ಶುಕ್ರವಾರ, ಏಪ್ರಿಲ್ 23, 2021
27 °C

ಆಸರೆ ಮನೆ ಅವ್ಯವಹಾರ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ: ಆಸರೆ ಮನೆಗಳ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಭಾರೀ ಪ್ರಮಾಣದ ಭ್ರಷ್ಟಾಚಾರದ ಸಮಗ್ರ ತನಿಖೆ ಹಾಗೂ ಫಲಾನುಭವಿಗಳ ಪುನರಾಯ್ಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಹಾಗೂ ವಿವಿಧ ಸಾಮೂಹಿಕ ಸಂಘಟನೆಗಳ ನೇತೃತ್ವದಲ್ಲಿ ನೂರಾರು ವಸತಿರಹಿತ ಕುಟುಂಬಗಳು ಶನಿವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಪಟ್ಟಣದ ಕೋಟೆ ಆಂಜನೇಯ ದೇವಸ್ಥಾನದ ಆವರಣದಿಂದ ಸರ್ಕಾರ, ತಾಲ್ಲೂಕು ಆಡಳಿತ ಮತ್ತು ಸ್ಥಳೀಯ ಶಾಸಕರ ವಿರುದ್ಧ ಧಿಕ್ಕಾರದ ಘೋಷಣೆ ಕೂಗುತ್ತಾ ಮೆರಣವಣಿಗೆ ಹೊರಟ ಪ್ರತಿಭಟನಾಕಾರರು, ಹೊಸಪೇಟೆ ರಸ್ತೆ ಮುಖಾಂತರ ಮಿನಿ ವಿಧಾನಸೌಧಕ್ಕೆ ತೆರಳಿದರು. ಬಳಿಕ ಬಹಿರಂಗ ಸಭೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಐಕೆಎಸ್ ಸಂಘಟನೆಯ ರಾಜ್ಯ ಘಟಕದ ಕಾರ್ಯದರ್ಶಿ ಹೊಸಳ್ಳಿ ಮಲ್ಲೇಶ್ ಮಾತನಾಡಿ, 2009ರಲ್ಲಿ ಸಂಭವಿಸಿದ ಭೀಕರ ನೆರೆಹಾವಳಿಯಲ್ಲಿ ನಲುಗಿ ಬದುಕನ್ನೇ ಕಳೆದುಕೊಂಡು, ಅಕ್ಷರಶಃ ಬೀದಿಪಾಲಾಗಿರುವ ಕುಟುಂಬಗಳ ತಲೆಯ ಮೇಲೊಂದು ಸೂರು ನಿರ್ಮಿಸಿ, ಶಾಶ್ವತವಾಗಿ ಸ್ಥಳಾಂತರಿಸುವ ಮೂಲಕ ಸಂತ್ರಸ್ತ ಕುಟುಂಬಗಳಲ್ಲಿ ನೆಮ್ಮದಿಯ ನೆಲೆ ಮೂಡಿಸುವ ಉದ್ದೇಶದೊಂದಿಗೆ ಸರ್ಕಾರ ನಿರ್ಮಿಸಿದ ಆಸರೆ ಯೋಜನೆಯ ಮನೆಗಳು, ಅರ್ಹ ಹಾಗೂ ನೈಜ ಕುಟುಂಬಗಳಿಗೆ ತಲುಪದೆ. ಶಾಸಕ ಜಿ. ಕರುಣಾಕರರೆಡ್ಡಿ ಆಪ್ತ ಸಹಾಯಕ ಓಂಕಾರಗೌಡ ಅವರ ಮಧ್ಯಸ್ಥಿಕೆಯಲ್ಲಿ ಹಾಡಹಗಲೇ ಪ್ರತಿ ಮನೆ ರೂ. 50-60ಸಾವಿರದಂತೆ ಕಾಳಸಂತೆಯಲ್ಲಿ ಮಾರಾಟವಾಗಿವೆ. ನೆರೆಯಲ್ಲಿ ನಲುಗಿ ದಿಕ್ಕುತೋಚದೆ ಪರಿತಪಿಸುತ್ತಿರುವ ಕುಟುಂಬಗಳ ಹಣೆಯ ಮೇಲೆ ನಾಮ ಬಳಿಯುವ ಮೂಲಕ ಶಾಸಕ ಹಾಗೂ ಅವರ ಕೃಪಾಪೋಷಿತ ಬಿಜೆಪಿ ಕೆಲ ಕಾರ್ಯಕರ್ತರ ಸಂತತಿ ಲಜ್ಜೆಗೇಡಿತನಕ್ಕೆ ಇಳಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಖಿಲ ಭಾರತ ಯುವಜನ ಫೆಡರೇಷನ್ (ಎಐವೈಎಫ್) ಸಂಘಟನೆಯ ರಾಜ್ಯಘಟಕದ ಕಾರ್ಯದರ್ಶಿ ಎ.ಎಸ್. ಮೋನಪ್ಪ ಮಾತನಾಡಿ, ಸಂತ್ರಸ್ತರ ಹೆಸರಿನಲ್ಲಿಯೂ ಶಾಸಕ ರೆಡ್ಡಿ ಹಾಗೂ ಅವರ ಕೇಸರಿ ಪಡೆಯ ಕೆಲ ವಸೂಲಿ ವೀರರು ಕೊಳ್ಳೆಹೊಡೆಯಲು ಮುಂದಾಗಿರುವುದು ಬಿಜೆಪಿಯ ನೈತಿಕ ದಿವಾಳತನದ ಪರಮಾವಧಿ ಎಂದು ಆಪಾದಿಸಿದರು.

ಪ್ರತಿಭಟನೆಯಲ್ಲಿ  ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ), ನಿವೇಶನರಹಿತ ಹಾಗೂ ವಸತಿರಹಿತರ ಹೋರಾಟ ಸಮಿತಿ, ಅಖಿಲ ಭಾರತ ಯುವಜನ ಫೆಡರೇಷನ್, ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ (ಎಐಎಸ್‌ಎಫ್), ಜಿಲ್ಲಾ ಒಂಟೆತ್ತಿನ ಬಂಡಿ ಹಮಾಲರ ಸಂಘ ಹಾಗೂ ಎಐಟಿಯುಸಿ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಮುಖಂಡರಾದ ಗುಡಿಹಳ್ಳಿ ಹಾಲೇಶ್, ಎಚ್.ಎಂ. ಸಂತೋಷ್, ಎಚ್. ಪರಶುರಾಂ, ಪಂಪಣ್ಣ, ಅಬುಸಾಲೇಹ, ಬಳಿಗಾನೂರು ಮಲ್ಲೇಶ್, ಚಿಗಟೇರಿ ಪರಶುರಾಂ, ಶೇಖರಗೌಡ, ಸಬೀನಾ, ಸಾಹೀನಾ, ದೇವಿರಮ್ಮ, ಮುಕ್ತಾಂಬಾ, ನಾಗರತ್ನಾ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.