ಗುರುವಾರ , ಏಪ್ರಿಲ್ 22, 2021
28 °C

ಆರೋಗ್ಯ ಕ್ಷೇತ್ರ ಬೆಳವಣಿಗೆಗೆ ಆದ್ಯತೆ: ರೇವಣ್ಣ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: `ಸೌಲಭ್ಯಗಳ ಕೊರತೆ, ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಮುಂತಾದ ಹಲವು ಕಾರಣಗಳಿಂದಾಗಿ ಗ್ರಾಮೀಣ ಭಾಗದ ಜನರು ಆರೋಗ್ಯ ಸೇವೆಗಳಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರ ಆರೋಗ್ಯ ಸೇವೆಗೆ ಹೆಚ್ಚಿನ ಆದ್ಯತೆ ನೀಡಬೇಕಾದ ಅಗತ್ಯವಿದೆ~ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ರೇವಣ್ಣ ನುಡಿದರು.ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠ, ಹಾಸನ ಫ್ರೆಂಡ್ಸ್ ಸ್ಪೋರ್ಟ್ಸ್ ಆ್ಯಂಡ್ ರೀಕ್ರಿಯೇಶನ್ ಅಸೋಸಿಯೇಶನ್, ಸಂಜೀವಿನಿ ಸಹಕಾರಿ ಆಸ್ಪತ್ರೆ, ಹಾಸನ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ ಹಾಗೂ ಕ್ಷೇಮಾಭಿವೃದ್ಧಿ ಸಂಘಗಳ ಸಹಯೋಗದಲ್ಲಿ ಹಾಸನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಮೇಳ ಉದ್ಘಾಟಿಸಿ ಮಾತನಾಡಿದರು.ಬೆಂಗಳೂರಿನಂಥ ದೊಡ್ಡ ನಗರಗಳಿಗೆ ಹೋಗಿ ಆರೋಗ್ಯ ತಪಾಸಣೆ ಮಾಡಿಸುವಷ್ಟು ಶಕ್ತಿಯಾಗಲಿ, ಹಣಕಾಸಾಗಲಿ ಗ್ರಾಮೀಣ ಭಾಗದ ರೈತರು ಹಾಗೂ ಬಡವರಲ್ಲಿ ಇರುವುದಿಲ್ಲ. ಅನೇಕ ಬಡವರು ಚಿಕಿತ್ಸೆ ಪಡೆಯುವ ಸಲುವಾಗಿ ಹೊಲ ಮನೆಗಳನ್ನು ಮಾರಿದ್ದಾರೆ, ಕೆಲವರಿಗೆ ಆ ಸಾಮರ್ಥ್ಯವೂ ಇಲ್ಲದೆ ಪ್ರಾಣ ಕಳೆದುಕೊಳ್ಳುತ್ತಾರೆ. ಬಡ ಜನರಿಗೆ ಬೆಂಗಳೂರಿನಲ್ಲಿ ಲಭ್ಯವಾಗುವಂಥ ಸೇವೆಗಳು ಹಾಸನದಲ್ಲೇ ಸಿಗುಸುವಂತಾಗಬೇಕು. ಮುಂದಿನ ದಿನಗಳಲ್ಲಿ ಈ ಕನಸು ಈಡೇರಲಿದೆ ಎಂದು ರೇವಣ್ಣ ನುಡಿದರು.ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ರೈತರು ಹಾಗೂ ಬಡವರಿಗೆ ಆರೋಗ್ಯ ಸೇವೆ ಉಚಿತವಾಗಿ ಲಭಿಸಬೇಕು ಎಂಬ ಉದ್ದೇಶದಿಂದಲೇ ನೂರು ಕೋಟಿ ರೂಪಾಯಿಯ ನಿಧಿಯನ್ನು ಸ್ಥಾಪಿಸಿದ್ದರು. ಆದರೆ ನಂತರದ ಸರ್ಕಾರಗಳು ಆ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಗ್ರಾಮೀಣ ಭಾಗದ ರೈತರ ಹಿತ ದೃಷ್ಟಿಯಿಂದ ಇಂಥ ಆರೋಗ್ಯ ಮೇಳಗಳು ಹೆಚ್ಚು ಸಹಕಾರಿಯಾಗಿವೆ. ಇದು ದೇವರು ಮೆಚ್ಚುವ ಕೆಲಸ. ಶಾಸಕ ಪ್ರಕಾಶ್ ಹಾಗೂ ಇತರರು ಅತ್ಯುತ್ತಮ ಕಾರ್ಯ ಮಾಡಿದ್ದಾರೆ ಎಂದು ಶ್ಲಾಘಿ ಸಿದರು.