್‌ ಸೇರಿದಂತೆ ಎಲ್ಲ ಕೋರ್ಸ್‌ ಹೊಂದಿರುವ ಕಾಲೇಜುಗಳಿವೆ. ಹಾಗಾಗಿ, ಸಾಕ್ಷರತೆ ಪ್ರಮಾಣವು ಶೇ 61.21 ಇದೆ. ರಾಜ್ಯಕ್ಕೆ ಹೋಲಿಸಿದರೆ ಇದು ಕಡಿಮೆ. ಕಳೆದ ಐದು ವರ್ಷಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯೂ ಮೊದಲ ಮೂರು ಸ್ಥಾನಗಳಲ್ಲಿದೆ. ಇದು ಶೈಕ್ಷಣಿಕ ಪ್ರಗತಿ ತೋರಿಸುತ್ತದೆ. ಆದರೆ, ಇದೇ ಫಲಿತಾಂಶ ಪಿಯುನಲ್ಲಿ ದಾಖಲಾಗುತ್ತಿಲ್ಲ ಎನ್ನುವುದು ಗಮನಾರ್ಹ.

ಮೈಸೂರು ವಿಶ್ವವಿದ್ಯಾಲಯ ಹಾಗೂ ವಿಜಯಪುರದ ಮಹಿಳಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರಗಳಿವೆ. ಜಿಲ್ಲೆಗೇ ಸ್ವತಂತ್ರ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎಂಬ ಕೂಗು ಕೇಳಿ ಬರುತ್ತಲೇ ಇದೆ. ಸಾಹಿತ್ಯ ಜಿಲ್ಲೆಯ ಹಲವಾರು ಸಾಹಿತ್ಯ ದಿಗ್ಗಜರು ನಾಡಿನ ಸಾಹಿತ್ಯ ಲೋಕದಲ್ಲಿ ಮಂಡ್ಯದ ಹೆಸರೂ ದಾಖಲಾಗುವಂತೆ ಮಾಡಿದ್ದಾರೆ.

ಜಾನಪದ ಹಾಗೂ ಪೌರಾಣಿಕ ರಂಗಭೂಮಿಯ ಗಟ್ಟಿ ನೆಲ. ಜಾನಪದದ ಕಂಪಿನ ಪ್ರಮಾಣ ಕಡಿಮೆಯಾಗಿದೆ. ಪೌರಾಣಿಕ ನಾಟಕಗಳು ಈಗಲೂ ಹಳ್ಳಿ, ಹಳ್ಳಿಗಳಲ್ಲಿ ನಡೆಯುತ್ತಲೇ ಇರುತ್ತವೆ. ಮಹಿಳಾ ತಂಡಗಳೂ ಇದಕ್ಕೆ ಇತ್ತೀಚೆಗೆ ಸೇರ್ಪಡೆಯಾಗಿವೆ.
ಕೆ.ಎಸ್‌. ನರಸಿಂಹಸ್ವಾಮಿ, ಪು.ತಿ. ನರಸಿಂಹಾಚಾರ್ಯ, ಜಿ.ಶಂ. ಪರಮಶಿವಯ್ಯ, ಎಚ್‌್.ಎಲ್‌. ನಾಗೇಗೌಡ, ತ್ರೀವೇಣಿ, ಬಿಎಂಶ್ರೀ, ಜಿ. ನಾರಾಯಣ, ಜಿ. ವೆಂಕಟಸುಬ್ಬಯ್ಯ, ಬೆಸಗರಹಳ್ಳಿ ರಾಮಣ್ಣ, ಎ.ಎನ್‌. ಮೂರ್ತಿರಾವ್‌ ಸೇರಿದಂತೆ ಹಲವರು ಸಾಹಿತ್ಯ ಲೋಕದಲ್ಲಿ ಹೆಸರು ಮಾಡಿದ್ದಾರೆ.

ಪ್ರವಾಸಿ ತಾಣ
ಜಿಲ್ಲೆಯ ಹಲವಾರು ಪ್ರವಾಸಿ ತಾಣಗಳು ವಿಶ್ವದಾದ್ಯಂತ ಪರಿಚಿತವಾಗಿವೆ. ರಂಗನತಿಟ್ಟು, ಕೊಕ್ಕರೆ ಬೆಳ್ಳೂರು ಎಂಬ ಪಕ್ಷಿಧಾಮಗಳಿವೆ. ಹೊಯ್ಸಳರ ಕೆತ್ತನೆ ವೈಭವವನ್ನು ಸಾರುವ ದೇವಾಲಯಗಳು ಹೊಸಹೊಳಲು, ಗೋವಿಂದನಹಳ್ಳಿ, ಕಿಕ್ಕೇರಿ, ಬಸರಾಳು, ಕಂಬದಹಳ್ಳಿ ಸೇರಿದಂತೆ ಹಲವೆಡೆ ಇವೆ.

