ಮಂಗಳವಾರ, ಜೂನ್ 15, 2021
25 °C

ಆರೋಗ್ಯ ನಿರ್ಲಕ್ಷ್ಯ ಬೇಡ: ಮಹಿಳೆಯರಿಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: `ಅತಿಯಾದ ಭಾವನಾತ್ಮಕತೆಯೇ ಅನೇಕ ಬಾರಿ ಮಹಿಳೆಗೆ ಸಮಸ್ಯೆ ಉಂಟುಮಾಡುತ್ತದೆ. ಮನೆಯಿಂದ ಹೊರಗೆ ಬಂದು ದುಡಿಯುವ ಮಹಿಳೆ, ಮನೆಯೊಳಗೆ ಹೋಗುತ್ತಿದ್ದಂತೆ ಗೃಹಿಣಿಯಾಗಿ ಎಲ್ಲರ ಬೇಕು ಬೇಡಗಳನ್ನೂ ವಿಚಾರಿಸಿಕೊಳ್ಳಬೇಕು. ಈ ಒತ್ತಡದಲ್ಲಿ ತನ್ನ ಆರೋಗ್ಯದ ಕಡೆಗೆ ಗಮನ ಕೊಡಲು ಸಾಧ್ಯವಾಗದೆ ಕೊರಗಬೇಕಾಗುತ್ತದೆ~ ಎಂದು ವಿಧಾನ ಪರಿಷತ್  ವಿರೋಧಪಕ್ಷದ ನಾಯಕಿ ಮೋಟಮ್ಮ ನುಡಿದರು.ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸೋಮವಾರ ಆಯೋಜಿಸಿದ್ದ `ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ಹಿಂದಿನ ದಿನಗಳಿಗೆ ಹೋಲಿಸಿದರೆ ಮಹಿಳೆಯರ ಸ್ಥಿತಿ ಸುಧಾರಣೆಯಾಗಿದೆ. ಆದರೆ ಪೂರ್ತಿಯಾಗಿ ಬದಲಾಗಿಲ್ಲ. ಸಾಮಾನ್ಯ ಮಹಿಳೆ ಈಗಲೂ ಅತಿ ಕಷ್ಟದ ಬದುಕನ್ನೇ ನಡೆಸುತ್ತಿದ್ದಾಳೆ. ಹಲವು ಸಾಮಾಜಿಕ ಕಟ್ಟುಪಾಡುಗಳಿಗೆ ಆಕೆ ಒಳಗಾಗುತ್ತಿದ್ದಾಳೆ. ಅನೇಕ ಸಂದರ್ಭಗಳಲ್ಲಿ ಮಹಿಳೆಯ  `ಅಹಂ~ನಿಂದಲೂ ಸಮಸ್ಯೆಯಾಗುತ್ತದೆ. ಇಂಥ ಸಮಸ್ಯೆಗಳನ್ನು ನಿವಾರಿಸಲು ಕೇವಲ ಮಹಿಳೆಯಿಂದ ಅಥವಾ ಪುರುಷರಿಂದ ಸಾಧ್ಯವಿಲ್ಲ. ಇಡೀ ಸಮುದಾಯ ಸೇರಿ ಪರಸ್ಪರರನ್ನು ಗೌರವಿಸಬೇಕು ಎಂದು ಮೋಟಮ್ಮ   ನುಡಿದರು.ಗ್ರಾಮೀಣ ಮಹಿಳೆಯರೂ ಶೋಕಿ ಜೀವನಕ್ಕೆ ಆಕರ್ಷಿತರಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಮೋಟಮ್ಮ, `ಮಹಿಳೆಯರು ಪಟ್ಟಣದ ಜೀವನದಿಂದ ಆಕರ್ಷಿತರಾಗುವುದರ ಜತೆಗೆ ಮಕ್ಕಳನ್ನೂ ಸಹ ಗ್ಲ್ಯಾಮರ್ ಜೀವನದತ್ತ ತಳ್ಳುತ್ತಿದ್ದಾರೆ. ಮೊದಲು ಇದನ್ನು ತಡೆಯಬೇಕು. ನಾವು ಮಕ್ಕಳನ್ನು ಬೆಳೆಸುವುದರಲ್ಲೇ ಎಡವುತ್ತಿದ್ದೇವೆ. ಬದಲಾವಣೆಗೆ ನಾವು ಸಹ ಸಿದ್ಧರಾಗಬೇಕು~ ಎಂದರು.ಮುಖ್ಯ ಅತಿಥಿಯಾಗಿದ್ದ ಪತ್ರಕರ್ತೆ ಕೆ.ಎಸ್. ನಿರುಪಮಾ, `ಮಹಿಳೆಯರು ಮೊದಲು ತಾವು ಚೆನ್ನಾಗಿರುವುದನ್ನು ಕಲಿಯಬೇಕು. ಸಾಮಾಜಿಕ ಕಟ್ಟಳೆಗಳನ್ನು ಧಿಕ್ಕರಿಸುವಾಗ ಸಮಾಜ ನಮ್ಮ ಚಾರಿತ್ರ್ಯದ ಮೇಲೆ ದಾಳಿ ಮಾಡುತ್ತದೆ. ನಾವು ಸರಿಯಾಗಿದ್ದರೆ ಇದಕ್ಕೆ ಅಂಜಬೇಕಾಗುವುದಿಲ್ಲ.  `ಒಳ್ಳೆಯವರು~ ಎಂಬ ಲೇಬಲ್ ಅಂಟಿಸಿಕೊಳ್ಳುವ ಚಟದಿಂದ ಹೊರಬಂದು ಒಳ್ಳೆಯವರಾಗಿರೋಣ. ಗಟ್ಟಿಯಾದ ವ್ಯಕ್ತಿತ್ವ ರೂಪಿಸಿಕೊಂಡರೆ ಬೇಕಾದ ಎತ್ತರಕ್ಕೆ ಏರಬಹುದು~ ಎಂದರು.`ಮಹಿಳೆ ಕೀಳರಿಮೆ ಬಿಟ್ಟು ತಂತ್ರಜ್ಞಾನದ ಲಾಭ ಪಡೆಯಬೇಕು. ಅಗತ್ಯ ಇರಲಿ, ಇಲ್ಲದಿರಲಿ ಈಚಿನ ತಂತ್ರಜ್ಞಾನದ ಬಗ್ಗೆ ತಿಳಿವಳಿಕೆ ಹೊಂದಿದರೆ ಆತ್ಮವಿಶ್ವಾಸ ಹೆಚ್ಚುತ್ತದೆ~ ಎಂದರು.ಉಷಾ ಕೃಷ್ಣಮೂರ್ತಿ, ಲೇಖಕಿ ಬಾನು ಮುಷ್ತಾಕ್, ಆರ್‌ಎಫ್‌ಓ ರತ್ನಪ್ರಭಾ, ಡಾ. ಭಾರತಿ ರಾಜಶೇಖರ್ ಮುಂತಾದವರು ಸಂವಾದದಲ್ಲಿ ಪಾಲ್ಗೊಂಡು ಮಹಿಳೆಯರ ಸಮಸ್ಯೆಗಳು, ಸವಾಲುಗಳು ಹಾಗೂ ಪರಿಹಾರಗಳ ಬಗ್ಗೆ ಮಾತನಾಡಿದರು.ಪತ್ರಕರ್ತರ ಸಂಘದ ಅಧ್ಯಕ್ಷೆ ಲೀಲಾವತಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪ್ರಭಾಕರ್ ಕಾರ್ಯಕ್ರಮ ನಿರೂಪಿಸಿದರು. ಉದಯಕುಮಾರ್ ಸ್ವಾಗತಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.