ತುಮಕೂರು ಶಾಖಾ ಮಠದ ಶಿವಕುಮಾರನಾಥ ಸ್ವಾಮೀಜಿ ಮಾತನಾಡಿ, `ಹಣ, ಭೂಮಿ ಮತ್ತಿತರ ಭೋಗದ ವಸ್ತುಗಳನ್ನು ಸಂಪಾದಿಸಬಹುದು. ಆದರೆ ಆರೋಗ್ಯವನ್ನು ಸಂಪಾದಿಸುವುದು ಕಷ್ಟ. ರೋಗಿಗಳನ್ನು ಪರೀಕ್ಷಿಸಿ ಸೂಕ್ತ ಔಷಧ ನೀಡುವ ಮೂಲಕ ವೈದ್ಯರು ಆರೋಗ್ಯ ಕೊಡಬಹುದು. ಆ ಕಾರಣಕ್ಕಾಗಿಯೇ ವೈದ್ಯರನ್ನು ದೇವರಿಗೆ ಹೋಲಿಸಲಾಗಿದೆ. ಇಂಥ ಆರೋಗ್ಯ ಶಿಬಿರಗಳು ನಡೆಯು ತ್ತಿದ್ದರೆ ಗ್ರಾಮೀಣ ಭಾಗದ ಜನರೂ ಆರೋಗ್ಯವಂತರಾಗಿರಲು ಸಾಧ್ಯ~ ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಎಸ್. ಪ್ರಕಾಶ್, `ರಾಜ್ಯೋತ್ಸವದ ಸಂದರ್ಭದಲ್ಲಿ ಆರ್ಕೆಸ್ಟ್ರಾ ಮತ್ತಿತರ ಕಾರ್ಯಕ್ರಮ ಹಮ್ಮಿಕೊಳ್ಳುವುದಕ್ಕಿಂತ ಎಲ್ಲರಿಗೂ ಸಹಕಾರಿಯಾಗುವಂಥ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಈ ಯೋಜನೆ ರೂಪಿಸಿದ್ದೇವೆ. ವಿವಿಧ ಸಂಸ್ಥೆಗಳಿಂದ ಬಂದ 200ಕ್ಕೂ ಹೆಚ್ಚು ವೈದ್ಯರು ಆರೋಗ್ಯ ಮೇಳದಲ್ಲಿ ಉಚಿತವಾಗಿ ರೋಗಿಗಳ ತಪಾಸಣೆ ಮಾಡುತ್ತಿದ್ದಾರೆ. ಸುಮಾರು 50ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಔಷಧಗಳನ್ನು ರೋಗಿಗಳಿಗೆ ಉಚಿತವಾಗಿ ನೀಡಲಾಗುತ್ತಿದೆ~ ಎಂದರು.`ರಾಜ್ಯದಲ್ಲಿ ಬೃಹತ್ ಆರೋಗ್ಯ ಮೇಳಗಳಿಗೆ ನಾಂದಿ ಹಾಡಿದ ಕೀರ್ತಿ ಹಾಸನ ಜಿಲ್ಲೆಗೆ ಸಲ್ಲುತ್ತದೆ. ಇಂಥ ಶಿಬಿರಗಳಿಂದ ಆರೋಗ್ಯ ಸೇವೆಯಲ್ಲಿರುವ ಕಾನೂನು ತೊಡಕುಗಳಬಗ್ಗೆಯೂ ಮಾಹಿತಿ ಲಭಿಸುತ್ತದೆ.ಇದರಿಂದ ಕಾನೂನಿನಲ್ಲಿ ಸೂಕ್ತ ಬದಲಾವಣೆ ಮಾಡಲು ಸಹಾಯವಾಗುತ್ತದೆ. ವೈದ್ಯಕೀಯ ಅಧ್ಯಯನಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದವರಲ್ಲಿ ನೀವು ಉಚಿತವಾಗಿ ಸಮಾಜಸೇವೆ ಮಾಡಿ ಎಂದು ಕೇಳಲು ಸಾಧ್ಯವಾಗುವುದಿಲ್ಲ. ಆದರೆ ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಿ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಶಿಕ್ಷಣ ನೀಡಿದರೆ ಭವಿಷ್ಯದಲ್ಲಿ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಸೇವೆ ನೀಡಲು ಸಾಧ್ಯವಾಗುವುದು~ ಎಂದು ಪ್ರಕಾಶ್ ಅಭಿಪ್ರಾಯಪಟ್ಟರು.ಆದಿಚುಂಚನಗಿರಿ ಶಾಖಾಮಠದ ಶಂಭುನಾಥ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ರಾಜ್ಯ ಸಭೆಯ ಮಾಜಿ ಸದಸ್ಯ ಎಚ್.ಕೆ. ಜವರೇಗೌಡ, ಡಾ. ಗುರುರಾಜ ಹೆಬ್ಬಾರ್, ಡಾ. ದೊಡ್ಡೇಗೌಡ, ವಿವಿಧ ಶಾಖಾ ಮಠಗಳ ಸ್ವಾಮೀಜಿಗಳು, ಜಿ.ಪಂ. ಮಾಜಿ ಅಧ್ಯಕ್ಷ ಬಿ.ಆರ್. ಸತ್ಯನಾರಾಯಣ, ನಗರಸಭೆ ಅಧ್ಯಕ್ಷ ಸಿ.ಆರ್. ಶಂಕರ್, ಡಿ.ಸಿ. ಕೃಷ್ಣಕುಮಾರ್, ನಗರಸಭೆ ಸದಸ್ಯ ಅನಿಲ್ ಕುಮಾರ್ ಮತ್ತಿತರರು ವೇದಿಕೆಯಲ್ಲಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.