ಶ್ರೀರಂಗಪಟ್ಟಣದ ಬಳಿಯ ಸಂಗಮ, ದರಿಯಾ ದೌಲತ್‌್, ಬೇಸಿಗೆ ಅರಮನೆ, ರಂಗನಾಥಸ್ವಾಮಿ ದೇವಾಲಯ, ನಿಮಿಷಾಂಬ ದೇವಾಲಯ, ಪಶ್ಚಿಮವಾಹಿನಿ, ಬಲಮುರಿ, ಕೆಆರ್‌ಎಸ್‌ ಅಣೆಕಟ್ಟು, ಮಳವಳ್ಳಿ ತಾಲ್ಲೂಕಿನಲ್ಲಿರುವ ಗಗನಚುಕ್ಕಿ ಜಲಪಾತ, ಮೇಲುಕೋಟೆಯ ಚಲುವನಾರಾಯಣಸ್ವಾಮಿ, ನಾಗಮಂಗಲದ ಸೌಮ್ಯಕೇಶವ ದೇವಾಲಯ, ಆದಿಚುಂಚನಗಿರಿ, ಮದ್ದೂರಿನ ಶಿವಪುರ ಧ್ವಜ ಸತ್ಯಾಗ್ರಹ ಸೌಧ, ಅರೆತಿಪ್ಪೂರು ಸೇರಿದಂತೆ ಹಲವು ಪ್ರವಾಸಿ ತಾಣಗಳಿವೆ. ಇಷ್ಟೊಂದು ಪ್ರವಾಸಿ ತಾಣಗಳಿದ್ದರೂ, ಅದನ್ನೊಂದು ಉದ್ಯಮವನ್ನಾಗಿ ಪರಿವರ್ತಿಸಲು  ಸಾಧ್ಯವಾಗಿಲ್ಲ.

ಚಲನಚಿತ್ರ
ಕನ್ನಡ ಚಲನಚಿತ್ರರಂಗದಲ್ಲಿ ಮಂಡ್ಯ ಜಿಲ್ಲೆಯ ದೊಡ್ಡ ದಂಡೇ ಇದೆ. ನಟನೆ, ನಿರ್ದೇಶನ, ತಂತ್ರಜ್ಞಾನ ಸೇರಿದಂತೆ ಎಲ್ಲ ವಿಭಾಗದಲ್ಲಿಯೂ ಇದ್ದಾರೆ. ವಸತಿ ಸಚಿವರಾಗಿರುವ ನಟ ಅಂಬರೀಷ್‌ ಮಂಡ್ಯ ಜಿಲ್ಲೆಯವರು. ಮಂಡ್ಯ ರಮೇಶ್‌, ನೀನಾಸಂ ಸತೀಶ್‌, ರವಿಶಂಕರ್‌್, ರಮ್ಯಾ, ಮೈತ್ರೇಯಿ ಗೌಡ, ಅರವಿಂದ, ಶನಿಮಹಾದೇವಪ್ಪ ಸೇರಿದಂತೆ ಹಲವರು ನಟನೆಯ ಮೂಲಕ ಜಿಲ್ಲೆಗೆ ಹೆಸರು ತಂದಿದ್ದಾರೆ.

ಬಿ.ಎಸ್‌. ರಂಗಾ, ನಿತ್ಯ ಸಚಿವ ಕೆ.ವಿ. ಶಂಕರಗೌಡ, ಸಂದೇಶ ನಾಗರಾಜು, ಡಿ.ಎಚ್‌. ಗೌಡ, ಶ್ರೀಕಂಠಮೂರ್ತಿ ಸೇರಿದಂತೆ ಹಲವರು ಚಲನಚಿತ್ರ ನಿರ್ಮಾಣ ಮಾಡಿದ್ದಾರೆ. ಕೆ.ಎಸ್‌.ಎಲ್‌. ಸ್ವಾಮಿ, ಕೆ.ವಿ. ಜಯರಾಂ, ಕೆ.ವಿ. ರಾಜು, ನಾಗತಿಹಳ್ಳಿ ಚಂದ್ರಶೇಖರ್‌, ಜೊಸೈಮನ್‌, ರತ್ನಜ, ನಾಗಶೇಖರ್‌, ಜೋಗಿ ಪ್ರೇಮ್‌, ಮಳವಳ್ಳಿ ಸಾಯಿಕೃಷ್ಣ, ಮಹೇಶ್‌ ಸುಖಧರೆ, ಎ.ಪಿ. ಅರ್ಜುನ್‌ ಮುಂತಾದವರು ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದಾರೆ.

ಕೈಗಾರಿಕೆ
ಜಿಲ್ಲೆಯ ರೈತರ ಜೀವನಾಡಿಯಾಗಿರುವ ಸರ್ಕಾರದ ಮೈಷುಗರ್‌ ಸಕ್ಕರೆ ಕಾರ್ಖಾನೆ, ಸಹಕಾರ ಕ್ಷೇತ್ರದ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಗಳೆರಡೂ ನಷ್ಟದಲ್ಲಿವೆ. ಮಂಡ್ಯದ ಅಸಿಟೇಟ್‌ ಫ್ಯಾಕ್ಟರಿ, ಬೆಳಗೊಳದ ಪೇಪರ್‌ ಮಿಲ್‌, ಮಂಗಳೂರು ಕೆಮಿಕಲ್‌ ಅಂಡ್‌ ಫರ್ಟಿಲೈಜರ್ಸ್ ಕಾರ್ಖಾನೆಗಳು ಮುಚ್ಚಿ ಹೋಗಿವೆ.

ಮದ್ದೂರು, ಶ್ರೀರಂಗಪಟ್ಟಣ ಕೈಗಾರಿಕಾ ಕೇಂದ್ರದಲ್ಲಿರುವ ಗಾರ್ಮೆಂಟ್‌ ಫ್ಯಾಕ್ಟರಿಗಳು ಒಂದಷ್ಟು ಜನರಿಗೆ ಉದ್ಯೋಗ ಒದಗಿಸಿವೆ. ಕೊಡಿಯಾಲದ ನೇಯ್ಗೆ ಈಗಲೂ ಉಳಿದುಕೊಂಡಿದೆ. ಮೂಲ ಸೌಕರ್ಯಗಳ ಕೊರತೆ, ಪ್ರತಿಭಟನೆ ಹೆಚ್ಚು ಎಂಬ ಕಾರಣ ನೀಡಿ ಈಗಲೂ ದೊಡ್ಡ ಕೈಗಾರಿಕೋದ್ಯಮಿಗಳು ಇತ್ತ ಕಾಲಿಟ್ಟಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT